ಮಲ್ಲಿಕಾರ್ಜುನ ಖರ್ಗೆಗೆ ಹೈಕಮಾಂಡಿನಿಂದ ಡಬಲ್ ಧಮಾಕ; ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನ ಬಹುತೇಕ ಖಚಿತ

ಕಾಂಗ್ರೆಸ್ ಹೈಕಮಾಂಡ್ ಮೂಲಗಳ ಮಾಹಿತಿ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಕೇವಲ ಸದಸ್ಯರಾಗಿ ರಾಜ್ಯಸಭೆ ಪ್ರವೇಶ ಮಾಡುತ್ತಿಲ್ಲ ಬದಲಾಗಿ ಅವರು ರಾಜ್ಯಸಭೆ ವಿಪಕ್ಷ ನಾಯಕ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆ.

  • Share this:
ನವದೆಹಲಿ (ಜೂನ್‌ 05): ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸಿನ‌ ಹಿರಿಯ ನಾಯಕ, ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಹೈಕಮಾಂಡ್ ರಾಜ್ಯದಿಂದ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಇಂದು ಅಧಿಕೃತವಾಗಿ ಘೋಷಿಸಿದೆ. ಅಷ್ಟೇಯಲ್ಲ, ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೀಘ್ರವೇ ಇನ್ನೊಂದು ಬಂಪರ್ ಗಿಫ್ಟ್ ನೀಡಲಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ತಿಳಿದುಬಂದಿದೆ.

ಕಾಂಗ್ರೆಸ್ ಹೈಕಮಾಂಡ್ ಮೂಲಗಳ ಮಾಹಿತಿ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಕೇವಲ ಸದಸ್ಯರಾಗಿ ರಾಜ್ಯಸಭೆ ಪ್ರವೇಶ ಮಾಡುತ್ತಿಲ್ಲ ಬದಲಾಗಿ ಅವರು ರಾಜ್ಯಸಭೆ ವಿಪಕ್ಷ ನಾಯಕ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ರೀತಿ ಕಾಂಗ್ರೆಸ್ ಹೈಕಮಾಂಡಿನಿಂದ ಡಬಲ್ ಧಮಾಕಾ ನೀಡಲು ಪ್ರಮುಖ‌ ಕಾರಣ ಇದೆ. ಹಾಲಿ ವಿಪಕ್ಷ ನಾಯಕ ಗುಲಾಂ ನಭಿ ಆಜಾದ್ ಅವರ ಅವಧಿ ಇದೇ ಜೂನ್ 8ಕ್ಕೆ ಮುಕ್ತಾಯವಾಗುತ್ತಿದೆ. ಅದೂ ಅಲ್ಲದೇ ಈವರೆಗೆ ಗುಲಾಂ ನಭಿ ಆಜಾದ್ ಅವರಿಗೆ ಯಾವುದೇ ರಾಜ್ಯದಿಂದ ರಾಜ್ಯಸಭಾ ಟಿಕೆಟ್ ಕೊಟ್ಟಿಲ್ಲ. ಮುಂದೆಯೂ ಕೂಡ ಗುಲಾಂ ನಭಿ ಆಜಾದ್ ಅವರಿಗೆ ಟೆಕೆಟ್ ಸಿಗುವ ಬಗ್ಗೆ ಖಾತರಿ‌ ಇಲ್ಲ.

ಗುಲಾಂ ನಭಿ ಆಜಾದ್ 1996ರರಿಂದಲೂ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮಧ್ಯೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದಾಗ 2012ರಲ್ಲಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಅವಧಿ ಮುಗಿಯುತ್ತಿದ್ದಂತೆ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದ್ದರಿಂದ ಅವರಿಗೆ ಬಹಳಷ್ಟು ಅವಕಾಶ ಕೊಡಲಾಗಿದೆ ಎಂದು ಈ ಸಲ ರಾಜ್ಯಸಭಾ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸಮರ್ಥ ನಾಯಕ‌ನ ಕೊರತೆ ಎದುರಿಸುತ್ತಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇದ್ದಾರೆ. ಆದರೆ ಅವರಿಗೆ 87 ವರ್ಷ ಮತ್ತು ಆರೋಗ್ಯ ಆಗಿಂದಾಗ್ಗೆ ಹದಗೆಡುತ್ತಿದೆ. ಪಿ. ಚಿದಂಬರಂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಕೇಸುಗಳಿಂದ ಜರ್ಜರಿತರಾಗಿದ್ದಾರೆ. ವಿಪಕ್ಷದ ಉಪ ನಾಯಕ ಆನಂದ್ ಶರ್ಮಾ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ.

ರಾಜಕೀಯ ಚಾಣಾಕ್ಷ ಅಹಮದ್ ಪಟೇಲ್ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಲು ರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ವ್ಯಕ್ತಿಯಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬ ತೀರ್ಮಾನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಬಂದಿದೆ ಎಂದು ಹೇಳಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಕಳೆದ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕೃತ ಪ್ರತಿಪಕ್ಷವಾಗಿರದಿದ್ದರೂ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಪ್ರಧಾನಿ ಮೋದಿಯನ್ನು, ಅವರ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್ ಸಿ, ಶಿವಸೇನೆ ಪಕ್ಷಗಳ ಸಮ್ಮಿಶ್ರ ಸರ್ಕಾರ ಬರುವುದರಲ್ಲೂ‌ ಪ್ರಮುಖ ಪಾತ್ರ ವಹಿಸಿದ್ದರು.

ಆ ಮೂಲಕ ಮೋದಿ ಮತ್ತು ಅಮಿತ್ ಶಾಗೆ ಮುಖಭಂಗ ಉಂಟುಮಾಡಿದ್ದರು. ಈ‌ ಎಲ್ಲಾ ಕಾರಣಗಳಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಯ ಪ್ರತಿಪಕ್ಷದ ನಾಯಕನನ್ನಾಗಿ ಮಾಡಲಾಗುತ್ತದೆ ಎಂಬ ಮಾಹಿತಿ ಕಾಂಗ್ರೆಸ್ ಹೈಕಮಾಂಡ್ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ತಿಳಿದುಬಂದಿದೆ.

ಇದನ್ನೂ ಓದಿ : ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಬೆನ್ನಿಗೆ ಜೋಧಪುರದಲ್ಲೂ ಅದೇ ರೀತಿಯ ಅಮಾನವೀಯ ಘಟನೆ; ವೈರಲ್‌ ಆಗುತ್ತಿದೆ ವಿಡಿಯೋ
First published: