ಅಲ್ಪಸ್ವಲ್ಪವಾದರೂ ಕೊನೆಗೂ ಬಂತು ನೀರು; ಈ ಬಾರಿ ತುಂಬುತ್ತಾ ತುಂಗಭದ್ರಾ ಡ್ಯಾಂ?

ಡೆಡ್ ಸ್ಟೋರೇಜ್ ತಲುಪಿ ಬರಡು ಬರಡಾಗಿದ್ದ ತುಂಗ ಭದ್ರಾ ಡ್ಯಾಂನಲ್ಲಿ ನೀರು ನೋಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ದೇವರ ದಯೆಯಿಂದ ಮಲೆನಾಡಿನಲ್ಲಿ ಉತ್ತಮ ಮಳೆಯಾದ ಕಾರಣ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.

news18
Updated:July 13, 2019, 10:49 PM IST
ಅಲ್ಪಸ್ವಲ್ಪವಾದರೂ ಕೊನೆಗೂ ಬಂತು ನೀರು; ಈ ಬಾರಿ ತುಂಬುತ್ತಾ ತುಂಗಭದ್ರಾ ಡ್ಯಾಂ?
ಟಿಬಿ ಡ್ಯಾಮ್
  • News18
  • Last Updated: July 13, 2019, 10:49 PM IST
  • Share this:
ಬಳ್ಳಾರಿ(ಜುಲೈ 13): ಹೈದ್ರಾಬಾದ್-ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಕೊನೆಗೂ ನೀರು ಹರಿದುಬಂದಿದೆ. ಕಳೆದ ವರುಷಕ್ಕೆ ಹೋಲಿಸಿದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ವರುಷ ಡ್ಯಾಂ ತುಂಬಿ 200 ಟಿಎಂಸಿ ನೀರು ಹರಿದುಹೋಗಿತ್ತು. ಆದರೆ ಈ ಬಾರಿ ಡ್ಯಾಂ ತುಂಬುವುದೇ ಕಷ್ಟವಾಗಿದೆ. ಆದರೆ, ಇಷ್ಟಾದ್ರೂ ನೀರು ಬಂತಲ್ಲ ಎಂದು ರೈತರ ಮೊಗದಲ್ಲಿ ತುಸು ಮಂದಹಾಸ ಬೀರಿದೆ. ಮಲೆನಾಡಿನ ಭಾಗದಲ್ಲಿ ಸ್ವಲ್ಪ ಮಳೆಯಾದ್ದರಿಂದ ಜಲಾಶಯಕ್ಕೆ ಒಂದಷ್ಟು ಒಳಹರಿವು ಹೆಚ್ಚಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಾದರೂ ಮಳೆಯ ಮಾತಿದ್ದಿಲ್ಲ. ಇದುವರೆಗೆ ಕೇವಲ 10ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದೆ. ಉಳಿದಂತೆ ಮಳೆಯಿಲ್ಲ, ಬಿತ್ತನೆಯಿಲ್ಲ. ಜಲಾಶಯಕ್ಕಾದರೂ ನೀರು ಬಂದಿದೆಯಾ ಎಂದುಕೊಂಡರೆ ಅದೂ ಇರಲಿಲ್ಲ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರು ಹಾಗೂ ನೆರೆಯ ಆಂಧ್ರ ಹಾಗೂ ತೆಲಂಗಾಣದ ರೈತರು ಇದೇ ಟಿಬಿ ಡ್ಯಾಂ ನೀರು ನಂಬಿದ್ದಾರೆ.

ಇದನ್ನೂ ಓದಿ: ಕೃಷ್ಣಾ ನದಿಯ ಒಳ ಹರಿವಿನಲ್ಲಿ ಭಾರೀ ಹೆಚ್ಚಳ; 6 ಸೇತುವೆ ಮುಳುಗಡೆ, ಪ್ರವಾಹ ಭೀತಿಯಲ್ಲಿ ಜನರು

ಕಳೆದೊಂದು ವಾರದಿಂದ ಜಲಾಶಯಕ್ಕೆ ಐದು ಟಿಎಂಸಿ ನೀರು ಆಗಮಿಸಿದೆ. ಸದ್ಯ ಜಲಾಶಯಕ್ಕೆ 9 ಟಿಎಂಸಿ ನೀರು ಸಂಗ್ರಹವಾಗಿದ್ದು, 26 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವು ಇದೆ. ಕಳೆದ ವರುಷಕ್ಕೆ ಸುಗ್ಗಿಗೆ ಡ್ಯಾಂನಿಂದ ನೀರು ಪಡೆದಿದ್ದೆವು, ಈ ಬಾರಿ ಇದೀಗ ಡ್ಯಾಂಗೆ ನೀರು ಆಗಮಿಸುತ್ತಿದೆ ಎಂದು ರೈತರು ಹೇಳುತ್ತಾರೆ.

ಕಳೆದ ವರುಷ ತುಂಗಭದ್ರ ಜಲಾಶಯಕ್ಕೆ ಇಷ್ಟೊತ್ತಿಗೆ 50 ಟಿಎಂಸಿ ನೀರು ಸಂಗ್ರಹವಾಗಿತ್ತು. ಡ್ಯಾಂ ತುಂಬಿ ಬರೋಬ್ಬರಿ 230 ಟಿಎಂಸಿ ನೀರನ್ನು ನದಿ ಮೂಲಕ ಹರಿಬಿಡಲಾಗಿತ್ತು. ಈ ಬಾರಿ ಜುಲೈ ತಿಂಗಳಾದ್ರೂ ಕೇವಲ ಏಳು ಟಿಎಂಸಿ ನೀರು ಬಂದಿದೆ. ಕಳೆದ ವರ್ಷ ಆಗಸ್ಟ್ ಜುಲೈ ತಿಂಗಳ ಅಂತ್ಯದ ವೇಳೆಗೆ ಜಲಾಶಯದಲ್ಲಿ ನೂರು ಟಿಎಂಸಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಆ ಪರಿಸ್ಥಿತಿ ಕಷ್ಟವೆಂದನಿಸುತ್ತದೆ. ಸದ್ಯ ಜಲಾಶಯ ತುಂಬಿದರೆ ಸಾಕು ಎಂದನಿಸುತ್ತಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಪ್ರಾದೇಶಿಕತೆಯ ಕಹಳೆ ಊದಿದ ಉಪರಾಷ್ಟ್ರಪತಿ; ಮುದ್ದೆ, ನಾಟಿ ಕೋಳಿ ಊಟ ನೆನೆದ ವೆಂಕಯ್ಯ ನಾಯ್ಡು

ಜಲಾಶಯಕ್ಕೆ ನೀರು ಬಿಡುವುದು ಮಲೆನಾಡಿನಲ್ಲಿ ಇನ್ನಷ್ಟು ಉತ್ತಮ ಮಳೆಯಾದರೆ ಮಾತ್ರ ಸಾಧ್ಯ. ಪಶ್ಚಿಮಘಟ್ಟದಲ್ಲಿ ಹೆಚ್ಚೇನು ಮಳೆಯಾಗದ್ದರಿಂದ ಡ್ಯಾಮ್ ತುಂಬುವುದು ಕಷ್ಟವಾಗಬಹುದು. ಈ ಕಾರಣಕ್ಕೆ ಸಂಗ್ರಹವಾಗುವ ಜಲಾಶಯದ ನೀರನ್ನು ವ್ಯರ್ಥವಾಗದಂತೆ, ಹಿತಮಿತವಾಗಿ ಬಳಕೆ ಮಾಡುವುದಕ್ಕೆ ಟಿಬಿ ಬೋರ್ಡ್ ಗಮನ ಕೊಡಬೇಕು. ಒಂದು ಹನಿ ನೀರಿಗೆ ತತ್ವಾರವಿರುವ ಸಂದರ್ಭದಲ್ಲಿ ಜಲಾಶಯದ ನೀರು ಉಳಿಸಿಕೊಳ್ಳಬೇಕು ಎಂದು ಹೋರಾಟಗಾರ ಯರ್ರಿಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ, ಹೂಳಿನಿಂದಾಗಿ 33 ಟಿಎಂಸಿಯಷ್ಟು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಹೂಳೆತ್ತುವ ಬಗ್ಗೆ ಸರ್ಕಾರ ಕೇವಲ ಮಾತಿನಲ್ಲಿ ಕಾಲಾಹರಣ ಮಾಡುತ್ತಿದೆ.

ಈ ಬಾರಿ ಡ್ಯಾಂ ಭರ್ತಿಯಾಗಲಿ ಎಂದು ಅಚ್ಚುಕಟ್ಟು ಭಾಗದ ಲಕ್ಷಾಂತರ ರೈತರು ದೇವರ ಮೊರೆ ಹೋಗಿದ್ದಾರೆ. ಅಧಿಕಾರ ಗದ್ದುಗೆ ಉಳಿಸಿಕೊಳ್ಳುವುದರಲ್ಲಿಯೇ ನಿರತರಾಗಿರುವ ಪ್ರತಿನಿಧಿಗಳು ಡ್ಯಾಂ ನೀರು ಉಳಿಸಿ, ರೈತರಿಗೆ ನೆರವಾಗಬೇಕಿದೆ.

(ವರದಿ: ಶರಣು ಹಂಪಿ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ