ಪುತ್ತೂರು: ಮಳೆಗಾಲದಲ್ಲಿ ಜೀವ ಭಯದಲ್ಲಿ ಬದುಕುತ್ತಿರುವ ಅಸಹಾಯಕ ಕುಟುಂಬಗಳು

ಚಾವಣಿಗೆ ಪ್ಲಾಸ್ಟಿಕ್ ತರ್ಪಾಲು ಹೊದಿಸಿಕೊಂಡಿರುವ ಈ ಮನೆಗಳು ಮಳೆಗಾಲದ ಸಮಯದಲ್ಲಿ ಖಾಲಿಯಾಗುತ್ತೆ. ಮಳೆಗೆ ಮನೆ ಗೋಡೆಗಳು ಬೀಳುವ ಆತಂಕದಿಂದ ಇಲ್ಲಿನ ಕುಟುಂಬಗಳು ತಮ್ಮ ಮನೆಯ ಹೆಂಚುಗಳನ್ನೆಲ್ಲಾ ಬಿಚ್ಚಿ ಪ್ಲಾಸ್ಟಿಕ್ ತರ್ಪಾಲು ಹಾಕಿ ಮನೆ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಾರೆ.

news18-kannada
Updated:August 4, 2020, 4:35 PM IST
ಪುತ್ತೂರು: ಮಳೆಗಾಲದಲ್ಲಿ ಜೀವ ಭಯದಲ್ಲಿ ಬದುಕುತ್ತಿರುವ ಅಸಹಾಯಕ ಕುಟುಂಬಗಳು
ಸಾಂದರ್ಭಿಕ ಚಿತ್ರ
  • Share this:
ದಕ್ಷಿಣ ಕನ್ನಡ(ಆ.04): ಮಳೆಗಾಲದ ಜೊತೆಗೆ ಕೆಲವು ಸಮಸ್ಯೆಗಳೂ ಬರೋದು ಸಹಜ. ಮಳೆಗಾಲದ ಸಮಯದಲ್ಲಿ ರೋಗ-ರುಜಿನಗಳು, ನೆರೆ- ಪ್ರವಾಹಗಳು ಜನರನ್ನು ಕಾಡೋದೂ ಸಹಜವೇ. ಇಂಥ ಸಂದರ್ಭಗಳಲ್ಲಿ ಜನ ಮನೆ ತೊರೆದು ಬೇರೆಡೆಗೆ ಸ್ಥಳಾಂತರಗೊಳ್ಳೋದು ಕೂಡಾ ಸಾಮಾನ್ಯವೇ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಲವು ಕುಟುಂಬಗಳು ಮಳೆ ಆರಂಭಗೊಂಡಂತೆ ಮನೆ ಖಾಲಿ ಮಾಡಿ ಬೇರೆಡೆಗೆ ತೆರಳುತ್ತದೆ. ಮಳೆಗೆ ಗುಡ್ಡ ಜರಿಯೋದು, ಮರ ಬೀಳೋ ಭಯದಿಂದ ಇಲ್ಲಿನ ಜನ ತಮ್ಮ ಜೀವದ ಜೊತೆಗೆ ಮನೆಯನ್ನೂ ಉಳಿಸುತ್ತಾರೆ. ಹೇಗೆ ಕೇಳ್ತೀರಾ ಈ ಸ್ಟೋರಿ ನೋಡಿ.

ಚಾವಣಿಗೆ ಪ್ಲಾಸ್ಟಿಕ್ ತರ್ಪಾಲು ಹೊದಿಸಿಕೊಂಡಿರುವ ಈ ಮನೆಗಳು ಮಳೆಗಾಲದ ಸಮಯದಲ್ಲಿ ಖಾಲಿಯಾಗುತ್ತೆ. ಮಳೆಗೆ ಮನೆ ಗೋಡೆಗಳು ಬೀಳುವ ಆತಂಕದಿಂದ ಇಲ್ಲಿನ ಕುಟುಂಬಗಳು ತಮ್ಮ ಮನೆಯ ಹೆಂಚುಗಳನ್ನೆಲ್ಲಾ ಬಿಚ್ಚಿ ಪ್ಲಾಸ್ಟಿಕ್ ತರ್ಪಾಲು ಹಾಕಿ ಮನೆ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಾರೆ.

ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ವ್ಯಾಪ್ತಿಯ ಬೀರಮಲೆ ಬೆಟ್ಟದಲ್ಲಿರುವ ಬಡ ಕುಟುಂಬಗಳ ಮಳೆಗಾಲದ ಪಾಡು. ಈ ಬೆಟ್ಟದ ಮೇಲೆ ಮೂರು ಇಂಥಹ ಮನೆಗಳಿದ್ದು, ಈ ಮನೆಗಳಿಗೆ ಸಂಪರ್ಕ ಕಲ್ಪಿಸಲು ಸರಿಯಾದ ರಸ್ತೆಯ ಸಂಪರ್ಕವಿಲ್ಲ. ಕಳೆದ 70 ವರ್ಷಗಳಿಂದ ಈ ಕುಟುಂಬಗಳು ಈ ಬೆಟ್ಟದ ಮೇಲೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇಲ್ಲಿ ಈವರೆಗೂ ವಿದ್ಯುತ್ ಸಂಪರ್ಕವೇ ತಲುಪಿಲ್ಲ.

ಈ ಮನೆಗಳ ಕೂಗಳತೆ ದೂರದಲ್ಲಿ ಹೈ ಟೆನ್ಷನ್ , ಲೋ ಟೆನ್ಷನ್ ತಂತಿಗಳು ಸಾಕಷ್ಟು ಹಾದುಹೋಗುತ್ತಿದ್ದರೂ, ಈ ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಪುತ್ತೂರು ಸ್ಥಳೀಯಾಡಳಿತಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಪ್ರತೀ ಚುನಾವಣೆಯ ಸಂದರ್ಭದಲ್ಲಿ ಎದ್ದುಬಿದ್ದು ಈ ಮನೆಗಳಿಗೆ ಮತ ಕೇಳಲು ಹೋಗುವ ಜನಪ್ರತಿನಿಧಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆಯನ್ನೇನೋ ನೀಡಿ ಹೋಗುತ್ತಾರೆ. ಆದರೆ ಈವರೆಗೂ ವಿದ್ಯುತ್ ಭಾಗ್ಯ ಮಾತ್ರ ಈ ಮನೆಗಳನ್ನು ತಲುಪಿಲ್ಲ. ಕತ್ತಲೆಯಲ್ಲಿ ದೀಪ ಉರಿಸಲು ಸೀಮೆ ಎಣ್ಣೆಯೂ ಇಲ್ಲದ ಕಾರಣ ಡೀಸೇಲ್ ಬಳಸಿ ಇಲ್ಲಿನ ಕುಟುಂಬಗಳು ತಮ್ಮ ಕತ್ತಲನ್ನು ಕಳೆಯುತ್ತಿವೆ.

ಪ್ರತೀ ಮಳೆಗಾಲದ ಸಂದರ್ಭದಲ್ಲೂ ಮನೆ ಮೇಲೆ ಗುಡ್ಡ ಜರಿಯೋದು, ಮರ ಬೀಳೋದು ಸಾಮಾನ್ಯವಾಗಿ ಬಿಟ್ಟಿದೆ. ಪರಿಶಿಷ್ಟ ಪಂಗಡಗಳಿಗೆ ಸೇರಿದ ಈ ಕುಟುಂಬಗಳ ಮನೆಯನ್ನು ರಿಪೇರಿ ಮಾಡಲು ಪುತ್ತೂರು ನಗರಸಭೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವೂ ಆಗಿಲ್ಲ. ಈ ಕಾರಣಕ್ಕಾಗಿ ಇಲ್ಲಿನ ಕುಟುಂಬಗಳು ಮಳೆ ಹೆಚ್ಚಾದಂತೆ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳುತ್ತವೆ. ಅಲ್ಲದೆ ಮನೆಯನ್ನು ರಕ್ಷಿಸುವುದಕ್ಕೋಸ್ಕರ ಮನೆಯ ಹೆಂಚನ್ನೂ ತೆಗೆದು ಮೇಲ್ಫಾವಣಿಗೆ ಪ್ಲಾಸ್ಟಿಕ್ ಹಾಕಿ ಹೊದಿಯಲಾಗುತ್ತದೆ. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಈ ಕುಟುಂಬಗಳಿಗೆ ಪ್ರತೀ ಬಾರಿ ಮನೆ ರಿಪೇರಿ ಮಾಡುವುದು ಸಾಧ್ಯವಿಲ್ಲದ ಕಾರಣ ಹೆಂಚುಗಳನ್ನು ತೆಗೆದು ಜೋಪಾನವಾಗಿ ಜೋಡಿಸಿಟ್ಟು, ಮಳೆ ಹೋದ ಮೇಲೆ ಮತ್ತೆ ಹೆಂಚುಗಳನ್ನು ಹಾಕಿ ವಾಸ ಮಾಡುತ್ತಾರೆ.

ಇದನ್ನೂ ಓದಿ: Ayodhya Ram Mandir: ರಾಮ ಎಲ್ಲರಲ್ಲೂ ಇದ್ದಾನೆ, ಅಯೋಧ್ಯೆ ಕಾರ್ಯಕ್ರಮ ದೇಶದ ಏಕತೆಗೆ ದಾರಿಯಾಗಲಿ: ಪ್ರಿಯಾಂಕಾ ಗಾಂಧಿನೀರಿನ ಸಂಪರ್ಕವೊಂದನ್ನು ಬಿಟ್ಟರೆ ಈ ಕುಟುಂಬಗಳಿಗೆ ಉಳಿದ ಮೂಲಸೌಕರ್ಯಗಳು ಮರೀಚಿಕೆಯೇ ಆಗಿವೆ. ಆನಾರೋಗ್ಯದ ಸಂದರ್ಭದಲ್ಲಿ ಬೆಟ್ಟ-ಗುಡ್ಡಗಳನ್ನು ಹತ್ತಿ ,ಇಳಿದು ಆಸ್ಪತ್ರೆ ಹೋಗಬೇಕಾದ ಅನಿವಾರ್ಯತೆಯೂ ಇಲ್ಲಿನ ಜನರದ್ದಾಗಿದೆ. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎನ್ನುವ ಸರಕಾರಗಳ ಭರವಸೆಗಳು ಈ ಕುಟುಂಬಗಳಿಗೆ ಅನ್ವಯವಾಗುವುದಿಲ್ಲವೇ ಎನ್ನುವ ಪ್ರಶ್ನೆಯೂ ಈ ಮನೆಗಳನ್ನು ನೋಡಿದವರಲ್ಲಿ ಮೂಡಲಾರಂಭಿಸಿದೆ.
Published by: Ganesh Nachikethu
First published: August 4, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading