ಐಟಿ ಉದ್ಯೋಗಕ್ಕೆ ಗುಡ್​ಬೈ ಹೇಳಿ ಚಾಕಲೇಟ್​ ಉದ್ಯಮದಲ್ಲಿ ಯಶಸ್ಸು ಕಂಡ ಪುತ್ತೂರಿನ ಮಹಿಳೆ

 'ಅನುತ್ತಮ'  ಹೆಸರಿನ ಚಾಕಲೇಟ್ ತಯಾರಿಸುತ್ತಿರುವ ಸ್ವಾತಿ, ಚಾಕಲೇಟು ಉದ್ಯಮದ ಎಲ್ಲಾ ಜವಾಬ್ದಾರಿಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಆನ್ ಲೈನ್ ಮಾರುಕಟ್ಟೆಯನ್ನೇ ಅವಲಂಭಿಸಿರುವ ಸ್ವಾತಿ ಇನ್ಸ್‌ಟ್ರಾಗ್ರಾಂ, ಫೇಸ್ಪುಕ್ ಹಾಗೂ ಅಮೆಜಾನ್ ನಲ್ಲಿ ತಮ್ಮ ಚಾಕಲೇಟುಗಳನ್ನು ಮಾರಾಟ ಮಾಡುತ್ತಿದ್ದಾರೆ

ಸ್ವಾತಿ

ಸ್ವಾತಿ

  • Share this:
ಪುತ್ತೂರು (ಆ.3): ಕೋವಿಡ್-19 ಲಾಕ್‌ಡೌನ್‌ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಉದ್ಯಮವೊಂದನ್ನು ಸ್ಥಾಪನೆ ಮಾಡಿ, ಹೇಗೆ ಯಶಸ್ವಿ ಉದ್ಯಮಿಯಾಗಿ ಪರಿವರ್ತನೆಯಾಗಬಹುದು ಎಂಬುದಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಮಹಿಳೆಯೊಬ್ಬರು ಉದಾಹರಣೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ, ಕೆಲಸ, ಟ್ರಾಫಿಕ್, ಮನೆ ಕೆಲಸ ಹೀಗೆ ಒತ್ತಡ ಜೀವನ ನಡೆಸುತ್ತಿದ್ದ ಮಹಿಳೆ  ಐಟಿ ಕಂಪನಿಗೆ ರಾಜೀನಾಮೆ ನೀಡಿ, ಈಗ ಸ್ವಂತ ಉದ್ಯಮ ಸ್ಥಾಪಿಸುವ ಜೊತೆಗೆ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗವನ್ನೂ ನೀಡುವ ಹಂತಕ್ಕೆ ತಲುಪಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿ ರೆಂಜ ನಿವಾಸಿಯಾಗಿರುವ ಸ್ವಾತಿ ಕಲ್ಲೆಗುಂಡಿ ಇದೀಗ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಲಾಕ್ ಡೌನ್  ಸಂದರ್ಭದಲ್ಲಿ ಮಗು, ಪತಿಯೊಡನೆ ಊರಿಗೆ ಬಂದು ಸ್ವಾತಿ ನೆಲೆಸಿದರು. ಇದೇ ಸಂದರ್ಭದಲ್ಲಿ ಮನೆಯಲ್ಲಿ ಬೆಳೆಸಿದ ಕೂಕ್ಕೋ ವನ್ನು ಲಾಕ್ ಡೌನ್ ಕಾರಣದಿಂದಾಗಿ ಮಾರುಕಟ್ಟೆಗೆ ಹಾಕಲಾಗದ ಕೊಳೆಯುವ ಸ್ಥಿತಿಯಲ್ಲಿತ್ತು. ಈ ಸಂದರ್ಭ ಸ್ವಾತಿ ಹಾಗೂ ಅವರ ಪತಿ ಬಾಲಸುಬ್ರಹ್ಮಣ್ಯ ಅವರು ಯೋಚನೆ ಮೂಡಿದ್ದು ಚಾಕಲೇಟ್ ತಯಾರಿಕೆ.

ತಾನೂ ಉದ್ಯಮಿಯಾಗಬಹುದು, ಮಾವ ಬೆಳೆಸಿದ ಕೋಕೊಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂಬ ಚಿಂತನೆಯನ್ನು  ಬೆನ್ನತ್ತಿ ಹೊರಟ ಸ್ವಾತಿ ಅಂತರ್ಜಾಲದಲ್ಲಿ ಚಾಕಲೇಟ್ ತಯಾರಿಗೆ ಬೇಕಾದ ಹುಡುಕಾಟವನ್ನು ನಡೆಸಿದರು. ತಯಾರಿಕೆ, ತಂತ್ರಜ್ಞಾನ, ಗುಣಮಟ್ಟ, ತಯಾರಿಸಲು ಪರವಾನಗಿ ಹೀಗೆ ಎಲ್ಲ ಮಗ್ಗುಲುಗಳ ಮಾಹಿತಿ ಕಲೆ ಹಾಕಿದರು. ಪತಿ ಬಾಲ ಸುಬ್ರಹ್ಮಣ್ಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವುದರಿಂದ ಯಂತ್ರೋಪಕರಣ, ತಂತ್ರಜ್ಞಾನದ ಹುಡುಕಾಟಕ್ಕೆ ಸಹಾಯಕವಾಯಿತು. ಬಳಿಕ, ಚಾಕಲೇಟ್  ತಯಾರಿಕೆ ಕುರಿತು ಪತಿ ಮತ್ತು ಪತ್ನಿ ಇಬ್ಬರೂ ವೃತ್ತಿಪರ ತರಬೇತಿ ಪಡೆದರು. ತಾನು ದುಡಿದು ಉಳಿಸಿದ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು ಯಂತ್ರೋಪಕರಣಗಳನ್ನು ಆನ್ ಲೈನ್ ಮೂಲಕವೇ ಸಮಾಲೋಚನೆ ನಡೆಸಿ , ಖರೀದಿಸಿ ಅಳವಡಿಸಿದ್ದಾರೆ.

'ಬೀನ್ ಟು ಬಾರ್' ಎನ್ನುವ ಈ ಪರಿಕಲ್ಪನೆ ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿದೆ. ಇಲ್ಲಿ ತಯಾರಕರು ಸಾವಯವ ಕೋಕೊ ಬೆಳೆದು ಅಥವಾ ಸಾವಯವ ಬೀಜಗಳನ್ನು ಖರೀದಿಸಿ, ಖುದ್ದಾಗಿ ಅವರೇ ಚಾಕಲೇಟ್ ಬಾರ್ ತಯಾರಿಸುವುದು 'ಬೀನ್ ಟು ಬಾರ್' ನ ಪರಿಕಲ್ಪನೆಯಾಗಿದೆ. ಇದೇ ರೀತಿ ಸ್ವಾತಿ ಕೂಡಾ ತಮ್ಮ ತೋಟದಲ್ಲಿ ಬೆಳೆದ ಕೋಕೋ ಬೀಜಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಚಾಕಲೇಟ್ ಬಾರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ಗ್ರಾಮೀಣ ಭಾಗದ ಮಹಿಳೆಗೂ ಉದ್ಯೋಗವನ್ನು ನೀಡುವ ಮೂಲಕ ಉದ್ಯೋಗದಾತೆಯಾಗಿಯೂ ಮೂಡಿಬಂದಿದ್ದಾರೆ.

ಇದನ್ನು ಓದಿ: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಓಲಾ ಇ ಸ್ಕೂಟರ್: ಬೆಲೆ ಎಷ್ಟು ಗೊತ್ತಾ?

'ಅನುತ್ತಮ'  ಹೆಸರಿನ ಚಾಕಲೇಟ್ ತಯಾರಿಸುತ್ತಿರುವ ಸ್ವಾತಿ, ಚಾಕಲೇಟು ಉದ್ಯಮದ ಎಲ್ಲಾ ಜವಾಬ್ದಾರಿಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಆನ್ ಲೈನ್ ಮಾರುಕಟ್ಟೆಯನ್ನೇ ಅವಲಂಭಿಸಿರುವ ಸ್ವಾತಿ ಇನ್ಸ್‌ಟ್ರಾಗ್ರಾಂ, ಫೇಸ್ಪುಕ್ ಹಾಗೂ ಅಮೆಜಾನ್ ನಲ್ಲಿ ತಮ್ಮ ಚಾಕಲೇಟುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಚಾಕಲೇಟ್ ಗೆ ಯಾವುದೇ ರಾಸಾಯನಿಕ ಬಳಸಿ, ಸಕ್ಕರೆ ಬಳಸದೆ ಕೇವಲ ಬೆಲ್ಲವನ್ನು ಬಳಸಿಕೊಂಡು ಚಾಕಲೇಟ್ ತಯಾರಿಸಲಾಗುತ್ತಿದೆ. ಡಾರ್ಕ್ ಚಾಕಲೇಟ್ ಇದಾಗಿದ್ದು, ಉಳಿದ ಚಾಕಲೇಟ್ ಗಳಿಗಿಂತ ಕೊಂಚ ಭಿನ್ನ ರುಚಿಯನ್ನೂ ಇದು ಹೊಂದಿದೆ. ತಿಂಗಳಿಗೆ 800 ಬಾರ್ ಚಾಕಲೇಟುಗಳಿಗೆ ಬೇಡಿಕೆಯಿದ್ದು, ಇನ್ನಷ್ಟು ಬೇಡಿಕೆ ಬರುವ ನಿರೀಕ್ಷೆಯಲ್ಲೂ ಸ್ವಾತಿಯವರು ಇದ್ದಾರೆ.

ಚಾಕಲೇಟ್ ತಯಾರಿಸಲು ಆರಂಭಿಸಿದ ಬಳಿಕ ಸುತ್ತಮುತ್ತಲಿನ ಕೃಷಿಕರಿಗೂ ಸಾವಯವ ಕೊಕ್ಕೊ ಬೆಳೆಸಲು ಸ್ವಾತಿ ಪ್ರೇರಣೆ ನೀಡುತ್ತಿದ್ದಾರೆ. ಈ ಬಾರಿಯ ಲಾಕ್‌ಡೌನ್‌ ಸಂದರ್ಭ ಸಾವಯವ ಮಾದರಿಯಲ್ಲಿ ಬೆಳೆಸಿದ ಸುತ್ತಮುತ್ತಲಿನ ಕೃಷಿಕರಿಂದ ಮಾರುಕಟ್ಟೆ ಬೆಲೆಗಿಂತ ಅಧಿಕ ಮೊತ್ತ ನೀಡಿ ಕೊಕ್ಕೊ ಖರೀದಿಸಿದ್ದಾರೆ. ಇದರಿಂದಾಗಿ ಕೃಷಿಕರಿಗೂ ಉತ್ತಮ ಬೆಲೆ ಸಿಕ್ಕಿದೆ, ಪ್ರಸ್ತುತ ಸುಮಾರು 14 ಬಗೆಯ ಚಾಕಲೇಟ್ ಲಭ್ಯವಿದೆ. ಚಾಕಲೇಟ್‌ನ ರುಚಿಗೆ ಇನ್ನಷ್ಟು ಸಂಶೋಧನೆಯಲ್ಲಿ ಸ್ವಾತಿ ಅವರು ತೊಡಗಿಸಿಕೊಂಡಿದ್ದಾರೆ. ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ವೃತ್ತಿಯೊಂದಿಗೆ ಪತಿಯೂ ಸಂಶೋಧನೆ ನಡೆಸುತ್ತಿದ್ದಾರೆ.
Published by:Seema R
First published: