HOME » NEWS » State » RAIN DAMAGE THE COFFEE CROP IN KODAGU SESR RSK

ಕೊಡಗಿನ ಜನರಿಗೆ ಸಂಕಷ್ಟ ತಂದೊಡ್ಡಿದ ಮಳೆ; ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿಬೆಳೆ ನಷ್ಟ

ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿ ನೀರಿನಲ್ಲಿ ನೆನೆದು, ಸಂಪೂರ್ಣ ಹಾಳಾಗಿದೆ. ಕಣದ ತುಂಬಾ ನೀರು ನಿಂತು ಇಡೀ ಕಾಫಿ ಕರಗುವಂತೆ ಆಗಿದೆ.

news18-kannada
Updated:January 9, 2021, 6:08 PM IST
ಕೊಡಗಿನ ಜನರಿಗೆ ಸಂಕಷ್ಟ ತಂದೊಡ್ಡಿದ ಮಳೆ;  ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿಬೆಳೆ ನಷ್ಟ
ಹಾಳಾದ ಕಾಫಿ ಬೆಳೆ
  • Share this:
ಕೊಡಗು (ಜ. 9): ಕಳೆದ ಮೂರು ವರ್ಷಗಳಿಂದ  ಜಿಲ್ಲೆ ಅತಿವೃಷ್ಟಿಗೆ ತುತ್ತಾಗುತ್ತಲೇ ಇದೆ . ಮೂರು ವರ್ಷಗಳಿಂದಲೂ ಮುಂಗಾರು ಆರಂಭವಾಗುತ್ತಿದ್ದಂತೆ ಜಿಲ್ಲೆಯ ಸ್ಥಿತಿ ಅಯೋಮಯವಾಗುತ್ತದೆ. ಆದರೆ, ಈ ಬಾರಿ ವರ್ಷದ ಆರಂಭದಲ್ಲೇ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಧಾರಾಕಾರ ಮಳೆಗೆ ಜಿಲ್ಲೆಯ ಜನರು, ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರ ಪರಿಣಾಮ ಕೊಡಗಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದೆ. ನಿನ್ನೆ ಒಂದೇ ದಿನ ಮಡಿಕೇರಿ, ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡೂವರೆಯಿಂದ ಮೂರು ಇಂಚು ಮಳೆ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ರಭಸವಾಗಿ ಸುರಿದ ಮಳೆಗೆ ಕಾಫಿ ಹಣ್ಣು ಗಿಡದಲ್ಲೇ ಕೊಳೆತಂತೆ ಆಗಿದೆ. ಜೊತೆಗೆ ಅಪಾರ ಪ್ರಮಾಣದ ಕಾಫಿ ಹಣ್ಣು ಗಿಡದಿಂದ ಉದುರಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಅಪಾರ ಪ್ರಮಾಣದ ಕಾಫಿ ಹಣ್ಣು ನೆಲಕಚ್ಚಿದ್ದು ಕಾಫಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮತ್ತೊಂದೆಡೆ ಮಳೆ ಸುರಿಯುತ್ತಿರುವುದರಿಂದ ಕಾಫಿಗಿಡದಲ್ಲಿ ಹಣ್ಣು ಇರುವಾಗಲೇ ಹೂ ಅರಳಿರುವುದು ಮುಂದಿನ ಫಸಲಿಗೂ ಶೇ 40 ರಷ್ಟು ನಷ್ಟವಾಗುವಂತೆ ಆಗಿದೆ. ಇನ್ನು ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿ ನೀರಿನಲ್ಲಿ ನೆನೆದು, ಸಂಪೂರ್ಣ ಹಾಳಾಗಿದೆ. ಕಣದ ತುಂಬಾ ನೀರು ನಿಂತು ಇಡೀ ಕಾಫಿ ಕರಗುವಂತೆ ಆಗಿದೆ. ಕಾಫಿ ಬೆಳೆಗಾರರು ನೀರಿನಲ್ಲಿರುವ ಹಣ್ಣನ್ನು ಕಾರ್ಮಿಕರ ಬಿಟ್ಟು ಆರಿಸುವಂತಾಗಿದೆ. ಪ್ರತೀ ವರ್ಷ ಇದೇ ರೀತಿ ಆಗುತ್ತಿದ್ದರೆ ಕಾಫಿ ಬೆಳೆಗಾರರು ಕೂಡ ಇತರೆ ರೈತರಂತೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎನ್ನೋದು ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದ ಕಾಫಿ ಬೆಳೆಗಾರ ದೇವರಾಜು ಅವರ ನೋವಿನ ಮಾತುಗಳು.

ಕಾಫಿ ಕೊಯ್ಲು ಮಾಡಬೇಕಾದರೆ ಪ್ರತಿ ಕೆಜಿಗೆ 5ರೂಪಾಯಿ ಕೊಟ್ಟಿರುತ್ತೇವೆ. ಇನ್ನು ಅದನ್ನು ಕಣಕ್ಕೆ ತಂದು ಕಾಫಿ ಒಣಗಿಸಿ ಮಾರಾಟ ಮಾಡುವಷ್ಟರಲ್ಲಿ ಕನಿಷ್ಟ 27 ರೂಪಾಯಿ ಪ್ರತಿ ಕೆ.ಜಿ ಕಾಫಿ ಬೆಳೆಗೆ ವೆಚ್ಚವಾಗುತ್ತದೆ. ಆದರೆ ಕಾಫಿ ಹೀಗೆ ಮಳೆಯಲ್ಲಿ ನೆನೆದು ಕರಗಿದರೆ ಸಂಪೂರ್ಣ ಬೆಲೆ ಕಡಿಮೆಯಾಗಿ ತೀವ್ರ ನಷ್ಟ ಅನುಭವಿಸಬೇಕಾಗುವುದು ಎನ್ನುವುದು ರೈತ ವಿಜು ಅವರ ಅಳಲು.

ಇದನ್ನು ಓದಿ: ಅಂಕೋಲದ ಮದುವೆ ಮನೆಯಲ್ಲಿ ಗುಂಡಿನ‌ ದಾಳಿ; ಸಂಭ್ರಮದ ವಾತಾವರಣದಲ್ಲಿ ಆತಂಕ

ಕೊಯ್ಲು ಮಾಡಿದ ಕಾಫಿ ಹಣ್ಣು ನೆನೆದಲ್ಲಿ ಅದರ ಬೀಜಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೀಗೆ ಕಪ್ಪು ಬಣ್ಣಕ್ಕೆ ತಿರುಗಿತ್ತೆಂದರೆ, ಕಾಫಿ ಪಾಚ್ರ್ಮೆಂಟ್ ಬೆಲೆ ಕಡಿಮೆಯಾಗುತ್ತದೆ. ಇದರಿಂದ ನಷ್ಟ ಅನುಭವಿಸುತ್ತೇವೆ ಎನ್ನೋದು ರೈತರ ಅಳಲು. ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಮುಂಗಾರು ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆ ಇಡೀ ತೋಟಗಳೇ ಪ್ರವಾಹದಲ್ಲಿ ಕೊಚ್ಚಿಹೋಗುವಂತೆ ಮಾಡುತ್ತಿದ್ದವು. ಆದರೆ ಈ ವರ್ಷ ಕಾಫಿ ಕೊಯ್ಲು ಮಾಡುತ್ತಿರುವಾಗ ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡುತ್ತಿದೆ. ಇದರಿಂದಾಗಿ ಕೊಡಗಿನ ಕಾಫಿ ಮತ್ತು ಭತ್ತದ ಬೆಳೆಗಾರರು ಕಂಗಲಾಗುವಂತೆ ಆಗಿದೆ.

 ಮನೆಗೆ ನುಗ್ಗಿದ ನೀರು

ನಿನ್ನೆ ಸಂಜೆ ಸುರಿದ ಬಾರೀ ಮಳೆಗೆ ವಿರಾಜಪೇಟೆ ಪಟ್ಟಣದ ಮೊಘರಗಲ್ಲಿಯಲ್ಲಿ ಒಳಚರಂಡಿ ಬ್ಲಾಕ್ ಆಗಿ ಆ ನೀರು ಹತ್ತಕ್ಕು ಹೆಚ್ಚು ಮನೆಗಳಿಗೆ ನುಗ್ಗಿದೆ. ಪರಿಣಾಮ ಹಲವು ಮನೆಗಳ ಜನರು ರಾತ್ರಿ ಇಡೀ ನಿದ್ದೆಯೂ ಇಲ್ಲದೆ ನೀರನ್ನು ಮನೆಯಿಂದ ಹೊರಕ್ಕೆ ಹಾಕಲು ಪರದಾಡಿದ್ದಾರೆ. ಸಾಧ್ಯವಾಗದಿದ್ದಾಗ ಏರಿಯಾದ ಯುವಕರೆಲ್ಲರು ಸೇರಿ ಬ್ಲಾಕ್ ಆಗಿದ್ದ ಒಳಚರಂಡಿ ಪೈಪುಗಳು ಮತ್ತು ಕಲ್ಲುಗಳನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ, ಕಳೆದ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದ್ದು ಇಲ್ಲಿ ತಡೆಗೋಡೆ ಮತ್ತು ಒಳಚರಂಡಿ ನಿರ್ಮಿಸಲು 2018 ರಲ್ಲಿಯೇ ವಿಪತ್ತು ನಿರ್ವಹಣಾ ಅನುದಾನದಲ್ಲಿ 46 ಲಕ್ಷ ಹಣ ಬಿಡುಗಡೆಯಾಗಿದೆ. ಆದರೆ ವಿರಾಜಪೇಟೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂರು ವರ್ಷಗಳಾದರೂ ಕಾಮಗಾರಿ ಆರಂಭಿಸದೇ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ
Published by: Seema R
First published: January 9, 2021, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories