HOME » NEWS » State » PUTTUR STUDENTS HELPING CANCER PATIENTS THROUGH HAIR DONATION AKP HK

ಕೇಶ ದಾನದ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವಾಗುತ್ತಿರುವ ಪುತ್ತೂರಿನ ವಿದ್ಯಾರ್ಥಿಗಳು

ತಲೆಗೂದಲಿಲ್ಲದೆ ಹೆಣ್ಣು ಮಗುವೊಬ್ಬಳು ಯಾವ ರೀತಿಯ ಸಂಕಟ ಪಡುತ್ತಾಳೆ ಎನ್ನುವುದನ್ನು ಮನಗಂಡಿದ್ದ ವಿದ್ಯಾರ್ಥಿಗಳು ತಮ್ಮ ತಲೆಗೂದಲನ್ನು ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗೆ ದಾನವಾಗಿ ನೀಡಲು ತೀರ್ಮಾನಿಸಿದ್ದಾರೆ.

news18-kannada
Updated:December 22, 2020, 7:29 AM IST
ಕೇಶ ದಾನದ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವಾಗುತ್ತಿರುವ ಪುತ್ತೂರಿನ ವಿದ್ಯಾರ್ಥಿಗಳು
ಕೇಶ ದಾನಕ್ಕೆ ಮುಂದಾದ ವಿದ್ಯಾರ್ಥಿಗಳು
  • Share this:
ಪುತ್ತೂರು(ಡಿಸೆಂಬರ್​. 22): ಚೆಲುವೆಯ ಅಂದದ ಮೊಗಕೆ ಕೇಶವೂ ಭೂಷಣ. ಕೇಶವನ್ನು ಯಾವ ರೀತಿಯೆಲ್ಲಾ ಶೃಂಗರಿಸಿ ಅಂದವಾಗುವಂತೆ ಮಾಡುವುದು ಪ್ರತಿಯೊಬ್ಬ ಹೆಣ್ಣಿನ ಆಶೆಯೂ‌ ಕೂಡಾ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ‌ಕೆಲವು ವಿದ್ಯಾರ್ಥಿಗಳು ಈ ಅಂದದ ಕೇಶ ರಾಶಿಯನ್ನು ದಾನ ಮಾಡಲು ತೀರ್ಮಾನಿಸಿದ್ದಾರೆ. ಕ್ಯಾನ್ಸರ್ ನಂತಹ ಮಹಾ ಮಾರಿಗೆ ಸಿಲುಕಿ ತಲೆಗೂದಲನ್ನು ಕಳೆದುಕೊಂಡವರಿಗೆ ಈ ವಿದ್ಯಾರ್ಥಿಗಳು ತಮ್ಮ ಕೇಶ ನೀಡಲಿದ್ದಾರೆ. ಹೆಣ್ಣಿನ ಸೌಂದರ್ಯಕ್ಕೆ ಯಾವ ರೀತಿ ಕಣ್ಣು, ಮೂಗು, ಬಾಯಿ ಭೂಷಣವೋ, ಅದೇ ರೀತಿ ಹೆಣ್ಣಿನ ಸೌಂದರ್ಯವನ್ನು ಇನ್ನಷ್ಟು ಮೆರಗುಗೊಳಿಸೋದು ಆಕೆಯ ಸುಂದರ ಕೇಶ ರಾಶಿ. ಇಂತಹ ಕೇಶ ರಾಶಿಯನ್ನು ತಮ್ಮಂತೆಯೇ ಇತರರೂ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ತಂಡವೊಂದು‌ ಸಿದ್ಧತೆ‌ ನಡೆಸಿದೆ. ದಕ್ಷಿಣ ಕನ್ನಡ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9 ಮಂದಿ ವಿದ್ಯಾರ್ಥಿಗಳು ಈ ರೀತಿಯ ಪ್ರಯತ್ನವೊಂದಕ್ಕೆ ಕೈ ಹಾಕಿದೆ.

ಇಲ್ಲಿನ ವಿದ್ಯಾರ್ಥಿನಿಯೊಬ್ಬಳು ಮಡಿಕೇರಿಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಆಕೆಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಯೊಬ್ಬರು ಒಂದು ದಿನ ತಲೆಗೆ ಸ್ಕಾರ್ಫ್ ಹಾಕಿ ಬಂದಿದ್ದರು. ಇದಕ್ಕೆ ಕಾರಣವೇನು ಎನ್ನುವುದನ್ನು ಕಂಡುಕೊಂಡಾಗ ಶಿಕ್ಷಕಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಆ ವಿದ್ಯಾರ್ಥಿನಿಗೆ ದೊರೆತ್ತಿರುತ್ತದೆ. ಕ್ಯಾನ್ಸರ್ ನಿಂದ ಮುಕ್ತಿ ಪಡೆಯಲು ಕಿಮೋಥೆರಪಿ ಮಾಡಿಸಿಕೊಂಡ ಕಾರಣ ಆ ಶಿಕ್ಷಕಿಯ ಇಡೀ ಕೇಶ ರಾಶಿಯೇ ಉದುರಿ ಹೋಗಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಎಲ್ಲಾ ರೋಗಿಗಳ ಕಥೆಯೂ ಇದೇ ಎಂದು ಮನಗಂಡ ವಿದ್ಯಾರ್ಥಿನಿ ಇದೀಗ ಕಲಿಯುತ್ತಿರುವ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಪಾಠಿಗಳಲ್ಲಿ ಇಂಥಹ ರೋಗಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವ ಯೋಚನೆಯನ್ನು ಬಿತ್ತುತ್ತಾರೆ‌.

ತಲೆಗೂದಲಿಲ್ಲದೆ ಹೆಣ್ಣು ಮಗುವೊಬ್ಬಳು ಯಾವ ರೀತಿಯ ಸಂಕಟ ಪಡುತ್ತಾಳೆ ಎನ್ನುವುದನ್ನು ಮನಗಂಡಿದ್ದ ವಿದ್ಯಾರ್ಥಿಗಳು ತಮ್ಮ ತಲೆಗೂದಲನ್ನು ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗೆ ದಾನವಾಗಿ ನೀಡಲು ತೀರ್ಮಾನಿಸಿದ್ದಾರೆ. ಚೆನೈನ ಕ್ಯಾನ್ಸರ್ ರೋಗಿಗಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಎನ್.ಜಿ.ಒ ಜೊತೆ ಸೇರಿ ವಿದ್ಯಾರ್ಥಿಗಳು ಈ ಕೇಶ ದಾನದ ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ತಮ್ಮ ವಯಸ್ಸಿನ ವಿದ್ಯಾರ್ಥಿಗಳಿಗೆ ಈ ವಿಚಾರವನ್ನು ಮನವೊಲಿಸಿ ಅವರಲ್ಲೂ ಕೇಶ ದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ‌.

ಚೆನೈನಲ್ಲಿರುವ ಎನ್.ಜಿ.ಒ ಕಂಪನಿ ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗಾಗಿ ಉಚಿತವಾಗಿ ವಿಗ್ ನೀಡುತ್ತಿದ್ದು, ಈ ವಿಗ್ ಗಾಗಿ ತಲೆಗೂದಲನ್ನು ಪುತ್ತೂರಿನ ಈ ವಿದ್ಯಾರ್ಥಿಗಳು ಪೂರೈಸಲಿದ್ದಾರೆ. ಈಗಾಗಲೇ 50 ವಿದ್ಯಾರ್ಥಿಗಳನ್ನು ತಮ್ಮ ಜೊತೆ ಸೇರಿಸಿಕೊಂಡಿರುವ ಈ ವಿದ್ಯಾರ್ಥಿಗಳ ತಂಡ ಇನ್ನಷ್ಟು ಜನರನ್ನು ತಮ್ಮ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದೆ ಎನ್ನುತ್ತಾರೆ ಯೋಜನೆ ಪ್ರಾರಂಭಿಸಿದ ವಿದ್ಯಾರ್ಥಿನಿ ಆದ್ಯ ಸುಲೋಚನ್.

8 ರಿಂದ 12 ಇಂಚಿನ ತನಕ ಉದ್ದವಿರುವ ತಲೆಗೂದಲು ಹೊಂದಿರುವ ಮಹಿಳೆ,ಪುರುಷ ಹಾಗೂ ಎಲ್ಲಾ ವಿಭಾಗದವರೂ ತಮ್ಮ ತಲೆಗೂದಲನ್ನು ಈ ವಿದ್ಯಾರ್ಥಿಗಳಿಗೆ ನೀಡಬಹುದಾಗಿದೆ‌. ತಲಗೂದಲನ್ನು ನೀಡಲು ಇಚ್ಛಿಸುವವರು ಈ ವಿದ್ಯಾರ್ಥಿಗಳನ್ನು ಸಂಪರ್ಕಿಸಿದಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಈ ವಿದ್ಯಾರ್ಥಿಗಳು ನಿರ್ವಹಿಸಲಿದ್ದಾರೆ.

ಇದನ್ನೂ ಓದಿ : ಇ-ಆಫೀಸ್ ವ್ಯವಸ್ಥೆ ಜಾರಿ ಮಾಡದ ವಿವಿಗಳ ಕುಲಪತಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿಎಂ ಅಶ್ವತ್ಥನಾರಾಯಣ

ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 50 ಸಾವಿರಕ್ಕೂ ಮಿಕ್ಕಿದ ಜನ ಕ್ಯಾನ್ಸರ್ ರೋಗದಿಂದಾಗಿ ತಮ್ಮ ತಲೆಗೂದಲನ್ನು ಕಳೆದುಕೊಂಡಿದ್ದಾರೆ. ಅದೇ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂಖ್ಯೆ 17 ಸಾವಿರದಷ್ಟಿದ್ದು,ಇಂಥವರಿಗೆ ವಿಗ್ ನೀಡುವ ಇಚ್ಛೆ ನಮ್ಮದು ಎನ್ನುತ್ತಾರೆ ಇನ್ನೋರ್ವ ದಾನಿ ವಿದ್ಯಾರ್ಥಿನಿ ಪಾರ್ವತಿ.
Youtube Video

ಈಗಾಗಲೇ ಕೆಲವು ವಿದ್ಯಾರ್ಥಿಗಳು ತಮ್ಮ ತಲೆಗೂದಲನ್ನು ದಾನ ಮಾಡಿದ್ದು, ಇನ್ನ ಕೆಲವು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೂ ಮಕ್ಕಳ ಈ ಕೇಶದಾನ ಯೋಚನೆಗೆ ಸ್ಪಂದನೆ ನೀಡಿದ್ದಾರೆ. ಕ್ಯಾನ್ಸರ್ ರೋಗಿಳಿಗಾಗಿ ಮಿಡಿದ ಈ ವಿದ್ಯಾರ್ಥಿಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
Published by: G Hareeshkumar
First published: December 22, 2020, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories