Karnataka Weather Update| ರಾಜ್ಯದಲ್ಲಿ ಜುಲೈ 18ರವರೆಗೂ ಮುಂದುವರೆಯಲಿದೆ ಮಳೆ; ಕೊಡಗಿನಲ್ಲಿ ಭೂ ಕುಸಿತದ ಆತಂಕ, ಹಲವೆಡೆ ರೆಡ್​ ಅಲರ್ಟ್​

ಉತ್ತರ ಕನ್ನಡ. ಉಡುಪಿ, ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜುಲೈ 15 ಮತ್ತು 17ರಂದು ಈ ಪ್ರದೇಶಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ.

ಕೊಡಗಿನಲ್ಲಿ ಭಾರೀ ಮಳೆ.

ಕೊಡಗಿನಲ್ಲಿ ಭಾರೀ ಮಳೆ.

 • Share this:
  Karnataka Weather Update (ಜುಲೈ 15);  ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇನ್ನೂ ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜೂ 18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್​ ತಿಳಿಸಿದ್ದಾರೆ. ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ, ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೂಡ ಇನ್ನೆರಡು ದಿನ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ.

  ಉತ್ತರ ಕನ್ನಡ. ಉಡುಪಿ, ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜುಲೈ 15 ಮತ್ತು 17ರಂದು ಈ ಪ್ರದೇಶಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

  ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದ್ದು, ಜುಲೈ 14, 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜುಲೈ 15, 16, 17 ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ಉತ್ತರ ಕನ್ನಡದ ಕದ್ರಾದಲ್ಲಿ 13 ಸೆಂ.ಮೀ ಮಳೆ, ಸುಬ್ರಮಣ್ಯ 10 ಸೆಂ.ಮೀ. ಸುಳ್ಯ, ದ.ಕ. ತಲಾ 9 ಸೆ.ಮೀ. ಮಳೆ ದಾಖಲು ಆಗಿದೆ.

  ಬೆಂಗಳೂರಿನಲ್ಲೂ ಕೂಡ ಮುಂದಿನ ಎರಡು ದಿನ ಮಳೆಯಾಗಲಿದ್ದು ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಂಟಿಗ್ರೇಡ್​, ಕನಿಷ್ಟ ಉಷ್ಣಾಂಶ 20 ಡಿಗ್ರಿ ಇರಲಿದೆ. ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ತುಂಬಿ ಹರಿಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶಗಳಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಭಾರೀ ಹೆಚ್ಚಳವಾಗಿದೆ.

  ಕಳೆದ ಎರಡು ನಾಲ್ಕು ದಿನಗಳಿಂದ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಕಳೆದೊಂದು ವಾರದಿಂದ ಕೊಂಚ ವಿರಾಮ ನೀಡಿದ್ದ ಮಳೆ ಕಳೆದ ಮೂರು ದಿನಗಳಿಂದ ಬಿರುಸು ಕೊಂಡಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನು ಮೂರು ದಿನ ಇದೇ ರೀತಿ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿ ಯಿಂದ ಅಲೆಗಳ ಹೊಡೆತ ಇನ್ನಷ್ಟು ಹೆಚ್ಚಲಿದ್ದು, ಕಡಲ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ.

  ರಾಜ್ಯದಲ್ಲಿ ಈಗಾಗಲೇ ನೈರುತ್ಯ ಮಾನ್ಸೂನ್​ನಿಂದಾಗಿ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ, ಜುಲೈ 18ರವರೆಗೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೆರೆಯ ಕೇರಳ ಹಾಗೂ ಮಹಾರಾಷ್ಟ್ರ, ತಮಿಳುನಾಡಿನ ನೀಲಗಿರಿಯ ಪಶ್ಚಿಮ ಘಟ್ಟ, ಗುಜರಾತ್​ನ ಕೆಲ ಪ್ರದೇಶಗಳಲ್ಲಿ ಕೂಡ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  ಇದನ್ನೂ ಓದಿ: Corona Effect: ಕೊರೋನಾ ಹೊಡೆತಕ್ಕೆ ನಲುಗಿದ ಹೋಟೆಲ್ ಉದ್ಯಮ; ಆಸ್ಪತ್ರೆಗಳಾಗಿ ಕನ್ವರ್ಟ್ ಆಗ್ತಿವೆ ಹೋಟೆಲ್​ಗಳು..!

  ಕೊಡಗಿನಲ್ಲಿ ಭೂ-ಕುಸಿತದ ಆತಂಕ;

  ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಬಾಗಮಂಡಲ, ನಾಪೋಕ್ಲು, ಮಡಿಕೇರಿ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಮಡಿಕೇರಿ ಭಾಗದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಯಲ್ಲಿ ಬರೋಬ್ಬರಿ 85 ಮಿಲಿಮೀಟರ್ ಮಳೆ ಸುರಿದಿದೆ. ಮಡಿಕೇರಿ ನಗರದಲ್ಲಿ ಆಕಾಶವಾಣಿ ಕೇಂದ್ರದ ಬಳಿ ಭೂಕುಸಿತವಾಗಿದೆ.

  ಆಕಾಶವಾಣಿ ಟವರ್ ನಿಂದ ಕೇವಲ 5 ಅಡಿ ದೂರದಲ್ಲಿ ಭೂಕುಸಿತವಾಗಿರುವುದರಿಂದ ಟವರ್ ಕುಸಿಯುವ ಭೀತಿ ಎದುರಾಗಿದೆ. ಸ್ಥಳಕ್ಕೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಟವರ್ ಪಕ್ಕದಲ್ಲಿ ಭೂಕುಸಿತ ಆಗುವುದಕ್ಕೆ ಅಧಿಕಾರಿಗಳೇ ಕಾರಣ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  Published by:MAshok Kumar
  First published: