ಬೆಳಗಾವಿ: ಇಡೀ ರಾಜ್ಯದ ರಾಜಕೀಯ (Karnataka Politics) ಒಂದು ಕಡೆಯಾದ್ರೆ, ಕುಂದಾನಗರಿ ರಾಜಕಾರಣವನ್ನೇ (Belgavi Politics) ಕೊಂಚ ಭಿನ್ನ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ (Congress-JDS Government) ಪತನಕ್ಕೆ ಕಾರಣ ಆಗಿದ್ದು ಬೆಳಗಾವಿ ರಾಜಕಾರಣ ಅಂತ ಇಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಾರೆ. ಸದ್ಯ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Congress MLA Laxmi Hebbalkar) ನಡುವಿನ ತೀವ್ರ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬಂದಿದೆ. ಇತ್ತ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಲವು ಯೋಜನೆಗಳು ಚಾಲನೆ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ (Government Program) ನಡೆದ್ರೆ ಶಿಷ್ಟಾಚಾರದಂತೆ ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ಕೆಲವರನ್ನು ಕಡ್ಡಾಯವಾಗಿ ಆಹ್ವಾನಿಸಬೇಕು.
ಗೋಕಾಕ್ ತಾಲೂಕಿನಲ್ಲಿ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಿಷ್ಟಾಚಾರ ಉಲ್ಲಂಘಿಸಿ ಮಾಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಆರೋಪಿಸಿದ್ದಾರೆ. ಟ್ವೀಟ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.
969 ಕೋಟಿ ಡ್ಯಾಂ ನಿರ್ಮಾಣ ಯೋಜನೆ
ಮಾರ್ಕಂಡೇಯ ನದಿಗೆ ಯೋಗಿಕೊಳ್ಳದ ಬಳಿ 969 ಕೋಟಿ ರೂಪಾಯಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣವಾಗುತ್ತಿದೆ. ಡ್ಯಾಂ ನಿರ್ಮಾಣದ ಬಳಿಕ 6 ಟಿಎಂಸಿಯಷ್ಟು ನೀರು ಸಂಗ್ರಹವಾಗಲಿದೆ. ಡ್ಯಾಂ ನಿರ್ಮಾಣದ ಮೂಲಕ 131 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡೋದು ಯೋಜನೆಯ ಉದ್ದೇಶ.
ಟ್ವೀಟ್ ಮೂಲಕ ಕಿಡಿ
ಡ್ಯಾಂ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಈರಣ್ಣ ಕಡಾಡಿ ಆರೋಪಿಸಿದ್ದಾರೆ. ಶಿಷ್ಟಾಚಾರ ಪಾಲಿಸದೇ ಅಳಿಯ, ಪುತ್ರನ ಜೊತೆಗೂಡಿ ಕಾರ್ಯಕ್ರಮ ನಡೆಸಿದ್ದಾರೆ ಎಂದು ಈರಣ್ಣ ಕಡಾಡಿ ಹೇಳುತ್ತಾರೆ. ಈ ಹಿನ್ನೆಲೆ ಸಾಲು ಸಾಲು ಟ್ವೀಟ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.
ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ?
ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಮಾತನಾಡುವ ನಮಗೆ ನಮ್ಮದೇ ಪಕ್ಷದ ಸ್ಥಳೀಯ ಸಂಸದರನ್ನು ಅದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ? ಎಂಬ ಕನಿಷ್ಠ ಜ್ಞಾನವಿರಬೇಕು ಎಂದು ಈರಣ್ಣ ಕಡಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಕನಿಷ್ಠ ವಿವೇಚನೆ ನಮಗಿರಬೇಕು
ನಮ್ಮ ಕುಟುಂಬದ ಸದಸ್ಯರು, ನಮ್ಮ ಕಚೇರಿ ಸಿಬ್ಬಂದಿ ಸರ್ಕಾರಿ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಮಾಡಬಹುದು. ಆದರೆ ನಾನು ಹೋದಲೆಲ್ಲಾ ಪಕ್ಷ ಬದಲಾಯಿಸಿದಾಗ ನನ್ನ ಜೊತೆಗಿರುವ ನನ್ನ ಬೆಂಬಲಿಗರು ಚುನಾಯಿತ ಪ್ರತಿನಿಧಿಗಳಾಗಿದ್ದರೂ ಕೂಡ ಅವರಿಗೆ ಅವಕಾಶ ನೀಡದಿರುವ ನಮ್ಮ ಬಗ್ಗೆ ಜನ ಏನಂದಾರು ? ಎಂಬ ಕನಿಷ್ಠ ವಿವೇಚನೆ ನಮಗಿರಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ
ತೆವಲುಗಳಿಗೆ ಮಣೆ ಹಾಕೋ ಅಗತ್ಯವಿಲ್ಲ
ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮಣೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು ಎಂದು ಎಚ್ಚರಿಕೆಯ ಸಂದೇಶವನ್ನು ಈರಣ್ಣ ಕಡಾಡಿ ರವಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ