Puttur: ಶಾಲೆ ಉಳಿಸಲು PM ಮೊರೆ ಹೋದ ಗ್ರಾಮಸ್ಥರು; ಸಂಸದರ ದತ್ತು ಗ್ರಾಮದಲ್ಲಿ ಶಾಲೆ ಜಾಗ ಒತ್ತುವರಿ

ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಇದೀಗ ಸರಕಾರದ ಅಕ್ರಮ-ಸಕ್ರಮ ಕಾನೂನಿನಡಿ 60 ಸೆಂಟ್ಸ್ ಜಾಗವನ್ನು ತನ್ನ ಹೆಸರಿಗೂ ಮಾಡಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಪುತ್ತೂರು (ಮಾ. 8): ಕಲಿತ ಶಾಲೆಯ ಅತಿಕ್ರಮಣವನ್ನು ನಿಲ್ಲಿಸಲು ಗ್ರಾಮಸ್ಥರು ದೇಶದ ಪ್ರಧಾನಮಂತ್ರಿಯ (Prime Minister) ಮೊರೆ ಹೋಗಿದ್ದಾರೆ. ಕಳೆದ ಏಳು ವರ್ಷಗಳಿಂದ ತಮ್ಮ ಶಾಲೆಯ (School Land) ಜಮೀನನ್ನು ಉಳಿಸುವ ನಿಟ್ಟಿನಲ್ಲಿ ಹಲವು ರೀತಿಯ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಈ ಗ್ರಾಮಸ್ಥರಿಗೆ (Villagers) ಈವರೆಗೂ ನ್ಯಾಯ ಸಿಕ್ಕಿಲ್ಲ. ಗ್ರಾಮಸ್ಥರ ದೂರಿಗೆ ಸ್ಪಂದಿಸಿರುವ ಪ್ರಧಾನಮಂತ್ರಿ ಕಚೇರಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ, ಈವರೆಗೂ ಯಾವೊಬ್ಬ ಅಧಿಕಾರಿಗೂ ಶಾಲೆಯ ಜಾಗ ಉಳಿಸಲು ಮುಂದಾಗಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. 

ಖಾಸಗಿ ವ್ಯಕ್ತಿಯಿಂದ ಅತಿಕ್ರಮಣ

ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ನ ದತ್ತು ಗ್ರಾಮ ಬಳ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ಕೇನ್ಯ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಸುಮಾರು 2 ಎಕರೆಗೂ ಮಿಕ್ಕಿದ ಭೂಮಿಯಿದೆ. ಆದರೆ ಈ ಭೂಮಿಯಲ್ಲಿ ಸುಮಾರು 97 ಸೆಂಟ್ಸ್ ಜಾಗವನ್ನು ಶಾಲೆಯ ಪಕ್ಕದಲ್ಲೇ ಇರುವ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿರುವುದಲ್ಲದೆ, ಕಂದಾಯ ಅಧಿಕಾರಿಗಳ ಜೊತೆ ಸೇರಿಕೊಂಡು ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಇದೀಗ ಸರಕಾರದ ಅಕ್ರಮ-ಸಕ್ರಮ ಕಾನೂನಿನಡಿ 60 ಸೆಂಟ್ಸ್ ಜಾಗವನ್ನು ತನ್ನ ಹೆಸರಿಗೂ ಮಾಡಿಕೊಂಡಿದ್ದಾರೆ.

ಮಾಹಿತಿ ಹಕ್ಕಿನಿಂದ ಬಯಲು

2015 ರಲ್ಲಿ ನಡೆದ ಈ ಪ್ರಕ್ರಿಯನ್ನು ನಿರಂತರವಾಗಿ ಪ್ರತಿಭಟಿಸುತ್ತಾ ಬರುತ್ತಿರುವ ಕೇನ್ಯ ಗ್ರಾಮಸ್ಥರು ಮತ್ತು  ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶಾಲೆಯ ಜಾಗವನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಕ್ರಮ-ಸಕ್ರಮ ಸಮಿತಿಯ ಮುಂದೆ ಒಂದು ನಕ್ಷೆಯನ್ನು ತೋರಿಸಿ ಭೂಮಿ ಪಡೆದುಕೊಂಡಿರುವ ಈ ವ್ಯಕ್ತಿ ಜಾಗಕ್ಕೆ ಬೇಕಾದ ದಾಖಲೆಗಳನ್ನು ರೆಡಿ ಮಾಡಲು ಇನ್ನೊಂದು ನಕ್ಷೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಮುಂದೆ ಇಡುತ್ತಿದ್ದ ವಿಚಾರ ಇದೀಗ ಗ್ರಾಮಸ್ಥರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದ ದಾಖಲೆಗಳಿಂದ ತಿಳಿದು ಬಂದಿದೆ. ಈ ಸಂಬಂಧ ಮತ್ತೆ ಶಾಲೆಯ ಭೂಮಿಗಾಗಿ ಹೋರಾಟಕ್ಕೆ ಸಿದ್ಧರಾಗಿರುವ ಗ್ರಾಮಸ್ಥರು, ಶಾಲೆಯನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ.

ಇದನ್ನು ಓದಿ: Women's day 2022: ಕೊರೊನಾದಿಂದ 67% ಹುಡುಗಿಯರಿಗೆ ಶಿಕ್ಷಣವೇ ಸಿಕ್ಕಿಲ್ಲ, ಛೆ!

ಪ್ರಧಾನಿ ಮುಂದೆ ಅಳಲು ತೋಡಿಕೊಂಡ ಗ್ರಾಮಸ್ಥರು

ಶಾಲೆಯ ಭೂಮಿಯನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದು, ಈ ಭೂಮಿಗೆ ಬೇಕಾದ ದಾಖಲೆಗಳನ್ನು ಇಲಾಖೆಗಳೇ ನೀಡುತ್ತಿರುವುದು ವಿಪರ್ಯಾಸ ಎಂದು ಗ್ರಾಮಸ್ಥರು ಪ್ರಧಾನಿಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶಾಲೆ ಉಳಿಸಲು ಹೊರಟ ಈ ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಪ್ರಧಾನಿ ಕಚೇರಿ ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆಯನ್ನೂ ನೀಡಿದೆ. ಆದರೆ ಪ್ರಧಾನಿ ಕಾರ್ಯಾಲಯದ ಸೂಚನೆಗೂ ಕ್ಯಾರ್ ಎನ್ನದ ಅಧಿಕಾರಿಗಳು ಅತಿಕ್ರಮಣ ಭೂಮಿಗೆ ದಾಖಲೆ ನೀಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.

ಇದನ್ನು ಓದಿ: SSLC-PUC ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​​: ಕನಿಷ್ಠ ಹಾಜರಾತಿ ಇಲ್ಲದಿದ್ದರೂ ಬರೆಯಬಹುದು ಪರೀಕ್ಷೆ

ಶಾಲಾ ಜಾಗ ಅತಿಕ್ರಮಣ

ಅಲ್ಲದೆ ಶಾಲೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡ ವ್ಯಕ್ತಿಯು ಅದೇ ಜಾಗದಲ್ಲಿ ಮನೆ ಕಟ್ಟುವ ಕಾರ್ಯವನ್ನೂ ಆರಂಭಿಸಿದ್ದು, ಇದರಲ್ಲಿ 10 ಸೆಂಟ್ಸ್ ಜಾಗವನ್ನು ಕನ್ವರ್ಶನ್ ಕೂಡಾ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲೂ ಕೂಡಾ ಆ ವ್ಯಕ್ತಿ ಅಕ್ರಮ-ಸಕ್ರಮದಲ್ಲಿ ಪಡೆದ ಜಮೀನಿನ ಜೊತೆಗೆ ಉಳಿದ ಶಾಲೆಯ ಜಮೀನನ್ನೂ ವಶಪಡಿಸಿಕೊಳ್ಳುವ ಯತ್ನ ನಡೆಸಿದ್ದು, ಕನ್ವರ್ಶನ್ ಮಾಡಿದ ಜಾಗಕ್ಕೆ ಬದಲಾಗಿ, ಸರಕಾರಿ ಜಾಗದಲ್ಲಿ ಮನೆ ಕಟ್ಟಲು ಆರಂಭಿಸಿರುವ ಬಗ್ಗೆ ಗ್ರಾಮಸ್ಥರು ಸ್ಥಳೀಯ ಬಳ್ಪ ಗ್ರಾಮಪಂಚಾಯತ್ ಗೆ ದೂರು ನೀಡಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ಗ್ರಾಮಪಂಚಾಯತ್ ಅಧಿಕಾರಿಗಳು ಮುಂದಿನ ತನಿಖೆಗಾಗಿ ಮೇಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲು ತೀರ್ಮಾನಿಸಿದ್ದಾರೆ.

ಸ್ವತಹ ಪ್ರಧಾನಿ ಕಾರ್ಯಾಲಯದಿಂದಲೇ ಅಕ್ರಮ ತಡೆಯುವಂತೆ ಸೂಚಿಸಿದ್ದರೂ, ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿರುವ ಅಧಿಕಾರಿಗಳ ವಿರುದ್ಧ ಇನ್ನು ಯಾವ ರೀತಿಯ ಹೋರಾಟ ನಡೆಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಗ್ರಾಮಸ್ಥರಿದ್ದಾರೆ.
Published by:Seema R
First published: