ರಾಯಚೂರಿನ ತುಪ್ಪದೂರಿನಲ್ಲಿ ಇಂದಿಗೂ ಸೂಕ್ತ ರಸ್ತೆಯಿಲ್ಲದೆ ಎತ್ತಿನ ಗಾಡಿಯಲ್ಲೇ ಪ್ರಯಾಣ

ಸುಮಾರು 650 ಜನಸಂಖ್ಯೆಯನ್ನು ಹೊಂದಿರುವ ತುಪ್ಪದೂರಿನಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡಬೇಕು. ಇನ್ನು ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದರೂ ಸಾಧ್ಯವಾಗದು.

ರಾಯಚೂರಿನಲ್ಲಿ ಎತ್ತಿನ ಗಾಡಿ ಪ್ರಯಾಣ

ರಾಯಚೂರಿನಲ್ಲಿ ಎತ್ತಿನ ಗಾಡಿ ಪ್ರಯಾಣ

  • Share this:
ರಾಯಚೂರು (ಜ. 2): ರಾಯಚೂರು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ. ಕೇಂದ್ರ ಸರ್ಕಾರ ಈ ಜಿಲ್ಲೆಯು ಹಿಂದುಳಿದಿದ್ದರಿಂದ ಮಹಾತ್ವಾಕಾಂಕ್ಷಿ ಜಿಲ್ಲೆಯೆಂದು ಘೋಷಿಸಿ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಇವುಗಳು ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತವೊ ಗೊತ್ತಿಲ್ಲ. ರಾಯಚೂರು ಜಿಲ್ಲೆ ಅತ್ಯಂತ ಹಿಂದುಳಿದಿದೆ ಎಂಬುವುದಕ್ಕೆ ಸಾಕ್ಷಿಯನ್ನು ಸಿರವಾರ ತಾಲೂಕಿನ ತುಪ್ಪದೂರು ಒದಗಿಸುತ್ತದೆ. ಸಿರವಾರ ತಾಲೂಕಿನ ತುಪ್ಪದೂರು ಕುಗ್ರಾಮಕ್ಕೆ ಇಲ್ಲಿಯವರೆಗೂ ಸರಿಯಾದ ರಸ್ತೆ ಇಲ್ಲ. ಸುಮಾರು 6 ಕಿ.ಮೀ ದೂರವನ್ನು ಮಣ್ಣಿನ ರಸ್ತೆಯಲ್ಲಿಯೇ ಜನರು ಸಂಚರಿಸಬೇಕು. ಗುಂಡಿ ಬಿದ್ದ, ಡಾಂಬರ್ ಇಲ್ಲದ ಕಚ್ಚಾ ರಸ್ತೆಯಿಂದಾಗಿ ಇಲ್ಲಿಗೆ ಬಸ್ ಸೇವೆಯನ್ನು ನೀಡಿಲ್ಲ.

ಮೊದಲೇ ರಸ್ತೆ ಇಲ್ಲದ ಕಾರಣ ಇಲ್ಲಿ ಬಸ್ ಸೇವೆಯನ್ನು ಆಶಿಸಲು ಸಾಧ್ಯವೇ ಇಲ್ಲ.  ಸುಮಾರು 650 ಜನಸಂಖ್ಯೆಯನ್ನು ಹೊಂದಿರುವ ತುಪ್ಪದೂರಿನಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡಬೇಕು. ಇನ್ನು ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದರೂ ಸಾಧ್ಯವಾಗದು. ಈ ಸಮಯದಲ್ಲಿ ಎತ್ತಿನ ಬಂಡಿಯಲ್ಲಿಯೇ ಅವರನ್ನು ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ. ತುಪ್ಪದೂರಿನಿಂದ ನೀರಮಾನವಿಗೆ 10 ಕಿಮೀ ದೂರ, ತುಪ್ಪದೂರಿನಿಂದ ಮಾಚನೂರಿಗೆ 6 ಕಿಮೀ ದೂರವಿದೆ. ತುಪ್ಪದೂರಿನವರು ಮಾಚನೂರುವರೆಗೂ ಇದೇ ಮಣ್ಣಿನ ರಸ್ತೆಯಲ್ಲಿ ಹೋಗಬೇಕು. ಇಂತಹ ಕುಗ್ರಾಮದಲ್ಲಿ ರಸ್ತೆ ಇಲ್ಲದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹಲವು ಬಾರಿ ರೋಗಿಗಳು ಸಾವನ್ನಪ್ಪಿದ್ದಾರೆ.

ಈ ಗ್ರಾಮದಿಂದ ಮಾಚನೂರಿಗೆ ಹೈಸ್ಕೂಲ್, ಮಾನವಿಗೆ ಕಾಲೇಜಿಗೆ ಹೋಗಬೇಕು. ಬಸ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಹೋಗಬೇಕು. ಕೆಲವರು ಏನೇ ಕಷ್ಟವಾಗಲಿ ಓದಿಸುವ ಆಸೆ ಇದ್ದವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಾಲೆ ಕಾಲೇಜಿಗೆ ಕಳುಹಿಸಿದರೆ ಅರ್ಧಕ್ಕಿಂತ ಹೆಚ್ಚು ಜನ ಹೈಸ್ಕೂಲಿಗೆ ಹೋಗುವ ಮುನ್ನವೇ ಓದಿಗೆ ಗುಡ್ ​ಬೈ ಹೇಳುತ್ತಿದ್ದಾರೆ. ಶಾಲೆ, ಕಾಲೇಜಿಗೆ ಗುಡ್​ಬೈ ಹೇಳುವುದರಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿದ್ದು ಈ ಗ್ರಾಮದಲ್ಲಿ ಶಿಕ್ಷಣ ಅಷ್ಟಕಷ್ಟೆ ಎನ್ನುವಂತಾಗಿದೆ. ತುಪ್ಪದೂರಿಗೆ ಸರಿಯಾದ ರಸ್ತೆ ನಿರ್ಮಿಸಿ, ಶಾಲೆ ಕಾಲೇಜು ಸಮಯ ಅಥವಾ ದಿನಕ್ಕೆ ಒಂದೆರಡು ಬಾರಿ ಬಸ್ ಗಳ ಓಡಾಟ ಮಾಡುವಂತೆ ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಈ ಗ್ರಾಮಸ್ಥರ ಮನವಿಯನ್ನು ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ ಪಾಟೀಲರಾಗಲಿ, ಶಾಸಕ ರಾಜಾ ವೆಂಕಟಪ್ಪ ನಾಯಕರಾಗಲಿ, ಸಂಸದ ರಾಜಾ ಅಮರೇಶ್ವರ ನಾಯಕರಾಗಲಿ, ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಪಂಚಾಯತಿ ಸಿಇಒ ಆಗಲಿ ಗ್ರಾಮದ ಸಮಸ್ಯೆಗೆ ಸ್ಪಂದಿಸಿಲ್ಲ. ಪ್ರತಿ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ ಮತ ಹಾಕಿಸಿಕೊಂಡು ಗೆದ್ದು ಹೋಗುವ ಜನಪ್ರತಿನಿಧಿಗಳು ಇತ್ತ ಕಣ್ಣೆತ್ತಿ ನೋಡುವುದಿಲ್ಲ, ನಮ್ಮೂರಿಗೆ ರಸ್ತೆಯಾಗುತ್ತದೆ, ನಮ್ಮೂರಿಗೂ ಬಸ್ ಬರುತ್ತೆ ಎಂದು ಕಾಯುವುದು ಈ ಗ್ರಾಮದ ಜನರಿಗೆ ನಿತ್ಯ ಕನಸಾಗಿದೆ. ಇಂದಿಗೂ ಕುಗ್ರಾಮವಾಗಿರುವ ಈ ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳಾಗಲಿ ಸ್ಪಂದಿಸುವರೇ ಎಂದು ಕಾದು ನೋಡಬೇಕು.
Published by:Sushma Chakre
First published: