ಮಾಜಿ IPS ಅಣ್ಣಾಮಲೈ ವಿರುದ್ಧ ರಾಮನಗರ ರೈತರ ಆಕ್ರೋಶ; ಉಪವಾಸ ಸತ್ಯಾಗ್ರಹ ಸಂದೇಶ ಸರಿಯಲ್ಲ ಎಂದು ತಾಕೀತು

ತಾನು ಐಪಿಎಸ್ ಸೇವೆಯಲ್ಲಿದ್ದಾಗ ಕರ್ನಾಟಕದ ಸಿಂಗಂ ಎಂದು ಖ್ಯಾತವಾಗಿದ್ದ ಕೆ. ಅಣ್ಣಾಮಲೈ ಇದೀಗ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಬದಲಾಗಿದ್ದಾರೆ. ಕರ್ನಾಟಕದ ಮೇಕೆದಾಟು ಯೋಜನೆಯನ್ನ ಅವರು ತೀವ್ರವಾಗಿ ವಿರೋಧಿಸಿದ್ಧಾರೆ.

ರಾಮನಗರದ ರೈತ ಸಂಘ ಮುಖಂಡರು

ರಾಮನಗರದ ರೈತ ಸಂಘ ಮುಖಂಡರು

  • Share this:
ರಾಮನಗರ: ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧರಾಜ್ಯ ರೈತ ಸಂಘದವರು ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಾಣ ಕೈಗೊಂಡರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿರುವ ಅಣ್ಣಾಮಲೈ ಹೇಳಿಕೆಯನ್ನ ರೈತ ಮುಖಂಡರು ಖಂಡಿಸಿದರು. ಅಣ್ಣಾಮಲೈ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿ ಆಗಿದ್ದವರು, ಆದರೆ ಇವತ್ತು ಕರ್ನಾಟಕದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದಿದ್ದಾರೆ. ಅಣ್ಣಾಮಲೈ ಅವರ ಈ ನಿರ್ಧಾರ ಸರಿಯಲ್ಲ, ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ. ಮೇಕೆದಾಟು ಅಣೆಕಟ್ಟಿನಿಂದ ಎರಡೂ ರಾಜ್ಯಕ್ಕೆ ಉಪಯೋಗ ಇದೆ. ಅಣ್ಣಾಮಲೈ ಅವರು ತಮ್ಮ ಹೇಳಿಕೆಯನ್ನ ಹಿಂಪಡೆಯಲಿ ಎಂದು ರೈತ ಮುಖಂಡ ಮರಳಾಪುರ ಮಂಜೇಗೌಡ ಹೇಳಿದರು.

ಮಹತ್ವಾಕಾಂಕ್ಷೆ ಯೋಜನೆ ಮೇಕೆದಾಟು: ರೇಷ್ಮೆನಗರಿಯ ಮಹತ್ವಾಕಾಂಕ್ಷೆ ಯೋಜನೆ ಮೇಕೆದಾಟುವಿಗೆ ಈ ಬಾರಿ ಜೀವ ಬರುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆಯ ಸಂಪೂರ್ಣ ಡಿಪಿಆರ್ ನ್ನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ಮತ್ತೆ ತಮಿಳುನಾಡು ತಕರಾರು ಮಾಡಿದ ಪರಿಣಾಮ ಯೋಜನೆಗೆ ಬ್ರೇಕ್ ಬಿತ್ತು. ಆದರೆ ಈಗ ಹಸಿರು ಪೀಠದ ಜೊತೆಗೆ ಸುಪ್ರೀಂಕೋರ್ಟ್ ಸಹ ಯೋಜನೆ ಪರವಾಗಿ ತೀರ್ಪು ನೀಡಿದೆ. ರಾಮನಗರ ಜಿಲ್ಲಾಡಳಿತ ಸಹ ಯೋಜನೆ ಆದಷ್ಟು ಬೇಗ ಪ್ರಾರಂಭವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದೆ.

ಈ ಹಿಂದಿನ ಸಿದ್ದರಾಮಯ್ಯ ನೇತ್ಱತ್ವದ ಕಾಂಗ್ರೆಸ್ ಸರ್ಕಾರವು ಸಲ್ಲಿಸಿದ್ದ ವರದಿಯಂತೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸುಮಾರು ೫,೬೧೨ ಕೋಟಿ ನಿರ್ಮಾಣ ವೆಚ್ಚ ಅಂದಾಜಿಸಲಾಗಿತ್ತು, ಆದರೆ ಈಗ ಅದು 9 ಸಾವಿರ ಕೋಟಿಗೂ ಹೆಚ್ಚಾಗಲಿದೆ ಎನ್ನಲಾಗ್ತಿದೆ.  ಇದರಿಂದ ಸುಮಾರು 60.17 ಟಿಎಂಸಿ ನೀರನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದರಿಂದಾಗಿ ಬಯಲುಸೀಮೆ ಜಿಲ್ಲೆಗಳಾದ ರಾಮನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಒಟ್ಟು 12 ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಹಾಗಾಗಿ ಆದಷ್ಟು ಬೇಗ ಈ ಯೋಜನೆಯನ್ನ ಪ್ರಾರಂಭ ಮಾಡಬೇಕು ಎಂದು ಮೇಕೆದಾಟು ಹೋರಾಟ ಸಮಿತಿ ಈಗಿನ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದೆ.

ಇದನ್ನೂ ಓದಿ: Corona: ಚಾಮರಾಜನಗರ ಜಿಲ್ಲೆಯಲ್ಲಿ ಆರು ಅಂತರರಾಜ್ಯ ಚೆಕ್ ಪೋಸ್ಟ್ ಕಾರ್ಯಾರಂಭ: ಕೇರಳ ಗಡಿಯಲ್ಲಿ ಕಟ್ಟೆಚ್ಚರ

ಇನ್ನು ಮೇಕೆದಾಟು ಜಲಾಶಯದ ಸುತ್ತಮುತ್ತವೆಲ್ಲ ಬಹುಪಾಲು ಅರಣ್ಯ ಪ್ರದೇಶವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಸಂಬಂಧಿಸಿದ ಟ್ರಿಬ್ಯುನಲ್‌ನ ಅನುಮತಿ ಸಿಗುವುದು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಯೋಜನೆ ಅನುಷ್ಠಾನಗೊಂಡಿದ್ದೇ ಆದಲ್ಲಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಬವಣೆ ತಪ್ಪಲಿದೆ. ರಾಮನಗರವೂ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯಾಗಲಿದೆ. ಜೊತೆಗೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಗೂ ಕೂಡ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅಣೆಕಟ್ಟು ನಿರ್ಮಾಣದಿಂದ ಸರಿಸುಮಾರು 2.500 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗಲಿದ್ದು, ಬದಲಿ ಜಾಗವನ್ನ ಅರಣ್ಯ ಇಲಾಖೆಗೆ ಒಪ್ಪಿಸಲು ಈಗಾಗಲೇ ಬದಲಿ ಜಾಗವನ್ನು ಸಹ ಸರ್ವೆ ಮಾಡಲಾಗಿದೆ. ರಾಮನಗರ ಜಿಲ್ಲೆಯಾದ್ಯಂತ ಜಾಗವನ್ನ ಸರ್ವೆ ಮಾಡಲಾಗಿದ್ದು ಕೊನೆ ಹಂತವನ್ನ ತಲುಪಲಾಗಿದೆ. ಇನ್ನೊಂದು ವಾರದಲ್ಲಿ ಅರಣ್ಯ ಇಲಾಖೆಗೆ ಜಾಗವನ್ನ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುತ್ತೆ, ಆದಷ್ಟು ಬೇಗ ಸಿವಿಲ್ ಕೆಲಸಗಳು ಪ್ರಾರಂಭವಾಗಲಿದೆ. ನಂತರ ಡ್ಯಾಂ ಕೆಲಸ ಸರ್ಕಾರದ ಹಂತದಲ್ಲಿ ಪ್ರಾರಂಭವಾಗಲಿದೆ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಹ ನ್ಯೂಸ್ 18 ಗೆ ತಿಳಿಸಿದ್ದಾರೆ.

ಒಟ್ಟಾರೆ ಈ ಬಾರಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ  ಮೇಕೆದಾಟು ಯೋಜನೆಯನ್ನ ಈ ಅವಧಿಯಲ್ಲಿ ಪೂರ್ಣಗೊಳಿಸಿದರೆ ಈ ಭಾಗದ ರೈತರ ಮನದಲ್ಲಿ ಶಾಶ್ವತವಾಗಿ ಬಿಜೆಪಿ ಪಕ್ಷ ಉಳಿಯಲಿದೆ. ಆದರೆ ತಮಿಳುನಾಡು ರಾಜ್ಯದ ನೂತ‌ನ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮಾತ್ರ ತಾನು ತಮಿಳುನಾಡು ಪರವಾಗಿ ನಿಲ್ಲುತ್ತೇವೆ ಎಂದಿದ್ದಾರೆ. ಈ ಹಿನ್ನೆಲೆ ಬಿಜೆಪಿ ಪಕ್ಷದ ದ್ವಂದ್ವ ನಿಲುವು ಎದ್ದುಕಾಣುತ್ತಿದೆ.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: