ರಾಯಚೂರು ಐಐಐಟಿ ಲೊಗೊದಲ್ಲಿ ಕೊನೆಗೂ ಬಂತು ಕನ್ನಡ; ಆದ್ರೆ, ಹಿಂದಿ ಹೇರಿಕೆಗೆ ಅಪಸ್ವರ

ರಾಯಚೂರು ಐಐಐಟಿ ಶಿಕ್ಷಣ ಸಂಸ್ಥೆಯ ಲೋಗೊದಲ್ಲಿ ಕನ್ನಡದ ಬದಲು ತೆಲುಗು ಇತ್ತು. ತೀವ್ರ ವಿರೋಧದ ನಂತರ ಕನ್ನಡ ಸೇರಿಸಲಾಗಿದೆ. ಜೊತೆಗೆ ಹಿಂದಿಯನ್ನೂ ಒಳಗೊಳ್ಳಲಾಗಿದೆ. ಈಗ ಹಿಂದಿ ಹೇರಿಕೆ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ.

ಐಐಐಟಿ ರಾಯಚೂರು

ಐಐಐಟಿ ರಾಯಚೂರು

  • Share this:
ರಾಯಚೂರು: ಹಲವು ಹೋರಾಟ ಮತ್ತು ವಿರೋಧಗಳ ಬಳಿಕ ಕೊನೆಗೂ ಹೈದರಾಬಾದ್ ನಗರದಲ್ಲಿ‌ ಕಾರ್ಯನಿರ್ವಹಿಸುತ್ತಿರೋ ರಾಯಚೂರು ಐಐಐಟಿ ಸಂಸ್ಥೆಯ (IIIT Raichur) ಲೋಗೋದಲ್ಲಿ ಕೊನೆಗೂ ಕನ್ನಡ ಭಾಷೆಗೆ ಸ್ಥಾನ ದೊರೆತಿದೆ. ಐಐಐಟಿ ರಾಯಚೂರು ಸಂಸ್ಥೆಯ ಲೋಗೋದಲ್ಲಿ (IIIT Raichur Institution Logo) ಕನ್ನಡಕ್ಕೆ ಸ್ಥಾನ ನೀಡಿದ್ದರಿಂದ ಜಿಲ್ಲೆಯ ಜನರಲ್ಲಿ‌ಆಶಾ ಭಾವನೆ ಮೂಡಿದೆ. ಆರಂಭದಲ್ಲಿ‌ ಲೋಗೋದಲ್ಲಿ ತೆಲುಗು ಭಾಷೆಗೆ ಆದ್ಯತೆ ನೀಡಿ ಸಂಸ್ಥೆಯು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ವೇಳೆ, ಕನ್ನಡ ಭಾಷೆ ಜೊತೆಗೆ ಹಿಂದಿ ಭಾಷೆಯನ್ನ (Hindi Impostion) ಲೋಗೊದಲ್ಲಿ ಅಳವಡಿಸಿಕೊಂಡಿರುವುದು ಅಸಮಾಧಾನಕ್ಕೂ ದಾರಿ ಮಾಡಿದೆ.

ಕರ್ನಾಟಕದಲ್ಲಿ ಸ್ಥಾಪನೆಯಾದ ಐಐಐಟಿ (IIIT- Indian Institute of Information Technology) ಶಿಕ್ಷಣ ಸಂಸ್ಥೆಯು ಮೊದಲಿಗೆ ಕನ್ನಡ ಭಾಷೆ ಮತ್ತು ಕನ್ನಡತ್ವವನ್ನು ಕಡೆಗಣಿಸಿದ್ದರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಇತ್ತೀಚೆಗೆ ಬಿಡುಗಡೆ ಮಾಡಲಾದ ಸಂಸ್ಥೆಯ ಲೋಗೋದಲ್ಲಿ ಕನ್ನಡವನ್ನೇನೋ ಬಳಕೆ‌ ಮಾಡಿದೆ. ಆದರೆ ಕೇಂದ್ರ ಸರಕಾರದ ಹಿಂದಿ ಹೇರಿಕೆಗೆ ವಿರೋಧಿಸುತ್ತಿರುವ ಕನ್ನಡಿಗರ ಆಕ್ರೋಶಕ್ಕೆ ಕಿಚ್ಚು ಹಚ್ಚುವಂತೆ ಹಿಂದಿ ಭಾಷೆಯನ್ನು ಲೋಗೋದಲ್ಲಿ ಬಳಸಿರುವುದು ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಲೋಗೋದಲ್ಲಿ ಕನ್ನಡ: ಅಂತಿಮವಾಗಿ ಲೋಗೋವನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವ ಸಂಸ್ಥೆ ಕನ್ನಡದಲ್ಲೇ “ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರು” ಎಂದು ಬರೆದುಕೊಂಡಿದ್ದು ಇದೀಗ ಸ್ವಲ್ಪ ಆಕ್ರೋಶ ಶಮನ ಕಡಿಮೆ ಆಗಿದೆ. ಗಡಿ ಭಾಗದ ಜಿಲ್ಲೆಯಲ್ಲಿ ಅನ್ಯ ಭಾಷೆಗಳ ಪ್ರಭಾವ ಇದೆ. ಕನ್ನಡ ಭಾಷೆ ಬಳಸದ ಐಐಐಟಿ ವಿರುದ್ದ ಜನ ಕೆಂಡಾಮಂಡಲವಾಗಿದ್ದರು. ಇದನ್ನ ಮನಗಂಡ ಸಂಸ್ಥೆ ಹೊಸದಾಗಿ ಬಿಡುಗಡೆ ಮಾಡಿದ ಲೋಗೋದಲ್ಲಿ ಕನ್ನಡ ಬಳಕೆಗೆ ಮುಂದಾಗಿದೆ.

ಇದನ್ನೂ ಓದಿ: ಜ.25ರ ವೇಳೆಗೆ ರಾಜ್ಯದಲ್ಲಿ Corona ಸ್ಫೋಟ ಸಾಧ್ಯತೆ: ಶುಕ್ರವಾರದವರೆಗೆ ಕಾದು ನೋಡಲು ಮುಂದಾದ ಸರ್ಕಾರ

ಇನ್ನು ಐಐಐಟಿ ರಾಯಚೂರು ಲೋಗೋದಲ್ಲಿ ಹಿಂದಿ ಭಾಷೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರದ ಒತ್ತಡ ಕಾರಣ ಎನ್ನಲಾಗಿದೆ.

ಧಾರವಾಡಕ್ಕೆ ಐಐಟಿ ಮಂಜೂರು:

ರಾಯಚೂರು ಜಿಲ್ಲೆಯಲ್ಲಿ ಐಐಟಿ (IIT- Indian Institute of Technology) ಸ್ಥಾಪಿಸುವಂತೆ 2017 ರಲ್ಲಿ ಜಿಲ್ಲೆಯ ಜನ ಹೋರಾಟ ನಡೆಸಿ ಸರಕಾರದ ಗಮನ ಸೆಳೆದಿದ್ದರು. ಆದರೆ ಅದೃಷ್ಟವಶಾತ್ ಐಐಟಿ‌ ಧಾರವಾಡಕ್ಕೆ ಮಂಜೂರಾಯಿತು. ರಾಯಚೂರು ಜಿಲ್ಲೆಯ ಜನರಲ್ಲಾದ ಅಸಮಾಧಾನ ಶಮನಕ್ಕೆ ರಾಯಚೂರಿಗೆ ಐಐಐಟಿ ಮಂಜೂರಾಯಿತು. 2019 ರಲ್ಲಿ ಅಂತಿಮವಾಗಿ ಸಂಸ್ಥೆ ಆರಂಭಗೊಂಡರೂ ಹೈದರಾಬಾದ್ ನಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ರಾಯಚೂರು ಐಐಐಟಿ ಪೂರ್ಣ ಪ್ರಮಾಣದಲ್ಲಿ ರಾಯಚೂರಿನಲ್ಲಿ ಕಾರ್ಯಾರಂಭ ಮಾಡಿಲ್ಲ. ಸೌಲಭ್ಯ ಓದಗಿಸುವಲ್ಲಿ ಸರಕಾರ ವಿಳಂಬ ನೀತಿ ಅನುಸರಿಸಿದ್ದು, ಜಿಲ್ಲೆಯ ಜನರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕನ್ನಡದ ವಿಚಾರದಲ್ಲಿ ಎಷ್ಟೋ ಸಲ ದನಿ ಎತ್ತುವುದೇ ಇಲ್ಲ: ನಾರಾಯಣಗೌಡಗೆ Pratap Simha ತಿರುಗೇಟು

ಒಟ್ಟಾರೆಯಾಗಿ ಟ್ವಿಟ್ಟರ್ ನಲ್ಲಿ ರಾಯಚೂರು ಐಐಐಟಿ ವಿರುದ್ಧ ನೆಟ್ಟಿಗರು ಮುಗಿಬಿದ್ದ ಪರಿಣಾಮ‌, ಕನ್ನಡ ಕಡೆಗಣಿಸಿ ಲೋಗೋದಲ್ಲಿ ತೆಲುಗು ಭಾಷೆ ಬಳಕೆ ಮಾಡಿದ್ದನ್ನ ಸರಿಪಡಿಸಿಕೊಂಡು ಮತ್ತೊಮ್ಮೆ ಕನ್ನಡ ಭಾಷೆಗೆ ಸ್ಥಾನ ನೀಡಿದ್ದಾರೆ. ಭಾಷೆ ಬಗ್ಗೆ ಎಚ್ಚೆತ್ತ ಐಐಐಟಿ ಸಂಸ್ಥೆ ಆದಷ್ಟು ಬೇಗ ರಾಯಚೂರು ನಗರದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆಯೂ ಎಚ್ಚೆತ್ತರೆ ಒಳಿತು ಎಂಬುದು ಕನ್ನಡ ಭಾಷಾ ಪ್ರೇಮಿಗಳ, ಹಾಗೂ ಜಿಲ್ಲೆಯ ಹೋರಾಟಗಾರರ ಒತ್ತಾಯವಾಗಿದೆ.

ವರದಿ: ವಿಶ್ವನಾಥ್ ಹೂಗಾರ್
Published by:Vijayasarthy SN
First published: