• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ನಲಪಾಡ್​ಗೆ ನಿರಾಸೆ; ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಕೆ

ನಲಪಾಡ್​ಗೆ ನಿರಾಸೆ; ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಮುಂದುವರಿಕೆ

ರಕ್ಷ ರಾಮಯ್ಯ

ರಕ್ಷ ರಾಮಯ್ಯ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮೊಹಮ್ಮದ್ ನಲಪಾಡ್​ಗೆ ನಿರಾಸೆಯಾಗಿದೆ. ಹಾಲಿ ಅಧ್ಯಕ್ಷ ರಕ್ಷ ರಾಮಯ್ಯ ಅವರೇ ಆ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ಕಾಂಗ್ರೆಸ್​ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 • Share this:

ಬೆಂಗಳೂರು(ಜೂನ್ 30): ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ ಎಂಬ ವದಂತಿಗೆ ಇಂದು ಅಧಿಕೃತವಾಗಿ ತೆರೆಬಿದ್ದಿದೆ. ಕೆಪಿಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷ ರಾಮಯ್ಯ ಅವರೇ ಮುಂದುವರಿಯಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ. ಇಂಡಿಯನ್ ಯೂತ್ ಕಾಂಗ್ರೆಸ್ ವೆಬ್ ಸೈಟ್​ನಲ್ಲೂ ರಕ್ಷ ರಾಮಯ್ಯ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರೊಂದಿಗೆ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೊಹಮ್ಮದ್ ನಲಪಾಡ್​ಗೆ ನಿರಾಸೆಯಾಗಿದೆ. ನಲಪಾಡ್ ಅವರ ಪರ ಬಹಳ ಪ್ರಯತ್ನ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರಿಗೂ ನಿರಾಸೆಯಾಗಿದೆ.


ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಅವರಿಗೆ ಅತಿ ಹೆಚ್ಚು ಮತಗಳು ಬಂದಿದ್ದವು. ಆದರೆ, ಕೆಲ ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ಮೊಹಮ್ಮದ್ ನಲಪಾಡ್ ಪಾಲಿಗೆ ಮುಳುವಾಗಿದೆ. ಈ ಪ್ರಕರಣ ಇನ್ನೂ ಕೋರ್ಟ್ ವಿಚಾರಣೆಯಲ್ಲಿರುವುದರಿಂದ ನಲಪಾಡ್ ಅವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಕೊಡಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದರು. ಅದರಂತೆ, ನಲಪಾಡ್ ಬಳಿಕ ಎರಡನೇ ಅತಿ ಹೆಚ್ಚು ಮತಗಳನ್ನ ಪಡೆದಿದ್ದ ರಕ್ಷ ರಾಮಯ್ಯ ಅವರಿಗೆ ಕೆಪಿಸಿಸಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಒಲಿದುಬಂದಿತು.


ಆದರೆ, ರಕ್ಷ ರಾಮಯ್ಯ ನೇಮಕವಾದ ಬಗ್ಗೆ ಅಧಿಕೃತವಾಗಿ ಘೋಷಣೆ ಆಗದೇ ಹೋಗಿದ್ದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಮೊಹಮ್ಮದ್ ನಲಪಾಡ್ ತನ್ನ ಆಸೆಯನ್ನ ಜೀವಂತವಾಗಿರಿಸಿಕೊಂಡಿದ್ದರು. ಅದರ ಫಲವಾಗಿ ಕರ್ನಾಟಕ ಯೂತ್ ಕಾಂಗ್ರೆಸ್​ನಲ್ಲಿ ರಕ್ಷ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ಪರ ಎರಡು ಗುಂಪುಗಳು ಹುಟ್ಟಿಕೊಂಡಿವೆ. ನಲಪಾಡ್ ಅವರಿಗೆ ಅಧ್ಯಕ್ಷ ಹುದ್ದೆ ಕೊಡಿಸಲು ಡಿಕೆ ಶಿವಕುಮಾರ್ ಅವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದರು. ರಕ್ಷ ರಾಮಯ್ಯ ಪರ ನಿಂತಿರುವ ಸಿದ್ದರಾಮಯ್ಯ ಅವರ ಮನವೊಲಿಸಲು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಕೂಡ ಸತತವಾಗಿ ಪ್ರಯತ್ನಿಸಿದ್ದರು ಎಂಬ ಮಾತಿದೆ.


ಇದನ್ನೂ ಓದಿ: Crime - ಚನ್ನಪಟ್ಟಣದ ಬಿವಿ ಪಾಳ್ಯದಲ್ಲಿ ಬರ್ಬರ ಹತ್ಯೆ; ಅಕ್ರಮ ಸಂಬಂಧ ಕಾರಣವೆಂಬ ಶಂಕೆ


ಇದೇ ವೇಳೆ, ಇವತ್ತು ಬೆಳಗ್ಗೆ ಕುತೂಹಲಕಾರಿ ಬೆಳವಣಿಗೆಯೂ ಆಗಿತ್ತು. ರಕ್ಷ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ನಡುವೆ ಡಿಕೆ ಶಿವಕುಮಾರ್ ಸಂಧಾನ ನಡೆಸಿದ್ದರು. ಅದರಂತೆ, ಒಂದೂವರೆ ವರ್ಷ ರಕ್ಷ ರಾಮಯ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ನಂತರದ ಒಂದೂವರೆ ವರ್ಷ ಮೊಹಮ್ಮದ್ ನಲಪಾಡ್ ಅವರಿಗೆ ಅಧಿಕಾರ ಹಸ್ತಾಂತರ ಆಗುತ್ತದೆ ಎಂಬಂತಹ ವದಂತಿಗಳು ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಹೈ ಕಮಾಂಡ್ ರಕ್ಷ ರಾಮಯ್ಯ ಅವರನ್ನ ಕೆಪಿಸಿಸಿ ಯೂಥ್ ಪ್ರೆಸಿಡೆಂಟ್ ಎಂದು ಅಧಿಕೃತವಾಗಿ ಘೋಷಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ. ಅಧ್ಯಕ್ಷ ಸ್ಥಾನ ಪೂರ್ಣಾವಧಿಯವರೆಗೂ ರಕ್ಷ ರಾಮಯ್ಯ ಅವರೇ ಅಧಿಕಾರದಲ್ಲಿ ಇರುವುದು ನಿಶ್ಚಿತವಾಗಿದೆ.

top videos


  “ಶ್ರೀ ರಕ್ಷ ರಾಮಯ್ಯ ಅವರು ಕೆಪಿಐಸಿಸಿ ಅಧ್ಯಕ್ಷರಾಗಿ ಉಳಿಯಲಿದ್ದಾರೆ. ಈ ಹುದ್ದೆ ಬಗ್ಗೆ ಬಹಳಷ್ಟು ಅನಧಿಕೃತ ಹಾಗೂ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕೆಪಿವೈಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟತೆ ಬೇಕಾದರೆ ಯೂಥ್ ಕಾಂಗ್ರೆಸ್ ವೆಬ್ ಸೈಟ್​ನಲ್ಲಿ ವೀಕ್ಷಿಸಬಹುದಾಗಿದೆ. ಈ ಜಾಲದಲ್ಲಿ ನೀಡಲಾಗಿರುವ ಮಾಹಿತಿಯನ್ನು ಎಐಸಿಸಿ, ಐವೈಸಿ ಅಧ್ಯಕ್ಷರೇ ಅನುಮೋದನೆ ನೀಡಿದ್ದಾರೆ” ಎಂದು ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಪ್ರಕಟಣೆ ಬಂದಿದೆ.

  First published: