ಆನೇಕಲ್(ಅ.03): ಪ್ರಸಕ್ತ ವರ್ಷ ವಾಡಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ರಾಜ್ಯಾದ್ಯಂತ ಮಳೆಯಾಗಿದೆ. ಕೆಲವು ಕಡೆ ಮಳೆ ಅವಾಂತರ ಸೃಷ್ಟಿಸಿದ್ದು, ರೈತ ಬೆಳೆದ ಬೆಳೆ ನೀರು ಪಾಲಾಗಿದೆ. ಆದರೆ ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತ ಈ ಬಾರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾನೆ. ಹೌದು, ಬೆಂಗಳೂರು ಹೊರವಲಯದ ಆನೇಕಲ್ ರಾಗಿ ಕಣಜ ಎಂದೇ ಖ್ಯಾತಿ ಗಳಿಸಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ರಾಗಿ ಬೆಳೆಯುವ ಆನೇಕಲ್ ತಾಲ್ಲೂಕಿನ ರೈತರು ಇಂದಿಗೂ ರಾಗಿ ಬೆಳೆಯನ್ನೇ ಪ್ರಧಾನ ಬೆಳೆಯಾಗಿಸಿಕೊಂಡಿದ್ದು, ಜೋಳ, ಅವರೆ, ಹುಚ್ಚೆಳ್ಳು, ತೊಗರಿ ಮತ್ತು ಸಾಸಿವೆಯನ್ನು ಜೊತೆಯಲ್ಲಿ ಬೆಳೆಯುತ್ತಾರೆ. ಶೇ 70 ರಷ್ಟು ರೈತರು ಇಂದಿಗೂ ಮಳೆ ಆಧಾರಿತ ಕೃಷಿಯನ್ನೇ ನೆಚ್ಚಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದರೂ ಹಿಂಗಾರು ಮಳೆಗಳು ಕೈ ಕೊಟ್ಟಿದ್ದರಿಂದ ಕೈಗೆ ಬಂದಿದ್ದ ರಾಗಿ ಬೆಳೆ ಹೊಲ ಗದ್ದೆಗಳಲ್ಲಿಯೇ ಸೊರಗಿತ್ತು. ರೈತನಿಗೂ ಸಂಕಷ್ಟ ತಂದೊಡ್ಡಿತ್ತು ಅಂತಾರೆ ರೈತ ಮುನಿಸ್ವಾಮಿ ರೆಡ್ಡಿ.
ಇನ್ನೂ ಈ ವರ್ಷ ಮುಂಗಾರು ಪ್ರಾರಂಭದಲ್ಲಿ ಧೋ ಎಂದು ಸುರಿದಿದ್ದ ಮಳೆ, ಹೊಲ-ಗದ್ದೆ ಹದ ಮಾಡಿ ಬಿತ್ತನೆ ಮಾಡುವ ಹೊತ್ತಿಗೆ ಮಳೆಗಾಗಿ ರೈತ ಮುಗಿಲು ಕಡೆ ಕೈ ಹೊತ್ತು ಕೂರುವಂತೆ ಮಾಡಿತ್ತು. ಬಳಿಕ ಕಳೆದ ಎರಡು ತಿಂಗಳ ಅವಧಿಯಲ್ಲಿ ರೈತನ ನಿರೀಕ್ಷೆಗೂ ಮೀರಿ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಪರಿಣಾಮ ರಾಗಿ ಬೆಳೆಯು ಸಹ ಸೊಂಪಾಗಿ ಬೆಳೆದು ನಿಂತಿದೆ.
ರಾಜ್ಯದಲ್ಲಿ 3 ಸಾವಿರ ಕೋಟಿ ಕಬ್ಬು ಬಿಲ್ ಬಾಕಿ; ಮೊದಲು ಬಿಲ್ ಕೊಡಿಸಿ ಎಂದು ಸಿಎಂಗೆ ಮುಧೋಳ ರೈತರು ತಾಕೀತು
ಮುಂದು ಬಿತ್ತನೆ ಹೊಲಗಳಲ್ಲಿ ರಾಗಿ ತೆನೆ ಹೊಮ್ಮಿದ್ದರೆ, ಹಿಂದಿನ ಬಿತ್ತನೆ ಮಾಡಿದ ಶೇ50 ರಷ್ಟು ಹೊಲಗಳಿಗೆ ಇನ್ನೂ ಎರಡು ಮಳೆ ಬೇಕು. ಸದ್ಯ ಉತ್ತಮ ಮಳೆಯಾಗುತ್ತಿದ್ದು, ತೇವಾಂಶ ಸಹ ಈ ಭಾರಿ ಭರ್ಜರಿ ಬೆಳೆಯಾಗುವ ನಿರೀಕ್ಷೆ ಇದೆ ಅಂತಾರೆ ರೈತ ನಾರಾಯಣಪ್ಪ.
ಒಟ್ಟಿನಲ್ಲಿ ಕಳೆದ ವರ್ಷದ ಕಹಿಯನ್ನು ಮರೆಸುವಂತೆ ಈ ವರ್ಷ ಉತ್ತಮ ಮಳೆಯಾಗಿದ್ದು, ಹೊಲ ಗದ್ದೆಗಳಲ್ಲಿ ರಾಗಿ ಬೆಳೆ ಬೆಳೆದು ನಳ ನಳಸುತ್ತಿದೆ. ರೈತನ ನಿರೀಕ್ಷೆಯಂತೆ ಕೊನೆ ಗಳಿಗೆಯಲ್ಲಿ ಮಳೆ ಕೈ ಕೊಡದಿರಲಿ. ಅನ್ನದಾತನ ರಾಗಿ ಕಣಜ ತುಂಬಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ