Charging Bicycle - ಕನಕಪುರದ ಶಾಲಾ ವಿದ್ಯಾರ್ಥಿಯಿಂದ ಚಾರ್ಜಿಂಗ್ ಸೈಕಲ್ ಆವಿಷ್ಕಾರ

ಕನಕಪುರದ ದೊಡ್ಡ ಆಲಹಳ್ಳಿ ಗ್ರಾಮದ 16 ವರ್ಷದ ಬಾಲಕ ಯೋಗೇಶ್ ನಿರುಪಯುಕ್ತ ವಸ್ತುಗಳನ್ನೇ ಹೆಚ್ಚಾಗಿ ಬಳಸಿ ಚಾರ್ಜಿಂಗ್ ಸೈಕಲ್ ಆವಿಷ್ಕರಿಸಿದ್ದಾನೆ. 10ನೇ ತರಗತಿ ವಿದ್ಯಾರ್ಥಿಯ ಈ ಸಾಧನೆಯನ್ನ ಶಿಕ್ಷಕರೂ ಕೊಂಡಾಡಿದ್ದಾರೆ.

ಕನಕಪುರದ ಯೋಗೇಶ್ ಆವಿಷ್ಕರಿಸಿದ ಚಾರ್ಜಿಂಗ್ ಬೈಸಿಕಲ್

ಕನಕಪುರದ ಯೋಗೇಶ್ ಆವಿಷ್ಕರಿಸಿದ ಚಾರ್ಜಿಂಗ್ ಬೈಸಿಕಲ್

  • Share this:
ರಾಮನಗರ: ಈತ ಎಸ್ಎಸ್ಎಲ್​ಸಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ. ಲಾಕ್ ಡೌನ್ ಸಮಯದಲ್ಲಿ ಶಾಲೆ ಇರಲಿಲ್ಲ. ತಂದೆ ಮಾಡುವ ಮರಗೆಲಸಕ್ಕೆ ಈತ ಸಹಾಯ ಮಾಡಿಕೊಂಡಿದ್ದ. ಈ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿ ಬಡ ವರ್ಗದ ಜನರಿಗೆ ಹೊರೆಯಾಗುವುದನ್ನು ಕಣ್ಣಾರೆ ಕಾಣುತ್ತಿದ್ದ ವಿದ್ಯಾರ್ಥಿಯೊಳಗಿನ ಕ್ರಿಯಾಶೀಲತೆ ಗರಿಗೆದರಿ ಬ್ಯಾಟರಿ ಸೈಕಲ್ ತಯಾರಿಸುವ ಹೊಸ ಆವಿಷ್ಕಾರಕ್ಕೆ ಎಡೆ ಮಾಡಿಕೊಟ್ಟಿದೆ. ವಿದ್ಯಾರ್ಥಿ ಮಾಡಿರುವ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಯುವಕನ ಹೆಸರು ಯೋಗೇಶ್. ಈತ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಯುವಕ. ದೊಡ್ಡಆಲಹಳ್ಳಿ ಗ್ರಾಮದ ಸಮೀಪದಲ್ಲೇ ಇರುವ ಕೃಷ್ಣಯ್ಯನದೊಡ್ಡಿ ಗ್ರಾಮದ ವಿಶ್ವೋದಯ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾನೆ.

ಓದಿನಲ್ಲೂ ಸೈ ಎನಿಸಿಕೊಂಡಿರುವ ವಿದ್ಯಾರ್ಥಿ ಯೋಗೇಶ್ ಬಳಕೆಯಾಗದ ವಸ್ತುಗಳನ್ನ ಇಟ್ಟುಕೊಂಡು ಸೈಕಲ್, ಬ್ಯಾಟರಿ, ವಯರ್, ಮೋಟಾರ್​ಗಳನ್ನ ಮುಂದಿಟ್ಟುಕೊಂಡು ಬ್ಯಾಟರಿ ಸೈಕಲ್ ತಯಾರಿಸಿರುವುದು ಇದೀಗ ಎಲ್ಲರೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಾಕ್ ಡೌನ್ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿ ಜನರಿಗೆ ಹೊರೆಯಾಗಿದೆ. ಇದನ್ನೇ ಮನಸಿನಲ್ಲಿಟ್ಟುಕೊಂಡು ದೊಡ್ಡಆಲಹಳ್ಳಿ ಗ್ರಾಮದ ಯುವಕ ಯಾರ ಪ್ರೇರಣೆಯೂ ಇಲ್ಲದೇ ಇದೀಗ ಬ್ಯಾಟರಿ ಸೈಕಲ್ ತಯಾರಿಸಿದ್ದಾನೆ. ಮೊದಮೊದಲು ತಯಾರು ಮಾಡಿದ್ದ ಬ್ಯಾಟರಿ ಸೈಕಲ್ ಸುಟ್ಟು ಹೋಗಿತ್ತು. ಮತ್ತೆ ಪ್ರಯತ್ತಿಸಿ ಮಾಡಿದ ಬ್ಯಾಟರಿ ಸೈಕಲ್ ಯಶಸ್ವಿಯಾಗಿದೆ. ಗಂಟೆಗೆ 30 ಕಿಮೀ ವೇಗವಾಗಿ ಹೋಗಬಲ್ಲ ಈ ಸೈಕಲ್ ನಲ್ಲಿ 2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಸರಿಸುಮಾರು 15 ಕಿಮೀ ದೂರ ಪ್ರಯಾಣ ಬೆಳೆಸಬಹುದಾಗಿದೆ.

ಅಂದಹಾಗೆ, ಈ ಬ್ಯಾಟರಿ ಸೈಕಲ್ ತಯಾರಿಸಲು ಸುಮಾರು 10 ಸಾವಿರ ರೂ ಖರ್ಚಾಗಿದೆ. ತಂದೆ ಅಂಗಡಿಯೊಂದನ್ನ ಇಟ್ಟುಕೊಂಡು ಮರಗೆಲಸ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಶಾಲೆ ಇರಲಿಲ್ಲ ಎಂಬ ಕಾರಣಕ್ಕೆ ತಂದೆಗೆ ಅಂಗಡಿಯಲ್ಲಿ ಸಹಾಯ ಮಾಡಿಕೊಂಡು ಈತನೂ ಸಹ ಮರಗೆಲಸ ಮಾಡಿಕೊಂಡಿದ್ದ. ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣದಲ್ಲೇ ಎಲ್ಲಾ ವಸ್ತುಗಳನ್ನ ಖರೀದಿ ಮಾಡಿದ್ದಾನೆ.

ಇದನ್ನೂ ಓದಿ: ಕೆಆರ್​ಎಸ್ ಡ್ಯಾಮ್​ಗೆ ದೃಷ್ಟಿನಿವಾರಣೆ ಪೂಜೆ ಮೂಲಕ ಸುಮಲತಾ ದೃಷ್ಟಿಗೆ ಗುರಿಯಾದರಾ ಮಂಡ್ಯ ದಳಪತಿಗಳು

ಬ್ಯಾಟರಿ ಸೈಕಲ್ ತಯಾರಿಸಿ ಗ್ರಾಮದಲ್ಲಿ ಮನೆ ಮಾತಾಗಿರುವ ಯೋಗೇಶ್ ಬಗ್ಗೆ ತಂದೆ ಸಂತಸ ವ್ಯಕ್ತಪಡಿಸುತ್ತಾರೆ. ಈಗ ಅವನೇ ಸಂಪಾದನೆ ಮಾಡಿದ ಹಣಕ್ಕೆ ಇಷ್ಟೆಲ್ಲಾ ಮಾಡಿಕೊಂಡಿದ್ದಾನೆ. ಮುಂದೆ ನಾವು ಅವನ ಬೆನ್ನೆಲುವಾಗಿ ನಿಂತು ಎಲ್ಲಾ ರೀತಿಯ ಸಹಕಾರವೂ ಕೊಡುತ್ತೇವೆ ಎಂದು ಮಗನ ಸಾಧನೆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಲೆಯ ಶಿಕ್ಷಕ ವರ್ಗದವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ 10ನೇ ತರಗತಿ ವಿದ್ಯಾರ್ಥಿ ಯೋಗೇಶ್ ಮಾಡಿರುವ ಸಾಧನೆ ನಿಜಕ್ಕೂ ಮೆಚ್ಚಲೇಬೇಕು. ಬರೀ ಓದು ಮತ್ತು ಪರೀಕ್ಷೆಗಳಿಗಷ್ಟೇ ಸೀಮಿತವಾಗದೇ ಇಂಥ ಪ್ರಯೋಗಗಳನ್ನ ಮಾಡಿದರೆ ವಿದ್ಯಾರ್ಥಿಗಳ ಬೆಳವಣಿಗೆಗೂ ಸಹಕಾರಿ ಆಗುತ್ತದೆ. ವಿದ್ಯಾರ್ಥಿ ಯೋಗೇಶ್ ಮಾಡಿರುವ ಸಾಧನೆ ಬೇರೆ ಮಕ್ಕಳಿಗೂ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ. ನ್ಯೂಸ್ 18 ಜೊತೆಗೆ ಮಾತನಾಡಿರುವ ಯೋಗೇಶ್ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ‌ ಸಾಧನೆ ಮಾಡುವುದಾಗಿ ತಿಳಿಸಿದ್ದಾನೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: