ರಾಯಚೂರು(ಮಾ.28): ರಾಜ್ಯದಲ್ಲಿ ಕೊರೋನಾ ದೂರವಾಯಿತು, ಲಾಕ್ ಡೌನ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುತ್ತಿದೆ. ಈಗ ಏನಿದ್ದರೂ ಮೊದಲಿನಂತೆ, ಜಾತ್ರೆ, ಸಭೆ, ಸಮಾರಂಭಗಳನ್ನು ಮಾಡಬಹುದು ಎಲ್ಲಾ ಕಷ್ಟಗಳು ದೂರವಾದವು ಎಂದುಕೊಂಡು ಖುಷಿಯಾಗಿದ್ದವರಿಗೆ ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತೆ ಈಗ ಮತ್ತೆ ಕೊರೋನಾ ಅಬ್ಬರಿಸಲು ಆರಂಭಿಸಿದೆ. ಈಗಿನ ಕೊರೋನಾ ಎರಡನೇ ಅಲೆ ಶುರುವಾಗಿದೆ. ಕೊರೋನಾ ಹರಡುವ ತೀವ್ರತೆ ಅಧಿಕವಾಗಿದೆ. ಅದಕ್ಕಾಗಿ ಈಗ ಮತ್ತೆ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದರ ಹಿನ್ನಲೆಯಲ್ಲಿ ಜಾತ್ರೆ, ಉತ್ಸವಗಳು ರದ್ದಾಗಿವೆ.
ಸರಕಾರದ ಸೂಚನೆಯ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುರುಗುಂಟಾದಲ್ಲಿರುವ ಶ್ರೀಅಮರೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ಜಾತ್ರೆಯು ಈ ಬಾರಿಯೂ ರದ್ದಾಗಿದೆ.
ಗುರಗುಂಟಾದ ಬಳಿಯಲ್ಲಿರುವ ಶ್ರೀಅಮರೇಶ್ವರ ದೇವಸ್ಥಾನ ಪೌರಾಣಿಕ ಹಿನ್ನಲೆಯನ್ನು ಹೊಂದಿದೆ, ಮೂರು ಯುಗದಲ್ಲಿಯೂ ಋಷಿ ಮುನಿಗಳು ಇಲ್ಲಿ ತಪಸ್ಸು ಮಾಡಿದ್ದಾರೆ, ಅಗಸ್ತ್ಯ ಮುನಿಯು ಇಲ್ಲಿಯ ದೇವರನ್ನು ಪೂಜಿಸುವ ಉದ್ದೇಶದಿಂದ ಜಲದ ಅವಶ್ಯವಿತ್ತು. ಗುಡ್ಡ ಗಾಡಿನ ಬಂಡೆಯ ಮಧ್ಯೆ ನೀರು ಸಿಗುವುದು ದುರ್ಲಭವಾಗಿತ್ತು. ಈ ಸಂದರ್ಭದಲ್ಲಿ ಅಗಸ್ತ್ಯ ಮುನಿಯು ತಪಸ್ಸು ಮಾಡಿ ಶಿವನಿಂದ ಗಂಗೆಯನ್ನು ಭೂಮಿಗೆ ತಂದಿದ್ದಾರೆ. ಇದರಿಂದಾಗಿಯೇ ಶ್ರೀಅಮರೇಶ್ವರ ದೇವರ ಸುತ್ತಲು ನೀರು ನಿಂತಿದೆ. ದೇವರಿಗೆ ಮೇಲಗಡೆಯಿಂದ ನೀರು ಸದಾ ಹರಿದು ಬರುತ್ತಿದೆ. ಈ ನೀರು ಗಡಗಿ ಬಾವಿಯಿಂದ ಬರುತ್ತಿದ್ದ ಗುಪ್ತಗಾಮಿನಿಯಾಗಿ ಗಡಗಿ ರೂಪದ ಕಲ್ಲುಗಳ ಮಧ್ಯೆಯಿಂದ ನೀರು ಹರಿದು ಬರುತ್ತಿರುವದರಿಂದ ಇದನ್ನು ಗಡಗಿ ಬಾವಿ ಎನ್ನುತ್ತಾರೆ.
ಈ ಬಾವಿಯಿಂದ ಇಲ್ಲಿಯವರೆಗೂ ನಿರಂತರವಾಗಿ ನೀರು ಹರಿಯುತ್ತಿದೆ. ಸರ್ವ ಋತುವಿನಲ್ಲಿಯೂ ಇಲ್ಲಿ ನೀರು ಹರಿಯುತ್ತಿದೆ. ಗುರುಗಂಟಾ ಬಳಿಯಲ್ಲಿ ದೇವರ ಬೂಪ್ಪೂರ ಬಳಿಯ ಗುಡ್ಡದಲ್ಲಿರುವ ಶ್ರೀ ಅಮರೇಶ್ವರ ದೇವಸ್ಥಾನವು ಪ್ರಾಕೃತಿಕ ಸೌಂದರ್ಯ ಹೊಂದಿದೆ. ಇಲ್ಲಿಗೆ ಬರುವ ಭಕ್ತರು ದೇವರ ದರ್ಶನದೊಂದಿಗೆ ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಕಾಲಾಂತರದಲ್ಲಿ ವಿವಿಧ ರಾಜಮನೆತನದವರು ಶ್ರೀಅಮರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಾ ಬಂದಿದ್ದಾರೆ.
ನ್ಯೂಸ್ 18 ಫಲಶೃತಿ: 70 ವರ್ಷದಿಂದ ನದಿಯೊಳಗೆ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಗ್ರಾಮದ ಜನರಿಗೆ ಸೇತುವೆ ಭಾಗ್ಯ
ಗುರುಗುಂಟಾ ಹಾಗು ಗುಂತಗೋಳ ಅರಸರ ಮನೆಯ ದೇವರಾಗಿರುವ ಶ್ರೀಅಮರೇಶ್ವರ ದೇವಸ್ಥಾನವು ಈಗ ಸದ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿದೆ. ಶ್ರೀ ಅಮರೇಶ್ವರ ದೇವರ ಜಾತ್ರೆಯು ಪ್ರತಿವರ್ಷ ಹೊಳಿ ಹುಣ್ಣಿಮೆಯ ದಿನ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಅಂದು ಭವ್ಯ ಹಾಗೂ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ, ಈ ಸಂದರ್ಭದಲ್ಲಿ ಲಕ್ಷಾಂತರ ಜನ ಭಾಗಿಯಾಗಿರುತ್ತಾರೆ.
ಸಾಮಾನ್ಯ ದಿನಗಳಲ್ಲಿಯೇ ನಿತ್ಯ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ. ಇನ್ನು ಹಬ್ಬ ಹಾಗು ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರಿಸುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರವು ಜಾತ್ರೆಗಳನ್ನು ರದ್ದುಗೊಳಿಸಲು ಸೂಚನೆ ನೀಡಿದೆ. ಈ ಸೂಚನೆಯ ಹಿನ್ನಲೆಯಲ್ಲಿ ರಾಯಚೂರು ಜಿಲ್ಲಾಧಿಕಾರಿಗಳು ಶ್ರೀಅಮರೇಶ್ವರ ಜಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದು ಹೋಳಿ ಹುಣ್ಣಿಮೆ, ಇಂದೇ ರಥೋತ್ಸವ ನಡೆಯುತ್ತದೆ, ಆದರೆ ನಿನ್ನೆ ಸಂಜೆಯ ವೇಳೆ ಜಾತ್ರೆ ರದ್ದುಗೊಳಿಸಿ ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ್ದಾರೆ, ಜಾತ್ರೆಯ ಹಿನ್ನಲೆಯಲ್ಲಿ ತೇರು ರೆಡಿ ಮಾಡಿಕೊಂಡು ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಏಕಾಎಕಿಯಾಗಿ ಜಾತ್ರೆ ರದ್ದು ಮಾಡಿದ್ದರಿಂದ ಸಿದ್ದಗೊಂಡರೂ ರಥೋತ್ಸವ ನಡೆಯುವುದು ಅನುಮಾನ ಎನ್ನಲಾಗಿದೆ.
ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಜನರು ಬರುತ್ತಿರುವದರಿಂದ ಹದಿನೈದು ದಿನಗಳವರೆಗೂ ಜನರ ಪರಷೆ ಇಲ್ಲಿ ಸೇರುತ್ತಿತ್ತು, ಈ ಹಿನ್ನಲೆಯಲ್ಲಿ ಫಳಾರ, ಜಾತ್ರೆಯ ಸಂದರ್ಭದಲ್ಲಿ ಹಾಕುವ ನೂರಾರು ಅಂಗಡಿಗಳನ್ನು ಹಾಕಲಾಗಿದೆ, ಆದರೆ ಜಾತ್ರೆ ರದ್ದುಗೊಳಿಸಿದ್ದರಿಂದ ಅಂಗಡಿಯವರಿಗೆ ನಷ್ಟವಾಗಿದೆ. ಕಳೆದ ವರ್ಷ ರಥೋತ್ಸವದ ನಂತರ ಜಾತ್ರೆ ರದ್ದು ಮಾಡಿದ್ದರು ಆಗಲೂ ಅಂಗಡಿಕಾರರಿಗೆ ನಷ್ಟವಾಗಿತ್ತು.
ರಾಜಕೀಯ ಸಮಾವೇಶಗಳಿಗೆ ನಿರ್ಬಂಧ ಹೇರದ ರಾಜ್ಯ ಸರಕಾರ ಜಾತ್ರೆಗೆ ನಿರ್ಬಂಧ ಹಾಕಿರುವುದರಿಂದ ಭಕ್ತರು ನಿರಾಶಾರಾಗಿದ್ದಾರೆ, ಜಾತ್ರೆ ರದ್ದುಗೊಳಿಸಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ