ವೈಟ್ ಕಾಲರ್ ರೌಡಿಗಳ ಮೇಲೆ ಕಣ್ಣಿಟ್ಟಿರುವ ಚನ್ನಪಟ್ಟಣ ಖಾಕಿ ಪಡೆ

ಚನ್ನಪಟ್ಟಣ ಗ್ರಾಮೀಣ ಪೊಲೀಸ್ ಠಾಣೆ

ಚನ್ನಪಟ್ಟಣ ಗ್ರಾಮೀಣ ಪೊಲೀಸ್ ಠಾಣೆ

ಚನ್ನಪಟ್ಟಣ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ರೌಡಿಜಂ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವ ಕೆಲ ರೌಡಿಶೀಟರ್ಸ್​ಗೆ ಕೆಲ ರಾಜಕೀಯ ಮುಖಂಡರ ಬೆಂಬಲ ಸಿಗುತ್ತಿದೆ. ಹಾಗಾಗಿ ಇಲ್ಲಿ ರೌಡಿಜಂ ಚಟುವಟಿಕೆ ಹೆಚ್ಚಾಗಿದೆ ಎಂಬ ಚರ್ಚೆ ನಡೆಯುತ್ತಿದೆ.

  • Share this:

ರಾಮನಗರ: ಜಿಲ್ಲೆಯ ಚನ್ನಪಟ್ಟಣ ನಗರದ 31 ನೇ ವಾರ್ಡ್​ನ‌ ಬಿಜೆಪಿ ನಗರಸಭಾ ಸದಸ್ಯೆ ಮಂಗಳಮ್ಮ ಅವರ ಮನೆಗೆ ಆಗಸ್ಟ್ 9ರ ರಾತ್ರಿ 8:50 ರ ಸಮಯದಲ್ಲಿ ಏಕಾಏಕಿ 25 ಕ್ಕೂ ಹೆಚ್ಚು ಜನ ಪುಂಡರು ನುಗ್ಗಿ ದಾಂಧಲೆ ನಡೆಸಿದ್ದರು. ಮನೆಯಲ್ಲಿದ್ದ ಬೈಕ್, ಕುರ್ಚಿಗಳು, ಕಿಟಕಿ ಸೇರಿದಂತೆ ಹಲವು ವಸ್ತುಗಳನ್ನ ಹೊಡೆದು ನಾಶ ಮಾಡಿದ್ದರು. ಈ ಬಗ್ಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು 10 ಜನ ಆರೋಪಿಗಳ ಮೇಲೆ FIR ಸಹ ದಾಖಲಾಗಿತ್ತು. ಈ ಬಗ್ಗೆ ಮಾತನಾಡಿದ್ದ ರಾಮನಗರ ಎಸ್ಪಿ ಎಸ್.ಗಿರೀಶ್ ಈ ಘಟನೆಯ ಸಂಬಂಧ ಈಗಾಗಲೇ 10 ಜನರ ಮೇಲೆ FIR ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ರೌಡಿಶೀಟರ್ ಇದ್ದರೂ ಎಂಬ ಮಾಹಿತಿ ಇದೆ. ಕೂಡಲೇ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದಿದ್ದರು. ಇನ್ನು ಈ ಪ್ರಕರಣ ಸಂಬಂಧ ಈಗ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು 8 ಜನ ಪ್ರಮುಖ ಆರೋಪಿಗಳನ್ನ ಬಂಧಿಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.


ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಮನಗರ ಎಸ್ಪಿ ಎಸ್.ಗಿರೀಶ್, ಚನ್ನಪಟ್ಟಣ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಕಾರ್ಯವೈಖರಿಗೆ ಚನ್ನಪಟ್ಟಣದ ಜನತೆ ಶಹಬಾಸ್ ಹೇಳಿದ್ದಾರೆ. ಜೊತೆಗೆ ಚನ್ನಪಟ್ಟಣ ನಗರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಸಹ ಉತ್ತಮವಾಗಿ ಸಾಥ್ ಕೊಟ್ಟ ಹಿನ್ನೆಲೆ ಆರೋಪಿಗಳನ್ನ ಬೇಗ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೆಯೇ ಈಗ ಸಿಕ್ಕಿರುವ ಆರೋಪಿಗಳಿಗೆ ರೌಡಿಶೀಟರ್ ಖಾತೆ ತೆರೆಯಲಾಗಿದೆ.


ಇನ್ನು ಚನ್ನಪಟ್ಟಣ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ರೌಡಿಜಂ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವ ಕೆಲ ರೌಡಿಶೀಟರ್ಸ್​ಗೆ ಕೆಲ ರಾಜಕೀಯ ಮುಖಂಡರ ಬೆಂಬಲವೂ ಸಿಗುತ್ತಿದೆ. ಹಾಗಾಗಿ ಚನ್ನಪಟ್ಟಣದಲ್ಲಿ ರೌಡಿಜಂ ಚಟುವಟಿಕೆ ಹೆಚ್ಚಾಗಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಪೊಲೀಸರು ಎಷ್ಟೇ ಬಿಗಿ ಕ್ರಮವಹಿಸಬೇಕು ಎಂದು ನಿರ್ಧಾರ ಮಾಡಿದರೂ ಸಹ ಆ ಪಟಾಲಂಗೆ ಬೆಂಬಲ ನೀಡಿ ರಾಜಕೀಯ ಒತ್ತಡ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲ ವೈಟ್ ಕಾಲರ್ ರೌಡಿಗಳು ಚನ್ನಪಟ್ಟಣದಲ್ಲಿ ಹೆಚ್ಚಾಗಿದ್ದಾರೆ ಎಂದು ಜನರು ಚರ್ಚೆ ಮಾಡ್ತಿದ್ದಾರೆ.


ಇದನ್ನೂ ಓದಿ: ಕಡಿಮೆ ಜಾಗದಲ್ಲಿ ಬೆಳೆದು ನಿಂತಿದೆ ದಟ್ಟ ಕಾಡು.. ಮೆಸ್ಕಾಂ ಲೈನ್​​ಮ್ಯಾನ್​​ ಪರಿಸರ ಪ್ರೇಮ


ವೈಟ್ ಕಾಲರ್ ರೌಡಿಗಳ ಮೇಲೆ ಕಣ್ಣಿಟ್ಟಿರುವ ಚನ್ನಪಟ್ಟಣ ಖಾಕಿ ಪಡೆ:


ಚನ್ನಪಟ್ಟಣ ಅಂದರೆ ಬೊಂಬೆಗಳ ನಾಡು ಎಂಬ ಪ್ರಖ್ಯಾತಿ ಇದೆ. ಆದರೆ ಇತ್ತಿಚಿನ ದಿನಗಳಲ್ಲಿ ಕೆಲ ವೈಟ್ ಕಾಲರ್ ಪುಂಡರು ತಮ್ಮ ರಾಜಕೀಯ ಬೆಳವಣಿಗೆಗೆ ತುಟಿಯ ಮೇಲೆ ಮೀಸೆ ಚಿಗುರದ ಹುಡುಗರನ್ನ ತಮ್ಮ ಬೇಳೆಗೆ ಬಿಸಿನೀರಾಗಿ ಬಳಸಿಕೊಂಡು ಬೇಯಿಸಿಕೊಳ್ಳುತ್ತಿದ್ದಾರೆ. ಈಗ ಸಿಕ್ಕಿರುವ ಈ 8 ಜನರಿಗೆ ಚನ್ನಪಟ್ಟಣದ ಕೆಲ ರಾಜಕೀಯ ಪುಡಾರಿಗಳು ಸಹ ಆರ್ಥಿಕವಾಗಿ ಬೆಂಬಲ ನೀಡುತ್ತಿದ್ದ ಕಾರಣ ಈ ತಂಡದ ಹಾವಳಿ ಹೆಚ್ಚಾಗಿದೆ ಎನ್ನುತ್ತಾರೆ ಚನ್ನಪಟ್ಟಣದ ಜನರು. ತಮ್ಮ ಚುನಾವಣೆಗಳು ಬಂದಾಗ, ಅಥವಾ ತಮ್ಮ ಗ್ಯಾಂಗ್ ವಿರುದ್ಧ ತೊಡೆತಟ್ಟುವ ಮತ್ತೊಂದು ಗ್ಯಾಂಗ್ ಅನ್ನು ಮಣಿಸುವ ಕೆಟ್ಟ ಚಾಳಿಯಿಂದಾಗಿ ಇಂತಹ ಪುಂಡರಿಗೆ ಬೆಂಬಲ ಕೊಡುತ್ತಿದ್ದಾರೆ ಕೆಲ ವೈಟ್ ಕಾಲರ್ ರೌಡಿಗಳು.


‌ಹಾಗಾಗಿ ಈ ಬಗ್ಗೆ ನ್ಯೂಸ್ 18 ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳ ತಂಡ ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಅನುಮಾನ ಕಂಡುಬಂದು ನಮ್ಮ ಸಂದೇಹ ರುಜುವಾದರೆ ಅಂತಹ ವೈಟ್ ಕಾಲರ್ ರೌಡಿಗಳನ್ನು ಜೈಲಿಗೆ ಕಳುಹಿಸಲಾಗುತ್ತೆ. ಯಾವುದೇ ಕಾರಣಕ್ಕೂ ಮುಲಾಜಿಲ್ಲದೇ ಅಂತಹ ವ್ಯಕ್ತಿಗಳನ್ನ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆ ಚನ್ನಪಟ್ಟಣ ನಗರದಲ್ಲಿ ನಡೆದ ದಾಂಧಲೆ ಪ್ರಕರಣದಿಂದಾಗಿ ಪೊಲೀಸರು ಸಹ ಫುಲ್ ಅಲರ್ಟ್ ಆಗಿದ್ದಾರೆ.


ವರದಿ: ಎ.ಟಿ.ವೆಂಕಟೇಶ್

Published by:Vijayasarthy SN
First published: