ದೇಶದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಪಡೆದ ರಾಯಚೂರು ಅಭಿವೃದ್ಧಿಗೆ ಆಸಕ್ತಿ ತೋರದ ಜಿಲ್ಲಾ ಉಸ್ತುವಾರಿ ಸಚಿವರು

ತವರು ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಇರುವುದಕ್ಕೆ ಇಲ್ಲಿಯ ಸ್ಥಳೀಯ ಜನಪ್ರತಿನಿಧಿಗಳ ಗುಂಪುಗಾರಿಕೆ ಕಾರಣ ಎನ್ನಲಾಗಿದೆ. ಜಿಲ್ಲೆಯವರು ಸಚಿವರಾದರೆ ತಮ್ಮ ಪ್ರತಿಷ್ಠೆಗೆ ಕುಂದು ಬರುತ್ತೆ ಎನ್ನುವ ಕಾರಣಕ್ಕೆ ಜಿಲ್ಲೆಯವರನ್ನು ಸಚಿವರನ್ನಾಗಿ ಮಾಡುವಾಗ ಅಡ್ಡಗಾಲು ಹಾಕುವ ಪರಿಪಾಠವಿದೆ ಎನ್ನಲಾಗಿದೆ.

ಜಿಲ್ಲಾಉಸ್ತುವಾರಿ ಸಚಿವರ ಕಚೇರಿ

ಜಿಲ್ಲಾಉಸ್ತುವಾರಿ ಸಚಿವರ ಕಚೇರಿ

  • Share this:
ರಾಯಚೂರು(ಫೆ.18): ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಪಡೆದಿರುವ ರಾಯಚೂರು ಅಭಿವೃದ್ಧಿ ಯಾರಿಗೂ ಬೇಡವಾಗಿದೆ. ಇಲ್ಲಿನ ಸಮಗ್ರ ಅಭಿವೃದ್ಧಿಗಾಗಿ ನೇಮಕಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರ ಸ್ವೀಕರಿಸಿ, ಆರು ತಿಂಗಳಾದರೂ ಇಲ್ಲಿಗೆ ಭೇಟಿ ನೀಡಿರುವುದು ಕೇವಲ ಆರು ಬಾರಿ ಮಾತ್ರ. ಇಲ್ಲಿನ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿರುವ ಆರೋಗ್ಯ ಸಚಿವ ಶ್ರೀರಾಮುಲು ಒಂದು ರೀತಿ ಜಿಲ್ಲೆಗೆ ಅತಿಥಿ ಸಚಿವರಾಗಿದ್ದಾರೆ.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ನಗರದಲ್ಲಿ  ಕಚೇರಿಯನ್ನೆನೋ ತೆರೆದಿದ್ದಾರೆ, ಆದರೆ, ಒಮ್ಮೆಯೂ ಅವರು ಇಲ್ಲಿಗೆ ಬಂದಿಲ್ಲ. ರಾಯಚೂರು ಜಿಲ್ಲೆಯಲ್ಲಿ ಶೈಕ್ಷಣಿಕ, ಸಾಮಾಜಿಕ ಆರ್ಥಿಕವಾಗಿ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದು, ಸಮಸ್ಯೆಗಳು ತಾಂಡವವಾಡುತ್ತಿವೆ. ಅಷ್ಟೇ ಅಲ್ಲದೇ ನೆರೆಯಿಂದ‌ ನದಿ ಪಾತ್ರದ ಜನರು ತತ್ತರಿಸಿ, ಈಗಲೂ ಪರಿತಪಿಸುತ್ತಿದ್ದಾರೆ. ಈ ಸಮಯದಲ್ಲಿ ಜಿಲ್ಲೆಯ ಧ್ವನಿಯಾಗಬೇಕಾಗಿದ್ದ ಶ್ರೀರಾಮುಲು ಅವರು ಜಿಲ್ಲೆಯ ಕಡೆ ಸುಳಿಯದೆ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀರಾಮುಲು ಅವರು, ಉಪಚುನಾವಣೆ ಇತ್ತು, ಬೇರೆ ಬೇರೆ ಕಾರಣಕ್ಕಾಗಿ ಜಿಲ್ಲೆಗೆ ಬರುವುದಕ್ಕೆ ಆಗಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡುತ್ತಾರೆ.

ಇದನ್ನೂ ಓದಿ : ಎಗ್ಗಿಲ್ಲದಂತೆ ಸಾಗಿದ ಅಕ್ರಮ ಕಲ್ಲು ಗಣಿಗಾರಿಕೆ; ಜೀವ ಭಯದಲ್ಲಿ ಬದುಕುತ್ತಿದ್ದಾರೆ ಮಾನ್ವಿ ಪಟ್ಟಣದ ಜನ

ಸಚಿವರು ಈ ಹೇಳಿಕೆ ನೀಡಿ 2 ತಿಂಗಳಾಗುತ್ತಾ ಬಂತು. ಈ ಮಧ್ಯೆ ಅವರು ಜಿಲ್ಲೆಗೆ ಬಂದಿದ್ದು ಜನವರಿ 26ರ ಗಣರಾಜ್ಯೋತ್ಸವದ ಧ್ವಜಾರೋಹಣದಂದು. ಅವರು ಉಸ್ತುವಾರಿ ಸಚಿವರಾದ ತಕ್ಷಣ ನೆರೆ ಕುರಿತು ಒಮ್ಮೆ ಸಭೆ ನಡೆಸಿದ್ದರು. ಮತ್ತೊಮ್ಮೆ ತ್ರೈಮಾಸಿಕ ಕೆಡಿಪಿ ಸಭೆ, ಒಂದು ಬಾರಿ ಮಸ್ಕಿ, ಲಿಂಗಸಗೂರು ಮತ್ತೆ ಡಿಸೆಂಬರ್ 24 ಹಾಗೂ ಜನವರಿ 26 ರಂದು ಮಾತ್ರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಉಸ್ತುವಾರಿ ವಹಿಸಿಕೊಂಡ ನಂತರ ಆರು ತಿಂಗಳಲ್ಲಿ ಆರು ಬಾರಿ‌ ಮಾತ್ರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರ ಗೆದ್ದ ನಂತರ ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ಈ ಹಿಂದೆಯೂ ಕೂಡ ರಾಯಚೂರು ಜಿಲ್ಲೆಗೆ ಹೊರಗಿನವರೆ ಉಸ್ತುವಾರಿ ಸಚಿವರಾಗಿದ್ದರು. ಅವರ ಸಹ ಜಿಲ್ಲೆಗೆ ಅಪರೂಪಕ್ಕೊಮ್ಮೆ ಭೇಟಿ ನೀಡುತ್ತಿದ್ದರು. ಇದೇ ಪರಂಪರೆಯನ್ನು ಸಚಿವ ಶ್ರೀರಾಮುಲು ಅವರು ಸಹ ಮುಂದುವರಿಸಿದ್ದಾರೆ. ಡಿಸೆಂಬರ್ 24 ರಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಂಪರ್ಕ ಕಚೇರಿ ಆರಂಭಿಸಿದ್ದು, ಅಧಿಕಾರಿಯನ್ನು ಸಹ ನೇಮಿಸಲಾಗಿದೆ. ಸಾರ್ವಜನಿಕರು ಅಹವಾಲು ಸಲ್ಲಿಸಿದರೂ ಸಚಿವರು ಇಲ್ಲದೆ ಇರುವುದರಿಂದ ಈ ಕಚೇರಿ ಇದ್ದು ಇಲ್ಲದಂತೆ ಇದೆ.

ಈಗ ಸಚಿವ ಶ್ರೀರಾಮುಲು ಅವರು ಮಗಳ ಮದುವೆ ಸಿದ್ದತೆಯಲ್ಲಿದ್ದು, ಮಗಳ ಮದುವೆಯಾಗುವವರೆಗೂ ಜಿಲ್ಲೆಗೆ ಬರುವುದು ಅನುಮಾನ ಎನ್ನಲಾಗಿದೆ, ರಾಯಚೂರು ಜಿಲ್ಲೆಯಲ್ಲಿ ಈ ಮೊದಲು ಜಿಲ್ಲೆಯನ್ನು ಒಬ್ಬರು ಇಲ್ಲವೇ ಇಬ್ಬರು ಸಚಿವರಾಗಿ ಪ್ರತಿನಿಧಿಸುತ್ತಿದ್ದರು. 2008 ರಿಂದ ಇಲ್ಲಿಯವರೆಗೂ ಜಿಲ್ಲೆಯವರು ಇಬ್ಬರು ಮಾತ್ರ ಸಚಿವರಾಗಿದ್ದಾರೆ. ಅದರಲ್ಲಿ ಶಿವನಗೌಡ ನಾಯಕ ಸಚಿವರಾದರೂ ರಾಯಚೂರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರಲಿಲ್ಲ, ಆದರೆ, ಕುಮಾರಸ್ವಾಮಿ ಸರಕಾರದಲ್ಲಿ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಮಾತ್ರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.

ಇದನ್ನೂ ಓದಿ :  ಕುತೂಹಲ ಮೂಡಿಸಿದ ಶ್ರೀರಾಮುಲು-ಅಮಿತ್ ಶಾ ಭೇಟಿ; ನಡೆದ ಚರ್ಚೆಯಾದರೂ ಏನು?

ಯಡಿಯೂರಪ್ಪ, ಜಗದೀಶ ಶೆಟ್ಟರ್, ಸದಾನಂದಗೌಡ ಸರಕಾರದಲ್ಲಿ ಆನಂದ್ ಆಸ್ನೋಟಿಕರ್, ಸಿ ಎಂ ಉದಾಸಿ, ಶ್ರೀರಾಮುಲು ಉಸ್ತುವಾರಿ ವಹಿಸಿಕೊಂಡಿದ್ದರು, ಸಿದ್ದರಾಮಯ್ಯ ಸರಕಾರದಲ್ಲಿ ತನ್ವೀರ್ ಸೇಠ, ಹೆಚ್.ಎಂ.ರೇವಣ್ಣ ಉಸ್ತುವಾರಿ  ವಹಿಸಿಕೊಂಡಿದ್ದರು. ಜಿಲ್ಲೆಗೆ ಹೊರಗಿನವರೇ ಸಚಿವರಾಗಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಹಿನ್ನೆಡೆಯಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

ತವರು ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಇರುವುದಕ್ಕೆ ಇಲ್ಲಿಯ ಸ್ಥಳೀಯ ಜನಪ್ರತಿನಿಧಿಗಳ ಗುಂಪುಗಾರಿಕೆ ಕಾರಣ ಎನ್ನಲಾಗಿದೆ. ಜಿಲ್ಲೆಯವರು ಸಚಿವರಾದರೆ ತಮ್ಮ ಪ್ರತಿಷ್ಠೆಗೆ ಕುಂದು ಬರುತ್ತೆ ಎನ್ನುವ ಕಾರಣಕ್ಕೆ ಜಿಲ್ಲೆಯವರನ್ನು ಸಚಿವರನ್ನಾಗಿ ಮಾಡುವಾಗ ಅಡ್ಡಗಾಲು ಹಾಕುವ ಪರಿಪಾಠವಿದೆ ಎನ್ನಲಾಗಿದೆ. ಜನಪ್ರತಿನಿಧಿಗಳ ಪ್ರತಿಷ್ಠೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.
First published: