ಪ್ರವಾಹ ಸಂಭವಿಸದಿರಲೆಂದು ಕಪಿಲಾ ನದಿ ತೀರದಲ್ಲಿ ತಮಿಳಿಗರಿಂದ ಹೋಮ-ಹವನ

news18
Updated:August 12, 2018, 1:16 PM IST
ಪ್ರವಾಹ ಸಂಭವಿಸದಿರಲೆಂದು ಕಪಿಲಾ ನದಿ ತೀರದಲ್ಲಿ ತಮಿಳಿಗರಿಂದ ಹೋಮ-ಹವನ
news18
Updated: August 12, 2018, 1:16 PM IST
-ನ್ಯೂಸ್ 18 ಕನ್ನಡ

 ಬೆಂಗಳೂರು (ಆ.12) : ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಪಿಲಾ ನದಿಗೆ ಹೆಚ್ಚು ಪ್ರಮಾಣದ ನೀರು ಬರುತ್ತಿದ್ದು, ನದಿ ಅಪಾಯದ ಮಟ್ಟ  ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿಯಿಂದ ಯಾವುದೇ ಅಪಾಯ ಸಂಭವಿಸದಿರಲಿ ಎಂದು ನದಿ ದಡದಲ್ಲಿ ಭಾನುವಾರ ತಮಿಳು ಹೋಮ-ಹವನ ನೆರವೇರಿಸಿದ್ದಾರೆ.

ನಂಜನಗೂಡಿನ ಪರಶುರಾಮ ದೇವಸ್ಥಾನದ ಬಳಿ ತಮಿಳುನಾಡಿನಿಂದ ಬಂದ ಇಬ್ಬರು ಪ್ರವಾಸಿಗರು ಸ್ಥಳೀಯ ಪುರೋಹಿತರಿಂದ ಹೋಮ-ಹವನ ನೆರವೇರಿಸಿದ್ದಾರೆ. ಕಾವೇರಿ ಮತ್ತು ಕಬಿನಿಯಿಂದ ದಿನಕ್ಕೆ 1.30 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡುತ್ತಿರುವುದರಿಂದ ತಮಿಳುನಾಡಿನ 120 ಅಡಿ ಸಾಮರ್ಥ್ಯದ ಮೆಟ್ಟೂರು ಜಲಾಶಯ ಎರಡನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದೆ. ಹೀಗಾಗಿ ತಮಿಳುನಾಡಿನಲ್ಲೂ ಪ್ರವಾಹ ಭೀತಿ ಎದುರಾಗಿದೆ.

ಮೂರನೇ ದಿನವೂ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆಸುಪಾಸಿನವರೆಗೂ ನೀರು ನುಗ್ಗಿದ್ದು, ಪ್ರವಾಸಿಗರು ಮತ್ತು ಭಕ್ತರು ಪರದಾಡುವಂತಾಗಿದೆ. ನೆರೆ ಸಂತ್ರಸ್ತರಿಗೆ ಶ್ರೀಕಂಠೇಶ್ವರ ದೇವಾಲಯದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಇಲ್ಲಿ 30 ಕುಟುಂಬಗಳು ಆಶ್ರಯ ಪಡೆದಿವೆ.

ಗುಡ್ಡ ಕುಸಿತ:

ಕಾಫಿನಾಡಲ್ಲಿ ಮುಂದುವರೆದ ಧಾರಾಕಾರ ಮಳೆ ಹಿನ್ನೆಲೆ ಪಶ್ಚಿಮ ಘಟ್ಟ ಸಾಲಿನಲ್ಲಿ ಗುಡ್ಡ ಕುಸಿದಿದೆ. ಚಿಕ್ಕಮಗಳೂರು ತಾಲೂಕಿನ ಕೈಮರ ಸಮೀಪದ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಚಿಕ್ಕಮಗಳೂರು - ಮುಳ್ಳಯ್ಯನಗಿರಿ, ಬಾಬಬುಡನ್ ಗಿರಿ ಮಾರ್ಗ ಸಂಪೂರ್ಣ ಬಂದ್ ಆಗಿದೆ. ರಸ್ತೆ ಸಂಪರ್ಕವಿಲ್ಲದೆ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಟ ನಡೆಸುತ್ತಿದ್ದಾರೆ. ಭಾನುವಾರದ ರಜೆ ಹಿನ್ನೆಲೆ ದತ್ತಪೀಠ, ಮುಳ್ಳಯ್ಯನಗಿರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ.


Loading...

ಧರೆಗುರುಳಿದ ಮರ:

ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಮಗಳೂರಿನ ಬಳಿ ಬೃಹತ್​ ಗಾತ್ರದ ಮರವೊಂದು ಧರೆಗುರುಳಿದೆ. ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ಚಿಕ್ಕಮಗಳೂರು-ಮಂಗಳೂರು ಹೆದ್ದಾರಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದರು. ಮಲೆನಾಡಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಮತ್ತಷ್ಟು ಅವಾಂತರಗಳಾಗುವ ಮುನ್ಸೂಚನೆಗಳಿವೆ.ಹೆಬ್ಬಾಳೆ ಸೇತುವೆ ಮುಳುಗುವ ಸಾಧ್ಯತೆ:

ಧಾರಾಕಾರ ಮಳೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪವಿರುವ ಹೆಬ್ಬಾಳೆ ಸೇತುವೆ ಮತ್ತೆ ಮುಳುಗುವ ಹಂತ ತಲುಪಿದೆ. ಈಗಾಗಲೇ 40 ದಿನದಲ್ಲಿ 12 ಬಾರಿ ಮುಳುಗಿದ್ದು, ಇಂದು 13 ನೇ ಬಾರಿ ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕಳಸ-ಹೊರನಾಡು ಸಂಪರ್ಕ ಸೇತುವ ಬಂದ್​ ಆಗಲಿದೆ.

 

ಕೇರಳದಲ್ಲಿ ರೆಡ್ ಅಲರ್ಟ್ ಮುಂದುವರಿಕೆ:

ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಸತತವಾಗಿ ಸುರಿದ ಮಳೆ ಶನಿವಾರ ಕೊಂಚ ವಿರಾಮ ನೀಡಿದೆ. ಆದರೂ ರಾಜ್ಯದಲ್ಲಿ ರೆಡ್ ಅಲರ್ಟ್ ಮುಂದುವರೆಸಲಾಗದೆ. ಮಳೆ ಅವಘಡದಲ್ಲಿ ಈವರೆಗೂ 34 ಮಂದಿ ಅಸುನೀಗಿದ್ದು, ಸಾವಿರಾರು ಜನರು ನಿರ್ಗತಿಕರಾಗಿದ್ದಾರೆ.

ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಳೆ ಅವಘಡದಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಮನೆ, ಜಮೀನು ಕಳೆದುಕೊಂಡವರಿಗೆ 10 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಸೇನಾ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ನೆಲೆ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

 

ರಾಜ್ಯದಲ್ಲಿ ತಗ್ಗಿದ ಮಳೆ:

ರಾಜ್ಯದ ಮಲೆನಾಡು ಸೇರಿ ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದೆ. ಆದರೆ, ಕಪಿಲಾ ನದಿಗೆ ಒಳಹರಿವು ಹೆಚ್ಚಾಗಿರುವ ಕಾರಣ ಪ್ರತಿನಿತ್ಯ 80 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಮೇಲೆ ನದಿ ನೀರು ಹರಿಯುತ್ತಿರುವುದು ಮುಂದುವರೆದಿದ್ದು, ವಾಹನ ಸಂಚಾರ ಬಂದ್ ಮಾಡಲಾಗಿದೆ. ಶನಿವಾರ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಆಸುಪಾಸಿನವರೆಗೂ ನೀರು ನುಗ್ಗಿದೆ.

ಕಾವೇರಿ ಮತ್ತು ಕಬಿನಿಯಿಂದ ದಿನಕ್ಕೆ 1.30 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡುತ್ತಿರುವುದರಿಂದ ತಮಿಳುನಾಡಿನ 120 ಅಡಿ ಸಾಮರ್ಥ್ಯದ ಮೆಟ್ಟೂರು ಜಲಾಶಯ ಎರಡನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದೆ.

ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ:

ಕರಾವಳಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ