ಬೆಂಗಳೂರು (ಜ. 25): ಡ್ರಗ್ ಕೇಸ್ನಲ್ಲಿ ಜೈಲು ಸೇರಿದ್ದ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಬಿಡುಗಡೆ ಸಿಕ್ಕಿದೆ. 145 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರಾಗಿಣಿಗೆ 4 ದಿನಗಳ ಹಿಂದೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ, ಜಾಮೀನು ನೀಡಲು ಎನ್ಡಿಪಿಎಸ್ ಕೋರ್ಟ್ ಷರತ್ತುಗಳನ್ನು ವಿಧಿಸಿತ್ತು. ಆ ಷರತ್ತುಗಳಂತೆ 3 ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ ನೀಡಿದ ನಂತರ ಕೋರ್ಟ್ ಇಂದು ರಾಗಿಣಿ ಬಿಡುಗಡೆಗೆ ಆದೇಶ ನೀಡಿದೆ. ಆ ಆದೇಶ ಜೈಲಧಿಕಾರಿಗಳಿಗೆ ತಲುಪಿದ ನಂತರ ಇಂದು ಸಂಜೆ ರಾಗಿಣಿ ದ್ವಿವೇದಿ ಬಿಡುಗಡೆಯಾಗಲಿದ್ದಾರೆ.
ರಾಗಿಣಿ ಪರ ವಕೀಲರು ನೀಡಿರುವ ಇಬ್ಬರ ಶ್ಯೂರಿಟಿ ಒಪ್ಪಿ ಕೋರ್ಟ್ ರಾಗಿಣಿಯ ಬಿಡುಗಡೆಗೆ ಆದೇಶ ನೀಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ಯೂರಿಟಿ ಪರಿಶೀಲನೆ ನಡೆಸಲಾಗಿದ್ದು, ಇಂದು ಸಂಜೆ 6 ಗಂಟೆ ನಂತರ ರಾಗಿಣಿ ದ್ವಿವೇದಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಎನ್ಡಿಪಿಎಸ್ ಕೋರ್ಟ್ ಆದೇಶ ಪ್ರತಿ ಜೈಲಧಿಕಾರಿಗಳಿಗೆ ತಲುಪಬೇಕು. ಅದು ತಲುಪಿದ ನಂತರ ಆದೇಶವನ್ನು ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು. ಈ ಮೂಲಕ 145 ದಿನಗಳ ನಂತರ ರಾಗಿಣಿಗೆ ಜೈಲಿನಿಂದ ಮುಕ್ತಿ ಸಿಕ್ಕಂತಾಗಿದೆ.
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕಿ 4 ದಿನಗಳಾಗಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ. ಗುರುವಾರವೇ ಸುಪ್ರೀಂಕೋರ್ಟ್ನಿಂದ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕಿದ್ದರೂ ಅದರ ಆದೇಶ ಪ್ರತಿ ಶುಕ್ರವಾರ ಮಧ್ಯಾಹ್ನ ಸಿಕ್ಕಿತ್ತು. ಆ ಆದೇಶ ಪ್ರತಿಯನ್ನು ಶನಿವಾರ ಎನ್ಡಿಪಿಎಸ್ ಕೋರ್ಟ್ಗೆ ನೀಡಲಾಗಿತ್ತು. ಆಗ ವಿಧಿಸಲಾಗಿದ್ದ ಷರತ್ತುಗಳನ್ನು ಪೂರೈಸಲಾಗದ ಹಿನ್ನೆಲೆಯಲ್ಲಿ ರಾಗಿಣಿಯ ಜೈಲು ವಾಸ ಮುಂದುವರೆದಿತ್ತು. ನಿನ್ನೆ ಭಾನುವಾರವಾದ್ದರಿಂದ ರಾಗಿಣಿ ಅನಿವಾರ್ಯವಾಗಿ ಜೈಲಿನಲ್ಲೇ ಉಳಿದುಕೊಂಡಿದ್ದರು. ಇಂದು ಎನ್ಡಿಪಿಎಸ್ ಕೋರ್ಟ್ನಲ್ಲಿ ಷರತ್ತುಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ರಾಗಿಣಿ ದ್ವಿವೇದಿ ಬಿಡುಗಡೆಗೆ ಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ: Ragini Dwivedi: ಸ್ಯಾಂಡಲ್ವುಡ್ ಡ್ರಗ್ ಕೇಸ್; ಇಂದು ಕೊನೆಗೂ ನಟಿ ರಾಗಿಣಿಗೆ ಬಿಡುಗಡೆ ಭಾಗ್ಯ
ಜ. 23ರಂದು ಜಾಮೀನು ಷರತ್ತುಗಳನ್ನು ವಿಧಿಸಿದ್ದ ಎನ್ಡಿಪಿಎಸ್ ಕೋರ್ಟ್ 3 ಲಕ್ಷ ರೂ. ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ ನೀಡುವಂತೆ ಸೂಚನೆ ನೀಡಿತ್ತು. ಕಳೆದ ಗುರುವಾರ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದ ರಾಗಿಣಿಯ ಆದೇಶ ಪ್ರತಿಯನ್ನು ಪಡೆದುಕೊಂಡು ಶುಕ್ರವಾರ ಮಧ್ಯಾಹ್ನದ ಬಳಿಕ ವಕೀಲರು ಬೆಂಗಳೂರಿಗೆ ಬಂದಿದ್ದರು. ಶನಿವಾರ ಎನ್ ಡಿಪಿಎಸ್ ಕೋರ್ಟ್ನಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ವಕೀಲರು ಹಾಜರು ಪಡಿಸಿದ್ದರು. ಆದರೆ, ರಾಗಿಣಿಗೆ ಜಾಮೀನು ಮಂಜೂರು ಮಾಡಲು ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು.
3 ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂಬ ಷರತ್ತುಗಳು ಕೋರ್ಟ್ ವಿಧಿಸಿತ್ತು. ಆ ಷರತ್ತುಗಳನ್ನು ಪೂರೈಸಲು ರಾಗಿಣಿ ಪರ ವಕೀಲರು ಸಮಯಾವಕಾಶ ಕೇಳಿದ್ದರು. ಇಂದು ಕೋರ್ಟ್ನ ಎಲ್ಲ ಷರತ್ತುಗಳನ್ನು ರಾಗಿಣಿ ಪರ ವಕೀಲರು ಪೂರೈಸಿದ್ದಾರೆ.
ರಾಗಿಣಿ ದ್ವಿವೇದಿ ಹಲವು ಬಾರಿ ಜಾಮೀನಿಗೆ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೂ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಆ ಆದೇಶ ಪ್ರತಿಯನ್ನು ಬೆಂಗಳೂರಿನ ಎನ್ಡಿಪಿಎಸ್ ನ್ಯಾಯಾಲಯಕ್ಕೆ ತಲುಪಿಸಲು ವಿಳಂಬವಾಗಿದ್ದರಿಂದ ಜಾಮೀನು ಸಿಕ್ಕ ನಂತರವೂ 4 ದಿನಗಳ ಕಾಲ ಅವರು ಜೈಲಿನಲ್ಲೇ ಕಾಲ ಕಳೆಯಬೇಕಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ