ಕೆಂಪೇಗೌಡ ಏರ್​ಪೋರ್ಟ್- ರೈಲ್ವೆ ಇಲಾಖೆ ಮಹತ್ವದ ಒಪ್ಪಂದ; ವಿಮಾನ ನಿಲ್ದಾಣಕ್ಕೆ ಬರಲಿದೆ ರೈಲು

Bengaluru Airport: ರೈಲ್ವೆ ನಿಲ್ದಾಣದ ನಿರ್ಮಾಣ ಪೂರ್ಣವಾಗುವ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸುವ ಯೋಜನೆ ಇದೆ. ಈ ನಿಲ್ದಾಣವನ್ನು ಬಿ.ಐ.ಎ.ಎಲ್. ನಿರ್ಮಿಸುತ್ತಿದ್ದು, ಭಾರತೀಯ ರೈಲ್ವೆಗೆ ಹಸ್ತಾಂತರಿಸಲಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ

  • Share this:
ಬೆಂಗಳೂರು: ವಿಡಿಯೋ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿಗಳಾದ  ಬಿ.ಎಸ್. ಯಡಿಯೂರಪ್ಪ ಮತ್ತು ಭಾರತ ಸರ್ಕಾರದ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಹಾಜರಿಯಲ್ಲಿ ಭಾರತೀಯ ರೈಲ್ವೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.) ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ್ದು, ಇದರಡಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣ (ಹಾಲ್ಟ್)ದ ನಿರ್ಮಾಣಕ್ಕಾಗಿ ನವೀನ ರೀತಿಯ ಹಣಕಾಸು ವ್ಯವಸ್ಥೆ ಜೊತೆಗೆ ಅನನ್ಯ ಪಾಲುದಾರಿಕೆ ಮಾರ್ಗದಲ್ಲಿ ಜಂಟಿ ಪ್ರಯತ್ನ ಕೈಗೊಳ್ಳಲಾಗಿದೆ.

ರೈಲ್ವೆ ನಿಲ್ದಾಣದ ನಿರ್ಮಾಣ ಪೂರ್ಣವಾಗುವ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸುವ ಯೋಜನೆ ಇದೆ. ಈ ನಿಲ್ದಾಣವನ್ನು ಬಿ.ಐ.ಎ.ಎಲ್. ನಿರ್ಮಿಸುತ್ತಿದ್ದು, ಭಾರತೀಯ ರೈಲ್ವೆಗೆ ಹಸ್ತಾಂತರಿಸಲಿದೆ. ಭಾರತೀಯ ರೈಲ್ವೆ ಈ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಗೊಳ್ಳಲಿದೆ. ಬಿ.ಐ.ಎ.ಎಲ್. ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‍ನಿಂದ ನಿಗದಿಗೊಳಿಸಲಾದ ವೇಳಾಪಟ್ಟಿಗೆ ಅನುಗುಣವಾಗಿ ಉಚಿತ ಶಟಲ್ ಸೇವೆಯನ್ನು ಟರ್ಮಿನಲ್ ಮತ್ತು ವಿಮಾನ ನಿಲ್ದಾಣದ ಇತರೆ ಭಾಗಗಳಿಗೆ ರೈಲ್ವೆ ಸೇವೆಗಳನ್ನು ಪೂರೈಸಲಿದೆ. ಈ ಉಪಕ್ರಮ ಬೆಂಗಳೂರಿನ ಎಲ್ಲಾ ಭಾಗಗಳಿಂದ ಬರುವ ನಿವಾಸಿಗಳು ಮತ್ತು ಉದ್ಯಮಿ ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಮತ್ತು ಉತ್ತಮ ಕಾರ್ಯಕ್ಷಮತೆಯ ಸಾರಿಗೆ ಮಾದರಿಯನ್ನು ಪೂರೈಸಲಿದೆ. ಇದರಿಂದ ನಗರದ ನೈಜ ಆರ್ಥಿಕ ಸಾಮರ್ಥ್ಯವನ್ನು ಸಾಧಿಸಲು ಅವಕಾಶ ಮಾಡಿಕೊಡುವುದಲ್ಲದೆ, ವಿಮಾನ ನಿಲ್ದಾಣದ ಕಡೆಗೆ ಸಾಗುವ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗಲಿದೆ.

ಇದನ್ನೂ ಓದಿ: BY Vijayendra: ಸರ್ಕಾರಿ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಬಿ.ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಆಕ್ರೋಶ

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಮಾತನಾಡಿ, ಯೋಜನೆಗೆ ನೀಡಿರುವ ಬೆಂಬಲಕ್ಕಾಗಿ ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ನಗರಕ್ಕೆ ಬಹು ಅಗತ್ಯವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಈ ನವೀನ ಹಣಕಾಸು ಮಾದರಿ ಕೈಗೊಳ್ಳುವ ಕೆಲಸದಲ್ಲಿ ಬಿಐಎಎಲ್ ಮತ್ತು ರೈಲ್ವೆ ಇಲಾಖೆ ಒಂದಾಗಿ ಶ್ರಮಿಸಿದ್ದಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸುವ ಕನಸಿನ ಕಡೆಗೆ ಜೊತೆಯಾಗಿ ಬಿ.ಐ.ಎ.ಎಲ್.  ಸೇರಿದಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಹಲವಾರು ಪಾಲುದಾರರು ಹಾಗೂ ಎಲ್ಲ ಏಜೆನ್ಸಿಗಳ ದಣಿವರಿಯದ ಪ್ರಯತ್ನಗಳು ನಡೆದಿವೆ. ಇದು ನಮ್ಮ ಆರ್ಥಿಕತೆಗೆ ಹೆಚ್ಚಿನ ಚಾಲನೆ ನೀಡುವುದಲ್ಲದೆ, ದೇಶದ ಬೆಳವಣಿಗೆಗೆ ಅವಕಾಶ ಮಾಡಿಕೊಡಲಿದೆ ಎಂದು ಭಾರತ ಸರ್ಕಾರದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅಭಿಪ್ರಾಯ ಪಟ್ಟಿದ್ದಾರೆ.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್‍ ಕುಮಾರ್ ಸಿಂಗ್ ಮಾಹಿತಿ ನೀಡಿ, ಎಲ್ಲ ನವೀನ ಸಾರಿಗೆಗೆ  ರೈಲ್ವೆ ಮುಕ್ತವಾಗಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಬದಲಾವಣೆ ತರುವಂಥದ್ದಾಗಿದ್ದು, ಸಂಚಾರಕ್ಕಾಗಿ ರಸ್ತೆ, ರೈಲು ಮತ್ತು ವಾಯು ಸಂಪರ್ಕ ಜಾಲ ಸೃಷ್ಟಿಸಲಾಗುತ್ತಿದೆ. ಒಡಂಬಡಿಕೆ ಸಹಿ ಮಾಡುವ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ  ಅಶೋಕ್ ಕುಮಾರ್ ವರ್ಮ ಹಾಜರಿದ್ದರು. ಬಿ.ಐ.ಎ.ಎಲ್. ನಲ್ಲಿ ನಾವು ಬೆಂಗಳೂರು ವಿಮಾನ ನಿಲ್ದಾಣದಿಂದ ಮತ್ತು ನಿಲ್ದಾಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವಲ್ಲಿ ಕೊಡುಗೆ ನೀಡಲು ಅತ್ಯಂತ ಉತ್ಸಾಹಿತರಾಗಿದ್ದೇವೆ. ಇದರೊಂದಿಗೆ ಎಲ್ಲರಿಗೂ ಅದರಲ್ಲೂ ಮುಖ್ಯವಾಗಿ ಸಾಮಾನ್ಯ ಜನರಿಗೆ ಬೆಂಗಳೂರು ಮತ್ತು ವಿಮಾನ ನಿಲ್ದಾಣದ ನಡುವೆ ಸುಲಭ ಸಂಪರ್ಕ ಸೃಷ್ಟಿಯಾಗುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಬಿ.ಐ.ಎ.ಎಲ್.ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರರ್ ಹೇಳಿದರು.
Published by:Sushma Chakre
First published: