ರಾಮನಗರ: ಕರ್ನಾಟಕದ ಮಹತ್ವಕಾಂಕ್ಷಿ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ರೈತರು ಒತ್ತಾಯಿಸಿ ರಾಮನಗರ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ರೈತರು ಮೇಕೆದಾಟಿನ ಸಂಗಮದವರೆಗೆ ಇಂದು ಬುಧವಾರ ಬೈಕ್ ಜಾಥ ನಡೆಸಿದರು. ರಾಮನಗರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆಯ ರೈತರು ಭಾಗಿಯಾಗಿದ್ದರು. ರಾಮನಗರದ ಮಿನಿ ವಿಧಾನಸೌಧದಿಂದ ಜಾಥ ಪ್ರಾರಂಭವಾಗಿ ಕನಕಪುರದ ಸಂಗಮದಲ್ಲಿ ರೈತರು ಒಟ್ಟಾಗಿ ಸೇರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಯೋಜನೆ ಪ್ರಾರಂಭಕ್ಕೆ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಹೋರಾಟ ನಡೆಯಿತು. ರಾಮನಗರದಿಂದ ಕನಕಪುರ, ಕನಕಪುರದಿಂದ ದೊಡ್ಡಾಲಹಳ್ಳಿ, ದೊಡ್ಡಾಲಹಳ್ಳಿ ಯಿಂದ ಸಂಗಮಕ್ಕೆ ಜಾಥ ನಡೆಸಿದ ರೈತರು ದಾರಿಯುದ್ದಕ್ಕೂ ಘೋಷಣೆ ಕೂಗಿದರು. ರೈತ ಮುಖಂಡ ಬಡಗಲಪುರ ನಾಗೇಂದ್ರ ಮುಂದಾಳತ್ವದಲ್ಲಿ ಹೋರಾಟ ನಡೆಯಿತು. ಸಂಗಮದಲ್ಲಿ ನ್ಯೂಸ್ 18 ಜೊತೆಗೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ಮಲತಾಯಿ ಧೋರಣೆ ತೋರಬಾರದು ಎಂದು ಕಿಡಿಕಾರಿದರು.
ಇದನ್ನೂ ಓದಿ: ಅತಿ ಹೆಚ್ಚು ಓದಿದ ಭಾರತೀಯ ಕ್ರಿಕೆಟಿಗ ಯಾರು ಗೊತ್ತಾ? ಎಂಜಿನಿಯರ್ಸ್ ಕುಂಬ್ಳೆ, ಶ್ರೀನಾಥ್ ಅಂತೂ ಅಲ್ಲ
ಕೇಂದ್ರದವರು ತಮಿಳುನಾಡಿನ ರಾಜಕೀಯಕ್ಕಾಗಿ ಯೋಜನೆಗೆ ತಡಮಾಡ್ತಿದ್ದಾರೆ. ಅಲ್ಲಿನ ಪ್ರಾದೇಶಿಕ ರಾಜಕೀಯ ಅನುಕೂಲಕ್ಕಾಗಿ ತಡ ಮಾಡ್ತಿದ್ದಾರೆ. ನಮಗೆ 177 ಟಿಎಂಸಿ ನೀರನ್ನ ತಮಿಳುನಾಡಿಗೆ ಕೊಡಲು ಯಾವುದೇ ತಕರಾರಿಲ್ಲ. ಆದರೆ ಮಳೆಯಾದಾಗ ಸಂಗ್ರಹವಾಗುವ ಹೆಚ್ಚುವರಿ ನೀರಿಗೆ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತೆ. ಈಗಾಗಲೇ ಸುಪ್ರೀಂಕೋರ್ಟ್ ಹಾಗೂ ಹಸಿರು ಪೀಠ ಯೋಜನೆಗೆ ಅಸ್ತು ಎಂದಿದೆ. ಆದರೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಈ ವಿಚಾರವಾಗಿ ರಾಜಕೀಯ ಮಾಡ್ತಿದ್ದಾರೆ. ಅವರ ರಾಜಕೀಯ ಹಿತಾಸಕ್ತಿಗಾಗಿ ವಿರೋಧ ಮಾಡ್ತಿದ್ದಾರೆ ಎಂದು ಕನಕಪುರದ ಸಂಗಮದಲ್ಲಿ ಬಡಗಲಪುರ ನಾಗೇಂದ್ರ ಟೀಕಿಸಿದರು.
ನಮ್ಮ ರಾಜ್ಯದ 25 ಜನ ಬಿಜೆಪಿ ಸಂಸದರು ಲಡಾಯಿ ಮಾಡಬೇಕು. ಕೇಂದ್ರದ ನಾಯಕರ ಎದುರು ನಮ್ಮ ಯೋಜನೆಗಾಗಿ ಆಗ್ರಹ ಮಾಡಬೇಕು. ತಮಿಳುನಾಡಿನಲ್ಲಿ ನೀರಿನ ವಿಚಾರದಲ್ಲಿ ಒಂದಾಗುತ್ತಾರೆ. ಅದೇ ರೀತಿ ನಮ್ಮಲ್ಲಿಯೂ ಸಹ ಒಂದಾಗಿ ಒತ್ತಾಯಿಸಬೇಕು. ರಾಜ್ಯದ ಸಿಎಂ ಬೊಮ್ಮಾಯಿ ಅವರು ನಾವು ಯೋಜನೆ ಜಾರಿ ಮಾಡೇ ಮಾಡ್ತೇವೆಂದು ಹೇಳ್ತಿದ್ದಾರೆ. ಹಾಗಾಗಿ ಕೂಡಲೇ ಯೋಜನೆ ಪ್ರಾರಂಭಿಸಬೇಕು. ಕೇಂದ್ರದವರು ಈ ಯೋಜನೆಗೆ ವಿರೋಧ ಮಾಡಬಾರದು. ಒಂದು ವೇಳೆ ವಿರೋಧ ಮಾಡಿದರೆ ಮುಂದೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಅವರು ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: SSLC Exam: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ದಿನಾಂಕ ಪ್ರಕಟ ಸೆ. 27 , 29 ರಂದು ನಡೆಯಲಿದೆ ಎಕ್ಸಾಮ್
ಇನ್ನು ಈ ಯೋಜನೆಯಿಂದ 66 ಟಿಎಂಸಿಯಷ್ಟು ಕುಡಿಯುವ ನೀರನ್ನ ಸಂಗ್ರಹ ಮಾಡಬಹುದು, ಇದರಿಂದ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಜೊತೆಗೆ ರಾಮನಗರ ಜಿಲ್ಲೆಯ ಜೊತೆಗೆ ಬೆಂಗಳೂರು ನಗರ ಹಾಗೂ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನ ಪೂರೈಕೆ ಮಾಡಬಹುದು ಎಂಬ ಮೂಲ ಉದ್ದೇಶವೇ ಮೇಕೆದಾಟು ಯೋಜನೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ