ರಾಮನಗರ (ಫೆ.27): ಈ ಬಾರಿ ಮೇಕೆದಾಟು ಪಾದಯಾತ್ರೆ (Mekedatu Padaytre) 2.0ಗೆ ಅಷ್ಟು ಬೆಂಬಲ ವ್ಯಕ್ತವಾಗಲಿಲ್ಲ. ಮೊದಲ ಹಂತದಲ್ಲಿ ದೊಡ್ಡಮಟ್ಟದಲ್ಲಿ ಯಶಸ್ವಿ ಆಗಿತ್ತು. ಆದರೆ ಎರಡನೇ ಹಂತದಲ್ಲಿ ಜನ ಅಷ್ಟಾಗಿ ಹೋರಾಟಕ್ಕೆ ಕೈಜೋಡಿಸಲಿಲ್ಲ. ಮೇಕೆದಾಟು ಪಾದಯಾತ್ರೆ 2.0 ಗೆ ಇಂದು ಚಾಲನೆ ನೀಡಲಾಯಿತು. ರಾಮನಗರದ (Ramanagara) ಕನಕಪುರ ವೃತ್ತದಿಂದ ಪಾದಯಾತ್ರೆ ಪ್ರಾರಂಭ ಆಯ್ತು. ಇದಕ್ಕೂ ಮೊದಲು ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಡಿ.ಕೆ ಶಿವಕುಮಾರ್ (D.K Shivakumar) ಪೂಜೆ ಸಲ್ಲಿಸಿದರು. ಈ ಹೋರಾಟ ಯಶಸ್ವಿ ಆಗಲಿ, ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ ಪ್ರಾರ್ಥನೆ (Prayer) ಮಾಡಿದ್ರು. ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿಗೆ ಡಿಕೆಶಿ ಹೂವಿನ ಹಾರ ಹಾಕಿ ಪಾದಯಾತ್ರೆಗೆ ಚಾಲನೆ ನೀಡಿದರು.
ವೇದಿಕೆ ಮೇಲೆ ಛತ್ರಿ ಹಿಡಿದು ಕುಳಿತ ಲಕ್ಷ್ಮಿ ಹೆಬ್ಬಾಳ್ಕರ್
ಇನ್ನು ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಹೆಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್, ಜಾರ್ಜ್, ಎಂ.ಬಿ.ಪಾಟೀಲ್ ಸೇರಿ ಹಲವರು ಇದ್ದರು. ಸುರ್ಜೇವಾಲ ನಗಾರಿ, ಡೊಳ್ಳು ಹೊಡೆದು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ನಟ ನೆನಪಿರಲಿ ಪ್ರೇಮ್, ಸಾಧುಕೋಕಿಲಾ ಸಹ ಭಾಗಿಯಾಗಿದ್ದರು. ಬಿಸಿಲು ಹೆಚ್ಚಾಗಿದ್ದ ಕಾರಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಿಗೆ ಛತ್ರಿ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಛತ್ರಿ ಹಿಡಿದು ಕುಳಿತ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲರ ಗಮನಸೆಳೆದರು.
ಬಿಜೆಪಿ ವಿರುದ್ಧ ‘ಕೈ‘ ನಾಯಕರ ವಾಗ್ದಾಳಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭಾಷಣ ಮಾಡಿದರು. ನಮ್ಮ ನೀರು, ನಮ್ಮ ಹಕ್ಕು ಎಂದ ರಣದೀಪ್ ಸುರ್ಜೇವಾಲ ಕಾವೇರಿ ನೀರು ನಮ್ಮ ಹಕ್ಕು, ಅದೇ ನಮ್ಮ ಹೋರಾಟ ಎಂದರು. ಬಳಿಕ ಮಾತಾಡಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ವೇದಿಕೆಯಲ್ಲಿ ಡಿಕೆಶಿ ಮಾತನಾಡಿ ಬಿಜೆಪಿ - ಜೆಡಿಎಸ್ ವಿವಿಧ ರೀತಿ ಟೀಕೆ ಮಾಡ್ತಿದ್ದಾರೆ. ಆದರೆ ಇದು ನಮ್ಮ ನೀರಿಗಾಗಿ ನಡೆಯುತ್ತಿರುವ ಹೋರಾಟ, ನಾನು ಈಗ ಹೆಚ್ಚು ಮಾತನಾಡಲ್ಲ. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮಾತನಾಡುತ್ತೇನೆ. ನಾವು ಹೋರಾಟ ಮಾಡಿರೋದು ಎಂಥಾ ಘಳಿಗೆ ಅಂದರೆ ಬುದ್ಧ ಬಸವ ಮನೆಬಿಟ್ಟ ಘಳಿಗೆ, ಏಸುಕ್ರಿಸ್ತ ಶಿಲುಬೆ ಏರಿದ ಘಳಿಗೆ ಎಂದು ತಿಳಿಸಿ ಪಾದಯಾತ್ರೆ ಗೆ ಧುಮುಕಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಅತ್ತೆ-ಸೊಸೆ ತರ.. ಅತ್ತೆ ಸಾಯಲಿ ಅಂತ ಸೊಸೆ ಕಾಯಬಾರದು: ಸಚಿವ Eshwarappa
2ನೇ ಹಂತದ ಪಾದಯಾತ್ರೆಗೆ ಜನರ ಬೆಂಬಲ ಕಡಿಮೆ
ಪಾದಯಾತ್ರೆಯಲ್ಲಿ5 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗ್ತಾರೆಂಬ ನಿರೀಕ್ಷೆ ಇತ್ತು. ರಾಮನಗರದ ಕನಕಪುರ ವೃತ್ತದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರು ಭಾಗಿಯಾಗಿದ್ದರು. ಜೆಸಿಬಿ ಮೂಲಕ ಹೂವಿನ ಅಭಿಷೇಕ ಮಾಡಿದ ಕೈ ಕಾರ್ಯಕರ್ತರು ರಾಮನಗರದ ಐಜೂರು ವೃತ್ತದಲ್ಲಿ ಭರ್ಜರಿ ಸ್ವಾಗತ ಮಾಡಿದರು. ಆದರೆ ನಂತರ ಪಾದಯಾತ್ರೆಯಲ್ಲಿ ಜನಸಂಖ್ಯೆ ಸಂಪೂರ್ಣ ಇಳಿಮುಖ ಆಯ್ತು. ಮೊದಲ ಹಂತದ ಪಾದಯಾತ್ರೆಗೆ ಸೇರಿದ್ದ ಜನರು ಎರಡನೇ ಹಂತದ ಪಾದಯಾತ್ರೆಗೆ ಬರಲಿಲ್ಲ.
ಫುಲ್ ಟ್ರಾಫಿಕ್ ಜಾಮ್, ಸವಾರರ ಪರದಾಟ
ಇನ್ನು ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಫುಲ್ ಟ್ರಾಫಿಕ್ ಜಾಮ್ ಆಯ್ತು.ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ಪರದಾಟವಾಯ್ತು. ಸರಿಸುಮಾರು 3 KM ಫುಲ್ ಟ್ರಾಫಿಕ್ ಜಾಮ್ ಆಗಿತ್ತು.
ಇನ್ನುರಾಮನಗರದ ಮಾಯಗಾನಹಳ್ಳಿ ಬಳಿಯ ಖಾಸಗಿ ಹೋಟೆಲ್ ನಲ್ಲಿ ಮಧ್ಯಾಹ್ನದ ಊಟ ಆಯೋಜನೆ ಮಾಡಲಾಗಿತ್ತು. ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ, ಡಿಕೆಶಿ ಜೊತೆ ಊಟ ಮಾಡಿದರು. ಚಪಾತಿ, ದಾಲ್ ಸವಿದ ಕೈ ನಾಯಕರು, ಪಾದಯಾತ್ರಿಕರಿಗೆ ಹೊರಗಡೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರಸಿದ್ದರಾಮಯ್ಯ - ಡಿಕೆಶಿ ಫುಲ್ ರೆಸ್ಟ್ ಮಾಡಿದರು.
ಇದನ್ನೂ ಓದಿ: D.K Shivakumar: ‘ಜೆಡಿಎಸ್ನವ್ರು ನಮ್ಮ ಬ್ರದರ್ಸ್ ಕಣ್ರೀ‘, ನೀವೂ ಬನ್ನಿ ಪಾದಯಾತ್ರೆಗೆ ಎಂದ್ರು ಡಿ.ಕೆ ಶಿವಕುಮಾರ್
ಸಿದ್ದರಾಮಯ್ಯ, ಡಿಕೆಶಿ ಸುಸ್ತೋ ಸುಸ್ತು
ರಾಮನಗರದಿಂದ 7 ಕಿ.ಮೀ ನಡೆದು ಬಂದ ಕೈ ನಾಯಕರು, ಇನ್ನು 7 ಕಿ.ಮೀ ಪಾದಯಾತ್ರೆ ಬಾಕಿಯಿರುವಾಗಲೇ ಸುಸ್ತಾದರು. ಡಿಕೆಶಿ - ಸಿದ್ದರಾಮಯ್ಯ ಗೆ ಕಾಲು ನೋವು ಕಾಣಿಸಿಕೊಳ್ತು. ಇಬ್ಬರೂ ನಾಯಕರಿಗೆ ಕೈ - ಕಾಲು ಒತ್ತಿದ್ದ ಬೆಂಬಲಿಗರು ಡಿಕೆಶಿ ಗೆ ಬಿಪಿ ಟೆಸ್ಟ್ ಮಾಡಿ ಆರೋಗ್ಯ ವಿಚಾರಿಸಲಾಯಿತು. ಸಿದ್ದರಾಮಯ್ಯ ಗೆ ಕೈ ಬೆರಳು, ಕಾಲಿನ ಮಸಾಜ್ ಮಾಡಲಾಯಿತು.
ಒಟ್ಟಾರೆ ಮೇಕೆದಾಟು ಪಾದಯಾತ್ರೆ 2.0 ಬಿಡದಿ ತಲುಪಿದೆ. ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣರಿಂದ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಬಾಲಕೃಷ್ಣಗೆ ಸೇಬು ತಿನ್ನಿಸಿದ ಡಿಕೆಶಿ ಶುಭಹಾರೈಸಿದರು. ಡಿಕೆಶಿಗೂ ಸಹ ಸೇಬು ತಿನ್ನಿಸಿದ ಚಲವರಾಯಸ್ವಾಮಿ, ಬಾಲಕೃಷ್ಣಬಿಡದಿ ಪಟ್ಟಣದಲ್ಲಿ ಮೊದಲ ದಿನದ ಪಾದಯಾತ್ರೆ ಅಂತ್ಯವಾಯ್ತು.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ