ನಟಿ ರಾಗಿಣಿ ಮತ್ತು ನಟಿ ಸಂಜನಾ ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೆಯೇ ಎಂದು ತಿಳಿಯಲು ಅವರ ತಲೆ ಕೂದಲಿನ ಮಾದರಿಯನ್ನು ಸಂಗ್ರಹಿಸಿದ್ದರು ಸಿಸಿಬಿ ಪೊಲೀಸರು. ಅದನ್ನು ಡೋಪಿಂಗ್ ಟೆಸ್ಟ್ಗಾಗಿ ಹೈದರಾಬಾದಿಗೆ ಕಳುಹಿಸಿದ್ದು, ಅದು ಈಗ ವಾಪಾಸಾಗಿದೆಯಂತೆ. ಸ್ಯಾಂಪಲ್ ಕಳಿಸುವಾಗ ಸಿಸಿಬಿ ಮಾಡಿದೆ ಎನ್ನಲಾಗುತ್ತಿರುವ ಎಡವಟ್ಟಿನಿಂದಾಗಿ ಹೀಗೆ ಆಗಿದೆ ಎಂದೂ ಹೇಳಲಾಗುತ್ತಿದೆ. ಟೆಕ್ನಿಕಲ್ ಸಮಸ್ಯೆಯಿಂದ ಹೈದರಾಬಾದ್ ಲ್ಯಾಬ್ನಿಂದ ಸ್ಯಾಂಪಲ್ ವಾಪಸ್ ಬಂದಿದೆಯಂತೆ. ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರನ್ನು ಬಂಧಿಸಿದ ನಂತರ ಮೂತ್ರ, ರಕ್ತದ ಜೊತೆಗೆ ತಲೆಗೂದಲ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ತಲೆಗೂದಲ ಮಾದರಿಯನ್ನು ಹೈದರಾಬಾದಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗಾಗಲೆ ಮಡಿವಾಳದ ಎಫ್ ಎಸ್ ಎಲ್ನಿಂದ ರಕ್ತ ಮತ್ತು ಯೂರಿನ್ ರಿಪೋರ್ಟ್ ಪಡೆದುಕೊಳ್ಳಲಾಗಿದೆ. ಇನ್ನು ಟೆಕ್ನಿಕಲ್ ಸಮಸ್ಯೆಯಿಂದಾಗಿ ತಲೆಗೂದಲ ಮಾದರಿ ವಾಪಸ್ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜನಾ ಹಾಗೂ ರಾಗಿಣಿ ಅವರ ತಲೆಗೂದಲ ಮಾದರಿಯನ್ನು ಸಿಲ್ವರ್ ಫಾಯಿಲ್ ಬದಲು ಪ್ಲಾಸ್ಟಿಕ್ ಕವರ್ನಲ್ಲಿ ಕಳಿಸಿದ್ದೇ ಸಮಸ್ಯೆ ಆಗಿದೆ ಎನ್ನಲಾಗಿದೆ. ಸದ್ಯ ಮತ್ತೆ ಹೈದರಾಬಾದಿಗೆ ಕೂದಲಿನ ಸ್ಯಾಂಪಲ್ ಕಳಿಸಿದ್ದು, ರಿಪೋರ್ಟ್ ಬರಬೇಕಿದೆ. ಎವಿಡೆನ್ಸ್ ಸ್ಪಷ್ಟವಾಗಿದ್ದು, ಕೋರ್ಟ್ಗೆ ನೀಡಲಾಗಿದೆ ಎಂದು ಸಿಸಿಬಿ ಮಾಹಿತಿ ನೀಡಿದೆ. ಈ ವೇಳೆ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕೆಲವೊಂದು ಟೆಕ್ನಿಕಲ್ ಸಮಸ್ಯೆಯಿಂದ ಹೈದರಾಬಾದ್ ಲ್ಯಾಬ್ನಿಂದ ಸ್ಯಾಂಪಲ್ ವಾಪಸ್ ಬಂದಿದೆ.ಅದನ್ನ ಸರಿಪಡಿಸಿ ಈಗ ಮತ್ತೆ ಕಳಿಸಲಾಗಿದೆ. ಇದೇ ಮೊದಲ ಬಾರಿಗೆ ಕೂದಲಿನ ಪರೀಕ್ಷೆ ಮಾಡಿಸಿದ್ವಿ. ಇದು ಹೆಚ್ಚುವರಿಯ ಸಾಕ್ಷಿಗಾಗಿ ಮಾಡಿಸಿದ್ದಷ್ಟೆ. ಟೆಕ್ನಿಕಲ್ ಮತ್ತು ಎವಿಡೆನ್ಸ್ ಸಾಕ್ಷಿಗಳು ನಮ್ಮಲ್ಲಿ ಪ್ರಭಲವಾಗಿವೆ ಎಂದಿದ್ದಾರೆ.
ಇನ್ನು, ಆರೋಪಿ ವಿರೇನ್ ಖನ್ನಾ ಮಾಹಿತಿ ಮರೆಮಾಚಿದ ಹಿನ್ನೆಲೆ ಸಿಸಿಬಿ ತನಿಖೆಗೆ ದೊಡ್ಡ ತಿರುವು ಕೊಟ್ಟಿದೆ. ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ಗೆ ನ್ಯಾಯಾಲಯದಿಂದ ಅನುಮತಿ ಪಡೆಯಲಾಗಿದೆ. ಪೊಲೀಸರು ವಿಚಾರಣೆ ನಡೆಸಿದರೂ ಕೂಡ ಸರಿಯಾದ ಮಾಹಿತಿ ನೀಡಿಲ್ಲ. ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪಾಲಿಗ್ರಾಫ್ ಪರೀಕ್ಷೆಗೆ ಮನವಿ ಮಾಡಲಾಗಿತ್ತು. ಎಸ್ ಪಿ ಪಿ ರವೀಂದ್ರ ಅವರ ವಾದದ ಮೇರೆಗೆ ನ್ಯಾಯಾಲಯ ಅನುಮತಿ ನೀಡಿದ್ದು, ಪರೀಕ್ಷೆ ನಡೆಸಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ: ಮದಗಜ ಸೆಟ್ಗೆ ಸರ್ಪ್ರೈಸ್ ಭೇಟಿ ಕೊಟ್ಟ ಡಿಬಾಸ್ ದರ್ಶನ್: ಇಲ್ಲಿವೆ ಲೆಟೆಸ್ಟ್ ಫೋಟೋಗಳು..!
ಮಡಿವಾಳದ ಎಫ್ ಎಸ್ ಎಲ್ನಲ್ಲಿದೆ ಫಾಲಿಗ್ರಾಫ್ ಟೆಸ್ಟ್ ಪರೀಕ್ಷೆಯ ಉಪಕರಣವಿದೆ. ಆದರೆ, ಮಡಿವಾಳದ ಸೆಂಟರ್ನಲ್ಲಿ ಕಷ್ಟಸಾಧ್ಯ ಅಂತ ಅರಿತ ಅಧಿಕಾರಿಗಳು ಅಹಮದಾಬಾದ್ನಲ್ಲಿ ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಫಾಲಿಗ್ರಾಫ್ ಪರೀಕ್ಷೆ ಸುಳ್ಳು ಹೇಳಿಕೆಗಳನ್ನ ಕಂಡುಹಿಡಿಯುವ ತಂತ್ರವಾಗಿದೆ. ಇನ್ನು ಈ ಆರೋಪಿಗಳು ಕೆಲವು ಪ್ರಕರಣದಲ್ಲಿ ಶಾಮೀಲಾಗಿರೋ ಬಗ್ಗೆಯೂ ಮಾಹಿತಿ ಇದ್ದು, ಸಿಸಿಬಿ ತನಿಖೆ ನಡೆಸ್ತಿದೆ. ಜೊತೆಗೆ ನಾಪತ್ತೆಯಾದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ