ತನ್ನ ಜಮೀನಿನಲ್ಲಿ ದೇವೇಗೌಡರ ಪ್ರತಿಮೆ ಸ್ಥಾಪಿಸಿದ ರಾಯಚೂರಿನ ರೈತ

ರಾಯಚೂರು ಜಿಲ್ಲೆಯ ಗಾಣದಾಳದ ರೈತ ಪ್ರಭುಗೌಡ ಪಾಟೀಲ ಎಂಬುವವರು ತಮ್ಮ ಜಮೀನಿನಲ್ಲಿ ಸುಮಾರು 5 ಲಕ್ಷ ರೂ. ಖರ್ಚು ಮಾಡಿ ಸ್ಥಾಪಿಸಿದ ದೇವೇಗೌಡರ ಮೂರ್ತಿಯನ್ನು ಇಂದು ದೇವೇಗೌಡರೇ ವೀಕ್ಷಿಸಿ ಅಭಿಮಾನಿ ರೈತನೊಂದಿಗೆ ಸಂವಾದ ನಡೆಸಲಿದ್ದಾರೆ.

ಹೆಚ್​ಡಿ ದೇವೇಗೌಡರ ಪ್ರತಿಮೆ

ಹೆಚ್​ಡಿ ದೇವೇಗೌಡರ ಪ್ರತಿಮೆ

  • Share this:
ರಾಯಚೂರು: ರಾಯಚೂರು ಜಿಲ್ಲೆಯು ಕೃಷ್ಣಾ ಹಾಗೂ ತುಂಗಾ-ಭದ್ರಾ ನದಿಗಳ ಮಧ್ಯೆ ಇರುವ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ಮೊದಲು ನೀರಾವರಿಯಿಂದ ದೂರವಾಗಿತ್ತು. ಅದರಲ್ಲಿ ಪಕ್ಕದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ದೇವದುರ್ಗ ಹಾಗೂ ಲಿಂಗಸಗೂರು ತಾಲೂಕಿನಲ್ಲಿ ನೀರಾವರಿ ಸೌಲಭ್ಯವಿರಲಿಲ್ಲ. ಇಲ್ಲಿ ನಾರಾಯಣಪುರ ಜಲಾಶಯ ನಿರ್ಮಿಸಿ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದ್ದರೂ ಸಂಪೂರ್ಣವಾಗಿಲ್ಲ. ಈ ಮಧ್ಯೆ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ಮಹತ್ವದ ನಿರ್ಧಾರದಿಂದಾಗಿ ದೇವದುರ್ಗ ತಾಲೂಕು ನೀರಾವರಿ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ಈ ತಾಲೂಕಿನ ಜನತೆ ದೇವೇಗೌಡರಿಗೆ ಅಭಾರಿಯಾಗಿದ್ದಾರೆ. ಅದರಲ್ಲಿಯೂ ಕೆಲವು ರೈತರು ದೇವೇಗೌಡರನ್ನು ದೇವರು ಎಂಬಂತೆ ಆರಾಧಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಗಾಣದಾಳದ ರೈತ ಪ್ರಭುಗೌಡ ಪಾಟೀಲ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮದೇ ಜಮೀನಿನಲ್ಲಿ ದೇವೇಗೌಡರ ಪ್ರತಿಮೆ ಸ್ಥಾಪಿಸಿದ್ದಾರೆ.

ಸುಮಾರು 5 ಲಕ್ಷ ರೂ. ಖರ್ಚು ಮಾಡಿ ಸ್ಥಾಪಿಸಿದ ದೇವೇಗೌಡರ ಮೂರ್ತಿಯನ್ನು ಇಂದು ಸ್ವತಃ ದೇವೇಗೌಡರೇ ವೀಕ್ಷಿಸಿ ಅಭಿಮಾನಿ ರೈತನೊಂದಿಗೆ ಸಂವಾದ ನಡೆಸಲಿದ್ದಾರೆ. ಮೂರ್ತಿ ಸ್ಥಾಪಿಸಿರುವ ಕುರಿತು ರೈತ ಪ್ರಭುಗೌಡ ಪಾಟೀಲ್, ದೇವೇಗೌಡರು ನಮಗೆ ತಂದೆಯಾಗಿ ಬಂದಿದ್ದಾರೆ. ಅವರು ಕೈಗೊಂಡ‌ ನಿರ್ಧಾರದಿಂದಾಗಿ ಈಗ ನಮ್ಮ ಜಮೀನು ನೀರಾವರಿ ಪ್ರದೇಶಕ್ಕೊಳಪಟ್ಟಿದೆ. 1996ರಲ್ಲಿ ನಾರಾಯಣಪುರ ಬಲದಂಡೆ ನಾಲೆ ನಿರ್ಮಾಣ ಕಾರ್ಯ ಆರಂಭವಾಗಿ 2003ಕ್ಕೆ ದೇವದುರ್ಗ ತಾಲೂಕಿನ ರೈತರ ಭೂಮಿಗೆ ನೀರು ಹರಿದಿದೆ ಎಂದಿದ್ದಾರೆ.

ನೀರಾವರಿ ಇಲ್ಲದ ಪ್ರದೇಶವಾಗಿದ್ದ ದೇಶದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಾಗಿರುವ ದೇವದುರ್ಗಾ ತಾಲೂಕಿನಲ್ಲಿ ಜನರಿಗೆ ಕೆಲಸವಿಲ್ಲದೆ ಇರುವುದರಿಂದ ಗುಳೆ ಹೋಗುತ್ತಿದ್ದರು. ಜನರಿಗೆ ಊಟಕ್ಕೂ ಪರದಾಡುವಂಥ ಸ್ಥಿತಿ ಇತ್ತು. ಆದರೆ, ನೀರಾವರಿಯಿಂದಾಗಿ ಇಲ್ಲಿಯ ಜನಕ್ಕೆ ಕೂಲಿ ಸಿಗುತ್ತಿದೆ. ಹಸಿವಿನ ಸಮಸ್ಯೆ ಸ್ವಲ್ಪ ಬಗೆಹರಿದಿದೆ ಎಂದಿದ್ದಾರೆ. ಅಲ್ಲದೆ, ನಮ್ಮ ಭೂಮಿಗೆ ನೀರು ನೀಡಿರುವ ದೇವೇಗೌಡರು ನಮ್ಮ ಪಾಲಿನ ದೇವರಾಗಿದ್ದು, ಅವರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಈ ಮೂರ್ತಿ ಸ್ಥಾಪಿಸಲಾಗಿದೆ ಎನ್ನುತ್ತಾರೆ.

ಇದನ್ನೂ ಓದಿ: Uttarakhand Disaster: ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟ; 32 ಜನರ ಮೃತದೇಹ ಪತ್ತೆ, 197 ಮಂದಿ ನಾಪತ್ತೆ

ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾದ ನಂತರ ನಿಧಾನವಾಗಿ ಕಾಮಗಾರಿ ನಡೆಯುತ್ತಿತ್ತು. ಬಹುತೇಕ ಕಡೆ ಇನ್ನೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕೃಷ್ಣ ಎ ಹಾಗೂ ಬಿ ಸ್ಕೀಂ ಅನ್ವಯ ರಾಜ್ಯದ ತನ್ನ ಪಾಲಿನ ನೀರು ಬಳಸಿಕೊಳ್ಳಲು ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ನಾರಾಯಣಪುರ ಜಲಾಶಯದಿಂದ ಆರಂಭವಾದ ಬಲದಂಡೆ ನಾಲೆಯ ಕಾಮಗಾರಿಯೂ ಸಹ ಪೂರ್ಣಗೊಂಡಿಲ್ಲ. ಆದರೆ, ದೇವೇಗೌಡರು ಕಾಲುವೆ ನಿರ್ಮಿಸುವಾಗ ನಿಯಮಾವಳಿಗಳಿದ್ದರೂ ಅವುಗಳನ್ನು ಬಿಟ್ಟು ತುಂಡು ಗುತ್ತಿಗೆ ನೀಡಿದ್ದಾರೆ.

ತುಂಡು ಗುತ್ತಿಗೆ ನೀಡಿದ ಹಿನ್ನೆಲೆಯಲ್ಲಿ ಬೇಗನೆ ಕಾಮಗಾರಿ ಪೂರ್ಣವಾಯಿತು. ಇದರಿಂದಾಗಿ ಲಿಂಗಸಗೂರು ಹಾಗು ದೇವದುರ್ಗ ತಾಲೂಕಿಗೆ ನೀರಾವರಿ ಸೌಲಭ್ಯ ಒದಗಿದೆ. ಒಂದು ವೇಳೆ ತುಂಡು ಗುತ್ತಿಗೆ ನೀಡುವ ನಿರ್ಧಾರ ಮಾಡದಿದ್ದರೆ ಇನ್ನೂ ಈ ಕಾಮಗಾರಿ ಪೂರ್ಣಗೊಳ್ಳುತ್ತಿರಲಿಲ್ಲ. ಆಗ ವಿರೋಧದ ನಡುವೆಯೂ ತುಂಡು ಗುತ್ತಿಗೆ ನೀಡಿದ್ದರಿಂದ ಈ ಭಾಗದ ರೈತರಿಗೆ ದೇವೇಗೌಡರೆಂದರೆ ದೇವರಿದ್ದಂತೆ. ಇದೇ ಕಾರಣಕ್ಕೆ ದೇವದುರ್ಗದ ಜನರು ದೇವೇಗೌಡರ ಬಗ್ಗೆ ಅಭಿಮಾನ ಹೊಂದಿದ್ದಾರೆ. ಈ ಅಭಿಮಾನಕ್ಕೆ  ಗಾಣಾದಾಳದಲ್ಲಿ ನಿರ್ಮಾಣಗೊಂಡ ಅವರ ಪ್ರತಿಮೆ ಸಾಕ್ಷಿಯಾಗಿದೆ.
Published by:Sushma Chakre
First published: