Belagavi Rains: ಕುಂದಾ ನಗರಿಯಲ್ಲಿ ಮಳೆಯ ಅಬ್ಬರಕ್ಕೆ ಮನೆ ಕುಸಿತ; ಅದೃಷ್ಟವಶಾತ್ ಉಳಿಯಿತು 7 ಜನರ ಪ್ರಾಣ

ಬೆಳಗಾವಿಯಲ್ಲಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರೌಂಡ್ಸ್ ಹಾಕಿದ್ದಾರೆ. ಕೇಶವ ನಗರ, ವಡಗಾವಿ ಭರತ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ: ಬೆಳಗಾವಿ ಹಾಗೂ ಖಾನಾಪುರ (Belagavi And Khanapura) ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವರುಣನ (Rainfall) ಅಬ್ಬರ ಮುಂದುವರಿದಿದೆ. ಅನೇಕ ಬಡಾವಣೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅದೃಷ್ಠವಶಾತ್ ಕುಟುಂಬವೊಂದು ಅಪಾಯದಿಂದ ಪಾರಾಗಿದೆ. ಇನ್ನೂ ಬೆಳಗಾವಿ ತಾಲೂಕು, ಖಾನಾಪುರ ತಾಲೂಕಿನಲ್ಲಿ ಶಾಲಾಗಳಿಗೆ (School) ರಜೆ  ಘೋಷಣೆ ಮಾಡಲಾಗಿದೆ. ಬೆಳಗಾವಿಯಲ್ಲಿ ಮಳೆಯಿಂದ (Belagavi Rains) ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಜಮೀನುಗಳು ಜಲಾವೃತಗೊಂಡಿವೆ. ಬೆಳಗಾವಿ ನಗರದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆಯ ಅಬ್ಬರಿಸುತ್ತಿದ್ದು, ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಶಿವಾಜಿ ನಗರ, ಜಯ ನಗರ, ವೀರಭದ್ರ ನಗರದ 6ನೇ ಕ್ರಾಸ್ ನಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮನೆಯಿಂದ ನೀರು ಹೊರಗೆ ಹಾಕಲು ಇಲ್ಲಿನ ನಿವಾಸಿಗಳು ಹರಸಾಹಸಪಟ್ಟರು. ಇನ್ನೂ ಜಯ ನಗರದಲ್ಲಿ ಕಾರು ಮುಳುಗಡೆಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

20ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಳೆಯಿಂದ ಯಳ್ಳೂರು ರೋಡ್ ಕೇಶವ್ ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲಾವೃತಗೊಂಡಿವೆ. ಸರಿಯಾದ ಚರಂಡಿ ವ್ಯವಸ್ಥೆ ಇರದ ಹಿನ್ನೆಲೆಯಲ್ಲಿ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಈ ಬಡಾವಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಮನೆಗಳಿಗೆ ನೀರು ನುಗ್ಗಿದ್ದು, ಜನ ಮೇಲ್ಮಹಡಿಗೆ ಶಿಫ್ಟ್ ಆಗೋ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:  Cauvery Flood:ಕುಶಾಲನಗರದಲ್ಲಿ ಪ್ರವಾಹ ತಪ್ಪಿಸಲು ಐದು ಕೋಟಿಯಲ್ಲಿ ಕಾವೇರಿಗೆ ತಡೆಗೋಡೆ; ಬಿ ಸಿ ನಾಗೇಶ್

ಇನ್ನೂ ಯಳ್ಳೂರು ಬಳಿಯ ಬಳ್ಳಾರಿ ನಾಲಾದಲ್ಲಿಯೂ ಹೆಚ್ಚಿನ ನೀರು ಬಂದಿದ್ದು, ನುರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಅದೃಷ್ಟವಶಾತ್ ಉಳಿಯಿತು 7 ಜನರ ಪ್ರಾಣ

ಬೆಳಗಾವಿಯ ವಡಗಾವಿಯ ಭರತ ಕಾಲೋನಿಯ 4ನೇ ಕ್ರಾಸ್ ನಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿನಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಪರಿಣಾಮ ಮನೆಯಲ್ಲಿ ವಾಸವಿದ್ದ ಏಳು ಜನ ಅದೃಷ್ಠವಶಾತ್ ಬಚಾವ್ ಆಗಿದ್ದಾರೆ.

ಮನೆಯ ಗೋಡೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನಿನ್ನೆ ಸ್ಥಳೀಯರು ಮನೆಯ ಮಾಲೀಕ ಆನಂದ್ ಬಿರ್ಜೆ ಅವರ ಗಮನಕ್ಕೆ ತಂತಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡು ಕುಟುಂಬದವರು ಮನೆಯಲ್ಲಿ ಖಾಲಿ ಮಾಡಿ ಪಕ್ಕದಲ್ಲೇ ಇರೋ ಸ್ನೇಹಿತರ ಮನೆಗೆ ಶಿಫ್ಟ್ ಆಗಿದ್ದಾರೆ. ಇನ್ನೂ ಬೆಳಗ್ಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಪರಿಹಾರಕ್ಕೆ ಆಗ್ರಹ

ಪಕ್ಕದ ಮನೆಯ ನಿವಾಸಿ ಶಾಂತಾ ಎಂಬ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮನೆಯ ಅವಶೇಷಗಳ ಅಡಿಯಲ್ಲಿ ಎರಡು ಕಾರ್, ಎರಡು ಬೈಕ್ ಗಳು ಸಿಲುಕಿದ್ದು ನುಜ್ಜು ಗುಜ್ಜಾಗಿವೆ. ಮನೆಯ ಮಾಲೀಕ ಆನಂದ್ ಬಿರ್ಜೆಗೆ ಪರಿಹಾರ ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರೌಂಡ್ಸ್ ಹಾಕಿದ್ದಾರೆ. ಕೇಶವ ನಗರ, ವಡಗಾವಿ ಭರತ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿ ನಾಲಾ ಸಮಸ್ಯೆ

ಈ ವೇಳೆಯಲ್ಲಿ ಮಾತನಾಡಿ, ಬಳ್ಳಾರಿ ನಾಲಾ ಶಾಶ್ವತ ಪರಿಹಾರಕ್ಕೆ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಪ್ರತಿ ವರ್ಷ ಬಳ್ಳಾರಿ ನಾಲಾ ಹರಿವಿನಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿದೆ.

ಇದನ್ನೂ ಓದಿ:  Karnataka Weather Today; ವರುಣನ ಅಬ್ಬರಕ್ಕೆ ಜನರು ತತ್ತರ; ಭೂಕುಸಿತ, ಪ್ರವಾಹದ ಆತಂಕ

ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಿಸಿಲು ಕಾಣದೇ ಇರೋದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ. ಇತ್ತ ಕಾಫಿ ಬೆಳೆಗಾರರು ಸಹ ಬೆಳೆಗೆ ರೋಗ ತಗಲುವ ಆತಂಕದಲ್ಲಿದ್ದಾರೆ.
Published by:Mahmadrafik K
First published: