ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ: ಧಾರ್ಮಿಕ ಕೇಂದ್ರಗಳ ಸುತ್ತ ರಾಗಾ ಪ್ರದಕ್ಷಿಣೆ: ಇಲ್ಲಿದೆ ಸಂಪೂರ್ಣ ವರದಿ

news18
Updated:February 13, 2018, 8:41 PM IST
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ: ಧಾರ್ಮಿಕ ಕೇಂದ್ರಗಳ ಸುತ್ತ ರಾಗಾ ಪ್ರದಕ್ಷಿಣೆ: ಇಲ್ಲಿದೆ ಸಂಪೂರ್ಣ ವರದಿ
news18
Updated: February 13, 2018, 8:41 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕಲಬುರ್ಗಿ.

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ನಂತರ ಇದೇ ಪ್ರಥಮ ಬಾರಿಗೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕೈಗೊಂಡ ಜನಾಶೀರ್ವಾದ ಯಾತ್ರೆ ರಾಜಕೀಯ ಪಕ್ಷಗಳಲ್ಲಿ ಸಂಚಲಕ್ಕೆ ಕಾರಣವಾಗಿದೆ. ಹೈ.ಕ. ಭಾಗದ ವಿಜಯನಗರ ಕ್ಷೇತ್ರದಿಂದ ಆರಂಭಗೊಂಡ ರಾಹುಲ್ ಯಾತ್ರೆ ರಾಜ್ಯದ ತುತ್ತ ತುದಿಯ ಜಿಲ್ಲೆ ಎನಿಸಿಕೊಂಡ ಬೀದರ್ ಜಿಲ್ಲೆಯ ಮೂಲಕ ಅಂತ್ಯಗೊಂಡಿದೆ. ವಿಜಯನಗರ ಕ್ಷೇತ್ರದಿಂದ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದವರೆಗೂ ನಡೆದ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಹೈದರಾಬಾದ್ ಕರ್ನಾಟಕ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದು, ಆ ಕೋಟೆಯನ್ನು ಸದೃಢವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಕೊಗಳ್ಳಲಾಗಿತ್ತು. ಜನಾಶೀರ್ವಾದ ಯಾತ್ರೆ ಕಾಂಗ್ರೆಸ್ ಪಕ್ಷದ ಬಲವರ್ಧನೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿತು. ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ, ಪಕ್ಷದ ಕಾರ್ಯಕರ್ತರನ್ನು ಮುಂದಿನ ಜುನಾವಣೆಗೆ ಹುರಿಗೊಳಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದರು. ಈ ನಡುವೆ ಧಾರ್ಮಿಕ ಕೇಂದ್ರಗಳ ಪ್ರದಕ್ಷಿಣೆ ರಾಹುಲ್ ಗಾಂಧಿಯ ಟೆಂಪಲ್ ರನ್ ಗಮನ ಸೆಳೆಯಿತು.ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ ಮತ್ತು ಬೀದರ್ ಹೀಗೆ ಹೈದರಾಬಾದ್ ಕರ್ನಾಟಕದ ಆರೂ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿಯ ಜನಾಶೀರ್ವಾದ ಯಾತ್ರೆ ಸಂಚರಿಸಿತು. ಒಂದರ್ಥದಲ್ಲಿ ಕಾಂಗ್ರೆಸ್ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಯಾತ್ರೆ ಜೋಷ್ ತಂದಿತೆಂದೇ ಹೇಳಬಹುದು. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ರೋಡ್ ಶೋ ನಡೆದರೆ, ಕಲಬುರ್ಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಮತ್ತು ಕಲಬುರ್ಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಿತು. ನಂತರ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೂ ಭೇಟಿ ನೀಡಿ ಬಸವಣ್ಣರ ಕಾಯಕ ತತ್ವವನ್ನು ಪಠಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ರಾಹುಲ್ ಗಾಂಧಿ ಉದ್ಗರಿಸಿದ್ದಾರೆ.

ರಾಹುಲ್ ಗಾಂಧಿ ಯಾದಗಿರಿ ಜಿಲ್ಲೆಗೆ ಆಗಮಿಸಿದ ವೇಳೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ಭೇಟಿಯಾಗಿ ರಾಜಕೀಯ ನಿವೃತ್ತಿ ಘೋಷಿಸದಂತೆ ಮನವಿ ಮಾಡಿದರು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತಮ್ಮನ್ನು ಸಚಿವರನ್ನಾಗಿಸಲಿಲ್ಲ, ತಮ್ಮ ಹಿರಿತನಕ್ಕೆ ಬೆಲೆ ಸಿಗಲಿಲ್ಲ ಎಂದು ಬೇಸತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಚುನಾವಣಾ ರಾಜಕೀಯದ ನಿವೃತ್ತಿ ಘೋಷಿಸಿದ್ದರು. ಈ ಘೋಷಣೆಯ ಬೆನ್ನ ಹಿಂದೆಯೇ ಆಗಮಿಸಿದ ರಾಹುಲ್ ಗಾಂಧಿ ಮಾಲಕರೆಡ್ಡಿ ಅವರನ್ನು ಭೇಟಿಯಾದದ್ದಲ್ಲದೆ, ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸಬೇಕೆಂದು ಮನವೊಲಿಸಿದ್ದು, ಇದಕ್ಕೆ ಸಕಾರಾತ್ಮಕ ಸ್ಮಂದನೆಯೂ ಸಿಕ್ಕಿದೆ. ಇನ್ನು ಶಹಾಪುರಕ್ಕೆ ರಾಹುಲ್ ಯಾತ್ರೆ ಆಗಮಿಸಿದ ವೇಳೆ ಭವ್ಯ ಸ್ವಾಗತ ಸಿಕ್ಕಿತು. ಸಹಸ್ರಾರು ಜನ ರಾಹುಲ್ ಗಾಂಧಿಗೆ ಸ್ವಾಗತ ಕೋರಿ, ಜನಾಶೀರ್ವಾದ ಯಾತ್ರೆಗೆ ಶುಭ ಕೋರಿದರು.

ಪಕ್ಷ ಬಿಡದಂತೆ ಮಾಲಕರೆಡ್ಡಿ ಮನವೊಲಿಸಿದ ರಾಹುಲ್ ಗಾಂಧಿ


ಜನಾಶೀರ್ವಾದ ಯಾತ್ರೆ ಶಹಾಪುರಕ್ಕೆ ಆಗಮಿಸಿದ ವೇಳೆ ಬಸ್ ನಿಂದ ಕೆಳಗೆ ಇಳಿದಿದ್ದ ರಾಹುಲ್ ಗಾಂಧಿ, ಪತ್ರಕರ್ತರ ಕಡೆ ಮುಖ ಮಾಡಿ ಕ್ಯಾ ಭೈ ಕ್ಯಾ ಎಂದು ಪ್ರಶ್ನಿಸಿ ಮಾಧ್ಯಮದವರನ್ನು ತಮ್ಮತ್ತೆ ಸೆಳೆದಿದ್ದರು. ವಿಶೇಷ ಭದ್ರತೆಯನ್ನೂ ಲೆಕ್ಕಿಸಿದೆ ಮಾಧ್ಯಮದವರಿಗೆ ಬೈಟ್ ನೀಡಿ ಗಮನ ಸೆಳೆದರು. ಈ ವೇಳೆ ಆರ್.ಎಸ್.ಎಸ್. ನಾಯಕ ಮೋಹನ್ ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ಬಸ್ ಹತ್ತಿ ರಾಹುಲ್ ಜೇವರ್ಗಿಯತ್ತ ಪ್ರಯಾಣ ಬೆಳೆಸಿದರು.

ಮಾಜಿ ಸಿಎಂ ದಿ.ಎನ್.ಧರ್ಮಸಿಂಗ್ ಪ್ರಥಮ ಬಾರಿಗೆ ಶಾಸಕರಾಗಿದ್ದ ವೇಳೆ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಜೇವರ್ಗಿಗೆ ಭೇಟಿ ನೀಡಿದ್ದರು. ಅದರ ನಂತರ ಇಂದಿರಾ ಗಾಂಧಿ ಮೊಮ್ಮಗ ರಾಹುಲ್ ಗಾಂಧಿ ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿದರು. ಕಾಕತಾಳೀಯ ಎಂಬಂತೆ ಇಂದಿರಾಗಾಂಧಿ ಆ ವೇಳೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ಈಗ ರಾಹುಲ್ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಧರ್ಮಸಿಂಗ್ ಪುತ್ರ ಅಜೇಯಸಿಂಗ್ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮೈಕ್ ಕೈಕೊಟ್ಟಾಗ ಅದನ್ನು ಸರಿಪಡಿಸಲು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಮುಂದಾದರು. ಕೊನೆಗೂ ಮೈಕ್ ಸರಿಯಾಗಿ, ಭಾಷಣ ಮುಂದುವರೆದು, ಜನಾಶೀರ್ವಾದ ಯಾತ್ರೆ ಕಲಬುರ್ಗಿಯತ್ತ ಪ್ರಯಾಣ ಬೆಳೆಸಿತು.
Loading...

ಕಲ್ಬುರ್ಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಎರಡೂವರೆ ತಾಸು ವಿಳಂಬವಾದರು ರಾಹುಲ್ ಗಾಂಧಿ ಆಗಮನಕ್ಕಾಗಿ ಜನತೆ ಕಾಯುತ್ತಿತ್ತು. ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿದ ರಾಹುಲ್ ಗಾಂಧಿ, ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು. 2009 ರ ಲೋಕಸಭಾ ಚುನಾವಣೆಯ ವೇಳೆ ಇದೇ ನೂತನ ವಿದ್ಯಾಲಯ ಮೈದಾನದಲ್ಲಿಯೇ ನಾನು ಸಂವಿಧಾನದ 371ನೇ ಕಲಂ ತಿದ್ದುಪಡಿಯ ಆಶ್ವಾಸನೆ ನೀಡಿದ್ದೆ. ಅದರಂತೆ ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ನಮ್ಮ ಯುಪಿಎ ಸರ್ಕಾರ ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟರೆ, ನಂತರದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅದನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರುತ್ತಿದೆ. ಸಂವಿಧಾನದ ತಿದ್ದುಪಡಿಯೊಂದಿಗೆ ಹಿಂದುಳಿದ ಹೈ.ಕ. ಭಾಗದ ಭಾಗ್ಯದ ಬಾಗಿಲು ತೆರೆದಿದ್ದೇವೆ. ಸಮಗ್ರ ಅಭಿವೃದ್ಧಿಗೆ ಕೈಗೊಂಡಿದ್ದೇವೆ. ನುಡಿದಂತೆ ನಡೆದವರ ಕೈಹಿಡಿಯಿರಿ ಎಂದು ಕರೆ ನೀಡಿದರು.

ಇದೇ ವೇಳೆ, ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಭಿವೃದ್ಧಿಯೇನೆಂಬುದನ್ನು ತಿಳಿದುಕೊಳ್ಳಬೇಕೆಂದರೆ ಕಲಬುರ್ಗಿಗೆ ಬನ್ನಿ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾರಿಗೆ ಸವಾಲು ಹಾಕಿದರು. ಕರ್ನಾಟಕದಲ್ಲಿ ಮೋದಿ ಮತ್ತು ಅಮಿತ್ ಶಾರ ಜಾದೂ ನಡೆಯುವುದಿಲ್ಲ ಎಂದರು.

ಸಮಾವೇಶದ ನಂತರ ರಾಹುಲ್ ಗಾಂಧಿಯ ಟೆಂಪಲ್ ರನ್ ಕಾರ್ಯಕ್ರಮ ಜೋರಾಗಿತ್ತು. ಮೊದಲು ದಾಸೋಹದ ಮೂಲಕ ಪ್ರಸಿದ್ಧಿ ಪಡೆದ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ದೇವಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪಾರ ಆಶೀರ್ವಾದ ಪಡೆದರು. ಮಹಾತ್ಮಾಗಾಂಧೀಜಿ, ದಿ.ಇಂದಿರಾಗಾಂಧಿ, ರಾಜೀವ ಗಾಂಧಿ ಭೇಟಿ ನೀಡಿದ್ದ ಈ ದೇವಸ್ಥಾನಕ್ಕೆ ರಾಹುಲ್ ಭೇಟಿ ಗಮನ ಸೆಳೆಯಿತು.

ಶರಣಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪಾರ ಆಶೀರ್ವಾದ ಪಡದ ರಾಹುಲ್


ಶರಣಬಸವೇಶ್ವರರ ದರ್ಶನದ ನಂತರ ರಾಹುಲ್ ಸೀದಾ ತೆರಳಿದ್ದು ಖ್ವಾಜಾ ಬಂದೇನವಾಜ್ ದರ್ಗಾಕ್ಕೆ. ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ, ಭಾವೈಕ್ಯತೆಯ ಕೇಂದ್ರವೆನಿಸಿ ದರ್ಗಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಖ್ವಾಜಾ ಬಂದೇನವಾಜರ ಸಮಾಧಿಗೆ ನಮಿಸಿದರು. ರೇಶ್ಮೆ ಚಾದರ್ ಮತ್ತು ಗುಲಾಬಿ ಹೂವಿನ ಚಾದರ್ ಅರ್ಪಿಸಿ ಭಕ್ತಿ ಸಮರ್ಪಿಸಿದರು. ದರ್ಗಾದ ಪೀಠಾಧಿಪತಿ ಡಾ.ಸೈಯದ್ ಖುಸ್ರೋ ಹುಸ್ಸೇನಿ ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿ ಗೌರವಿಸಿದರು.ರಾತ್ರಿ ಐವಾನ್-ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ ರಾಹುಲ್ ಗಾಂಧಿ ಅವರಿಗೆ ಉತ್ತರ ಭಾರತದ ಊಟದ ಜೊತೆಗೆ ಹೈದರಾಬಾದ್ ಕರ್ನಾಟಕದ ದೇಶಿ ತಿನಿಸುಗಳನ್ನು ಇಡಲಾಗಿತ್ತು. ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಶೇಂಗಾ ಹಿಂಡಿ ಹೀಗೆ ಈ ಭಾಗದ ಜನತೆ ಸೇವಿಸುವ ತಿನಿಸುಗಳನ್ನು ಇಡಲಾಗಿತ್ತು. ಎಲ್ಲವುಗಳ ಒಂದಷ್ಟು ಟೇಸ್ಟ್ ನೋಡಿದ ರಾಹುಲ್, ಪ್ರೀತಿಯಿಂದಲೇ ಹೈ.ಕ ಭಾಗದ ಮುಖಂಡರ ಆತಿಥ್ಯ ಸ್ವೀಕರಿಸಿದರು.

ಜನಾಶೀರ್ವಾದ ಯಾತ್ರೆಯ ಮೂರನೆಯ ದಿನ ಪಿ.ಡಿ.ಎ. ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು, ನವೋದ್ಯಮಿಗಳು, ವಿವಿಧ ಕ್ಷೇತ್ರಗಳ ಪ್ರರಿಣಿತರು ಪಾಲ್ಗೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹೈ.ಕ. ಭಾಗದ ಸಮಸ್ಯೆ ಇತ್ಯಾದಿಗಳನ್ನು ಆಲಿಸಿದರು. ಕೇಂದ್ರ ಸರ್ಕಾರದ ನೀತಿ, ನಿರೂಪಣೆಗಳು ಆರ್.ಎಸ್.ಎಸ್. ನಿರ್ದೇಶನವನ್ನು ಅವಲಂಬಿಸಿದೆ ಎಂದು ರಾಹುಲ್ ಆರೋಪಿಸಿದರು. ಕೇಂದ್ರ ಸರ್ಕಾರದ ಪ್ರತಿ ಇಲಾಖೆಗೆ ಆರ್.ಎಸ್.ಎಸ್. ಮಾರ್ಗದರ್ಶಕರಿದ್ದಾರೆ. ನೋಟು ನಿಷೇಧದ ಹಿಂದೆಯೂ ಆರ್.ಎಸ್.ಎಸ್. ಕೈಯಿದೆ. ನೋಟು ರದ್ದತಿ ಆರ್.ಬಿ.ಐ. ಅಥವಾ ಹಣಕಾಸು ಸಚಿವ ಜೇಟ್ಲಿ ಅಥವಾ ಹಣಕಾಸು ಇಲಾಖೆಯ ಅಧಿಕಾರಿಗಳ ಸಲಹೆಯಲ್ಲ. ಆರ್.ಎಸ್.ಎಸ್. ವ್ಯಕ್ತಿಯೊಬ್ಬರು ನೀಡಿದ್ದ ಸಲಹೆಯನ್ನು ಅನುಷ್ಠಾನಗೊಳಿಸಲು ಮೋದಿ ನೋಟು ನಿಷೇಧ ನಿರ್ಣಯ ಕೈಗೊಂಡರು. ಆದರೆ ಕಪ್ಪು ಹಣ ಎಷ್ಟು ಬಿಳಿಯಾಯಿತು, ದೇಶದ ಆರ್ಥಿಕ ಸ್ಥಿತಿ ಸುಧಾರಿಸಿತೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಜಿ.ಎಸ್.ಟಿ. ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡಿದರು.

ಪಿ.ಡಿ.ಎ. ಕಾಲೇಜಿನಲ್ಲಿ ಸಂವಾದದ ವೇಳೆ 70 ವರ್ಷದ ವೃದ್ಧರೊಬ್ಬರು ನೀಡಿದ ಬಿಲ್ವಪತ್ರೆಯನ್ನು ರಾಹುಲ್ ಗಲಿಬಿಲಿಯಲ್ಲಿ ವಾಪಸ್ ಕೊಟ್ಟಿದ್ದು ಗಮನ ಸೆಳೆಯಿತು. ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವೃದ್ಧರು ಕೋರಂಟಿಯ ಶಿವ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದರು. ಅದೇ ಬಿಲ್ವಪತ್ರೆಯನ್ನು ತಂದು ರಾಹುಲ್ ಗಾಧಿಗೆ ನೀಡಿದ್ದರು. ಆದರೆ ಅದೇನೋ ಇರಬಹುದೆಂದು ಗುಮಾನಿಯಿಂದ ರಾಹುಲ್ ಅದನ್ನು ಕೈಯಲ್ಲಿ ಇಟ್ಟುಕೊಳ್ಳದೆ ಹಾಗೆಯೇ ಗಲಿಬಿಲಿಯಲ್ಲಿ ವೃದ್ಧರಿಗೆ ವಾಪಸ್ ನೀಡಿದರು.

ಸಂವಾದದ ನಂತರ ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ನಿಧನರಾದ ಮಾಜಿ ಸಿಎಂ ದಿ.ಎನ್.ಧರ್ಮಸಿಂಗ್ ಮತ್ತು ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ನಿವಾಸಗಳಿಗೆ ಭೇಟಿ ನೀಡಿದರು. ಕಲಬುರ್ಗಿಯ ಎನ್.ವಿ.ಲೇಔಟ್ ನಲ್ಲಿರುವ ನಿವಾಸಕ್ಕೆ ತೆರಳಿ, ಧರ್ಮಸಿಂಗ್ ಪತ್ನಿ ಪ್ರಭಾವತಿ, ಪುತ್ರ ಶಾಸಕ ಅಜೇಯಸಿಂಗ್ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಧರ್ಮಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಧರ್ಮಸಿಂಗ್ ಕುಟುಂಬಕ್ಕೆ ಸಾಂತ್ವನ ಹೇಳಿದ ರಾಹುಲ್ ಗಾಂಧಿ


ಅಲ್ಲಿಂದ ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ನಿವಾಸಕ್ಕೆ ತೆರಳಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಖಮರುಲ್ ಪತ್ನಿ ಖತೀಜಾ, ಪುತ್ರ, ಕುಟುಂಬದ ಸದಸ್ಯರನ್ನು ಭೇಟಿಯಾಗಿ ಖಮರುಲ್ ಇಸ್ಲಾಂ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು. ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಪ್ರಶ್ನಾತೀತ ನಾಯಕರಾಗಿದ್ದರು ಎಂದು ಬಣ್ಣಿಸಿದ ರಾಹುಲ್, ಮುಂದಿನ ದಿನಗಳಲ್ಲಿಯೂ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ ನಡೆಯಬೇಕೆಂದರು. ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಕಲಬುರ್ಗಿ ಉತ್ತರ ಕ್ಷೇತ್ರದಿಂದ ಖಮರುಲ್ ಇಸ್ಲಾಂ ಕುಟುಂಬದ ಸದಸ್ಯರಿಗೆ ಅಖಾಡಕ್ಕಿಳಿಯುವಂತೆ ರಾಹುಲ್ ಗ್ರೀಲ್ ಸಿಗ್ನಲ್ ನೀಡಿದರು. ಆ ಮೂಲಕ ಖಮರುಲ್ ಇಸ್ಲಾಂ ನಿವಾಸಕ್ಕೆ ರಾಹುಲ್ ಭೇಟಿ ಮಹತ್ವ ಪಡೆದುಕೊಂಡಿತು.

ಖಮರುಲ್ ಇಸ್ಲಾಂ ಕುಟುಂಬಕ್ಕೆ ಸಾಂತ್ವನ ಹೇಳಿದ ರಾಹುಲ್ ಗಾಂಧಿ


ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ತೆರಳಿದ ರಾಹುಲ್ ಅನುಭವ ಮಂಟಪಕ್ಕೆ ಬೇಟಿ ನೀಡಿ, ಬಸವಣ್ಣರ ಕಾಯಕ, ದಾಸೋಹ ತತ್ವಗಳನ್ನು ಕೊಂಡಾಡಿದರು. ಬಸವಣ್ಣನವರ ತತ್ವಗಳನ್ನು ನಮ್ಮ ಕಾಂಗ್ರೆಸ್ ಶಿರಸಾ ವಹಿಸಿ ಪಾಲಿಸುತ್ತಿದೆ ಎಂದರು. ತೇರು ಮೈದಾನದಲ್ಲಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್, ನಾವು ನುಡಿದಂತೆ ನಡೆದಿದ್ದೇವೆ. ಆದರೆ ಪ್ರಧಾನಿ ಮೋದಿಯ ನುಡಿಯೊಂದು, ನಡೆಯೊಂದು ಎಂದು ಟೀಕಿಸಿದರು. ನಾವು ರೈತರ ಸಾಲ ಮನ್ನಾ ಮಾಡಿದ್ದೇವೆ. ನೀವೇಕೆ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಬಸವೇಶ್ವರ ತತ್ವ, ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದ್ದು, ಕೇವಲ ಬಾಯಿಮಾತಿನಲ್ಲಿ ಮಾತನಾಡುವುದಕ್ಕಿಂತ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದರು. ಸಮಾವೇಶದ ನಂತರ ಹೆಲಿಕಾಪ್ಟರ್ ಮೂಲಕ ಬೀದರ್ ಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಯಲ್ಲ ರಾಹುಲ್ ಪ್ರಯಾಣ ಬೆಳೆಸಿದರು.

ರಾಹುಲ್ ಗಾಂಧಿ ಮೂರು ದಿನಗಳಲ್ಲಿ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸಂಚರಿಸಿ ಕಾಂಗ್ರೆಸ್ಸಿಗೆ ಶಕ್ತಿ ತುಂಬುವ ಕೆಸವನ್ನು ಮಾಡಿದ್ದಾರೆ ಎಂದು ಹೇಳಬಹುದು. ಈ ಹಿಂದಿನ ಭೇಟಿಗಳ ಸಂದರ್ಭದಲ್ಲಿ ನೇರವಾಗಿ ವೇದಿಕೆಗೆ ಬಂದು ಭಾಷಣ ಮಾಡಲಷ್ಟೇ ರಾಹುಲ್ ಭೇಟಿ ಸೀಮಿತವಾಗುತ್ತಿತ್ತು. ಆದರೆ ಈ ಬಾರಿ ಸ್ವತಹ ರಾಹುಲ್ ಜನರೊಂದಿಗೆ ಬೆರೆತು, ಅವರ ದುಃಖ-ದುಮ್ಮಾನಗಳನ್ನು ಹಂಚಿಕೊಳ್ಳುವ ಕೆಲಸ ಮಾಡಿದ್ದಾರೆ. ಪತ್ರಕರ್ತನ್ನು ತಾವಾಗಿಯೇ ಕರೆದು ಬೈಟ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದಿನ ಭೇಟಿಗಳ ವೇಳೆ ರಾಹುಲ್ ಕಾರ್ಯಕ್ರಮದ ವೇದಿಕೆ ಚಿಕ್ಕದಾಗಿರುತ್ತಿತ್ತು. ಆದರೆ ಈ ಬಾರಿಯ ಭೇಟಿಯ ವೇಳೆ ವೇದಿಕೆ ಬೃಹತ್ ಸ್ವರೂಪ ಪಡೆದುಕೊಂಡಿದೆ. ಮೊದಲ ಸಾಲಿನ ಮುಖಂಡರ ಜೊತೆಗೆ ಹಲವಾರು ಮುಖಂಡರಿಗೆ ವೇದಿಕೆಯಲ್ಲಿ ಸ್ಥಾನ ಸಿಕ್ಕಿದೆ.

 

ಭೇಟಿ ನೀಡಿದಲ್ಲೆಲ್ಲಾ ರಾಹುಲ್ ಜನರೊಂದಿಗೆ ಬೆರೆಯುವ ಉತ್ಸಾಹ ತೋರಿರುವುದು, ಕಾಂಗ್ರೆಸ್ಸಿಗರ ಹುಮ್ಮಸ್ಸು ಹೆಚ್ಚಿಸುವಂತೆ ಮಾಡಿದೆ. ಈ ಬಾರಿಯ ರಾಹುಲ್ ಹೈ.ಕ. ಭೇಟಿ ಕಾಂಗ್ರೆಸ್ಸಿನ ಮಟ್ಟಿಗೆ ಪ್ಲಸ್ ಆಗಿದೆಯೆಂದೇ ಹೇಳಬಹುದು. ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನು ಕಾಂಗ್ರೆಸ್ ಗೆ ಬರಮಡಿಕೊಂಡ ರಾಹುಲ್, ಯಾದಗಿರಿಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದ ಮಾಜಿ ಸಚಿವ ಎ.ಬಿ.ಮಲಕರೆಡ್ಡಿಯವರ ಮನವೊಲಿಸಿ, ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಸಜ್ಜುಗೊಳಿಸಿದ್ದಾರೆ. ಇನ್ನೊಂದೆಡೆ ಕಲಬುರ್ಗಿ ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಎದ್ದಿರುವಾಗಲೇ, ದಿ.ಖಮರುಲ್ ಇಸ್ಲಾಂ ನಿವಾಸಕ್ಕೆ ಭೇಟಿ ನೀಡಿ ಚುನಾವಣಾ ಅಖಾಡಕ್ಕೆ ದುಮುಕುವಂತೆ ಪರೋಕ್ಷ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇವುಗಳ ಜೊತೆಗೆ ರಾಹುಲ್ ಧಾರ್ಮಿಕ ಕೇಂದ್ರಗಳ ಸುತ್ತಾಟ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕೊಪ್ಪಳದ ಗವಿಮಠ, ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನ, ಬಸವಕಲ್ಯಾಣದ ಅನುಭವ ಮಂಟಪ ಬಹುಸಂಖ್ಯಾತ ಮತದಾರರೆನಿಸಿಕೊಂಡ ಲಿಂಗಾಯತರು ನಡೆದುಕೊಳ್ಳುವ ಧಾರ್ಮಿಕ ಕೇಂದ್ರಗಳು. ಹೀಗಾಗಿ ಇಲ್ಲಿಗೆ ರಾಹುಲ್ ಗಾಂಧಿ ಭೇಟಿ ನೀಡಿರುವುದು ಮಹತ್ವ ಎನಿಸಿಕೊಂಡಿದೆ. ಅಲ್ಲದೆ ಹಿಂದು-ಮುಸ್ಲಿಂ ರ ನಡೆದುಕೊಳ್ಳುವ ಭಾವೈಕ್ಯತೆಯ ತಾಣ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡುವ ಮೂಲಕ ಮುಸ್ಲಿಂ ಮತದಾದರನ್ನು ಓಲೈಸುವ ಪ್ರಯತ್ನವೂ ನಡೆದಿದೆ.

ರಾಹುಲ್ ಗಾಂಧಿಯ ಜನಾಶೀರ್ವಾದ ಯಾತ್ರೆ ಮುಂದಿನ ಚುನಾವಣೆಗೆ ರಣಕಹಳ ಮೊಳಗಿಸಿದೆಯೆಂದೇ ಹೇಳಬಹುದು. ರಾಹುಲ್ ಯಾತ್ರೆ ಕಾಂಗ್ರೆಸ್ಸಿಗರ ಉತ್ಸಾಹ ಇಮ್ಮಡಿಗೊಳಿಸಿದೆ. ಹೈ.ಕ. ಭಾಗದ ಆರೂ ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ, ಕಾಂಗ್ರೆಸ್ಸಿಗರ ಉತ್ಸಾಹ ಮೇರೆ ಮೀರುವಂತೆ ಮಾಡಿದೆ. ರೋಡ್ ಶೋ, ಸಮಾವೇಶಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬಲ ಪ್ರದರ್ಶನ ತೋರಿಸಿದೆ. ಒಗ್ಗಟ್ಟಿನ ಮಂತ್ರ ಜಪಿಸಿದೆ.

ಕೇವಲ ಬಹಿರಂಗ ಸಭೆಗಳನ್ನು ಮಾಡುತ್ತಾ, ಜನರಿಂದ ದೂರವಿದ್ದು, ಯುವರಾಜನೆನಿಸಿಕೊಂಡಿದ್ದ ರಾಹುಲ್ ಗಾಂಧಿ, ಎಐಸಿಸಿ ಗಾದಿ ಅಲಂಕರಿಸಿ, ರಾಜಕುಮಾರನಾಗಿ ಪರಿವರ್ತನೆಯಾಗಿದ್ದಾರೆ. ಜನರೊಂದಿಗೆ ಬೆರೆಯುವ ನಾಯಕನಾಗಿ ಹೊರಹೊಮ್ಮಿರುವುದು ಜನಾಶೀರ್ವಾದ ಯಾತ್ರೆಯಲ್ಲಿ ಸಾಬೀತಾಗಿದೆ. ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ವೀರಪ್ಪ ಮೊಯ್ಲಿ, ಹಲವು ಸಚಿವರು,ಶಾಸಕರು ಸಾಥ್ ನೀಡಿ, ಪಕ್ಷದ ಬಲವರ್ಧನೆಯ ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪ ಕೈಗೊಂಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯನ್ನು ಮತ್ತಷ್ಟು ಸದೃಢಗೊಳಿಸಲು ರಾಹುಲ್ ಭೇಟಿ ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ