ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರದಂದು ಸಂಸತ್ತಿಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು ಮತ್ತು ಈ ಮೂರು ಕೆಟ್ಟ ಕಾನೂನುಗಳನ್ನು ಆದಷ್ಟು ಶೀಘ್ರವಾಗಿ ರದ್ದುಗೊಳಿಸುವಂತೆ ಕೇಂದ್ರ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದರು.
“ನಾನು ರೈತರ ಸಂದೇಶವನ್ನು ಹೊತ್ತು ಸಂಸತ್ತಿಗೆ ಬಂದಿದ್ದೇನೆ. ಸರ್ಕಾರ ರೈತರ ಧ್ವನಿಯನ್ನು ನಿಗ್ರಹಿಸುತ್ತಿದೆ ಮತ್ತು ಈ ಕಪ್ಪು ಕಾನೂನುಗಳನ್ನು ರದ್ದುಗೊಳಿಸ ಬೇಕಾಗುತ್ತದೆ ಎಂದು ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲ. ಈ ಕಾನೂನುಗಳು 2-3 ದೊಡ್ಡ ಉದ್ಯಮಿಗಳಿಗೆ ಅನುಕೂಲಕರವೆಂದು ಜಾರಿಗೆ ತರಲು ಹೊರಟಿದೆ. ” "ಸರ್ಕಾರದ ಪ್ರಕಾರ, ರೈತರು ತುಂಬಾ ಸಂತೋಷವಾಗಿದ್ದು ಮತ್ತು ಹೊರಗೆ ಭಯೋತ್ಪಾದಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ರೈತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ, ”ಎಂದು ರಾಹುಲ್ ಗಾಂಧಿ ಹೇಳಿದರು.
ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ವಿಜಯ್ ಚೌಕ್ ಮೂಲಕ ಸಂಸತ್ತಿಗೆ ಟ್ರಾಕ್ಟರ್ ಚಲಾಯಿಸಿಕೊಂಡು ಬಂದರು, ಇವರ ಜೊತೆ ಪಂಜಾಬ್ ಮತ್ತು ಹರಿಯಾಣದ ಕಾಂಗ್ರೆಸ್ ಸಂಸದರಾದ ದೀಪೇಂದರ್ ಹೂಡಾ, ರಣ್ವಿತ್ ಸಿಂಗ್ ಬಿಟ್ಟು ಮತ್ತು ಪ್ರತಾಪ್ ಸಿಂಗ್ ಬಜ್ವಾ ಸಾಥ್ ನೀಡಿದರು.
https://twitter.com/INCIndia/status/1419598368179904513
ಇದೇ ವೇಳೆ “ರೈತರ ಭೂಮಿಯನ್ನು ಮಾರಾಟ ಮಾಡುವಂತೆ ಸರ್ಕಾರ ಒತ್ತಾಯಿಸಿದರೆ, ಸಂಸತ್ತಿನಲ್ಲಿ ಟ್ರಾಕ್ಟರುಗಳು ಓಡಾಡುತ್ತವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಆದರೆ, ರೈತರನ್ನು ರಾಜಕೀಯ ದಾಳವಾಗಿ ಪ್ರತಿಪಕ್ಷಗಳು ಬಳಸುತ್ತಿವೆ ಎಂದು ಬಿಜೆಪಿ ಹೇಳಿಕೊಂಡಿದೆ. “ರಾಹುಲ್ ಗಾಂಧಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರೈತರನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ. ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಲು ಒಕ್ಕೂಟ ಸರ್ಕಾರ ಸಿದ್ಧವಾಗಿದೆ. ರೈತರು ಕೂಡ ಮಾತುಕತೆಗೆ ಸಿದ್ಧರಾಗಿದ್ದಾರೆ” ಎಂದು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಕೇಂದ್ರವು ಇಲ್ಲಿ ತಲೆ ತೂರಿಸಿಲ್ಲ ಅಲ್ಲದೆ ರೈತರ ಸಾವುಗಳ ದಾಖಲೆಯನ್ನು ಹೊಂದಿರುವುದಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ನ್ಯೂಸ್ 18 ಗೆ ತಿಳಿಸಿದರು.
ಆದಾಗ್ಯೂ, ಈ ವಿಷಯವು ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಸ್ವರೂಪವನ್ನು ಪಡೆದಿದ್ದು, ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಬಾದಲ್ ಜುಲೈ 9 ರಂದು ಮಾತನಾಡುತ್ತಾ, ಪ್ರತಿಭಟನೆಯಲ್ಲಿ 550 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಮತ್ತು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಅಂತಹ ಪ್ರತಿಯೊಬ್ಬ ರೈತನ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುತ್ತೇನೆ, ಅವರ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಪದವಿಯ ತನಕ ಉಚಿತ ಶಿಕ್ಷಣವನ್ನು ಮತ್ತು ಕುಟುಂಬಸ್ಥರಿಗೆ ಆರೋಗ್ಯ ವಿಮೆ ಯೋಜನೆ ನೀಡುವುದಾಗಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ