• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಳೆಯಿಂದಾಗಿ ಬೀದಿಗೆ ಬಿದ್ದ ಇಡಪನೂರು ಗ್ರಾಮಸ್ಥರು; ಇವರ ಗೋಳು ಕೇಳುವವರು ಯಾರು?

ಮಳೆಯಿಂದಾಗಿ ಬೀದಿಗೆ ಬಿದ್ದ ಇಡಪನೂರು ಗ್ರಾಮಸ್ಥರು; ಇವರ ಗೋಳು ಕೇಳುವವರು ಯಾರು?

ಇಡಪನೂರು ನಿರಾಶ್ರಿತರು

ಇಡಪನೂರು ನಿರಾಶ್ರಿತರು

ಮೊದಲು ನಾಲ್ಕು ದಿನ ಕಾಳಜಿ ಕೇಂದ್ರಕ್ಕೆ ಬಂದ ಭೇಟಿ ನೀಡಿದ ಅಧಿಕಾರಿಗಳು ಆಹಾರ ಧಾನ್ಯ ನೀಡಿದ್ದರು.  ಆದರೆ ನಂತರ ಇತ್ತ ಯಾರೂ ತಿರುಗಿ ನೋಡಿಲ್ಲ,

  • Share this:

ರಾಯಚೂರು (ಅ.20): ಮಹಾಮಳೆಗೆ ತತ್ತರಿಸಿರುವ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಬಿಸಿಲು ನಾಡಗಿದ್ದ ಜಿಲ್ಲೆ ಈಗ ಮಲೆನಾಡಾಗಿದ್ದು, ಮಳೆ ಪ್ರವಾಹಕ್ಕೆ ಇಲ್ಲಿನ ಇಡಪನೂರು ಗ್ರಾಮವೊಂದು ಸಂಪೂರ್ಣವಾಗಿ ಜಲಾವೃತ್ತಗೊಂಡು ಜನರು ನಿರಾಶ್ರಿತರಾಗಿದ್ದಾರೆ. ಕಳೆದೊಂದು ತಿಂಗಳ ಹಿಂದೆ ಮಳೆಗೆ  ಮನೆ ಮಠ ಕಳೆದುಕೊಂಡ 100ಕ್ಕೂ ಹೆಚ್ಚು ಗ್ರಾಮಸ್ಥರು ಯಾವುದೇ ಪರಿಹಾರ, ಗಂಜಿ ಕೇಂದ್ರದ ಆಶ್ರಯವಿಲ್ಲದೇ ಕಣ್ಣೀರಿಡುತ್ತಿದ್ದಾರೆ. ಆರಂಭದಲ್ಲಿ ಒಂದು ರೇಷನ್ ಕೊಟ್ಟು ನಂತರ ಯಾವ ಅಧಿಕಾರಿಯೂ ಇತ್ತ ಬಂದಿಲ್ಲ, ನಮ್ಮ ಗೋಳು ಕೇಳುವರಾರು ಎನ್ನುತ್ತಿದ್ದಾರೆ ಮಳೆ ಸಂತ್ರಸ್ತರು. ಈ ಕುರಿತು ನ್ಯೂಸ್​ 18 ಸವಿಸ್ತರವಾದ ವರದಿ ಬಿತ್ತರಿಸಿದ ಬಳಿಕ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದ್ದಾರೆ. ಆದರೆ, ತಾತ್ಕಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಸಿಗಬೇಕು ಎಂಬುದು ಸಂತ್ರಸ್ತರ ಅಳಲಾಗಿದೆ. 


ಕಳೆದ ಸೆಪ್ಟೆಂಬರ್ 17 ರಂದು ಸುರಿದ  ಭಾರಿ ಮಳೆಗೆ ಇಲ್ಲಿನ ಕೆರೆಗಳು ಭರ್ತಿಯಾಗಿ, ಕೆರೆಯ ನೀರು ಹಳ್ಳಕ್ಕೆ ಸೇರಿ ಪ್ರವಾಹದಂತೆ ನೀರು ಇಡಪನೂರು ಗ್ರಾಮಕ್ಕೆ ನುಗ್ಗಿವೆ. ಈ ಸಂದರ್ಭದಲ್ಲಿ 768 ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದವು. ಅಲ್ಲದೇ  ಬಹುತೇಕ ಮನೆಗಳು ಬಿದ್ದಿದ್ದವು, ಅವುಗಳಲ್ಲಿ ನೂರಕ್ಕೂ ಅಧಿಕ ಕುಟುಂಬಗಳ ಮನೆಗಳು ಸಂಪೂರ್ಣ ನಾಶವಾದ ಪರಿಣಾಮ ಜನರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮನೆ ಕಳೆದುಕೊಂಡ ನೂರಕ್ಕೂ ಅಧಿಕ ಕುಟುಂಬಗಳನ್ನು ಇಡಪನೂರಿನ ಶಾಲೆ, ಹಾಸ್ಟೆಲ್ ನಲ್ಲಿ ಕಾಳಜಿ ಕೇಂದ್ರ ಆರಂಭಿಸಿ ಇರಿಸಲಾಗಿದೆ.


ಇದನ್ನು ಓದಿ: ರಾಜ್ಯಾದ್ಯಂತ ಭಾರೀ ಮಳೆ; ಸಿಡಿಲಿಗೆ ಐವರು ರೈತರು, ಹತ್ತಾರು ಜಾನುವಾರು ಬಲಿ


ಕಾಳಜಿ ಕೇಂದ್ರದಲ್ಲಿ ಮೊದಲು ನಾಲ್ಕು ದಿನ ಅಧಿಕಾರಿಗಳು ಬಂದು ಭೇಟಿ ಮಾಡಿ, ಆಹಾರ ಧಾನ್ಯ ನೀಡಿದ್ದರು.  ಆದರೆ ನಂತರ ಇತ್ತ ಯಾರೂ ನೋಡಿಲ್ಲ, ಮನೆಗಳಲ್ಲಿದ್ದ ಆಹಾರ ಧಾನ್ಯ, ಬಟ್ಟೆ ಬರೆಗಳು ಹಾಳಾಗಿದ್ದು,  ಗ್ರಾಮಸ್ಥರು ಹುಟ್ಟಬಟ್ಟೆಯಲ್ಲಿ ಹೊರಗಡೆ ಬಂದು ಕಾಳಜಿ ಕೇಂದ್ರದಲ್ಲಿದ್ದಾರೆ.  ಈ ಸಂದರ್ಭದಲ್ಲಿ ಹೊಸ‌ಮನೆಗಳಾಗುವವರೆಗೂ ತಾತ್ಕಾಲಿಕ ಶೆಡ್ ಗಳನ್ನು ಹಾಕಿಕೊಡಲಾಗುವುದು ನಂತರ ಶಾಶ್ವತ ಸೂರು ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಲಿಲ್ಲ.


ಸರಕಾರಿ ಕಟ್ಟಡಗಳಲ್ಲಿ ವೃದ್ದರು, ಮಕ್ಕಳು, ಮಹಿಳೆಯರು ವಾಸವಾಗಿದ್ದಾರೆ. ಈಗ ಊಟಕ್ಕಾಗಿ ನಿತ್ಯ ಕೂಲಿ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಒಂದು ವೇಳೆ ಅಂದಿನ ದುಡಿಮೆ ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ ಎನ್ನುವಂತಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು ನ್ಯೂಸ್ 18 ವಾಹಿನಿಯಲ್ಲಿ ವರದಿ ಪ್ರಸಾರವಾದ ನಂತರ ತಕ್ಷಣ ಸಹಾಯಕ ಆಯುಕ್ತರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತಕ್ಷಣ ಒಂದು ತಿಂಗಳಾಗುವಷ್ಟು ರೇಷನ್ ಕೊಡಿ ಹಾಗು ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ, ಈ ಗ್ರಾಮಸ್ಥರಿಗೆ ಸೂಕ್ತವಾದ ಸ್ಥಳದಲ್ಲಿ ಶಾಶ್ವತ ಸೂರು ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.


ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ರೇಷನ್ ಹಾಗು ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಮುಂದಾಗಿದೆ. ಮಳೆ ನಿಂತು ಒಂದು ತಿಂಗಳಾದರೂ ಯಾರು ಇವರ ಸಮಸ್ಯೆಯ ಬಗ್ಗೆ ಗಮನ ಹರಿಸಿರಲಿಲ್ಲ, ನ್ಯೂಸ್ 18 ತಂಡವು ವರದಿ ಪ್ರಸಾರದ ನಂತರ ಅವರಿಗೆ ತಕ್ಷಣದ ಅವಶ್ಯಕತೆ ಒದಗಿಸಲು ಮುಂದಾಗಿದೆ. ಆದರೂ ಮಳೆಯಿಂದ ಮನೆ ಮಠ ಕಳೆದುಕೊಂಡ ಕುಟುಂಬಗಳಿಗೆ ಸರಕಾರ ಸ್ಪಂದಿಸಬೇಕಾಗಿದೆ.

Published by:Seema R
First published: