DK Suresh - ಯಡಿಯೂರಪ್ಪರ 2 ವರ್ಷದ ಸಾಧನೆ ಬರೀ ಸಿಡಿ ತೋರಿಸಿದ್ದು ಅಷ್ಟೇ: ಡಿ.ಕೆ. ಸುರೇಶ್

ಯಡಿಯೂರಪ್ಪ ಅವರ ಎರಡು ವರ್ಷದ ಆಡಳಿತ ಅವಧಿಯನ್ನ ಲೇವಡಿ ಮಾಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಈ ಅವಧಿಯಲ್ಲಿ ಸಿಡಿ ವಿಚಾರ ಬಿಟ್ಟರೆ ಏನೂ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸಿದ್ದಾರೆ.

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ರಾಮನಗರ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಂಸದ ಡಿ. ಕೆ. ಸುರೇಶ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಆಡಳಿತ ಅವಧಿ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಗ್ರಾಮಾಂತರ ಸಂಸದ ಸುರೇಶ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಮನಗರ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಸಾಲವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿ. ಕೆ. ಸುರೇಶ್ ಮಾತನಾಡಿ, 2 ವರ್ಷದಲ್ಲಿ ಯಡಿಯೂರಪ್ಪ ಬಂದ್ರು ಹೋದ್ರು ಅಷ್ಟೇ. ರಾಜ್ಯದಲ್ಲಿ ರೈತರ, ಯುವಕರ, ಹೆಣ್ಣುಮಕ್ಕಳ ಬಗ್ಗೆ ಸರ್ಕಾರದಲ್ಲಿ ಚರ್ಚೆ ಇಲ್ಲ. ಅವನ ಹತ್ತಿರ ಆ ಸಿಡಿ ಇದೆ, ಇವನ ಹತ್ತಿರ ಈ ಸಿಡಿ ಇದೆ ಎಂಬ ಚರ್ಚೆ ಮಾತ್ರ ಇದೆ ಎಂದು ಟೀಕಿಸಿದರು.

ಹಿಂದೆ ಯಡಿಯೂರಪ್ಪ ರಾಜ್ಯದ ಸಿಎಂ ಆಗಿದ್ದರು. ಆಗ ಒಬ್ಬರು ಮುತ್ತುಕೊಟ್ಟು ಸಸ್ಪೆಂಡ್ ಆದರು. ಮತ್ತಿಬ್ಬರು ಬ್ಲೂ ಫಿಲಂ ನೋಡಿದರು ಎಂದು ಹೇಳಿದ ಅವರು ಎಂ. ಪಿ. ರೇಣುಕಾಚಾರ್ಯ, ಲಕ್ಷ್ಮಣ ಸವದಿ ಮತ್ತು ಸಿಸಿ ಪಾಟೀಲ್ ಅವರ ಹಿಂದಿನ ಹಗರಣಗಳನ್ನ ಉಲ್ಲೇಖಿಸಿ ಲೇವಡಿ ಮಾಡಿದರು. ವಾಗ್ದಾಳಿ ಮುಂದುವರಿಸಿದ ಡಿ ಕೆ ಸುರೇಶ್, ಈಗ ಅವರ ಸರ್ಕಾರದ ಸಚಿವರೇ ಸಿಡಿ ಬಗ್ಗೆ ಚರ್ಚೆಯಲ್ಲಿದ್ದಾರೆ. ಒಬ್ಬ 500 ಸಿಡಿ ಅಂತಾರೆ, ಇನ್ನೊಬ್ಬರು ಮತ್ತೊಬ್ಬರ ಸಿಡಿ ಇದೆ ಅಂತಾರೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ಸಿಡಿ ರಿಲೀಸ್ ತಡೆಯಿಡಿಯಲು ಆದೇಶ ತರ್ತಾರೆ ಎಂದು ವ್ಯಂಗ್ಯ ಮಾಡಿದರು.

ರಾಜ್ಯದಲ್ಲಿ ಭ್ರಷ್ಟ ವ್ಯವಸ್ಥೆ ಹುಟ್ಟುಹಾಕಿದ ಕೀರ್ತಿ ಬಿಜೆಪಿ ಪಕ್ಷದ್ದು. ಇವರ ಎರಡು ವರ್ಷದ ಸಾಧನೆ ಸಂಪೂರ್ಣ ಶೂನ್ಯ. ಇನ್ನು ಈಗ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ ಎನ್ನೋ ಸುದ್ದಿ ಇದೆ. ಹಾಗಿದ್ದರೆ ಇವರ ಸಾಧನೆ ಏನು ಎಂದು ಕಾಂಗ್ರೆಸ್ ಸಂಸದರಾದ ಅವರು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Ind Vs SL – ಭುವಿ, ಎಸ್​ಕೆ ಭರ್ಜರಿ ಆಟ; ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಶುಭಾರಂಭ

ಇನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಾಕಷ್ಟು ಜನರು ಬರುವವರಿದ್ದಾರೆ. ಆದರೆ ಈಗ ಆ ವಿಚಾರ ಅಪ್ರಸ್ತುತ ಆಗಿದೆ. ನಾವು 2023 ರ ಚುನಾವಣೆಗೆ ತಯಾರಾಗುತ್ತಿದ್ದೇವೆ. ಯಾರೇ ಬಂದರೂ ಸ್ವಾಗತ ಮಾಡ್ತೇವೆ. ಆದರೆ ಸ್ಥಳೀಯವಾಗಿ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇವೆ ಎಂದು ಡಿಕೆ ಸುರೇಶ್ ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಎದ್ದಿರುವ ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನು ಮುಂದೆ ಯಾರು ಸಿಎಂ ಆಗ್ತಾರೆಂದು ನಮಗೆ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನೇ ಕೇಳಬೇಕಿದೆ. ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಮೂಗು ತೂರಿಸಲ್ಲ. ಇದರಿಂದ ನಮಗೆ ಯಾವುದೇ ಲಾಭವಿಲ್ಲ ಎಂದರು.

ರಾಜ್ಯದಲ್ಲಿ ನೆರೆ ಬಂದಿದೆ, ಆದರೆ ಯಾವುದೇ ಪರಿಹಾರ ಇಲ್ಲ. ರಾಜ್ಯ - ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ.  ಆದರೂ ಸಹ ನೆರೆ ಸಂತ್ರಸ್ತರಿಗೆ ಯಾವುದೇ ಪರಿಹಾರ ಇಲ್ಲ. ರಾಜ್ಯದ ಬಿಜೆಪಿ ಸಂಸದರು ಕೇಂದ್ರದಲ್ಲಿ ಈ ಬಗ್ಗೆ ಮಾತನಾಡಲ್ಲ. ಮಾತನಾಡಿದರೆ ಎಲ್ಲಿ ಪದವಿ ಹೋಗುತ್ತೋ ಅನ್ನೋ ಭಯ ಅವರಿಗೆ ಇದೆ. ಕೇಂದ್ರದ ಜೊತೆಗೆ ನೆರೆಯ ಬಗ್ಗೆ ಚರ್ಚೆ ನಡೆಸುವ ಸಂಸದ, ಸಚಿವ ಬಿಜೆಪಿಯಲ್ಲಿ ಇಲ್ಲ. ಪ್ರಧಾನಿ ಏನ್ ಹೇಳ್ತಾರೋ ಅದನ್ನ ಕೇಳಿಕೊಂಡು ಬರುತ್ತಾರೆ ಅಷ್ಟೇ. ನೆರೆ ಹೆಸರಿನಲ್ಲಿ ಹಣ ಬಂದರೆ ಅದರನ್ನ ಬೇರೆಯದಕ್ಕೆ ಬಳಸಿಕೊಳ್ತಾರೆ ಎಂದು ರಾಮನಗರದಲ್ಲಿ ಸಂಸದ ಡಿ. ಕೆ. ಸುರೇಶ್ ಅವರು ಕಿಡಿಕಾರಿದರು.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: