• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕಕ್ಕೆ ಜಿ.ಸಿ. ಚಂದ್ರಶೇಖರ್ ಒತ್ತಾಯ

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕಕ್ಕೆ ಜಿ.ಸಿ. ಚಂದ್ರಶೇಖರ್ ಒತ್ತಾಯ

 ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಬೆಂಗಳೂರು ಸಬ್ ಅರ್ಬನ್ ಯೋಜನೆಯ ಕೆಲಸವನ್ನು ಆರಂಭಿಸಲು ತಡ ಆಗುತ್ತಿರುವ ಬಗ್ಗೆ ಕೂಡ ವಿಷಯ ಪ್ರಸ್ತಾಪಿಸಿದರು

  • Share this:

ನವದೆಹಲಿ (ಫೆ. 10): ಕನ್ನಡ ಅಧಿಕೃತ ಭಾಷೆಯಗಿದ್ದರೂ ಕೇಂದ್ರ ಸರ್ಕಾರ ಕನ್ನಡದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕ ಹಾಕಲು ಯಾವ ಸಮಸ್ಯೆ ಇದೆ? ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯಸಭೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜಿ.ಸಿ.‌‌ ಚಂದ್ರಶೇಖರ್, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕವನ್ನು ಏಕೆ ಹಾಕಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಸಕಾರಣ ನೀಡಬೇಕೆಂದು ಒತ್ತಾಯಿಸಿದರು. ಜಿ.ಸಿ. ಚಂದ್ರಶೇಖರ್ ಅವರ ಪ್ರಶ್ನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಸಭೆಯ ಸಭಾಪತಿಗಳೂ ಆದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಎಲ್ಲಾ ರಾಜ್ಯಗಳ ಮೆಟ್ರೋದಲ್ಲೂ ಸ್ಥಳೀಯ ಭಾಷೆಯನ್ನು ಬಳಸಬೇಕು. ತ್ರಿಭಾಷಾ ಸೂತ್ರ ಪಾಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದರು.


ನಂತರ ಜಿ.ಸಿ. ಚಂದ್ರಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪೂರಿ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡದ ನಾಮಫಲಕ‌ ಇಲ್ಲದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೂಡಲೇ ಈ ಬಗ್ಗೆ ಗಮನಹರಿಸುತ್ತೇನೆ ಎಂದು ಭರವಸೆ ನೀಡಿದರು.


ಇದೇ ವೇಳೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಬೆಂಗಳೂರು ಸಬ್ ಅರ್ಬನ್ ಯೋಜನೆಯ ಕೆಲಸವನ್ನು ಆರಂಭಿಸಲು ತಡ ಆಗುತ್ತಿರುವ ಬಗ್ಗೆ ಕೂಡ ವಿಷಯ ಪ್ರಸ್ತಾಪಿಸಿದರು. ವಿಶ್ವದಲ್ಲೇ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸುತ್ತಿರುವ ನಗರ ಬೆಂಗಳುರು. ಅದೇ ಕಾರಣಕ್ಕೆ 2018-19ರಲ್ಲಿ ಬೆಂಗಳೂರು ಸಬ್ ಅರ್ಬನ್ ಯೋಜನೆ ಘೋಷಣೆ ಮಾಡಲಾಗಿದೆ. ಆದರೆ ಈವರೆಗೆ ಯೋಜನೆಯ ಕೆಲಸ ಆರಂಭವಾಗಿಲ್ಲ. ಯೋಜನೆ ಆರಂಭಗೊಳ್ಳಲು ಅಗತ್ಯ ಇರುವ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.


ಇದನ್ನು ಓದಿ: ಸಿದ್ದರಾಮಯ್ಯಗೆ ಸಮುದಾಯದಿಂದ ಒಬ್ಬಂಟಿಯಾಗಿರುವ ಭಯ ಕಾಡುತ್ತಿದೆ; ಸಚಿವ ಈಶ್ವರಪ್ಪ


ಜಿ.ಸಿ. ಚಂದ್ರಶೇಖರ್ ಅವರ ಈ ಉಪ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪೂರಿ. ಬೆಂಗಳೂರು ಸಬ್ ಅರ್ಬನ್ ಯೋಜನೆಗೆ ರಾಜ್ಯ ಸರ್ಕಾರ ಭೂಮಿಯನ್ನು ವಶಪಡಿಸಿಕೊಳ್ಳಬೇಕಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಮೀನು ವಶಪಡಿಸಿಕೊಂಡಿಲ್ಲ.‌ ಎರಡು ಕಡೆ ಅರಣ್ಯ ಪ್ರದೇಶ ಇದೆ. ಅಲ್ಲಿ ಜಮೀನು ವಶಪಡಿಸಿಕೊಳ್ಳಲು ಮತ್ತು ಯೋಜನೆ ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಬೇಕಿದೆ. ಇದಲ್ಲದೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ದಾಖಲಾಗಿದೆ. ಆದುದರಿಂದ ಯೋಜನೆಯ ಆರಂಭ ಆಗುವುದು ತಡವಾಗುತ್ತಿದೆ.‌ ರಾಜ್ಯ ಸರ್ಕಾರ ಭೂಮಿ ವಶಪಡಿಸಿಕೊಂಡರೆ ಕೇಂದ್ರ ಸರ್ಕಾರದಿಂದ ಹಣ ನೀಡಲಾಗುವುದು ಎಂದು ವಿವರಿಸಿದರು.


2018-19ರ ಬಜೆಟ್‌ನಲ್ಲಿ ಬೆಂಗಳೂರು ಸಬ್ ಅರ್ಬನ್ ಯೋಜನೆಯನ್ನು ಘೋಷಿಸಲಾಗಿದೆ. ಆದರೆ ಸುಮಾರು 72 ಕಿಲೋ ಮೀಟರ್ ಯೋಜನೆಗೆ ಕೇಂದ್ರ ಸರ್ಕಾರ ಸಾಂಕೇತಿಕವಾಗಿ ಮಾತ್ರ ಹಣ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿ.ಸಿ. ಚಂದ್ರಶೇಖರ್ ಬುಧವಾರ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು.

Published by:Seema R
First published: