Puttur: ಭಾರತದ ಭೂಪಟವನ್ನು ತಿರುಚಿ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಣ ಇಲಾಖೆ

ಮಾರ್ಚ್ 19 ರಂದು ಶನಿವಾರ  ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯು ಪೂರ್ವ ಸಿದ್ಧತಾ (ಪ್ರಿಪರೇಟರಿ) ಪರೀಕ್ಷೆಯಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಇತಿಹಾಸ ಪ್ರಶ್ನೆಪತ್ರಿಕೆಯ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ.

ಪ್ರಶ್ನೆ ಪತ್ರಿಕೆ

ಪ್ರಶ್ನೆ ಪತ್ರಿಕೆ

  • Share this:
ಪಾಕಿಸ್ತಾನ,ಚೀನಾ ಹಾಗೂ ಇತರ ದೇಶಗಳು ಭಾರತದ ಭೂಪಟದಲ್ಲಿ (India Map) ಕಾಶ್ಮೀರವನ್ನು (Kashmir) ತೆಗೆದುಹಾಕಿ ಪ್ರಕಟಿಸೋದು ಸಾಮಾನ್ಯ ಸಂಗತಿಯಾಗಿದೆ. ಆದರೆ ನಮ್ಮದೇ ದೇಶದಲ್ಲಿ ಭಾರತದ ಭೂಪಟದಲ್ಲಿ ಕಾಶ್ಮೀರದ ಒಂದು ಭಾಗವನ್ನೇ ಇಲ್ಲದಂತೆ ತೋರಿಸುವ ಅದರಲ್ಲೂ ದೇಶದ ಭವಿಷ್ಯವೆಂದೇ (Future) ಗುರುತಿಸಿಕೊಂಡಿರುವ ಮಕ್ಕಳಿಗೇ ಇಂಥಹ ನಕ್ಷೆಯನ್ನು ವಿತರಿಸುವ ಕೆಲಸ ನಡೆದಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಈ ರೀತಿಯ ಬೇಜಾವಬ್ದಾರಿಯ ಕೆಲಸಕ್ಕೆ ಕೈ ಹಾಕಿದ್ದು, ಈ ವಿಚಾರ ಇದೀಗ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಮಾರ್ಚ್ 19 ರಂದು ಶನಿವಾರ  ದಕ್ಷಿಣಕನ್ನಡ (Dakshina Kannada) ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯು ಪೂರ್ವ ಸಿದ್ಧತಾ (Preparatory Exam) ಪರೀಕ್ಷೆಯಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಇತಿಹಾಸ ಪ್ರಶ್ನೆಪತ್ರಿಕೆಯ (Quesrion Paper) ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ.

ಕಾಶ್ಮೀರದ ತುಂಡು ನೆಲವನ್ನು ಬಿಟ್ಟುಕೊಡುವ ವಿಷಯವನ್ನು ಕೂಡ ಭಾರತೀಯರು ಸಹಿಸಲಾರರು. ಈ ವಿಷಯ ದೇಶಾದ್ಯಂತ ಜೀವಂತ ಇರುವಾಗಲೇ ಪಿಯು ಮಂಡಳಿ ಎಡವಟ್ಟು ಮಾಡಿದೆ.

ಪಾಕ್ ಆಕ್ರಮಿತ ಕಾಶ್ಮೀರವೇ ಇಲ್ಲ

ನಿಮಗೆ ಒದಗಿಸಿರುವ ಭಾರತದ ಭೂಪಟದಲ್ಲಿ ಈ ಕೆಳಗಿನ ಯಾವುದಾದರೂ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಮತ್ತು ಗುರುತಿಸಿದ ಪ್ರತಿಯೊಂದು ಸ್ಥಳದ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆ ಬರೆಯಿರಿ ಎಂಬುದು ಪ್ರಶ್ನೆಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಕೇಳಲಾದ ಪ್ರಶ್ನೆ. ಜತೆಗೆ ಒದಗಿಸಿದ ಭಾರತದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೈಬಿಡಲಾಗಿದೆ. ಸಾಮಾನ್ಯವಾಗಿ ವರ್ಷಂಪ್ರತಿ ಪಿಯು ಇತಿಹಾಸ ವಿಭಾಗದ ಉಪನ್ಯಾಸಕರ ಸಂಘದ ಮೇಲುಸ್ತುವಾರಿಯಲ್ಲೇ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ.

ದಕ್ಷಿಣ ಕನ್ನಡದಲ್ಲಿ ಮಾತ್ರ ಎಡವಟ್ಟು

ಆದರೆ ಈ ವರ್ಷ ಪಿಯು ಮಂಡಳಿ ಸೂಚನೆಯಂತೆ ಪ್ರಶ್ನೆಪತ್ರಿಕೆ ಜವಾಬ್ದಾರಿಯನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘಕ್ಕೆ ವಹಿಸಲಾಗಿತ್ತು. ಕೇವಲ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ರೀತಿಯ ಪ್ರಮಾದವಾಗಿದ್ದು, ರಾಜ್ಯದ‌ ಉಳಿದ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾದ ಪ್ರಶ್ನೆಪತ್ರಿಕೆಯಲ್ಲಿ ಭಾರತದ ನಕ್ಷೆಯನ್ನು ಪೂರ್ಣ ಕಾಶ್ಮೀರದ ಜೊತೆಗೇ ಪ್ರಕಟಿಸಲಾಗಿತ್ತು.

ತನಿಖೆಗೆ ತೀರ್ಮಾನ

ಶಿಕ್ಷಣ ಇಲಾಖೆಯ‌ ಈ‌ ಬೇಜಾವಬ್ದಾರಿಯ ನಡೆಯನ್ನು ಕಾಲೇಜುಗಳ‌ ಹಂತದಲ್ಲೇ ಮುಚ್ಚುವ‌ ಪ್ರಯತ್ನಗಳು ಕೂಡಾ ನಡೆದಿದ್ದು, ಆದರೆ ಈ ವಿಚಾರ ಇದೀಗ ಬಹಿರಂಗವಾಗುತ್ತಿದ್ದಂತೆ ಇಲಾಖಾ‌ ಅಧಿಕಾರಿಗಳು ಪ್ರಮಾದದ ಬಗ್ಗೆ ತನಿಖೆಗೆ ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: Bengaluru: ‘ಹಿಂದೂಗಳೇ ಮುಸ್ಲಿಂ ಹೋಟೆಲ್​ಗಳಿಗೆ ಹೋಗ್ಬೇಡಿ‘, ‘ಅವ್ರ ಅಂಗಡಿಯಲ್ಲಿ ಮಾಂಸ ಖರೀದಿಸಬೇಡಿ’; ಕಾಳಿ ಸ್ವಾಮೀಜಿ ಕರೆ

ಉಪನ್ಯಾಸಕರ ಹಂತದಲ್ಲಿ ಚರ್ಚೆ

ಆಗಿರುವ ಪ್ರಮಾದದ ಬಗ್ಗೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಹಂತದಲ್ಲಿ ಚರ್ಚೆ ಶುರುವಾಗಿದೆ. ಪ್ರತಿಭಟನೆ ಸಿದ್ಧತೆ ನಡೆಯುತ್ತಿದೆ. ಆದರೆ ಅಧಿಕಾರಿ ವರ್ಗ ಈ ಬಗ್ಗೆ ಆಕ್ಷೇಪ ಅಥವಾ ದೂರು ಬಂದಿಲ್ಲ ಎಂದು ಪ್ರತಿಕ್ರಿಯಿಸಿದೆ. ಈ ವಿಚಾರ ಇದೀಗ ಹಿಂದೂಪರ ಸಂಘಟನೆ ಹಾಗೂ ಎಬಿವಿಪಿ ಯಂತಹ ವಿದ್ಯಾರ್ಥಿ ಸಂಘಟನೆಗಳ ಗಮನಕ್ಕೂ ಬಂದಿದೆ.

ಇದನ್ನೂ ಓದಿ: Hassan: ಹೆತ್ತಮ್ಮನ ಮಡಿಲು ಸೇರಿದ ಕಂದ, ಮಗು ಕಿಡ್ನ್ಯಾಪ್ ಹಿಂದಿದೆ ಕರುಳು ಹಿಂಡುವ ಕಥೆ

ಈ ಹಿನ್ನಲೆಯಲ್ಲಿ ದೇಶದ ಬಗ್ಗೆ ಅಗೌರವ ತೋರಿದ ಹಾಗೂ ಭೂಪಟವನ್ನು ತಿರುಚಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲಗಳನ್ನು ಸೃಷ್ಟಿಸಿದ ದಕ್ಷಿಣಕನ್ನಡ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ವಿರುದ್ಧ ಹಾಗೂ ನಕ್ಷೆಯನ್ನು ಯಾವುದೇ ರೀತಿಯಲ್ಲೂ ಮರುಪರಿಶೀಲನೆ ನಡೆಸದೆ ವಿದ್ಯಾರ್ಥಿಗಳಿಗೆ ನೀಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲೂ ಸಂಘಟನೆಗಳು ಚಿಂತಿಸಿವೆ.
Published by:Divya D
First published: