ರಾಮನಗರ: ರಾಜ್ಯದಲ್ಲಿ ಮೊದಲ ಬಾರಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮೂಲಕ (BEOS) ಅಪರಾಧ ಪ್ರಕರಣವನ್ನು ರಾಮನಗರ (Ramanagar) ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳೆಂಟು ತಿಂಗಳ ಹಿಂದೆ ಬಾಲಕನೊಬ್ಬ ಕಾಣೆಯಾಗಿದ್ದ. ಈ ಪ್ರಕರಣದಲ್ಲಿ ಬಾಲಕನನ್ನು ಅಸಹಜ ಲೈಂಗಿಕ ಕ್ರಿಯೆಗೆ ಬಳಕೆ ಮಾಡಿಕೊಂಡ ಆರೋಪದ ಮೇಲೆ ವಕೀಲ (Lawyer) ಹಾಗೂ ಆತನ ಗೆಳೆಯ ಅರುಣ್ ಎಂಬಾತನನ್ನು ಕನಕಪುರ ಪೊಲೀಸರು ಬಂಧಿಸಿದ್ದರು. ಆದರೆ ಆ ಘಟನೆ ನಂತರ ಸಂತ್ರಸ್ತ ಬಾಲಕ ಕಾಣೆಯಾಗಿದ್ದ. ಇದೀಗ ಜಿಲ್ಲಾ ಪೊಲೀಸರು ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಶನ್ ಸಿಗ್ನೇಚರ್ ಪ್ರೊಫೈಲಿಂಗ್ (ಬಿಇಓಎಸ್) ಅಥವಾ ಮೆದುಳು ಪರೀಕ್ಷೆಯ (Brain mapping) ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಗಳು ಬಾಲಕನನ್ನು ಕೊಲೆ ಮಾಡಿರುವುದು ಈ ಪರೀಕ್ಷೆಯಲ್ಲಿ ಸಾಬೀತಾಗಿದೆ.
ವಕೀಲ ಶಂಕರೇಗೌಡ ಮೇ 19ರಂದು ಕನಕಪುರ ಎಂಜಿ ರಸ್ತೆ ತಾಯಪ್ಪ ಗಲ್ಲಿಯ ಬಾಲಕನನ್ನು ಕಚೇರಿ ಸ್ಥಳಾಂತರ ಮಾಡಬೇಕೆಂದು ಕರೆದುಕೊಂಡು ಹೋಗಿದ್ದರು. ಅಂದಿನಿಂದ ಬಾಲಕ ನಾಪತ್ತೆಯಾಗಿದ್ದ. ಈ ಕುರಿತು ಬಾಲಕನ ತಾಯಿ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಶಂಕರೇಗೌಡನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬಾಲಕನನ್ನು ತನ್ನ ಸಹಚರನೊಂದಿಗೆ ಸೇರಿ ಸಲಿಂಗಕಾಮಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಆರೋಪಿಗಳಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ
ವಕೀಲ ಶಂಕರೇಗೌಡ ಹಾಗೂ ಅರುಣ್ ಮೇಲೆ ಸೆಕ್ಷನ್ 377 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಕೂಡ ಸಲ್ಲಿಕೆ ಮಾಡಿದ್ದರು. ಆದರೆ ಆರೋಪಿಗಳು ಮಾತ್ರ ಬಾಲಕನ ನಾಪತ್ತೆ ಬಗ್ಗೆ ಮಾತ್ರ ಬಾಯಿ ಬಿಟ್ಟಿರಲಿಲ್ಲ. ಕೊನೆಗೆ ಆರೋಪಿಗಳ ಮೇಲೆ ಐಪಿಸಿ 377ರಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿ ಬಾಲಕನ ಪತ್ತೆಗೆ ತನಿಖೆ ಮುಂದುವರೆಸಲಾಗಿತ್ತು. ಹಾಗಾಗಿ ಆರೋಪಿಗಳಿಂದ ನಿಜ ಬಾಯಿಬಿಡಿಸಲು ಕಾನೂನು ಪ್ರಕ್ರಿಯೆಯಂತೆ ನೂತನ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ: Ramanagara: ಮೊಬೈಲ್ ಫೋನ್ ಸ್ವಿಚ್ಆಫ್ ಮಾಡಿಕೊಂಡು ಮಾಗಡಿ ತಾಲೂಕು ತಹಶೀಲ್ದಾರ್ ನಾಪತ್ತೆ?
ನೀರಿನಲ್ಲಿ ಮುಳುಗಿಸಿ ಹತ್ಯೆ
ಆರೋಪಿಗಳಾದ ವಕೀಲ ಶಂಕರೇಗೌಡ ಹಾಗೂ ಆತನ ಸಹಚರ ಅರುಣ್ ಎಫ್ಎಸ್ಎಲ್ನಲ್ಲಿ ಬ್ರೈನ್ ಮ್ಯಾಪಿಂಗ್ ಅಥವಾ ಮೆದುಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬಾಲಕನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ನಡೆಸಲಾಗಿದೆ ಎಂಬುದು ತಿಳಿದುಬಂದಿದೆ ಎಂದು ಎಸ್ಪಿ ಹೇಳಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಪುರಾವೆ ಸಿಕ್ಕಿರುವ ಹಿನ್ನಲೆಯಲ್ಲಿ ಆರೋಪಿಗಳ ಮೇಲೆ ಐಪಿಸಿ 377 (ಅಸಹಜ ಲೈಂಗಿಕ ಕ್ರಿಯೆ) ಜೊತೆಗೆ ಐಪಿಸಿ 302 (ಕೊಲೆ) ಸೆಕ್ಷನ್ನಡಿ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಿಪಟ್ಟಿ ಸಲ್ಲಿಸುತ್ತೇವೆ ಎಂದು ರಾಮನಗರ ಎಸ್ಪಿ ಕೆ.ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.
ಮೆದಳು ಪತ್ತೆ ಪರೀಕ್ಷೆ ಬಗ್ಗೆ ಮಾಹಿತಿ
ಅಪರಾಧ ಪ್ರಕರಣಗಳಲ್ಲಿ ಸಾಕ್ಷಿ ಸಿಗದೇ ಇದ್ದಾಗ ಆರೋಪಿಗಳನ್ನು ನ್ಯಾಯಾಲಯದ ಅನುಮತಿ ಪತ್ರದ ಮೇರೆಗೆ ಬಿಇಓಎಸ್ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಮೆದುಳಿನಲ್ಲಿ ಎಲೆಕ್ಟ್ರೋ ಎನ್ಸೆಫೆಲೋಗ್ರಾಮ್ (electroencephalogram)ಆಧಾರಿತ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಸಂಗ್ರಹವಾಗಿರುವ ಅಪರಾಧಕ್ಕೆ ಸಂಬಂಧಿಸಿದ ಅನುಭವ ಜ್ಞಾನ ಮತ್ತು ಕೃತ್ಯದಲ್ಲಿ ಭಾಗವಹಿಸುವಿಕೆಯನ್ನು ಪತ್ತೆ ಹಚ್ಚುತ್ತದೆ. ಈ ಪರೀಕ್ಷೆಗೆ ಆರೋಪಿಗಳ ಒಪ್ಪಿಗೆ ಕೂಡ ಇರುತ್ತದೆ. ಇದರಿಂದ ವ್ಯಕ್ತಿಗೆ ಯಾವುದೇ ಹಾನಿಯಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ?
ಬ್ರೈನ್ ಮ್ಯಾಪಿಂಗ್ನಲ್ಲಿ, ಆರೋಪಿಯ ತಲೆಗೆ ಸೆನ್ಸಾರ್ಗಳನ್ನು ಅಳವಡಿಸಲಾಗುತ್ತದೆ ಮತ್ತು ಆತನನ್ನು ಕಂಪ್ಯೂಟರ್ ಪರದೆಯ ಮುಂದೆ ಕೂರಿಸಲಾಗುತ್ತದೆ. ಶಂಕಿತನನ್ನು ನಂತರ ಕೆಲವು ಚಿತ್ರಗಳನ್ನು ನೋಡುವಂತೆ ಅಥವಾ ಶಬ್ದಗಳನ್ನು ಕೇಳುವಂತೆ ಪ್ರಚೋದಿಸಲಾಗುತ್ತದೆ. ಸೆನ್ಸಾರ್ಗಳು ಮೆದುಳಿನಲ್ಲಿನ ವಿದ್ಯುತ್ ಸಂಚಾರವಾಗುವ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ . ಶಂಕಿತ ವ್ಯಕ್ತಿಯು ಆ ಅಪರಾಧ ಪ್ರಕರಣಕ್ಕೆ ಯಾವುದೇ ಸಂಪರ್ಕವನ್ನು ಹೊಂದಿದ್ದರೆ ಮಾತ್ರ ಕೆಲವು ತರಂಗಗಳು ಉತ್ಪತ್ತಿಯಾಗುತ್ತವೆ ಹಾಗೂ ರಿಜಿಸ್ಟರ್ ಆಗುತ್ತದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ