ಜೂ.19ಕ್ಕೆ ರಾಜ್ಯಸಭೆ ಚುನಾವಣೆ; ಖರ್ಗೆ ಪರ ಸಿದ್ದರಾಮಯ್ಯ ಬ್ಯಾಟಿಂಗ್, ಮೇಲ್ಮನೆಗೆ ಹೋಗಲು ಒಪ್ಪದ ದೇವೇಗೌಡರು

ರಾಜಕೀಯದ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಕಾಲಿಡಿದು ಈ ಗೌಡ ಸಂಸತ್​ಗೆ ಹೋದ ಅನ್ನೋ ಅಪವಾದ ದೆಹಲಿ ರಾಜಕೀಯಕ್ಕೆ ಹೋದರೆ ಮೊದಲೇ ಸೊರಗಿರುವ ಜೆಡಿಎಸ್ ಪಕ್ಷ ಕಟ್ಟೋರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸಂಸತ್​ ಚಿತ್ರಣ

ಸಂಸತ್​ ಚಿತ್ರಣ

  • Share this:
ಬೆಂಗಳೂರು: ಜೆಡಿಎಸ್‌ನ ಕುಪೇಂದ್ರ ರೆಡ್ಡಿ,ಕಾಂಗ್ರೆಸ್​‌ನ ಬಿ.ಕೆ. ಹರಿಪ್ರಸಾದ್, ಪ್ರೊ.ರಾಜೀವ್‌ಗೌಡ, ಬಿಜೆಪಿಯ ಪ್ರಭಾಕರ್ ಅವರ ರಾಜ್ಯಸಭೆ ಅವಧಿ ಜೂನ್ 25ಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ ಕೇಂದ್ರ ಚುನಾವಣಾ ಆಯೋಗ ಜೂನ್ 19ಕ್ಕೆ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆ ಮಾಡಿದೆ.

ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಟಿಕೆಟ್‌ಗಾಗಿ ಫೈಟಿಂಗ್ ಆರಂಭವಾಗಿದೆ. ಬಿಜೆಪಿಯಲ್ಲಿ ಪ್ರಭಾಕರ್ ಮರುಆಯ್ಕೆಗೆ ಕಸರತ್ತು ಆರಂಭಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಬಳಿ ಲಾಬಿ ಆರಂಭಿಸಿದ್ದಾರೆ. ಡಿಸಿಎಂ ಲಕ್ಷ್ಮಣ ‌ಸವದಿ, ಸಚಿವೆ ಶಶಿಕಲಾ ಜೊಲ್ಲೆ ಬೆನ್ನಿಗೆ ನಿಂತಿದ್ದಾರೆ. ಇತ್ತ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಲೋಕಸಭಾ ಟಿಕೆಟ್ ತಪ್ಪಿಸಿ, ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್ ಕೊಡಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯಸಭೆಗೆ ಪರಿಗಣಿಸುತ್ತೇವೆ ಅಂತಾ ಮಾತು ಕೊಟ್ಟಿದ್ದಿರಿ, ಈಗ ಮಾತು ಉಳಿಸಿಕೊಳ್ಳಿ ಎಂದು ಕತ್ತಿ ಬಂಡಾಯದ ವರಸೆ ಆರಂಭಿಸಿದ್ದಾರೆ. ಬಿಜೆಪಿ ನಿರಾಯಾಸವಾಗಿ ಎರಡು ಸ್ಥಾನಗಳನ್ನು ಗೆಲ್ಲಬಹುದು. ರಾಜ್ಯಸಭೆ ಟಿಕೆಟ್ ಯಾರಿಗೆ ಅಂತಾ ನಿರ್ಧಾರ ಮಾಡೋದು ಹೈಕಮಾಂಡ್ ಎಂದು ಸಿಎಂ ಬಿಎಸ್​ವೈ ಅಸಹಾಯಕರಾಗಿ ಕುಳಿತಿದ್ದಾರೆ.

ಇನ್ನು ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಬಹುದು. ಈ ಸ್ಥಾನವನ್ನು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ನೀಡುವ ಸಾಧ್ಯತೆ ಇದೆ. ಮೇಡಂ ಸೋನಿಯಾ ಗಾಂಧಿ ಅವರು ಖರ್ಗೆಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಖರ್ಗೆ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬ್ಯಾಟಿಂಗ್ ಮಾಡಿದ್ದಾರೆ. ಇಂದು ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಎಐಸಿಸಿ ಖಜಾಂಚಿ ಅಹಮದ್ ಪಟೇಲ್ ಗೆ ಕರೆ ಮಾಡಿದ ಸಿದ್ದರಾಮಯ್ಯ ಅವರು, ಅನುಭವ, ಪಕ್ಷಕೆ ನೀಡಿರುವ ಕೊಡುಗೆ
ಜೊತೆಗೆ ರಾಜ್ಯಸಭೆಯಲ್ಲಿ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ರಾಜ್ಯಸಭೆಗೆ ಗಟ್ಟಿ ಧ್ವನಿ ಖರ್ಗೆ ಆಗ್ತಾರೆ. ಹೀಗಾಗಿ ಅವರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಖರ್ಗೆ 50 ವರ್ಷದ ರಾಜಕರಣದಲ್ಲಿ ದಲಿತ ಕೋಟಾ ಹೆಸರಲ್ಲಿ ಎಲ್ಲಾ ಹುದ್ದೆ ಅಧಿಕಾರ ಅನುಭವಿಸಿ ಆಗಿದೆ. ಅದರೂ ಮತ್ತೆ ಅವರಿಗೆ ಅವಕಾಶ ಕೊಟ್ಟರೆ ಉಳಿದವರ ಗತಿಯೇನು ಎಂದು ಅಸಮಾಧಾನದ ಮಾತು ಕೇಳಿ ಬಂದಿದೆ.

ಈ ನಡುವೆ ದೊಡ್ಡಗೌಡರಿಗೆ ತುಮಕೂರಿನಲ್ಕಿ ಟಿಕೆಟ್ ಬಿಟ್ಟುಕೊಟ್ಟೆ. ನನಗೆ ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಕಾಂಗ್ರೆಸ್​ನ ಮುದ್ದು ಹನುಮೇಗೌಡ ಸೈಲೆಂಟ್ ಆಗಿ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲದರ ನಡುವೆ ಕುತೂಹಲ ಇರುವುದು ಮಾಜಿ‌ ಪ್ರಧಾನಿ‌ ಹೆಚ್.ಡಿ‌‌ ದೇವೇಗೌಡರು ರಾಜ್ಯಸಭೆಗೆ ಹೋಗುತ್ತಾರೆ ಅನ್ನೋದು. ಗೌಡರ ರಾಜ್ಯಸಭೆ ಪ್ರವೇಶಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಒಲವು ತೋರಿದ್ದಾರೆ. ರಾಜ್ಯಸಭೆಗೆ ಆಯ್ಕೆ ಆಗಲು ಮೊದಲ ಪ್ರಾಶಸ್ತ್ಯ ದ ಮತಗಳೇ 48 ಬೇಕು. ಜೆಡಿಎಸ್ ಬಳಿ 34 ಮತಗಳಿವೆ. ಕೊರತೆಯಾಗುವ 14 ಮತಗಳನ್ನು ಕಾಂಗ್ರೆಸ್ ನೀಡೋದಾಗಿ ಭರವಸೆ ನೀಡಿದ್ದಾರೆ. ಆದರೆ ಮಾಜಿ ಪ್ರಧಾನಿ ಮಾತ್ರ ರಾಜ್ಯಸಭೆ ಪ್ರವೇಶ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಡೀ ಕುಟುಂಬ ದೊಡ್ಡಗೌಡರಿಗೆ ರಾಜ್ಯಸಭೆಗೆ ಹೋಗುವಂತೆ ದುಂಬಾಲು ಬಿದ್ದಿದೆ. ಆದರೆ ದೊಡ್ಡಗೌಡರು ಮಾತ್ರ ನೋ..ವೇ.. ಅಂತಿದ್ದಾರೆ. ದೇವೇಗೌಡ ಮತ್ತವರ ಕುಟುಂಬ ಹಿಂಬಾಗಿಲ ರಾಜಕರಣ ಯಾವತ್ತೂ ಮಾಡಿಲ್ಲ. ರಾಜಕೀಯದ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಕಾಲಿಡಿದು ಈ ಗೌಡ ಸಂಸತ್​ಗೆ ಹೋದ ಅನ್ನೋ ಅಪವಾದ ದೆಹಲಿ ರಾಜಕೀಯಕ್ಕೆ ಹೋದರೆ ಮೊದಲೇ ಸೊರಗಿರುವ ಜೆಡಿಎಸ್ ಪಕ್ಷ ಕಟ್ಟೋರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನು ಓದಿ: Karnataka Rajya Sabha Election: ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ಕ್ಕೆ ಮತದಾನ

ಸದ್ಯದ ಮಾಹಿತಿ ಪ್ರಕಾರ ದೇವೇಗೌಡರು ರಾಜ್ಯಸಭೆಗೆ ಸ್ಪರ್ಧೆ ಮಾಡೋದು ಅನುಮಾನ ಎನ್ನಲಾಗುತ್ತಿದೆ. ಗೌಡರು ರಾಜ್ಯಸಭೆಗೆ ಹೋಗದೆ ಇದ್ದರೆ ಮರುಆಯ್ಕೆಗೆ ಬಿ.ಕೆ. ಹರಿಪ್ರಸಾದ್, ಪ್ರೊ.ರಾಜೀವ್‌ಗೌಡ ಆಸೆಗಣ್ಣಿನಿಂದ ಈಗಾಗಲೆ ಟವೆಲ್ ಹಾಕಿದ್ದಾರೆ. ಅತ್ತ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಮತ್ತೆ ಆಯ್ಕೆ ಆಗಲು ಮನಸು ಮಾಡಿದ್ದಾರಂತೆ. ಆದರೆ ದೇವೇಗೌಡರ ಲೆಕ್ಕಾಚಾರ ಬೇರೆಯದೇ ಇದೆ. ರಾಜ್ಯಸಭೆ ಬಿಟ್ಟು ಕಾಂಗ್ರೆಸ್ ಪಾಲಿನ ಎರಡು ಪರಿಷತ್ ಸ್ಥಾನಗಳನ್ನು ಪಡೆಯೋದು. ನೇರವಾಗಿ ಸೋನಿಯಾ ಗಾಂಧಿ ಜೊತೆಯೇ ಚೌಕಾಸಿಗೆ ಇಳಿಯೋ ಪ್ಲಾನ್ ಮಾಡಿದ್ದಾರಂತೆ. ಗೌಡರ ಲೆಕ್ಕಾಚಾರ ಹೇಗಿದೆ ಎಂದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಐಡಿಯಾವಂತೆ.

  • ವಿಶೇಷ ವರದಿ: ಚಿದಾನಂದ ಪಟೇಲ್​


First published: