• Home
  • »
  • News
  • »
  • state
  • »
  • Police Raid: ಬೆಂಗಳೂರಿನ ಚಿಲುಮೆ ಕಚೇರಿ ಮೇಲೆ ಪೊಲೀಸರ ದಾಳಿ; ನಾಲ್ವರ ಬಂಧನ

Police Raid: ಬೆಂಗಳೂರಿನ ಚಿಲುಮೆ ಕಚೇರಿ ಮೇಲೆ ಪೊಲೀಸರ ದಾಳಿ; ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್​ ಪೊಲೀಸರು ದಾಳಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.18): ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ (Voter Personal Information) ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ  ಸಂಸ್ಥೆಗಳ ಮೇಲೆ ಪೊಲೀಸರು ದಾಳಿ (Police Raid) ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಚಿಲುಮೆ ಕಚೇರಿ ಮೇಲೆ ಹಲಸೂರು ಗೇಟ್​ ಪೊಲೀಸರು ದಾಳಿ ಮಾಡಿದ್ದು, ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.


ಬಿಬಿಎಂಪಿಯಿಂದ ದೂರು ಹಿನ್ನೆಲೆ ದಾಳಿ


ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣದ ಸಂಬಂಧ ಚಿಲುಮೆ ಸಂಸ್ಥೆ ವಿರುದ್ಧ ಹಲಸೂರು ಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಈ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಠಾಣೆ​ ಇನ್ಸ್​​ಪೆಕ್ಟರ್​​ ಜಗದೀಶ್​ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.


ಮಲ್ಲೇಶ್ವರಂನಲ್ಲಿರುವ ಕಚೇರಿ ಮೇಲೆ ದಾಳಿ


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.ಈ‌ ಮಧ್ಯೆ ಪಿಎಸ್ ಐ ಕುಮಾರ್, ಹೆಡ್ ಕಾನ್ ಸ್ಟೇಬಲ್ ರಾಮಕೃಷ್ಣ ಹಾಗು 7 ಜನರ ತಂಡ ಮಲ್ಲೇಶ್ವರಂನಲ್ಲಿ ಇರೋ ಚಿಲುಮೆ ಕಚೇರಿ ಮೇಲೆ ದಾಳಿ ಮಾಡಿದೆ.


ದೂರು ನೀದಿದ್ದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ


ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದ್ದು ಷರತ್ತು ಉಲ್ಲಂಘಿಸಿರುವುದನ್ನು ಪರಿಗಣಿಸಿ ಅನುಮತಿ ಪತ್ರವನ್ನು ರದ್ದುಪಡಿಸಲಾಗಿದೆ. ಜೊತೆಗೆ ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.


2018ನೇ ಇಸವಿಯಿಂದ ಮತದಾರರ ಪಟ್ಟಿ (Voters List) ಪರಿಷ್ಕರಣೆ ಹಾಗೂ ಜಾಗೃತಿ ಬೇರೆ ಬೇರೆ ವಿಚಾರಗಳಿಗೆ ಚಿಲುಮೆ ಸಂಸ್ಥೆಗೆ ನೀಡುತ್ತಾ ಬಂದಿದ್ದೇವೆ. ಕೆಲವು ಕಾರ್ಯಾಚರಣೆಯಲ್ಲಿ ಹಣವನ್ನು ಸಹ ನೀಡಿದ್ದೇವೆ. ಕೆಲವು ಜಾಗೃತಿ ಕಾರ್ಯಕ್ರಮಗಳನ್ನು ಉಚಿತವಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.  ಈ ವರ್ಷವೂ ಸಹ ಜಾಗೃತಿ ಕಾರ್ಯಕ್ರಮಕ್ಕೆ ಸಹ ಕೆಲವು ನಿರ್ಬಂಧನೆಯೊಂದಿಗೆ ಒಪ್ಪಿಗೆ ಸೂಚಿಸಲಾಗಿತ್ತು.  ಇದೀಗ ಅಕ್ರಮ ನಡೆದಿದೆ ಎನ್ನಲಾಗ್ತಿದ್ದು, ಇದೀಗ ಚಿಲುಮೆ ಸಂಸ್ಥೆ (Chilume Institute) ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Chief Commissioner Tushar Girinath) ಹೇಳಿದ್ದಾರೆ.


ಕಾಂಗ್ರೆಸ್ ನಾಯಕರ ಆರೋಪ


ಮತದಾರರ ಮಾಹಿತಿಯನ್ನು ಸರ್ಕಾರ ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ  ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ಸಿಎಂ ಬಸವರಾಜ್ ಬೊಮ್ಮಾಯಿ  ಸರ್ಕಾರ ಚುನಾವಣೆಯಲ್ಲಿ ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದರು. ಮತದಾರರ ಮಾಹಿತಿಯನ್ನು ಬೊಮ್ಮಾಯಿ ಸರ್ಕಾರ, ಬಿಬಿಎಂಪಿ ಕದ್ದಿದೆ. ಸಿಎಂ ಬೊಮ್ಮಾಯಿ ಮತದಾರರ ದತ್ತಾಂಶ ಕಳ್ಳತನದ ಜವಾಬ್ದಾರಿ ಹೊರಬೇಕು. ಈ ಕಳ್ಳತನ, ಮೋಸ, ವಂಚನೆಗೆ ಮುಖ್ಯಮಂತ್ರಿಗಳೇ ಹೊಣೆ ಎಂದು ಆರೋಪಿಸಿದರು.


ಇದನ್ನೂ ಓದಿ: Siddaramaiah: ಮೂರು ಕ್ಷೇತ್ರಗಳ ಮೇಲೆ ಸಿದ್ದು ಕಣ್ಣು! ಅಲ್ಲಿ ಬಿಟ್, ಇಲ್ಲಿ ಬಿಟ್ ಸಿದ್ದರಾಮಯ್ಯ ಸ್ಪರ್ಧಿಸೋದೆಲ್ಲಿ?


ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಬಿಬಿಎಂಪಿ ಉಸ್ತುವಾರಿ ಸಚಿವರು ಆಗಿದ್ದಾರೆ. ಚಿಲುಮೆ‌ ಶಿಕ್ಷಣ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹಕ್ಕೆ ಅವಕಾಶ ಕೇಳಿತ್ತು. ಮಹದೇವಪುರ ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಕ್ಕೆ ಮೊದಲು ಅನುಮತಿ ಕೊಡಲಾಗಿತ್ತು. ಡಿಎಪಿ ಹೊಂಬಾಳೆ ಪ್ರೈವೆಟ್ ಲಿಮಿಟೆಟ್, ಚಿಲುಮೆ ಸಂಸ್ಥೆ ಮಾಹಿತಿ ಸಂಗ್ರಹಿಸಿದ್ದು, ಎರಡೂ ಕಂಪನಿಗಳ ನಿರ್ದೇಶಕರು ಒಬ್ಬರೇ ಆಗಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.

Published by:ಪಾವನ ಎಚ್ ಎಸ್
First published: