news18-kannada Updated:January 19, 2021, 12:32 PM IST
ಸಾಂದರ್ಭಿಕ ಚಿತ್ರ
ರಾಯಚೂರು (ಜ. 19): ಅವರೆಲ್ಲರೂ ಮನೆಯ ಮಗಳ ಮದುವೆಯನ್ನು ಸಂಭ್ರಮದಿಂದ ಮಾಡಲು ಮನೆಯಲ್ಲಿ ಸಿದ್ದತೆ ಮಾಡಿಕೊಂಡಿದ್ದರು. ಮದುವೆಗೆ ಬಂಧು-ಬಳಗ, ಸ್ನೇಹಿತರನ್ನು ಆಹ್ವಾನಿಸುವ ಸಂಭ್ರಮ ಜೋರಾಗಿತ್ತು. ತನ್ನ ಮದುವೆಗೆ ಆಹ್ವಾನಿಸಲು ಸ್ನೇಹಿತರೊಂದಿಗೆ ಬೈಕ್ನಲ್ಲಿ ಹೋಗಿದ್ದ ಯುವತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಆಕೆಯೊಂದಿಗೆ ಇನ್ನಿಬ್ಬರು ಸಹ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಡವಿಬಾವಿಯ ರಜಿಯಾ ಬೇಗಂ ಜೊತೆಗೆ ಸಿರವಾರ ತಾಲೂಕಿನ ಮಾಡಗಿರಿಯ ಮೊಯಿನುದ್ದಿನ್ ಮದುವೆ ಇದೇ ಜ. 24ರಂದು ನಡೆಯಬೇಕಿತ್ತು. ಆದರೆ, ಮದುವೆಗೆ ಕೇವಲ 5 ದಿನ ಉಳಿದಿರುವಾಗ ಆಕೆ ಶವವಾಗಿ ಮನೆಗೆ ತಲುಪಿದ್ದಾಳೆ.
ಆಕೆಯ ಮದುವೆಗೆ ಸಿದ್ದತೆಗಳು ಪೂರ್ಣಗೊಂಡಿದ್ದವು. ಮದುವೆಗೆ ಬಂಧು-ಬಳಗವನ್ನು ಕರೆಯುವುದು ವಾಡಿಕೆ. ಅದರಂತೆ ತನ್ನ ಸ್ನೇಹಿತರನ್ನು ಮದುವೆಗೆ ಆಮಂತ್ರಿಸುವ ಉದ್ದೇಶದಿಂದ ಅಡವಿಬಾವಿಯ ಅರುಣಾಕ್ಷಿ ಹಾಗೂ ಚಿತ್ರನಾಳದ ವೀರೇಶ ಎಂಬುವವರೊಂದಿಗೆ ಬೈಕ್ ನಲ್ಲಿ ಹೊರಟಿದ್ದಳು. ಆದರೆ ವಿಧಿಯಾಟ ಬೇರೆಯೇ ಇತ್ತು. ಮದುವೆಗೆ ಆಮಂತ್ರಣ ಕೊಡಲು ಹೋದವಳು ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾಳೆ. ನಿನ್ನೆ ಸಂಜೆ ಮೂವರು ಬೈಕ್ನಲ್ಲಿ ಹೋಗುತ್ತಿದ್ದಾಗ ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ಈಶಾನ್ಯ ರಸ್ತೆ ಸಾರಿಗೆ ಡಿಪೋ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ರೈಡ್ ಮಾಡುತ್ತಿದ್ದ ವೀರೇಶ್ ಬಲವಾಗಿ ಗುದ್ದಿದ್ದಾನೆ. ಇದರಿಂದ ವೀರೇಶ, ಅರುಣಾಕ್ಷಿ ಹಾಗೂ ರಜಿಯಾ ಬೇಗಂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕುರಿ ಎಂದುಕೊಂಡು 8 ತಿಂಗಳ ಮಗುವನ್ನು ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ!
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೃತರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ರಜಿಯಾಳ ಮದುವೆಗೆ ಸಾಕ್ಷಿಯಾಗಿರುವ ಲಗ್ನಪತ್ರಿಕೆಗಳು ಸಹ ಎಲ್ಲಿ ಬೇಕೆಂದರಲ್ಲಿ ಬಿದ್ದಿದ್ದವು. ತಕ್ಷಣಕ್ಕೆ ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೊದಲು ಗುರುತು ಪತ್ತೆಯಾಗಲಿಲ್ಲ. ಲಗ್ನಪತ್ರಿಕೆಯ ಆಧಾರದಲ್ಲಿ ಪರಿಶೀಲನೆ ಮಾಡುವಾಗ ಮೃತರು ವೀರೇಶ್ ಅರುಣಾಕ್ಷಿ ಹಾಗೂ ರಜಿಯಾ ಬೇಗಂ ಎಂಬುವುದು ಗೊತ್ತಾಗಿದೆ. ಮದುವೆಯಾಗಬೇಕಿದ್ದವಳು ಶವವಾಗಿದ್ದು, ಆಕೆಯ ಸ್ನೇಹಿತರು ಒಂದೇ ಏಟಿಗೆ ಜೀವ ಕಳೆದುಕೊಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ 3 ಕುಟುಂಬಗಳ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಬೀದರ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ ಭೀಕರ ಅಪಘಾತಗಳು ಸಂಭವಿಸುತ್ತವೆ. ಅಪಘಾತಗಳನ್ನು ತಡೆಯಲು ಇಲ್ಲಿ ಸೂಚನಾ ಫಲಕವಾಗಲಿ, ಮುಂಜಾಗ್ರತೆ ವಹಿಸಲು ಸೂಚಿಸಲು ಅಲ್ಲಲ್ಲಿ ಪೊಲೀಸರ ನಿಯೋಜನೆ ಮಾಡಬೇಕಾಗಿದೆ. ಈ ರೀತಿಯ ಮುಂಜಾಗ್ರತಾ ಫಲಕಗಳು ಇಲ್ಲದೆ ಇರುವುದೇ ಈ ಘಟನೆ ಹಾಗೂ ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.
ಸ್ನೇಹಿತರು, ಬಂಧು-ಬಳಗದೊಂದಿಗೆ ನಕ್ಕು ನಲಿದು ಸಂಭ್ರಮದಿಂದ ಮದುವೆಯಾಗಿ ಹೊಸಬಾಳಿಗೆ ನಾಂದಿ ಹಾಡುವ ಸಂದರ್ಭದಲ್ಲಿ ಸಣ್ಣ ನಿರ್ಲಕ್ಷ್ಯ, ಬೈಕ್ ನಲ್ಲಿ ಮೂರು ಜನ ಹೋಗಿ, ವೇಗವಾಗಿ ಹೋಗುವಾಗ ನಿಯಂತ್ರಣ ತಪ್ಪಿದ್ದರಿಂದ ಆಕೆ ಹಾಗೂ ಇನ್ನಿಬ್ಬರ ಬದುಕು ಅಂತ್ಯಗೊಂಡಿದೆ. ಒಂದೇ ಕ್ಷಣದಲ್ಲಿ ಇನ್ನೂ ಬದುಕಿ ಬಾಳಬೇಕಾದ ಮೂವರು ಸ್ನೇಹಿತರು ದುರಂತ ಅಂತ್ಯ ಕಂಡಿದ್ದಾರೆ.
Published by:
Sushma Chakre
First published:
January 19, 2021, 12:32 PM IST