• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಬಾಲ್ಯ ವಿವಾಹ: ಮೂರು ವರ್ಷದಲ್ಲಿ 200 ಅಪ್ರಾಪ್ತರ ಮದುವೆ

ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಬಾಲ್ಯ ವಿವಾಹ: ಮೂರು ವರ್ಷದಲ್ಲಿ 200 ಅಪ್ರಾಪ್ತರ ಮದುವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Child Marriage in Hassan: ಒಂದೇ ದಿನ 22 ಸಾವಿರ ಪಾಂಪ್ಲೆಟ್ ಹಂಚಿಕೆ ಮಾಡಿದ್ದರೂ ಪೋಕ್ಸೋ, ಬಾಲ್ಯ ವಿವಾಹ ಪ್ರಕರಣ ಕಡಿಮೆಯಾಗಿಲ್ಲ. ಪೋಷಕರೇ ಜಾಗೃತರಾಗದ ಹೊರತು ಬೇರೆ ಪರಿಹಾರ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಹೇಳಿದ್ದಾರೆ.

  • Share this:

ಹಾಸನ: ಬಡತನ,‌ ಮೂಢನಂಬಿಕೆ, ಕಾನೂನಿನ ಅರಿವಿಲ್ಲದಿರುವುದು, ವಿದ್ಯೆಯ ಕೊರತೆ, ಹೀಗೆ ನಾನಾ ಕಾರಣಗಳಿಂದ ಹಿಂದೆಲ್ಲಾ ಬಾಲ್ಯವಿವಾಹ (Child Marriage) ಮಾಡುತ್ತಿದ್ದರು. ಕಾಲಕ್ರಮೇಣ ಆಧುನಿಕತೆ, ಕಾನೂನು ಬಿಗಿಗೊಳ್ಳುತ್ತಿದ್ದಂತೆ ಸ್ವಲ್ಪಮಟ್ಟಿಗೆ ಬಾಲ್ಯವಿವಾಹಗಳು ಕಡಿಮೆಯಾಗುತ್ತಾ ಹೋದವು. ಚೈಲ್ಡ್ ಮ್ಯಾರೇಜ್ ಅಪರಾಧ, ಕಠಿಣ ಶಿಕ್ಷೆ ಗುರಿಯಾಗಬೇಕಾಗುತ್ತದೆ ಹೀಗೆ ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ಅರಿವು ಜಾಗೃತಿ ಮೂಡಿಸುತ್ತಿದೆ.


ಆದರೆ ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಿದ್ದು ಪೋಕ್ಸೋ (POCSO) ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದೆ. ಅದರಲ್ಲೂ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ. ಚೈಲ್ಡ್ ಮ್ಯಾರೇಜ್ ಅಪರಾಧ ಎಂದು ತಿಳಿದಿದ್ದರೂ, ಪೋಷಕರು ಮಕ್ಕಳಿಗೆ ಮದುವೆ ವಯಸ್ಸು ಆಗುವ ಮುಂಚೆಯೇ ಮದುವೆ ಮಾಡುತ್ತಿದ್ದಾರೆ.


ಹಾಸನ ಜಿಲ್ಲೆಯಲ್ಲಿ 2018-19 ರಲ್ಲಿ 40 ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ. ಇವುಗಳಲ್ಲಿ 38ನ್ನು ತಡೆಯಲಾಗಿದೆ. ಹಾಗೆಯೇ 2019-20 ರಲ್ಲಿ 30 ಪ್ರಕರಣಗಳನ್ನು  ತಡೆಯಲಾಗಿದೆ. 2020-21 ರಲ್ಲಿ ಅತಿ ಹೆಚ್ಚು ಅಂದರೆ 160 ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು, ಇವುಗಳಲ್ಲಿ 121ನ್ನು ತಡೆಯಲು ಸಾಧ್ಯವಾಗಿದ್ದರೆ, 39 ನಡೆದು ಹೋಗಿವೆ. ಈ ಪೈಕಿ 29 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳೂ ಹೆಚ್ಚು ದಾಖಲಾಗಿವೆ. ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ, ಕಳೆದ ಜನವರಿಯಿಂದ ಈವರೆಗೆ 45 ಪೋಕ್ಸೋ ಪ್ರಕರಣಗಳು ನಡೆದಿವೆ.


ಹಾಸನ, ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಮೂರು ಪ್ರಕರಣ ಹೊರತುಪಡಿಸಿ ಉಳಿದೆಲ್ಲ 38 ಪ್ರಕರಣ ಪೋಕ್ಸೋ ಆಗಿ ತಿರುವು ಪಡೆದಿವೆ. ಹುಡುಗ-ಹುಡುಗಿಗೆ 18 ವರ್ಷ ತುಂಬುವ ಮುನ್ನವೇ ಪ್ರೀತಿ-ಪ್ರೇಮದ ಬಲೆಯಲ್ಲಿ ಬೀಳುವುದು ಒಂದೆಡೆಯಾದರೆ ಬಾಲ್ಯ ವಿವಾಹ ಪ್ರಕರಣಗಳು ಪೋಕ್ಸೋ ಆಗಿ ಬದಲಾಗಿರುವುದು ಮತ್ತೊಂದು ಕಾರಣವಾಗಿದೆ. 2019 ಕ್ಕೆ ಹೋಲಿಸಿದರೆ 2020 ರಲ್ಲಿ 10 ಕೇಸ್ ಕಡಿಮೆಯಾಗಿವೆ.


ತಮ್ಮ ಮಕ್ಕಳು ಯಾವುದೇ ತಪ್ಪು ದಾರಿ ತುಳಿಯದಂತೆ ಪೋಷಕರು ನಿಗಾವಹಿಸಬೇಕು. ಆದರೆ ಬೆಳೆದ ಮಕ್ಕಳು ಮದುವೆ ವಯಸ್ಸು ಆಗದಿದ್ದರು ಮದುವೆ ಮಾಡಿ ಕೈತೊಳೆದುಕೊಂಡರೆ ಸಾಕು ಎಂಬ ಪೋಷಕರೇ ಹೆಚ್ಚಿಗಿರುವುದೂ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಚೈಲ್ಡ್ ಮ್ಯಾರೇಜ್ ಬಗ್ಗೆ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಬಹುತೇಕ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಗಂಡನನ್ನಷ್ಟೇ ಆರೋಪಿ ಮಾಡದೆ ಮಕ್ಕಳ ತಂದೆ-ತಾಯಿಯನ್ನೂ ಆರೋಪಿಗಳನ್ನಾಗಿ ಮಾಡಿ ಜೈಲಿಗೆ ಕಳಿಹಿಸುತ್ತಿದ್ದಾರೆ. ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯದಿಂದಲಾದರು ಬಾಲ್ಯ ವಿವಾಹ ಕಡಿಮೆಯಾಗಬೇಕಿತ್ತು.


ಇದನ್ನೂ ಓದಿ: ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋಣ್​ದಾಳಿ: 8ಮಂದಿಗೆ ಗಾಯ


ಆದರೆ ಬಡ ಕುಟುಂಬಗಳಲ್ಲಿ ವಿವಾಹಗಳು ನಡೆಯುತ್ತಲೇ ಇವೆ. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಕೊರತೆಯಿದೆ. ಬಾಲ್ಯ ವಿವಾಹ, ಪೋಕ್ಸೋ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಸಕ್ತ ವರ್ಷದಲ್ಲಿ ಐನೂರಕ್ಕೂ ಹೆಚ್ಚು ಜಾಗೃತಿ, ಅರಿವು ಕಾರ್ಯಕ್ರಮಗಳನ್ನು ಮಾಡುವುದರ ಜೊತೆಹೆ ಕರಪತ್ರ ಹಂಚಿಕೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಡೆಯ ದಿನ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಹತ್ತನೆ ತರಗತಿ ಮಕ್ಕಳಿಗೆ ಅರಿವು ಮೂಡಿಸಲಾಗಿದೆ.


ಇದನ್ನೂ ಓದಿ: ಕಾವೇರಿ ಸಭೆಯಲ್ಲಿ ಚರ್ಚೆಯಾಗದ ಮೇಕೆದಾಟು DPR ವಿಚಾರ, ರಾಜ್ಯಕ್ಕೆ ಹಿನ್ನಡೆ


ಅಷ್ಟೇ ಅಲ್ಲದೆ ಒಂದೇ ದಿನ 22 ಸಾವಿರ ಪಾಂಪ್ಲೆಟ್ ಹಂಚಿಕೆ ಮಾಡಿದ್ದರೂ ಪೋಕ್ಸೋ, ಬಾಲ್ಯ ವಿವಾಹ ಪ್ರಕರಣ ಕಡಿಮೆಯಾಗಿಲ್ಲ. ಪೋಷಕರೇ ಜಾಗೃತರಾಗದ ಹೊರತು ಬೇರೆ ಪರಿಹಾರ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Hassan Superintendent of Police) ಆರ್.ಶ್ರೀನಿವಾಸ್‌ಗೌಡ ಹೇಳಿದ್ದಾರೆ.

Published by:Sharath Sharma Kalagaru
First published: