Karnataka Rains Today ಬೆಂಗಳೂರು(ಅ.09): ರಾಜ್ಯದಲ್ಲಿ ಮಳೆ (Rainfall)ಆರ್ಭಟ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ (Bay Of Bengal)ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದೀಗ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಸಂಭವವಿದ್ದು,ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಅಕ್ಟೋಬರ್ 12ರವರೆಗೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ. ಅಲ್ಲದೇ ಉತ್ತರ ಅಂಡಮಾನ್ ಸಮುದ್ರದಲ್ಲಿ ಅಕ್ಟೋಬರ್ 10ರ ವೇಳೆಗೆ ವಾಯುಭಾರ ಕುಸಿತ ಉಂಟಾಗಲಿದ್ದು, ಇದರ ಪರಿಣಾಮ ದೇಶದ ಕೆಲವು ಭಾಗಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆಯಿಂದ ಆಂಧ್ರಪ್ರದೇಶದ ಕರಾವಳಿಯ ಬಳಿ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯವರೆಗೆ ಒಂದು ಮಾನ್ಸೂನ್ ತೊಟ್ಟಿ ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ರಾಯಲಸೀಮಾದಾದ್ಯಂತ ವಿಸ್ತರಿಸಿದ್ದು, ಇದು ರಾಜ್ಯದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಿದೆ.
ಮುಂದಿನ 4-5 ದಿನಗಳಲ್ಲಿ ಪಶ್ಚಿಮದಿಂದ ವಾಯವ್ಯ ದಿಕ್ಕಿಗೆ- ದಕ್ಷಿಣ ಒಡಿಶಾ, ಆಂಧ್ರಪ್ರದೇಶ ಉತ್ತರ ಕರಾವಳಿ ಕಡೆಗೆ ಚಂಡಮಾರುತ ಚಲನೆಯಾಗಬಹುದು ಇದರ ಪ್ರಭಾವದಿಂದಾಗಿ ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಕೊಂಕಣ, ಮಧ್ಯ ಮಹಾರಾಷ್ಟ್ರ, ಕರ್ನಾಟಕದ ಉತ್ತರ ಒಳನಾಡಿನಲ್ಲಿ ಹಾಗೂ ಆಂಧ್ರ ಪ್ರದೇಶ, ಕೇರಳದಲ್ಲಿ ಮೂರು ದಿನಗಳ ಕಾಲ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಎಲ್ಲೆಲ್ಲಿ ಮಳೆ ಸಾಧ್ಯತೆ?
ಅಕ್ಟೋಬರ್ 12ರವರೆಗೂ ಆಂಧ್ರ ಕರಾವಳಿ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರ್ನಾಟಕದ ಉತ್ತರ ಒಳನಾಡು, ಗೋವಾ, ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ, ಕೊಂಕಣದಲ್ಲಿ ಗುಡುಗುಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ, ಮೈಸೂರು, ಬೆಂಗಳೂರು, ಯದಾಗಿರಿ , ಗುಲ್ಬರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಹ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಮಲೆನಾಡಿನ ಮಳೆ ಸುರಿದಿತ್ತು, ಆದರೆ ಗುರುವಾರ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ನಿನ್ನೆ ರಾತ್ರಿ ನಗರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆ
ಕಳೆದ 24 ಗಂಟೆಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತು ತಮಿಳುನಾಡು, ನೈಋತ್ಯ ಮಧ್ಯಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ.
ಕೇರಳ, ಕರ್ನಾಟಕ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳು, ರಾಯಲಸೀಮಾ, ಉತ್ತರ ಕರಾವಳಿ ಒಡಿಶಾ, ಗಂಗಾ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಗುಜರಾತ್, ತೆಲಂಗಾಣದ ಕೆಲವು ಭಾಗಗಳು, ತಮಿಳುನಾಡಿನ ಉಳಿದ ಭಾಗಗಳು ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ಸಾಧಾರಣ ಮಳೆಗಿಂತ ಹೆಚ್ಚಿನ ಮಳೆಯಾಗಿದೆ.
ಮುಂದಿನ 24 ಗಂಟೆ ಹವಾಮಾನ ಹೇಗಿರಲಿದೆ?
ಮುಂದಿನ 24 ರಿಂದ 48 ಗಂಟೆಗಳಲ್ಲಿ ಗುಜರಾತ್, ಇಡೀ ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ ಪಶ್ಚಿಮ ಹಿಮಾಲಯ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಿಂದ ನೈರುತ್ಯ ಮುಂಗಾರು ಕೊನೆಯಾಗಲು ಅನುಕೂಲಕರ ಪರಿಸ್ಥಿತಿ ಇರಲಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕುಲಗೆಟ್ಟ ರಾಜಕೀಯ ಮಾಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ
ಕೇರಳ,ಕರಾವಳಿ ಕರ್ನಾಟಕ ,ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡಿನ ಕೆಲವು ಭಾಗಗಳು,ಕೊಂಕಣ ಮತ್ತು ಗೋವಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ, ಕರಾವಳಿ ಆಂಧ್ರಪ್ರದೇಶ, ರಾಯಲಸೀಮ, ಕರ್ನಾಟಕದ ಒಳ ಭಾಗಗಳು ಮತ್ತು ತೆಲಂಗಾಣದ ಕೆಲ ಭಾಗಗಳಲ್ಲಿ ಸಹ ಅಧಿಕ ಮಳೆಯ ನಿರೀಕ್ಷೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ