news18-kannada Updated:December 7, 2020, 10:21 PM IST
ಗೋನವಾಟ್ಲ ತಾಂಡಾದ ದೃಶ್ಯ
ರಾಯಚೂರು (ಡಿ.7): ಇಡೀ ಜಗತ್ತೇ ಕೊರೋನಾ ಸೋಂಕಿನಿಂದ ತತ್ತರಿಸುವ ಸಮಯದಲ್ಲಿ ಇಲ್ಲಿನ ಜನಕ್ಕೆ ಡೇಂಘಿ ಮಹಾಮಾರಿ ಕಾಡುತ್ತಿದೆ. ಜಿಲ್ಲೆಯ ಲಿಂಗಸಗೂರು ತಾಲೂಕಿನ ಗೋನವಾಟ್ಲ ತಾಂಡಾದಲ್ಲಿ ಈಗ ಡೇಂಘಿ ಜ್ವರ ಕಾಣಿಸಿಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡು ಜನರು ತತ್ತರಿಸಿದ್ದಾರೆ. 2000 ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಈಗ 100 ಕ್ಕೂ ಅಧಿಕ ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಅಲ್ಲದೇ ಈ ಡೇಂಘಿಗೆ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಆದರೂ ಕೂಡ ಆರೋಗ್ಯ ಇಲಾಖೆ ಜ್ವರ ನಿಯಂತ್ರಣಕ್ಕೆ ಮುತುವರ್ಜಿ ಮಾಡಿ ಕಾಳಜಿವಹಿಸುತ್ತಿಲ್ಲ. ಇದರಿಂದ ಇನ್ನಷ್ಟು ಜನರು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಶೀಘ್ರವೇ ಈ ಬಗ್ಗೆ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಇಲ್ಲಿ ಡೇಂಘಿ ಜ್ವರ ಕಾಣಿಸಿಕೊಳ್ಳಲು ಮುಖ್ಯ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದು. ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಇಲ್ಲ, ಎಲ್ಲಿ ಬೇಕಂದರಲ್ಲಿ ಕಸ, ಕೊಳಚೆ ಕಾಣಿಸುತ್ತಿದೆ. ಇದರ ಪರಿಣಾಮ ಸೊಳ್ಳೆಗಳು ಹೆಚ್ಚಾಗಿ ತಾಂಡಾದಲ್ಲಿ ಜ್ವರ ಕಾಣಿಸಿಕೊಂಡು ಜನರ ನೆಮ್ಮದಿ ಹಾಳಾಗಿದೆ. ಗ್ರಾಮದಲ್ಲಿನ ನೈರ್ಮಲ್ಯತೆ ಕೊರತೆಯಿಂದ ಜ್ವರ ಉಲ್ಬಣವಾಗುತ್ತಿದೆ. ಆದರೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತಾಳಿದ್ದಾರೆ.
ಇದನ್ನು ಓದಿ: ಕೋಲಾರದ ಚಿನ್ನದಗಣಿ ಪುನರ್ ಆರಂಭಕ್ಕೆ ಸದ್ಯದಲ್ಲೇ ಹಸಿರು ನಿಶಾನೆ; ಸಂಸದ ಮುನಿಸ್ವಾಮಿ
ಸೈನಿಕ ಎಂಬ 15 ವರ್ಷದ ಬಾಲಕಿ ಕಳೆದ ಎರಡು ದಿನ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಇಲ್ಲಿ ಚರಂಡಿ, ರಸ್ತೆಗಳು ಗಬ್ಬು ನಾರುತ್ತಿವೆ, ಗ್ರಾಮದಲ್ಲಿ ಸಾಕಷ್ಟು ಜನರು ಜ್ವರದಿಂದ ಬೆಚ್ಚಿ ಬಿದ್ದಿದ್ದಾರೆ. ಸ್ವಚ್ಛತೆ ಮಾಡಬೇಕಾದ ಗ್ರಾಮ ಪಂಚಾಯತ್ ಯೂ ಇತ್ತ ನೋಡುತ್ತಿಲ್ಲ, ಜನರ ಆರೋಗ್ಯ ವಿಚಾರಿಸಬೇಕಾದ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಇತ್ತ ನೋಡುತ್ತಿಲ್ಲ, ಇದರಿಂದ ಇಲ್ಲಿಯ ಜನ ದಿಕ್ಕು ಕಾಣದಂತಾಗಿದ್ದಾರೆ. ಗೋನವಾಟ್ಲ್ ಪಂಚಾಯತ್ ಹಾಗು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊರೊನಾ ಮಹಾಮಾರಿಯ ನಂತರ ಗುಳೆ ಹೋಗಿದ್ದ ತಾಂಡಾ ಜನರು ವಾಪಸ್ಸು ಬಂದಿದ್ದು, ಈಗ ಹತ್ತಿ, ಭತ್ತ, ಕೋಯ್ಲು ಸಂದರ್ಭವಿರುವದರಿಂದ ರಾಶಿ ಮಾಡಲು ತಾಂಡಾದಲ್ಲಿ ಉಳಿದಿದ್ದಾರೆ, ಈಗ ತಾಂಡಾದಲ್ಲಿ ಡೇಂಘಿ ನಂತಹ ಜ್ವರದಿಂದ ಜನ ಹೈರಾಣಾಗಿದ್ದಾರೆ. ಒಂದೊಂದು ಮನೆಯಲ್ಲಿ ಮೂರು ನಾಲ್ಕು ಜನರಿಗೆ ಜ್ವರ ಕಾಣಿಸಿಕೊಂಡಿದೆ. ಸಾಕಷ್ಟು ಜನ ನಿತ್ರಾಣವಾಗಿದ್ದಾರೆ. ತಕ್ಷಣ ಆರೋಗ್ಯ ಇಲಾಖೆಯುವರು ಇತ್ತ ಗಮನಿಸಿ ಆರೋಗ್ಯ ಚಿಕಿತ್ಸೆ ಮಾಡಬೇಕಾಗಿದೆ. ತಾಂಡಾದಲ್ಲಿಯ ಸ್ವಚ್ಛತೆಯನ್ನು ಮಾಡಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಂಡು ಜನರ ಆರೋಗ್ಯದ ಕಡೆ ಲಕ್ಷ್ಯ ವಹಿಸಬೇಕಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕ ಸ್ವಗ್ರಾಮ ಗೋನವಾಟ್ಲ ಅದರ ಪಕ್ಕದ ತಾಂಡಾದಲ್ಲಿಯೇ ಇಂಥ ಅವ್ಯವಸ್ಥೆ ಇರುವುದು ಸಹಜವಾಗಿ ತಾಂಡಾ ಜನ ಜನಪ್ರತಿನಿಧಿ ಹಾಗು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
Published by:
Seema R
First published:
December 7, 2020, 9:52 PM IST