ಮಂಡ್ಯ: ಮಂಡ್ಯ (Mandya) ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ (R Ashok) ಅವರಿಗೆ ಸ್ವಪಕ್ಷದವರಿಂದಲೇ ವಿರೋಧ ಧ್ವನಿ ವ್ಯಕ್ತವಾಗಿದೆ. ಕಂದಾಯ ಸಚಿವರೂ ಆಗಿರುವ ಆರ್ ಅಶೋಕ್ ಅವರಿಗೆ ಈ ಹಿಂದೆ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರ ಮಂಡ್ಯ ಜಿಲ್ಲಾ ಉಸ್ತುವಾರಿಯ ಹೊಣೆ ನೀಡಿತ್ತು. ಆದರೆ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಕಾರಣ ಆರ್ ಅಶೋಕ್ ಅವರಿಗೆ ‘ಗೋ ಬ್ಯಾಕ್’ ಬಿಸಿ ತಟ್ಟಿದೆ.
ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲೇ ಸಚಿವ ಆರ್ ಅಶೋಕ್ ಅವರಿಗೆ ಇಂತಹದೊಂದು ಪ್ರತಿಭಟನೆ ವ್ಯಕ್ತವಾಗಿರುವುದರಿಂದ ಮುಜುಗರ ಉಂಟಾಗುವ ಸನ್ನಿವೇಶ ಎದುರಾಗಿದ್ದು, ಹೀಗಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹೊಣೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಚಿವ ಆರ್ ಅಶೋಕ್ ಅವರು ಮೂಲತಃ ಬೆಂಗಳೂರು ನಗರದವರಾಗಿದ್ದು, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿರುವುದರಿಂದ ಅತ್ತ ಮಂಡ್ಯಕ್ಕೂ ಹೋಗದೆ, ಇತ್ತ ಪದ್ಮನಾಭ ನಗರ ಕ್ಷೇತ್ರಕ್ಕೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಚಿವ ಆರ್ ಅಶೋಕ್ ಅವರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಸಿಕ್ಕಿದೆ ಎನ್ನಲಾಗಿದೆ.
ಹೊರೆಯಾದ ಹೊಣೆಗಾರಿಕೆ
ಇತ್ತ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿರುವುದರಿಂದ ತಾನು ಪ್ರತಿನಿಧಿಸುವ ಪದ್ಮನಾಭ ನಗರ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಕೊಡುವ ಅಗತ್ಯ ಇರುವುದರಿಂದ ಮಂಡ್ಯ ಜಿಲ್ಲೆಯ ಉಸ್ತುವಾರಿ ಹೊಣೆ ಹೊರೆಯಾಗಿದ್ದು, ಇದರಿಂದ ಮುಕ್ತಿ ಪಡೆಯಲು ಆರ್ ಅಶೋಕ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನ್ನ ಆಪ್ತರ ಬಳಿಯೂ ಆರ್ ಅಶೋಕ್ ಹೇಳಿಕೊಂಡಿದ್ದು, ‘ಈಗಾಗಲೇ ಮುರ್ನಾಲ್ಕು ಜವಾಬ್ದಾರಿ ನನ್ನ ಬಳಿ ಇವೆ. ಸದ್ಯ ಸಿನಿಮೋತ್ಸವದ ಉಸ್ತುವಾರಿ ಸಹ ನಾನೇ ವಹಿಸಿಕೊಂಡಿರುವೆ. ಇದ್ರಿಂದ ಕ್ಷೇತ್ರದ ಕಡೆ ಗಮನ ಕೊಡಲು ಅಗುವುದಿಲ್ಲ. ಹೀಗಾಗಿ ಮಂಡ್ಯ ಉಸ್ತುವಾರಿಯಿಂದ ನನ್ನ ಬಿಟ್ಟು ಬೇರೆಯವರಿಗೆ ಕೊಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆರ್ ಅಶೋಕ್ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಂದಾಯ ಸಚಿವ ಆಗಿರುವ ಆರ್ ಅಶೋಕ್ ಅವರು, ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಪಕ್ಷದ ಕೆಲ ಕಾರ್ಯಕ್ರಮಗಳ ಉಸ್ತುವಾರಿಯೂ ಸೇರಿದಂತೆ ತಾನು ಪ್ರತಿನಿಧಿಸುವ ಪದ್ಮನಾಭ ನಗರದ ಕ್ಷೇತ್ರದ ಕೆಲಸವನ್ನೂ ಮಾಡಬೇಕಾದ ಒತ್ತಡದಲ್ಲಿದ್ದು, ಇದರ ಮಧ್ಯೆ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉಸ್ತುವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಜವಾಬ್ದಾರಿಯೂ ಅವರ ಮೇಲೆ ಇದೆ. ಹೀಗಾಗಿ ಆರ್ ಅಶೋಕ್ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹೊಣೆಯಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸಿಎಂಗೆ ಮನವಿ ಮಾಡಿರುವ ಅಶೋಕ್
ಆರ್ ಅಶೋಕ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತನ್ನ ಮೇಲೆ ಇರುವ ಜವಾಬ್ದಾರಿಯ ಒತ್ತಡದ ಬಗ್ಗೆ ಈಗಾಗಲೇ ಹಲವು ಬಾರಿ ಮನವರಿಕೆ ಮಾಡಿದ್ದು, ಇಷ್ಟೊಂದು ಜವಾಬ್ದಾರಿಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಹೀಗಾಗಿ ಮಂಡ್ಯ ಜಿಲ್ಲೆ ತನಗೆ ದೂರ ಆಗುವುದರಿಂದ ಆ ಜಿಲ್ಲೆಯ ಉಸ್ತುವಾರಿ ಹೊಣೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ತನ್ನ ಸ್ಥಾನಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡುವಂತೆ ಮವಿ ಮಾಡಿದ್ದರು. ಆದರೆ ಆರ್ ಅಶೋಕ್ ಅವರ ಮನವಿಯನ್ನು ಆಲಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ಜೊತೆಗೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಇರುವುದರಿಂದ ನೀವೇ ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ