ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಮತ್ತೆ ಕ್ಷೇತ್ರ ಟೆನ್ಷನ್ ಶುರುವಾಗಿದೆ. ಸಿದ್ದರಾಮಯ್ಯ ಕೋಲಾರದಿಂದ (Kolar) ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಸಿದ್ದರಾಮಯ್ಯಗೆ ಕೋಲಾರ ಸೇಫ್ ಅಲ್ಲ ಅಂತೆ. ಕೋಲಾರದಿಂದ ಸ್ಪರ್ಧಿಸಿದರೆ ಸಿದ್ದರಾಮಯ್ಯ ಸೋಲುತ್ತಾರಂತೆ. ಕೋಲಾರ ಬಿಟ್ಟು ಸೇಫ್ ಕ್ಷೇತ್ರ ನೋಡಿಕೊಂಡರೆ ಒಳ್ಳೆದು ಅಂತ ರಾಹುಲ್ ಗಾಂಧಿ (Rahul Gandhi) ಪರೋಕ್ಷವಾಗಿ ವರುಣಾದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರಂತೆ. ಇದರ ನಡುವೆ ಹೈಕಮಾಂಡ್ (High Command ) ಎಲ್ಲಿ ಹೇಳಿದರೆ ಅಲ್ಲಿ ಸ್ಪರ್ಧಿಸುತ್ತೇನೆ ಅಂತ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿರುವ ಕಂದಾಯ ಸಚಿವ ಆರ್ ಅಶೋಕ್ (R Ashok) ಅವರು, ಸಿದ್ದರಾಮಯ್ಯ ಅವರಿಗೆ ಕರ್ನಾಟಕದ (Karnataka) 224 ವಿಧಾನಸಭಾ ಕ್ಷೇತ್ರಗಳು ಸೇಫ್ ಅಲ್ಲ, ಅವರು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಹೋದರೆ ಒಳ್ಳೆಯದು ಎಂದು ಟಾಂಗ್ ನೀಡಿದ್ದಾರೆ.
ಡಿಕೆಶಿ, ಸಿದ್ದು ಬಿಟ್ಟರೆ ಮೂರನೇ ಲೀಡರ್ ಇಲ್ಲ
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಅವರು, ವಿಜಯ ಸಂಕಲ್ಪ ಯಾತ್ರೆ ಮೂಲಕ ರಾಜ್ಯದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. 224 ಕ್ಷೇತ್ರವನ್ನ ತಲುಪಿದ್ದು ಯಾವುದಾದರೂ ಪಕ್ಷ ಇದ್ರೆ ಅದು ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ರಾಜ್ಯ ಮತ್ತು ಕೇಂದ್ರದ ಸಾಕಷ್ಟು ನಾಯಕರಿದ್ದಾರೆ.
ಆದರೆ ಕಾಂಗ್ರೆಸ್ಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇವರು ಬಿಟ್ಟರೆ ಮೂರನೇ ಲೀಡರ್ ಇಲ್ಲ. ಕಾಂಗ್ರೆಸ್ ನಾಯಕರು 224 ಕ್ಷೇತ್ರ ತಲುಪಿಲ್ಲ ಟಿಕೆಟ್ ಗಾಗಿ ದೆಹಲಿಗೆ ಹೋಗಿದ್ದಾರೆ. ನಾವು ರಾಜ್ಯ, ಕೇಂದ್ರದ ಅಭಿವೃದ್ಧಿ ಮುಂದಿಟ್ಟು ಜನರ ಬಳಿ ಹೋಗುತ್ತೇವೆ. ಕಾಂಗ್ರೆಸ್ ಇಲ್ಲ ಸಲ್ಲದ ಆರೋಪ ಮಾಡಿ ಅಧಿಕಾರದ ರುಚಿ ನೋಡಲು ಯೋಚನೆ ಮಾಡುವ ಪಕ್ಷ. ಕಾಂಗ್ರೆಸ್ ಪಕ್ಷದ 50 ವರ್ಷದ ಆಡಳಿತ ನೋಡಿ ಜನ ಬದಲಾವಣೆ ಬಯಸಿದ್ದಾರೆ ಎಂದರು.
ಸಿದ್ದರಾಮಯ್ಯ ಬೇರೆ ರಾಜ್ಯ, ದೇಶ ನೋಡಿಕೊಳ್ಳುವುದು ಉತ್ತಮ
ಸಿದ್ದರಾಮಯ್ಯ ಅವರು 224 ಕ್ಷೇತ್ರದಲ್ಲಿ ಎಲ್ಲಿ ನಿಂತರೂ ಸೋಲುತ್ತಾರೆ. ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿ ಬಿಟ್ಟು ಕೋಲಾರಕ್ಕೆ ಓಡಿ ಬಂದಿದ್ದಾರೆ. 224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯಗೆ ಒಳ್ಳೆಯದಿಲ್ಲ. ಸಿದ್ದರಾಮಯ್ಯ ಅವರು ಬೇರೆ ರಾಜ್ಯ ಅಥವಾ ದೇಶ ನೋಡಿಕೊಳ್ಳುವುದು ಉತ್ತಮ.
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಹೋದರೆ ಒಳ್ಳೆಯದು. ಅವರ ಪಕ್ಷದವರೇ ಗೆಲ್ಲಲು ಬಿಡುವುದಿಲ್ಲ, ಸಿದ್ದರಾಮಯ್ಯ ಅವರಿಗೆ ಅವರೇ ವಿಲನ್. ಡಿಕೆ ಶಿವಕುಮಾರ್ ಅವರನ್ನ ಸೋಲಿಸುತ್ತಾರೆ. ಇದೇ ವೇಳೆ ಸಚಿವ ಸೋಮಣ್ಣ ಅವರಿಗೆ ಅಸಮಾಧಾನ ಇಲ್ಲ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಪಕ್ಷದ ಪರವಾಗಿ ಸೋಮಣ್ಣನವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯ ನಿರ್ಧಾರವನ್ನು ಹೈಕಮಾಂಡ್ಗೆ ಬಿಟ್ಟಿದ್ದೇನೆ
ಬೆಂಗಳೂರಿನಲ್ಲಿ ಮಾತನಾಡಿರೋ ಸಿದ್ದರಾಮಯ್ಯ, ಕೋಲಾರದಿಂದ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ, ನನ್ನ ಹೆಸರು ಇನ್ನೂ ಕ್ಲಿಯರ್ ಮಾಡಿಲ್ಲ. ಸ್ಪರ್ಧೆಯ ನಿರ್ಧಾರವನ್ನು ಹೈಕಮಾಂಡ್ಗೆ ಬಿಟ್ಟಿದ್ದೇನೆ, ವರುಣಾದಿಂದ ಸ್ಪರ್ಧಿಸುವಂತೆ ಹೇಳಿದ್ರೆ ಸ್ಪರ್ಧಿಸುತ್ತೇನೆ ಅಂತ ಹೇಳಿದರು.
ಇದನ್ನೂ ಓದಿ: BS Yediyurappa: ಸಿದ್ದರಾಮಯ್ಯ ಬಗ್ಗೆ ನುಡಿದ 'ರಾಜಾಹುಲಿ' ಭವಿಷ್ಯ ನಿಜವಾಯ್ತಾ? ಮಾಜಿ ಸಿಎಂಗೆ ವರುಣಾ ಕ್ಷೇತ್ರ ಫಿಕ್ಸ್?
ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ
ಇನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವರುಣಾ ಕ್ಷೇತ್ರಕ್ಕೆ ಬಂದರೆ ಅವರಿಗೆ ಕ್ಷೇತ್ರ ಬಿಟ್ಟು ಕೊಡುತ್ತೇನೆ. ಕೋಲಾರ ಮಾತ್ರವಲ್ಲ, ಯಾವುದೇ ಕ್ಷೇತ್ರದಲ್ಲಿ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ