ರಾಮ’ ಶಾಂತಿಯ ಸಂಕೇತ.. ‘ರಾಮ’ ನೊಟ್ಟಿಗೆ ಯುದ್ಧ ಬೇಕಿಲ್ಲ, ರಾಮನಗರದ ಅಸ್ಮಿತೆಯೇ ರಾಮ.. ರಾಮ...!

ದೇಶಕ್ಕೆಲ್ಲಾ ರಾಮನಗರದ ರಾಮನ ಮಹಿಮೆ ಸಾರಿದ್ದು ‘ಶೋಲೆ’ ಸಿನಿಮಾ. ‘ಶೋಲೆ’ ಸಿನಿಮಾದ ರಾಮಘಡವೇ ಈಗಿನ ರಾಮನಗರ. ಗಬ್ಬರ್​ ಸಿಂಗ್, ವೀರು, ಜೈ, ಬಸಂತಿ.. ಹೀಗೆ ಎಲ್ಲರ ಬಾಯಲ್ಲೂ ಇದೇ ರಾಮನಗರ ಅಲಿಯಾಸ್ ರಾಮಘಡ್​.

HR Ramesh | news18-kannada
Updated:January 8, 2020, 9:36 PM IST
ರಾಮ’ ಶಾಂತಿಯ ಸಂಕೇತ.. ‘ರಾಮ’ ನೊಟ್ಟಿಗೆ ಯುದ್ಧ ಬೇಕಿಲ್ಲ, ರಾಮನಗರದ ಅಸ್ಮಿತೆಯೇ ರಾಮ.. ರಾಮ...!
ಶೋಲೆ ಸಿನಿಮಾದಲ್ಲಿ ಚಿತ್ರೀಕರಣಗೊಂಡ ರಾಮನಗರದ ಬೆಟ್ಟ.
  • Share this:
‘ರಾಮ’ನಗರದ ಹೆಸರು ಬದಲಾವಣೆ ಮಾತು ರಾಜಕೀಯದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಆದರೆ, ಅದರ ಪ್ರಸ್ತಾಪವೇ ಇಲ್ಲ ಅಂತಾ ಸಿಎಂ ಯಡಿಯೂರಪ್ಪ ಹೇಳಿದರೂ ಕೂಡ, ಬೆಂಕಿ ಇಲ್ಲದೆ ಹೊಗೆ ಆಡಲು ಸಾಧ್ಯವೇ ಅಂತಿದ್ದಾರೆ ರಾಮನಗರದ ಜನ.

ಹಿಂದೂ-ಮುಸ್ಲಿಮರ ಭಾವೈತ್ಯತೆ ಬೀಡು ಈ ‘ರಾಮ’ನಗರ. ಹೆಸರು ‘ರಾಮ’ನದ್ದಾದರೂ ನಗರದ ತುಂಬೆಲ್ಲಾ ಮುಸ್ಲಿಮರದ್ದೇ ವ್ಯಾಪಾರ, ವಹಿವಾಟು ಜೋರು. ರಾಮನ ನೆಲದಲ್ಲಿ ಬೆಳೆಯೋ ರೇಷ್ಮೆಯನ್ನು ವಿಶ್ವಾದ್ಯಂತ ಹರಡುವ ಕಾಯಕ ಮಾಡುತ್ತಿರುವವರು ಇದೇ ಮುಸ್ಲಿಂ ಬಾಂಧವರು.

ಟಿಪ್ಪು ಸುಲ್ತಾನ್ ಕಾಲದಲ್ಲಿ ಈ ‘ರಾಮ’ನಗರ ಶಮ್​ಸೆರಾಬಾದ್​ ಆಗಿತ್ತು. ಅದರ ಕುರುಹುಗಳನ್ನು ಹುಡುಕುತ್ತಾ ಹೋದರೂ ಸಿಗೋದು ಕಷ್ಟ. ಕಾಲಕ್ರಮೇಣ ಶಮ್​ಸೆರಾಬಾದ್​ ‘ಕ್ಲೋಸ್​ಪೇಟ್’ ಆಯ್ತು. ಕಾರಣ, ಸ್ವಾತಂತ್ರ್ಯಪೂರ್ವದಲ್ಲಿ ಈ ನಾಡನ್ನು ಆಳಿದ್ದು ಸರ್​ ಬ್ಯಾರಿ ಕ್ಲೋಸ್​. ಈತನ ಸ್ಮರಣಾರ್ಥ ‘ಕ್ಲೋಸ್​ಪೇಟ್’​ ಆಗಿತ್ತು ರಾಮನಗರ. ‘ಕ್ಲೋಸ್​ಪೇಟ್’ ಅನ್ನೋದನ್ನು ಈಗಲೂ ಒತ್ತಿ ಒತ್ತಿ ಹೇಳುತ್ತಿದೆ ರಾಮನಗರ ನಗರಸಭೆ ಮುಂದಿರುವ ನಾಮಫಲಕ. ಈ ಕ್ಲೋಸ್​ಪೇಟ್​ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಕೆಂಗಲ್​ ಹನುಮಂತಯ್ಯನವರ ಆಡಳಿತಾವಧಿಯಲ್ಲಿ ಕ್ಲೋಸ್​ಪೇಟ್​ ‘ರಾಮ’ನಗರವಾಯ್ತು.

ಶೋಲೆ’ ಸಿನಿಮಾದ ರಾಮಘಡವೇ ಈಗಿನ ರಾಮನಗರ!

ದೇಶಕ್ಕೆಲ್ಲಾ ರಾಮನಗರದ ರಾಮನ ಮಹಿಮೆ ಸಾರಿದ್ದು ‘ಶೋಲೆ’ ಸಿನಿಮಾ. ‘ಶೋಲೆ’ ಸಿನಿಮಾದ ರಾಮಘಡವೇ ಈಗಿನ ರಾಮನಗರ. ಗಬ್ಬರ್​ ಸಿಂಗ್, ವೀರು, ಜೈ, ಬಸಂತಿ.. ಹೀಗೆ ಎಲ್ಲರ ಬಾಯಲ್ಲೂ ಇದೇ ರಾಮನಗರ ಅಲಿಯಾಸ್ ರಾಮಘಡ್​. ರಾಮದೇವರ ಬೆಟ್ಟದ ಮೇಲಿನ ಅಕ್ಕ-ತಂಗಿಯರ ಕಲ್ಲುಗಳು ಈಗಲೂ ರಾಮ.. ರಾಮ... ಅಂತಿವೆ. ಬೆಟ್ಟದ ಮೇಲಿನ ರಾಮನ ದೇವಸ್ಥಾನ ಕೂಡ ರಾಮ ಇಲ್ಲಿಯವನೇ, ಇದೇ ರಾಮಸ್ಥಳ ಅಂತಿದೆ. ಇತ್ತೀಚೆಗೆ ಬೆಟ್ಟದ ಬುಡದಲ್ಲಿ ತಲೆ ಎತ್ತಿ ನಿಂತಿರುವ ಬೃಹತ್ ಆಂಜನೇಯ ಪುತ್ಥಳಿ ಕೂಡ ‘ರಾಮ’ನ ಅಸ್ಮಿತೆಯ ಸಂಕೇತ.

ಇದನ್ನು ಓದಿ:  ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಹೆಸರು ಬದಲಿಸಲು ಮುಂದಾದ ರಾಜ್ಯ ಸರ್ಕಾರ; ವಿದೇಶಿ ಬಂಡವಾಳ ಸೆಳೆಯಲು ಹೊಸ ತಂತ್ರ

ಪುರಾಣದಲ್ಲೂ ಪ್ರಸಿದ್ಧಿ ಈ ಏಕಶಿಲಾಬೆಟ್ಟಗಳ ನಾಡು. ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ರಾಮದೇವರ ಬೆಟ್ಟ, ಸಾವನದುರ್ಗ ಬೆಟ್ಟ, ಮಧುಗಿರಿ ಬೆಟ್ಟ, ದೇವರಾಯನದುರ್ಗ ಬೆಟ್ಟ, ಸಿದ್ದರಬೆಟ್ಟ, ಚಂದ್ರಗಿರಿ-ಬ್ರಹ್ಮಗಿರಿಯಂಥಾ ಕಡುಬೆಟ್ಟಗಳು ಒಂದೇ ಸಾಲಿನಲ್ಲಿ ಹಾದು ಹೋಗಿರೋದು ರಾಮನಗರದ ಮೂಲಕವೇ. ರಾಮನಿಗೂ, ರಾಮಾಯಣಕ್ಕೂ, ರಾಮನಗರದಕ್ಕೂ ಪುರಾಣ ಐತಿಹ್ಯವಿದೆ ಅನ್ನೋದಕ್ಕೆ ಇದೇ ಪೂರಕ. ಹಾಗಾಗೇ ಸ್ಥಳೀಕರ ಪಾಲಿಗೆ ಇದು ಎಂದೆಂದೂ ‘ರಾಮ’ನಗರವೇ. ಹೀಗಿರೋವಾಗಲೇ ಹೆಸರು ಬದಲಾವಣೆ ಮಾಡುವ ವಿಚಾರ ಅನಗತ್ಯ ಅನ್ನೋದು ಸ್ಥಳೀಕರ ವಾದ.

ರಾಜಕಾರಣಕ್ಕೂ ‘ರಾಮ’ನಗರಕ್ಕೂ ಅವಿನಾಭಾವ ಸಂಬಂಧ. ಕೆಂಗಲ್ ಹನುಮಂತಯ್ಯ, ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿಯಂಥಾ ಮುಖ್ಯಮಂತ್ರಿಗಳನ್ನು ಕೊಟ್ಟ ಊರು ಅದು. ಎಂ. ರಾಜಶೇಖರಮೂರ್ತಿ, ಪಿಜಿಆರ್​ ಸಿಂಧ್ಯಾ, ಡಿ ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ತಮ್ಮ ರಾಜಕೀಯ ಭವಿಷ್ಯ, ನೆಲೆ ಕಂಡುಕೊಳ್ಳಲು ಇದೇ ತವರೂರು. ಇಂಥಾ ಊರು ರಾಮನಗರವೇ ಆಗಿರಬೇಕು ಹೊರತು, ಮತ್ತೊಂದಾಗಲು ಮನಸ್ಸುಗಳು ಬಿಡುತ್ತಿಲ್ಲ. ಹಿಂದೊಮ್ಮೆ ಬೆಂಗಳೂರು ಗ್ರಾಮಾಂತರದಿಂದ ಬೇರ್ಪಟ್ಟು ರಾಮನಗರ ಪ್ರತ್ಯೇಕ ಜಿಲ್ಲಾಯಾದಾಗಲೂ ಕೂಡ ಹೆಸರು ಬದಲಾವಣೆ ಪ್ರಸ್ತಾಪ ಕೇಳಿಬಂದಿತ್ತು. ಸ್ವತಃ ಡಿಕೆ ಶಿವಕುಮಾರ್ ಕೂಡ ಬೆಂಗಳೂರು ದಕ್ಷಿಣ ಅಂತಾ ನಾಮಕರಣ ಮಾಡಿ ಅಂದಿದ್ದರು. ಆದರೆ, ಈಗೆಲ್ಲಾ ಅದು ಅಪ್ರಸ್ತುತ.

ಪದೇ ಪದೇ ರಾಮ ರಾಮ ಅನ್ನೋ ಬಿಜೆಪಿಗರು, ಇಷ್ಟು ದಿನ ಇಲ್ಲದ ರಾಮನನ್ನು ನೆನೆಸಿಕೊಳ್ಳದಿದ್ದ ಕಾಂಗ್ರೆಸ್​, ಜೆಡಿಎಸ್​ನೋರಿಗೆ ಈಗಂತೂ ‘ರಾಮ’ನಗರದ್ದೇ ಚಿಂತೆ. ಆದರೆ, ಅಸ್ಮಿತೆಯೊಂದೇ ಎಲ್ಲದಕ್ಕೂ ಪರಿಹಾರ.

  • ವಿಶೇಷ ವರದಿ:  ಬಿ ಎಸ್​ ಬೈರ ಹನುಮಯ್ಯ


Published by: HR Ramesh
First published: January 8, 2020, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading