ಹುಬ್ಬಳ್ಳಿ ರೈಲು ಮ್ಯೂಸಿಯಂ ದೇಶಕ್ಕೆ ಸಮರ್ಪಣೆ: ದೇಶದ ಪ್ರಗತಿಯ ಎಂಜಿನ್ ರೈಲು ಎಂದ ಸಚಿವ ಪಿಯೂಷ್ ಗೋಯಲ್

ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆಯ ಎದುರಿಗೆ ಸ್ಥಾಪಿಸಲಾಗಿರುವ ರೈಲು ಮ್ಯೂಸಿಯಂ ಉತ್ತರ ಕರ್ನಾಟಕದ ಮೊದಲ ರೈಲು ಮ್ಯೂಸಿಯಂ ಆಗಿದೆ. ಮೈಸೂರು ಹೊರತುಪಡಿಸಿದರೆ ನೈರುತ್ಯ ರೈಲ್ವೆ ವಲಯದ ಎರಡನೇ ಮ್ಯೂಸಿಯಂ ಇದಾಗಿದೆ. ಮಲಪ್ರಭಾ, ಘಟಪ್ರಭಾ ಮತ್ತು ಒಂದು‌ ಹೊರಾಂಗಣ ವಿಭಾಗ ಸೇರಿದಂತೆ ಒಟ್ಟು ಮೂರು ವಿಭಾಗಗಳನ್ನು ಮ್ಯೂಸಿಯಂ ಹೊಂದಿದೆ.

news18-kannada
Updated:August 9, 2020, 10:23 PM IST
ಹುಬ್ಬಳ್ಳಿ ರೈಲು ಮ್ಯೂಸಿಯಂ ದೇಶಕ್ಕೆ ಸಮರ್ಪಣೆ: ದೇಶದ ಪ್ರಗತಿಯ ಎಂಜಿನ್ ರೈಲು ಎಂದ ಸಚಿವ ಪಿಯೂಷ್ ಗೋಯಲ್
ಸಚಿವ ಪಿಯೂಶ್​ ಗೋಯಲ್​​
  • Share this:
ಹುಬ್ಬಳ್ಳಿ(ಆ.09): ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಭಾನುವಾರ ದೇಶಕ್ಕೆ ಸಮರ್ಪಿಸಿದರು.

ನೈರುತ್ಯ ರೈಲ್ವೆ ವತಿಯಿಂದ ವರ್ಚುವಲ್ ವೇದಿಕೆಯ ಮೂಲಕ ಭಾನುವಾರ ಆಯೋಜಿಸಲಾಗಿದ್ದ  ಸಮಾರಂಭದಲ್ಲಿ ಹುಬ್ಬಳ್ಳಿಯ ರೈಲು ಮ್ಯೂಸಿಯಂ ಅನ್ನು ದೇಶಕ್ಕೆ ಸಮರ್ಪಿಸಲಾಯಿತು. ನಂತರ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ ಅವರು, ಐತಿಹಾಸಿಕ ಮಹತ್ವ ಹೊಂದಿರುವ ಹುಬ್ಬಳ್ಳಿಯಲ್ಲಿ ಮ್ಯೂಸಿಯಂ ಆಗಿರುವುದು ಅತ್ಯಂತ ಸಮಂಜಸವಾಗಿದೆ. ಈ ಮ್ಯೂಸಿಯಂ ಮುಂಬರುವ ದಿನಗಳಲ್ಲಿ ಅತ್ಯಾಕರ್ಷಕ ಪ್ರವಾಸಿ ಕೇಂದ್ರವಾಗಲಿದೆ ಎಂದರು.

ಎಲೆಕ್ಟ್ರಿಕ್ ರೈಲು ಸಂಪರ್ಕಕ್ಕೆ ಮನವಿ:

ಹುಬ್ಬಳ್ಳಿ-ಬೆಳಗಾವಿ- ಬೆಂಗಳೂರು ನಡುವೆ ಎಲೆಕ್ಟ್ರಿಕ್ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡರು. ಇದರಿಂದ ಪ್ರಯಾಣದ ಅವಧಿಯು 8 ರಿಂದ ಆರು‌ ತಾಸುಗಳಿಗೆ ಇಳಿಕೆಯಾಗಲಿದೆ ಎಂದರು. ಇದು ಬೆಳಗಾವಿ ಮತ್ತು ಹುಬ್ಬಳ್ಳಿ ಜನರಿಗೆ ಅನುಕೂಲವಾಗಲಿದೆ ಎಂದು ಜೋಶಿ ಅಭಿಪ್ರಾಯಪಟ್ಟರು.

ದೇಶದ ಅತ್ಯಂತ ಉದ್ದದ ಅಂದರೆ 1400 ಮೀಟರ್ ಫ್ಲ್ಯಾಟ್ ಫಾರ್ಮ್ ಹೊಂದಿರುವುದು ಹುಬ್ಬಳ್ಳಿಯ ಹೆಗ್ಗಳಿಕೆಯಾಗಿದೆ. ಇದಕ್ಕೆ ಸಹಕರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಜೀವದ ಹಂಗು ತೊರೆದು ಕುರಿಗಾಹಿ ರಕ್ಷಿಸಿದ ಎನ್​ಡಿಆರ್​ಎಫ್ ತಂಡ; ಕೊನೆಗೂ ಯಶಸ್ವಿಯಾದ ಸತತ 7 ಗಂಟೆ ಕಾರ್ಯಾಚರಣೆ

ರೈಲು ದೇಶದ ಪ್ರಗತಿಯ ಎಂಜಿನ್:ಸಮಾರಂಭದಲ್ಲಿ ಮಾತನಾಡಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು,   "ರೈಲ್ವೆಯು ಪ್ರತಿಯೊಬ್ಬ ಭಾರತೀಯರ ಭಾವನಾತ್ಮಕ ‌ಸಂಬಂಧವನ್ನು ಹೊಂದಿದೆ. ಬಹುಜನರ ಬದುಕಿನಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿ ಜೀವನ, ಉದ್ಯೋಗ, ಕೌಟುಂಬಿಕ ಪ್ರವಾಸ, ಹೋರಾಟ ಹೀಗೆ ಅನೇಕ ಮಜಲುಗಳಲ್ಲಿ ರೈಲ್ವೆ ಪಾತ್ರ ಹಿರಿದಾಗಿದೆ" ಎಂದರು.

ಹುಬ್ಬಳ್ಳಿ ಮ್ಯೂಸಿಯಂ ಕೂಡ ಅತ್ಯಾಕರ್ಷಕ ಪ್ರವಾಸಿ ತಾಣವಾಗಲಿದೆ. ಮ್ಯೂಸಿಯಂ ಇತಿಹಾಸದ ಕಥೆಗಳನ್ನು ಜನರಿಗೆ ಹೇಳುತ್ತವೆ. ನಮ್ಮ ಸಮಾಜದ ಹಿನ್ನೆಲೆ ತಿಳಿಸುವ ಮೂಲಕ ಭವಿಷ್ಯಕ್ಕೆ ಮಾರ್ಗದರ್ಶಿಯಾಗಲಿದೆ. ಕೋವಿಡ್ ಬಳಿಕ ಹುಬ್ಬಳ್ಳಿ ಮ್ಯೂಸಿಯಂ ಗೆ ಭೇಟಿ ನೀಡಿ ವೀಕ್ಷಿಸುತ್ತೇನೆ ಎಂದರು.

ಕೋವಿಡ್ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಸೇವೆ ಅಪೂರ್ವವಾಗಿದ್ದು, ದೇಶ‌ ಸೇವೆಗೆ ಬದ್ಧವಾಗಿದೆ. ದೇಶದ ಅಭಿವೃದ್ಧಿಗೆ ರೈಲ್ವೆ ಇಲಾಖೆಯು ಎಂಜಿನ್ ಆಗಲಿದೆ. ಆತ್ಮನಿರ್ಭರ್ ಭಾರತ ಅಭಿಯಾನದಲ್ಲಿ ಕೈಜೋಡಿಸಲಿದೆ ಎಂದು ಪಿಯುಷ್ ಗೋಯಲ್ ಹೇಳಿದರು.

ಇತಿಹಾಸ ಪರಿಚಯಿಸಲಿದೆ ಮ್ಯೂಸಿಯಂ-ಸುರೇಶ್ ಅಂಗಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು, ರೈಲು ಮ್ಯೂಸಿಯಂ ಹುಬ್ಬಳ್ಳಿ-ಧಾರವಾಡ ನಗರದ ಜನರಿಗೆ ದೊಡ್ಡ ಕೊಡುಗೆಯಾಗಿದೆ. 167 ವರ್ಷಗಳ ರೈಲ್ವೆ ಇಲಾಖೆಯ ಇತಿಹಾಸ ಮತ್ತು ಬೆಳೆದುಬಂದ ಹಾದಿಯನ್ನು ಮ್ಯೂಸಿಯಂ ಪರಿಚಯಿಸಲಿದೆ ಎಂದರು.

ದೇಶದ ರೈಲು ವ್ಯವಸ್ಥೆಯನ್ನು ಬಲವರ್ಧನೆ ಮತ್ತು ಆಧುನೀಕರಣಕ್ಕೆ ಪ್ರಧಾನಮಂತ್ರಿಗಳು ಮತ್ತು ರೈಲ್ವೆ ಇಲಾಖೆಯ ಸಚಿವರ ಅವಿರತ ಶ್ರಮವನ್ನು‌ ಪ್ರಸ್ತಾಪಿಸಿದ ಅವರು, ಹುಬ್ಬಳ್ಳಿ ಕೂಡ ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ.ಈ ನಗರದಲ್ಲಿ ಮ್ಯೂಸಿಯಂ ಸ್ಥಾಪಿಸಿರುವುದು ಅರ್ಥಪೂರ್ಣವಾಗಿದೆ. ಒಂದು ಕೋಚ್ ಕೋವಿಡ್-19 ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಸೇವೆ ಮತ್ತು ಅದರ ಕಾರ್ಯತತ್ಪರತೆಯನ್ನು ಪ್ರದರ್ಶಿಸಲು ಮೀಸಲಿಡಬೇಕು. ಇದರಿಂದ ಮುಂದಿನ‌ ಜನಾಂಗಕ್ಕೆ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾಹಿತಿ ದೊರೆಯುವುದು ಎಂದು ಅಂಗಡಿ‌ ಹೇಳಿದರು.

ಮ್ಯೂಸಿಯಂ ವೈಶಿಷ್ಟ್ಯತೆಗಳು:
ರೈಲ್ವೆ ಇಲಾಖೆಯ ವಿವಿಧ ವಿಭಾಗಗಳ ಭವ್ಯ ಪರಂಪರೆಯನ್ನು ಸಂರಕ್ಷಿಸುವುದರ ಕ್ರಮೇಣವಾಗಿ ಅಳವಡಿಸಿಕೊಳ್ಳಲಾದ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಪ್ರದರ್ಶಿಸುವುದು ಈ ರೈಲು ಮ್ಯೂಸಿಯಂ ನ ಉದ್ದೇಶವಾಗಿದೆ. ಗ್ಯಾಲಕ್ಸಿ ರೋಲಿಂಗ್ ಸ್ಟಾಕ್, ಮಲಪ್ರಭಾ ಮತ್ತು ಘಟಪ್ರಭಾ ಕಾಟೇಜ್, ಥೇಟರ್ ಕೋಚ್, ಸುರುಚಿ ಕೆಫೆಟೇರಿಯಾ, ಟಾಯ್ ಟ್ರೇನ್, ಟಿಕೆಟ್ ಮುದ್ರಣ ಯಂತ್ರ, ಮಾದರಿ ರೈಲು ಸಂಚಾರ ಹಾಗೂ ಮಕ್ಕಳ ಚಟುವಟಿಕೆ ಕೊಠಡಿ ಈ ಮ್ಯೂಸಿಯಂ ನ ಪ್ರಮುಖಾಂಶಗಳು.

ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆಯ ಎದುರಿಗೆ ಸ್ಥಾಪಿಸಲಾಗಿರುವ ರೈಲು ಮ್ಯೂಸಿಯಂ ಉತ್ತರ ಕರ್ನಾಟಕದ ಮೊದಲ ರೈಲು ಮ್ಯೂಸಿಯಂ ಆಗಿದೆ. ಮೈಸೂರು ಹೊರತುಪಡಿಸಿದರೆ ನೈರುತ್ಯ ರೈಲ್ವೆ ವಲಯದ ಎರಡನೇ ಮ್ಯೂಸಿಯಂ ಇದಾಗಿದೆ. ಮಲಪ್ರಭಾ, ಘಟಪ್ರಭಾ ಮತ್ತು ಒಂದು‌ ಹೊರಾಂಗಣ ವಿಭಾಗ ಸೇರಿದಂತೆ ಒಟ್ಟು ಮೂರು ವಿಭಾಗಗಳನ್ನು ಮ್ಯೂಸಿಯಂ ಹೊಂದಿದೆ.

ಇಂದಿನಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುವ ಈ ಮ್ಯೂಸಿಯಂ ಹುಬ್ಬಳ್ಳಿ-ಧಾರವಾಡ ನಾಗರಿಕರಿಗೆ ಮಾತ್ರವಲ್ಲದೆ ಇಡೀ ದೇಶದ ಜನರಿಗೆ ರೈಲ್ವೆ ಇಲಾಖೆಯ ಭವ್ಯ ಪರಂಪರೆಯನ್ನು ಪರಿಚಯಿಸಲಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ತಿಳಿಸಿದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಾದ ಅಜಯಕುಮಾರ್ ಸಿಂಗ್ ಅವರು ಸ್ವಾಗತಿಸಿದರು.ಶಾಸಕರಾದ ಅಬ್ಬಯ್ಯ ಪ್ರಸಾದ್, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.
Published by: Latha CG
First published: August 9, 2020, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading