ರಾಜ್ಯಸಭೆ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿಗೆ ಬೆಂಬಲ ನೀಡಿದ ಎನ್​ಡಿಎ ಮಿತ್ರಪಕ್ಷ ಶಿವಸೇನೆ

news18
Updated:August 9, 2018, 11:26 AM IST
ರಾಜ್ಯಸಭೆ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿಗೆ ಬೆಂಬಲ ನೀಡಿದ ಎನ್​ಡಿಎ ಮಿತ್ರಪಕ್ಷ ಶಿವಸೇನೆ
news18
Updated: August 9, 2018, 11:26 AM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.9): ಪಿ.ಜೆ. ಕುರಿಯನ್​ ಅವರಿಂದ ತೆರವಾದ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷ ಎನ್​ಡಿಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್​ ಅವರನ್ನು ಘೋಷಿಸಲಾಗಿದೆ. ವಿಪಕ್ಷವಾದ ಯುಪಿಎಯಿಂದ ಕರ್ನಾಟಕದ ಕಾಂಗ್ರೆಸ್​ ಸಂಸದ ಬಿ.ಕೆ. ಹರಿಪ್ರಸಾದ್​ ಅವರನ್ನು ಕಣಕ್ಕಿಳಿಸಲಾಗಿದೆ.

ಇಂದು ಸಂಸತ್​ ಭವನದಲ್ಲಿಆರಂಭವಾಗಿರುವ ಉಪಸಭಾಪತಿ ಚುನಾವಣೆಯಲ್ಲಿ ಯಾರಿಗೆ ಉಪಸಭಾಪತಿ ಹುದ್ದೆ ಒಲಿಯಲಿದೆ ಎಂಬ ಕುತೂಹಲ ಮನೆಮಾಡಿದೆ. ಸದ್ಯಕ್ಕೆ ಎರಡೂ ಪಕ್ಷಗಳ ಬಳಿ ಮ್ಯಾಜಿಕ್​ ನಂಬರ್​ ಇಲ್ಲವಾದ್ದರಿಂದ ಯಾರ ಬೆಂಬಲ ಯಾವ ಪಕ್ಷಕ್ಕೆ ಸಿಗಲಿದೆ ಎಂಬುದು ಕುತೂಹಲಕಾರಿಯಾಗಿದೆ. ಯುಪಿಎ ಅಭ್ಯರ್ಥಿಯಾಗಿರುವ ಸಂಸದ ಬಿ.ಕೆ. ಹರಿಪ್ರಸಾದ್​ ಅವರಿಗೆ ಶಿವಸೇನೆ ಬೆಂಬಲ ಸೂಚಿಸಿದೆ. ಶಿವಸೇನೆ ಒಟ್ಟು ಮೂವರು ಸಂಸದರನ್ನು ಹೊಂದಿದೆ. ಎನ್​ಡಿಎ ಮಿತ್ರಪಕ್ಷವಾಗಿರುವ ಶಿವಸೇನೆ ಹರಿವಂಶ ಸಿಂಗ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕೆ ಅಸಮಾಧಾನಗೊಂಡಿತ್ತು. ಇದೀಗ ವಿರೋಧಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ.

ಎನ್​ಡಿಎಗೆ ಈಗಾಗಲೇ ಒಂದು ಹೊಡೆತ ಬಿದ್ದಿದ್ದು, ಎನ್​ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆ ಎನ್​ಡಿಎ ಅಭ್ಯರ್ಥಿ ಆಯ್ಕೆಯಿಂದ ಅಸಮಾಧಾನಗೊಂಡಿವೆ. ಹಾಗಾಗಿ, ಆ ದಿನ ಗೈರು ಹಾಜರಾಗಲು ನಿರ್ಧರಿಸಿವೆ. ಇನ್ನು, ಯುಪಿಎ ಎಲ್ಲ ಮೈತ್ರಿಪಕ್ಷಗಳ ಒಮ್ಮತದ ಅಭಿಪ್ರಾಯದ ಮೇರೆಗೆ ಹರಿಪ್ರಸಾದ್​ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಯುಪಿಎ ಬಹುಮತ ಸಾಬೀತುಪಡಿಸಲು ಯೋಜನೆ ರೂಪಿಸಿದ್ದು, ಎನ್​ಡಿಎ ವಿರುದ್ಧ ಇರುವ ಪ್ರಾದೇಶಿಕ ಪಕ್ಷಗಳ ಬೆಂಬಲ ಯಾಚಿಸಿದೆ. ಗೆಲುವು ಯಾರಿಗೆ ಎಂಬ ಕುತೂಹಲಕ್ಕೆ ಇಂದು ಸಂಜೆಯೇ ಕುತೂಹಲಕ್ಕೆ ತೆರೆಬೀಳಲಿದ್ದು, ಸಂಜೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ.

237 ಸದಸ್ಯರ ಉಪಸ್ಥಿತಿ:

ಒಟ್ಟು 245 ರಾಜ್ಯಸಭಾ ಸದಸ್ಯರಿದ್ದು, ಇಂದಿನ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ 237 ಸಂಸದರು ಉಪಸ್ಥಿತರಿರಲಿದ್ದಾರೆ. ಚುನಾವಣೆಯಿಂದ ಎಎಪಿ ಮತ್ತು ಪಿಡಿಪಿ ಪಕ್ಷಗಳು ದೂರ ಉಳಿಯಲು ನಿರ್ಧರಿಸಿದ್ದಾರೆ. ಕರುಣಾನಿಧಿ ನಿಧನದಿಂದ ಇಂದಿನ ಸದನಕ್ಕೆ ಕನ್ನಿಮೋಳಿ ಕೂಡ ಹಾಜರಾಗುವುದಿಲ್ಲ. ಈ ಹಿನ್ನಲೆಯಲ್ಲಿ ಇಂದಿನ ಸದನದಲ್ಲಿ 237 ಸದಸ್ಯರು ಹಾಜರಿರಲಿದ್ದು, ಗೆಲುವಿಗೆ 119 ಸ್ಥಾನಗಳ ಅಗತ್ಯವಿದೆ.

ಇಂದು ನಡೆಯಲಿರುವ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಸಚಿವ ಅರುಣ್​ ಜೇಟ್ಲಿ ಕೂಡ ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಂಸತ್​ನ ಉಪಸಭಾಪತಿ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಲಿದ್ದಾರೆ.
Loading...

ಎನ್​ಡಿಎಗೆ ಗೆಲ್ಲುವ ಆತ್ಮವಿಶ್ವಾಸಕ್ಕೆ ಕಾರಣವೇನು?:


ಉಪಸಭಾಪತಿ ಹುದ್ದೆಯನ್ನು ಒಲಿಸಿಕೊಳ್ಳಬೇಕೆಂದು ಎನ್​ಡಿಎ ಈಗಾಗಲೇ ಸಾಕಷ್ಟು ಕಸರತ್ತು ನಡೆಸಿದೆ. ಎನ್​ಡಿಎಯಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯಾಗಿರುವ ಹರಿವಂಶ ನಾರಾಯಣ ಸಿಂಗ್​ ಅವರಿಗೆ ಬೆಂಬಲ ನೀಡುವಂತೆ ಜೆಡಿಯು ಸಂಸದ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರಿಗೆ ಫೋನ್​ ಕರೆ ಮಾಡಿ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಒರಿಸ್ಸಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರಿಗೆ ಫೋನ್​ ಮಾಡಿ ಬಿಜೆಡಿ ಪಕ್ಷದ 9 ಸಂಸದರು ಎನ್​ಡಿಎ ಅಭ್ಯರ್ಥಿಯಾದ ಹರಿವಂಶ್​ ಸಿಂಗ್​ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಗೆಲುವಿಗೆ ಬೇಕಾದಷ್ಟು ಬಹುಮತ ಇಲ್ಲದ ಕಾರಣ ಇತರೆ ಪಕ್ಷಗಳ ಸಂಸದರ ಬೆಂಬಲಕ್ಕೆ ಎನ್​ಡಿಎ ಮೊರೆಹೋಗಿದೆ. ಹೀಗಾಗಿ, ಗೆಲ್ಲುವ ಆತ್ಮವಿಶ್ವಾಸದಲ್ಲಿರುವ ಎನ್​ಡಿಎ ಆಸೆ ಕೈಗೂಡಲಿದೆಯಾ ಎಂದು ಇಂದು ಸಂಜೆಯೊಳಗೆ ಗೊತ್ತಾಗಲಿದೆ.

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ