ರಾಯಚೂರಿನ ಅಂಬಾಮಠ ಹಾಗೂ ದೇವಿ ಪುರಾಣ ಮಹಾತ್ಮೆ; 350 ವರ್ಷಗಳ ಹಿಂದಿನ ದೇವಿ ಸಾಕ್ಷಾತ್ಕಾರದ ಕಥೆ

ನಾಡಹಬ್ಬ ದಸರಾ ಹಬ್ಬವನ್ನು ಅಮವಾಸ್ಯೆ ಮರುದಿನದಿಂದ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ, ಪುರಾಣ ಪ್ರವಚನಗಳೊಂದಿಗೆ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಕನ್ನಡ ನಾಡಿನಲ್ಲಿ ಚಿದಾನಂದ ಅವಧೂತರ ರಚಿಸಿರುವ ದೇವಿ ಪುರಾಣವನ್ನು ಪ್ರತಿ ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಪಠಿಸುತ್ತಾರೆ.


Updated:October 9, 2018, 5:11 PM IST
ರಾಯಚೂರಿನ ಅಂಬಾಮಠ ಹಾಗೂ ದೇವಿ ಪುರಾಣ ಮಹಾತ್ಮೆ; 350 ವರ್ಷಗಳ ಹಿಂದಿನ ದೇವಿ ಸಾಕ್ಷಾತ್ಕಾರದ ಕಥೆ
ಚಿದಾನಂದ ಅವಧೂತರ ಭಾವಚಿತ್ರ
  • Share this:
- ಶರಣಪ್ಪ ಬಾಚಲಾಪುರ, ನ್ಯೂಸ್18 ಕನ್ನಡ

ರಾಯಚೂರು: ಕನ್ನಡಿಗರ ನಾಡಹಬ್ಬವನ್ನಾಗಿ ದಸರಾ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ನಾಡಿನೆಲ್ಲೆಡೆ ವಿವಿಧ ರೀತಿಯಾಗಿ ದೇವಿ ಆರಾಧನೆ ನಡೆಯುತ್ತದೆ. ಆಯಾಯ ಸಮಾಜದವರು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಒಂದು ಕಡೆಯಾದರೆ, ಬಹುತೇಕ ಕಡೆ ದೇವಿ ಪುರಾಣವನ್ನು ಪಠಿಸುತ್ತಾರೆ. ಹದಿನೆಂಟು ಅದ್ಯಾಯಗಳನ್ನು ಹೊಂದಿರುವ ದೇವಿ ಪುರಾಣವು ಭಾಮಿನಿ ಷಟ್ಪದಿಯಲ್ಲಿದೆ. ದೇವಿ ಪುರಾಣವನ್ನು ಓದುವ ಮೂಲಕ ದೇವಿ ಆರಾಧಿಸುವವರೇ ಹೆಚ್ಚು. ಆದರೆ ದೇವಿ ಪುರಾಣ ಬರೆದಿರುವವರು ರಾಯಚೂರು ಜಿಲ್ಲೆಯಲ್ಲಿದ್ದ ಚಿದಾನಂದ ಅವಧೂತರು. ದೇವಿಯನ್ನು ಒಲಿಸಿಕೊಂಡು ದೇವಿಯ ಮುಂದೆಯೇ 18 ಅಧ್ಯಾಯಗಳ ದೇವಿ ಪುರಾಣವನ್ನು ಬರೆದಿದ್ದಾರೆ ಎನ್ನುವ ಐತಿಹ್ಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ಏನಿದು ಐತಿಹ್ಯ?

ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಅಂಬಾಮಠದ ಅರ್ಚಕರಾದ ಅವಧೂತ ಸ್ವಾಮಿಯವರು ಈ ಐತಿಹ್ಯ ಹಾಗೂ ದೇವಿ ಮಹಾತ್ಮೆಯನ್ನು ವಿವರಿಸಿದ್ದಾರೆ. ಅವರು ಹೇಳಿದ ಪ್ರಕಾರ, ಚಿದಾನಂದ ಅವಧೂತರು ಮೂಲತಃ ಈಗಿನ ಆಂಧ್ರ ಪ್ರದೇಶದ ಆದೋನಿ ತಾಲೂಕಿನ ಹರಿವಾಣದವರು. ಜಿಂಕಪ್ಪ ಎಂಬ ಮೂಲ ಹೆಸರು ಹೊಂದಿರುವ ಚಿದಾನಂದ ಅವಧೂತರು ಈಗಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯೆಯಲ್ಲಿದ್ದ ಚಿದಾನಂದ (ಕೊಂಡಯ್ಯ ಎಂಬುದು ಇವರ ಪೂರ್ವಾಶ್ರಮ ಹೆಸರು) ಎಂಬುವವರ ಬಳಿ ಶಿಕ್ಷಣ, ಯೋಗಾಭ್ಯಾಸ ಮಾಡಿತ್ತಾರೆ. ಇವರಲ್ಲಿರುವ ವಿರಕ್ತ ಭಾವನೆ ನೋಡಿ ಗುರುಗಳು ಇವರಿಗೆ ಬೀಜಾಕ್ಷರ ಉಪದೇಶ ಮಾಡಿ, ನೀನು ಸಿದ್ದಾಪುರಕ್ಕೆ ಹೋಗಪ್ಪ, ಅಲ್ಲಿ ದೇವಿಯ ಅನುಗ್ರಹವಾಗುತ್ತದೆ. ನಿನ್ನಿಂದ ದೊಡ್ಡ ಕಾರ್ಯ ಆಗುತ್ತದೆ. ಯಾವ ಪರ್ವತದಲ್ಲಿ ಸಮಾಧಿ ಸಿಗುತ್ತದೋ ಅದೇ ಸಿದ್ದಾಪುರ ಇರುತ್ತದೆ, ಹೋಗು ಎಂದು ಹೇಳಿ ಕಳುಹಿಸುತ್ತಾರಂತೆ.

ಚಿದಾನಂದ ಅವಧೂತರು ಹಲವು ಬೆಟ್ಟಗುಡ್ಡಗಳು, ಪರ್ವತಗಳನ್ನ ಹತ್ತಿ ನೋಡುತ್ತಾರೆ. ಕೊನೆಗೆ ಈ ಪರ್ವತದಲ್ಲಿ ಅವರಿಗೆ ಸಮಾಧಿ ಸಿಗುತ್ತದೆ. ಅವರಿಗೆ ಅದ್ಯಾವುದೋ ಭಾವ ಸಂಚಾರವಾದಂತಾಗುತ್ತದೆ. ಈ ಸಮಾಧಿ ಸ್ಥಳದಲ್ಲೇ 12 ವರ್ಷ ಘೋರ ತಪಸ್ಸು ಮಾಡುತ್ತಾರೆ. ಅವರಿಗೆ ದೇವಿಯ ಸಾಕ್ಷಾತ್ಕಾರ ಆಗುತ್ತದೆ. ಏನಾದರೂ ವರ ಪಡೆ ಎಂದು ದೇವಿಯೇ ಬಲವಂತಪಡಿಸಿದಾಗ, ನಾವಿಲ್ಲಿ ಭಗಾಯಿ ಸ್ಥಾಪನೆ ಮಾಡ್ತೀವಿ. ಇಲ್ಲಿ ಬರೋರಿಗೆ ಅನ್ನಸಂತರ್ಪಣೆ ಆಗಬೇಕು. ಇಷ್ಟಾರ್ಥ ನೆರವೇರಬೇಕು, ಕಷ್ಟಕಾರ್ಪಣ್ಯ ದೂರ ಮಾಡಬೇಕು ಎಂದು ವರ ಕೇಳುತ್ತಾರೆ. ದೇವಿ ತಥಾಸ್ತು ಎಂದು ಹೇಳಿ, ಆ ಭಗಳಾಚುಕ್ಕದಲ್ಲಿ ಅಂತರ್ದನರಾಗುತ್ತಾಳೆ. ಹೀಗಾಗಿ, ಈ ಸ್ಥಳಕ್ಕೆ ಬಂದವರ ಇಷ್ಟಾರ್ಥ ಸಿದ್ಧಿಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. 350 ವರ್ಷಗಳಿಂದಲೂ ಇಲ್ಲಿಗೆ ಭಕ್ತರ ದಂಡು ಹರಿದುಬರುತ್ತಲೇ ಇದೆ ಎಂದು ಅಂಬಾಮಠದ ಅರ್ಚಕರು ಹೇಳುತ್ತಾರೆ.

ಸಿಂಧನೂರು ತಾಲೂಕಿನ ಸೋಮಲಾಪುರ ಬಳಿಯಲ್ಲಿರುವ ಅಂಬಾಮಠದಲ್ಲಿರುವ ದೇವಿ ಮೂರ್ತಿಯ ಪಕ್ಕದಲ್ಲಿ ಈಶ್ವರ ಹಾಗು ನಂದಿ ವಿಗ್ರಹಗಳಿವೆ. ಶಿವನು ನಂದಿಗೆ ದೇವಿಯ ಪುರಾಣ ಹೇಳಿದ ಎಂಬುವದರ ಪ್ರತೀತಿ ಎಂದು ನಂಬಲಾಗಿದೆ. ಈಶ್ವರ ಪರಮಾತ್ಮ ಸಂಕೇತ, ನಂದಿ ಜೀವಾತ್ಮ ಸಂಕೇತ. ದೇವಿಯು ಮಾಯೆಯ ಸಂಕೇತವಾಗಿದ್ದಾಳೆ. ಜೀವಾತ್ಮನು ಪರಮಾತ್ಮನಲ್ಲಿ ಲೀನವಾಗಬೇಕಾದರೆ ಮಾಯೆ ಒಲಿಯಬೇಕು ಅವಧೂತ ಸ್ವಾಮಿಗಳು ವಿವರ ನೀಡುತ್ತಾರೆ.

ಶಿವನ ಮುಂದಿರುವ ನಂದಿ
ದೇವಿ ಪುರಾಣವು ದೇವಿಯ ಪುರಾಣವಷ್ಟೇ ಇರದೆ ದೇಹ ಪುರಾಣವಾಗಿದೆ. ಮನಸ್ಸಿನ ಪರಿಶುದ್ದತೆಗೆ ಸಾಂಕೇತಿಕ ಪ್ರತಿಮೆ ಬಳಸಿಕೊಂಡು ಚಿದಾನಂದ ಅವಧೂತರು ದೇವಿ ಪುರಾಣ ಬರೆದಿದ್ದಾರೆ, ಈ ನವರಾತ್ರಿಯ ಸಂದರ್ಭ ದೇವಿ ಪುರಾಣ ಪಠಿಸುವುದರಿಂದ ದೇಹ ಶುದ್ದಿಯಾಗುತ್ತಿದೆ ಎಂಬ ನಂಬಿಕೆ ಜನರಲ್ಲಿದೆ. ಹಾಗೆಯೇ ಈ ದೇವರಿಗೆ ಮದ್ಯ, ಮಾಂಸ ಇತ್ಯಾದಿ ಮಡಿ ಮೈಲಿಗೆ ಯಾವುದೂ ಇಲ್ಲವೆಂಬುದು ವಿಶೇಷ.

ಯಾವುದೇ ಮಡಿ ಮೈಲಿಗೆ ಇಲ್ಲದೇ ದೇವರ ಆರಾಧನೆಯಾಗುತ್ತದೆ. ಮಾಂಸಾಹಾರವನ್ನೂ ಕೊಡುತ್ತಾರೆ. ತೀರ್ಥ ಎಂದು ಹೇಳಿ ಮದ್ಯವನ್ನು ಸೇವಿಸುವುದು ಇತ್ಯಾದಿ ನಡೆಯುತ್ತದೆ. ಅದು ಆದಿಕಾಲದಿಂದ ಬಂದಿರುವ ಪರಂಪರೆ ಎಂದು ದೇವಿ ಪುರಾಣ ಓದಿದ ಭಕ್ತ ವಿಠ್ಠಪ್ಪ ಗೋರಂಟ್ಲಿ ಹೇಳುತ್ತಾರೆ.

ಹಳದಿಪ್ರಿಯೆ ದೇವಿ:
ಬಗಳಾ ದೇವಿ ಹರಿದ್ರಾಪ್ರಿಯೆಯಂತೆ. ಅಂದರೆ ಈಕೆಗೆ ಹಳದಿ ಬಣ್ಣದ ವಸ್ತುಗಳೆಂದರೆ ತುಂಬಾ ಪ್ರೀತಿ. ಈಕೆಗೆ ಉಡಿಸುವ ಸೀರೆ, ತೊಡಿಸುವ ಆಭರಣ ಎಲ್ಲವೂ ಹಳದಿಯೇ. ಅರಿಶಿಣವೆಂದರೆ ಇಷ್ಟ. ನೈವೇದ್ಯಕ್ಕೆ ಚಿತ್ರಾನ್ನ, ಕೇಸರಿಬಾತ್ ಮೊದಲಾದ ಹಳದಿ ಬಣ್ಣದ ಆಹಾರವೇ ಈಕೆಗೆ ಬೇಕು. ಹಳದಿ ಬಣ್ಣದ ಹೂಗಳಿಂದ ಮಾಡಿದ ಹಾರವೇ ಈಕೆಗೆ ಬೇಕು ಎಂದು ಅರ್ಚಕರು ತಿಳಿಸುತ್ತಾರೆ.

ಚಿದಾನಂದ ಅವಧೂತರು ಅಖಂಡ ರಾಯಚೂರು ಜಿಲ್ಲೆಯಲ್ಲಿ ಸಂಚರಿಸಿ ಇಂದಿನ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸಮಾಧಿ ಹೊಂದಿದರು. ಅವರ ಸಮಾಧಿಯು ಇಂದಿಗೂ ಕನಕಗಿರಿಯಲ್ಲಿದೆ. ಸಾಮಾನ್ಯ ವ್ಯಕ್ತಿಯಾಗಿದ್ದ ಜಿಂಕಪ್ಪ ಚಿದಾನಂದ ಅವಧೂತರಾಗಿ ಶ್ರೀದೇವಿ ಪುರಾಣ ಹಾಗು ಜ್ಞಾನ ಸಿಂಧು ಎಂಬ ಎರಡು ಮಹತ್ವ ಕೃತಿಗಳನ್ನು ಕನ್ನಡ ನಾಡಿಗೆ ನೀಡಿದ್ದು ವಿಶೇಷ. ದೇವಿ ಪುರಾಣ ಓದಿದರೆ ಲೌಕಿಕ ಕಾರ್ಯಗಳು ನೆರವೇರುತ್ತವೆ. ಜ್ಞಾನ ಸಿಂಧು ಪಠಿಸಿದ್ರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ನವದುರ್ಗೆಯರ ಪೂಜಿಸುವ ಈ ಸಂದರ್ಭದಲ್ಲಿ ಕೃತಿ ಕರ್ತೃವಾದ ಅವಧೂತರನ್ನು ನೆನಪಿಸಿಕೊಳ್ಳುವುದು ಈಗ ಸಂದರ್ಭೋಚಿತವಾಗಿದೆ.
First published:October 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ