Rain Alert: 20 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಸಂದೇಶ; ಮನೆ ಮೇಲೆ ಕುಸಿದ ಗುಡ್ಡ, ನಾಲ್ವರು ಸಾವು

ಭಾರಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧ ಗಾಯಗೊಂಡಿರುವ ಘಟನೆ ನೆಲಮಂಗಲದ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ಸೂಲ ಹನುಮಯ್ಯ (65) ಗಾಯಾಳು ವೃದ್ಧ. ವೃದ್ಧನ ತಲೆ, ಕಿವಿ, ಕೈ ಕಾಲಿಗೆ ಗಾಯವಾಗಿದೆ. ಸ್ಥಳೀಯರು ವೃದ್ಧನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹವಾಮಾನ ಇಲಾಖೆ ರಾಜ್ಯದ 20 ಜಿಲ್ಲೆಗಳಿಗೆ ಮಳೆಯ ಅಲರ್ಟ್ (Rain Alert) ನೀಡಿದೆ.  ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳಿಗೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಸಾಯಿ ಲೇಔಟ್ (Sai Layout, Bengaluru) ಮತ್ತೊಮ್ಮೆ ಜಲಾವೃತಗೊಂಡಿದೆ. ಎರಡು ತಿಂಗಳ ಹಿಂದೆಯೂ ಸಾಯಿ ಲೇಔಟ್ ಜಲಾವೃತಗೊಂಡಿತ್ತು. ರಾತ್ರಿ ಸುರಿದ ಮಳೆಯಿಂದ ಸಾಯಿ ಲೇಔಟ್ ಒಳಗೆ ನೀರು ನುಗ್ಗಿದ್ದು, ಬಹುತೇಕ ನೆಲಮಹಡಿಗಳು (Ground Floor Houses) ಜಲಾವೃತಗೊಂಡಿವೆ. ಪದೇ ಪದೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬಹುತೇಕರು ನೆಲ ಮಹಡಿ ಖಾಲಿ ಮಾಡಿಕೊಂಡು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.

ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವಸ್ತುಗಳೆಲ್ಲಾ ನೀರು ಪಾಲಾಗಿವೆ. ಎರಡು ತಿಂಗಳ ಇದೇ ಪರಿಸ್ಥಿತಿ ನಿರ್ಮಾಣಗೊಂಡಾಗ ಸ್ಥಳಕ್ಕೆ ದೌಡಾಯಿಸಿದ್ದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಮಾತುಗಳನ್ನಾಡಿದ್ದರು.

ಇನ್ನು ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಭರವಸೆ ನೀಡಿದ್ದರು. ಆದರೆ ಇದೀಗ ಮತ್ತೆ ಲೇಔಟ್ ಜಲಾವೃತ ಆಗಿರೋದಕ್ಕೆ ನಿವಾಸಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ:  Kukke Subrahmanya: ಭಕ್ತಾದಿಗಳೇ ಗಮನಿಸಿ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವೇಶ ನಿರ್ಬಂಧ

ಗೋಡೆ ಕುಸಿದು ವೃದ್ಧನಿಗೆ ಗಾಯ

ಭಾರಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧ ಗಾಯಗೊಂಡಿರುವ ಘಟನೆ ನೆಲಮಂಗಲದ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ಸೂಲ ಹನುಮಯ್ಯ (65) ಗಾಯಾಳು ವೃದ್ಧ. ವೃದ್ಧನ ತಲೆ, ಕಿವಿ, ಕೈ ಕಾಲಿಗೆ ಗಾಯವಾಗಿದೆ. ಸ್ಥಳೀಯರು ವೃದ್ಧನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜ್ಯದಲ್ಲಿ ಮಳೆ ಆರ್ಭಟ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಮಧ್ಯಾಹ್ನ 12 ಗಂಟೆಗೆ ಗೃಹ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹಾಗಾಗಿ ಮಳೆ ಪರಿಹಾರ ಕಾರ್ಯಗಳ ಬಗ್ಗೆ ಸಿಎಂ ಸೂಚನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮನೆ ಮೇಲೆ ಗುಡ್ಡ ಕುಸಿದು ನಾಲ್ವರ ಸಾವು

ಭಟ್ಕಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ನಾರಾಯಣ್ ನಾಯ್ಕ್ (60),‌ ಮಗಳು ಲಕ್ಷ್ಮೀ ನಾರಾಯಣ್ ನಾಯ್ಕ್ (45), ಮಗ ಅನಂತ್ ನಾರಾಯಣ್ ನಾಯ್ಕ್ (38), ಹಾಡುವಳ್ಲಿ ಬಡಬಾಗಿಲಿನ ತಂಗಿ ಮಗ ಪ್ರವೀಣ್ ರಾಮಕೃಷ್ಣ ನಾಯ್ಕ್ (16) ಸಾವನ್ನಪ್ಪಿದ ದುರ್ದೈವಿಗಳು. ಜೆಸಿಬಿ ಸ್ಥಳಕ್ಕೆ ತೆರಳಲು ಸಾಧ್ಯವಾಗದ್ದರಿಂದ ಸ್ಥಳೀಯರಿಂದಲೇ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಒಂದು ದಿನ ರಜೆ

ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮಳೆ ಆಗುತ್ತಿರುವ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಆದೇಶ ಮಾಡಿದ್ದಾರೆ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಶಾಲೆಗೆ ರಜೆ ನೀಡಲಾಗಿದೆ. ಕೇವಲ ಇಂದು ಮಾತ್ರ ರಜೆ ನೀಡಲಾಗಿದೆ.

ಜಿಲ್ಲೆಯ ಬಹುತೇಕ ಎಲ್ಲಾ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ನಿರಂತರ ಮಳೆಯಿಂದ ಕಚೇರಿಗಳಿಗೆ ಹೋಗಲು ತೊಂದರೆ ಆಗ್ತಿದೆ. ನಮಗೂ ಸಹ ರಜೆ ನೀಡಿ ಎಂದು ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Rain Effects: ಎರಡು ಎಳೆ ಜೀವ ಬಲಿ ಪಡೆದ ಭಾರೀ ಮಳೆ! ಕೊಲ್ಲಮೊಗು,ಬಾಳುಗೋಡಿನಲ್ಲಿ ಭಾರೀ ನಷ್ಟ

ಕಲಬುರಗಿ, ಬೀದರ್, ಯಾದಗಿರಿ, ಮಂಗಳೂರಿನಲ್ಲಿ ಮಳೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು ಭಾರೀ ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
Published by:Mahmadrafik K
First published: