• Home
  • »
  • News
  • »
  • state
  • »
  • Arecanut Tree: ಅಡಿಕೆ ಮರ ಹತ್ತುವುದು ಇನ್ನು ಸಲೀಸು, ಬಂದಿದೆ ಗ್ರಾಮೀಣ ಕೃಷಿಕನ ಟ್ರೀ ಸೈಕಲ್

Arecanut Tree: ಅಡಿಕೆ ಮರ ಹತ್ತುವುದು ಇನ್ನು ಸಲೀಸು, ಬಂದಿದೆ ಗ್ರಾಮೀಣ ಕೃಷಿಕನ ಟ್ರೀ ಸೈಕಲ್

ಟ್ರಿ ಸೈಕಲ್

ಟ್ರಿ ಸೈಕಲ್

ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲ್ ಅನ್ನು ಸಿದ್ಧಪಡಿಸಿದ್ದಾರೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉಪಕರಣವನ್ನು ನಿರ್ಮಿಸಿರುವ ಬಾಸ್ಕರ್ 3 ವರ್ಷದ ಹಿಂದೆ ಈ ಕಾರ್ಯದಲ್ಲಿ ತೊಡಗಿದ್ದಾರೆ.

  • Share this:

ಕರಾವಳಿ ಭಾಗದ ಕೃಷಿಕರ (Coastal Farmers) ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ (arecanut) ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ (Market) ಭಾರಿ ಬೇಡಿಕೆ ಇದೆ. ಆದರೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಅಡಿಕೆ ಬೆಳೆಗಾರರು (Arecanut Farmers) ಇದ್ದು ಅವುಗಳಲ್ಲಿ ಕಾರ್ಮಿಕರ (Worker) ಸಮಸ್ಯೆಯು ಒಂದಾಗಿದೆ .ಅಡಿಕೆಗೆ ಮದ್ದು ಬಿಡುವ, ಅಡಿಕೆ ಕೊಯ್ಯುವ ನುರಿತ ಕಾರ್ಮಿಕರ ಸಮಸ್ಯೆಯ ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಕೃಷಿಕನೋರ್ವ ಉಪಕರಣವೊಂದನ್ನು ಆವಿಷ್ಕರಿಸಿದ್ದಾರೆ.  ಅಡಿಕೆ ಬೆಳೆಗಾರರು ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ, ಬೆಳೆದಂತಹ ಫಸಲನ್ನು ಉಳಿಸಿಕೊಳ್ಳಲು ಬೆಳೆಗಾರ ಪರದಾಡುವಂತಹ ಸ್ಥಿತಿಯಿದೆ. ಇಂತಹ ಸಮಸ್ಯೆಗಳಲ್ಲಿ ಕಾರ್ಮಿಕರ ಸಮಸ್ಯೆ ಒಂದಾಗಿದ್ದು ,ಅಡಿಕೆಗೆ ಸರಿಯಾದ ಸಮಯದಲ್ಲಿ ಮದ್ದು ಬಿಡಲಾಗದೆ ಮತ್ತು ಬೆಳೆದ ಅಡಿಕೆಯನ್ನು ಕೊಯ್ಯಲು ಕಾರ್ಮಿಕರು ಸಿಗದೇ ಹೈರಾಣಾಗಿದ್ದಾರೆ.


ಅಡಿಕೆಗೆ ಮದ್ದು ಬಿಡುವ ಮತ್ತು ಕೊಯ್ಲನ್ನು ಕೊಯ್ಯವ ಚಟುವಟಿಕೆಗಳು ಸಾಮಾನ್ಯವಾಗಿ ಎಲ್ಲಾ ತೋಟಗಳಲ್ಲಿ ಒಂದೇ ಕಾಲಕ್ಕೆ ಆಗುವ ಕಾರಣ, ಸಹಜವಾಗಿಯೇ ಕಾರ್ಮಿಕರ ಸಮಸ್ಯೆ ಎದುರಾಗುತ್ತಿದೆ. ಸರಿಯಾದ ಸಮಯಕ್ಕೆ ಅಡಿಕೆಗೆ ಮದ್ದು ಬಿಡದೇ ಹೋದಲ್ಲಿ, ಕೊಳೆರೋಗದಂತಹ ರೋಗ ಭಾದಿಸಿ ಇಡೀ ತೋಟದ ಅಡಿಕೆ ನಾಶವಾಗುವ ಸಾಧ್ಯತೆಯಿದೆ.


ಕಾರ್ಮಿಕರ ಅಗತ್ಯತೆ‌ ಅಡಿಕೆ ಬೆಳೆಗೆ ಅನಿವಾರ್ಯ


ಅಲ್ಲದೆ ಕೊಯ್ಯಲು ಸಿದ್ಧವಾಗಿರುವ ಅಡಿಕೆಯನ್ನು ಸರಿಯಾದ ಸಮಯಕ್ಕೆ ಕೊಯ್ಯದೇ ಹೋದಲ್ಲಿ ಫಸಲಿಗೂ ರೋಗ ಭಾದೆ ಕಾಡುವ ಸಾಧ್ಯತೆಯಿದೆ. ಇದರಿಂದಾಗಿ ಇಡೀ ಅಡಿಕೆ ಮರಗಳೇ ರೋಗ ಭಾದಿತವಾಗಲಿದ್ದು, ಈ ಎಲ್ಲಾ ಕಾರಣಕ್ಕಾಗಿ ಕಾರ್ಮಿಕರ ಅಗತ್ಯತೆ‌ ಅಡಿಕೆ ಬೆಳೆಗೆ ಅನಿವಾರ್ಯವಾಗಿ ಬೇಕಾಗುತ್ತದೆ.


ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚಾರ್ವಾಕದ ಯುವ ಕೃಷಿಕ ಬಾಸ್ಕರ್, ಸಣ್ಣ ತೋಟದ ಬೆಳೆಗಾರ ತಾವೇ ಸ್ವಾವಲಂಭಿಯಾಗಿ ತೋಟದ ಕೆಲಸದಲ್ಲಿ ತೊಡಗುವಂತಹ ಉಪಕರಣವೊಂದನ್ನು ಆವಿಷ್ಕರಿಸಿದ್ದಾರೆ.


Puttur farmer invented Arecanut Tree Climbing Machine akp mrq
ಅಡಿಕೆ ಮರ ಏರುತ್ತಿರುವ ರೈತ ಮಹಿಳೆ


ಅಡಿಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಇದರಿಂದ ಅಡಿಕೆಗೆ ಮದ್ದು ಬಿಡುವ, ಅಡಿಕೆ ಕೊಯ್ಯವ ಕೆಲಸವನ್ನು ಮಾಡಬಹುದಾಗಿದ್ದು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರೂ ಈ ಉಪಕರಣವನ್ನು ಬಳಸಿ ಅಡಿಕೆ ಮರವನ್ನು ಹತ್ತಬಹುದಾಗಿದೆ‌.


ಅಡಿಕೆ ಮರ ಹತ್ತುವ ಉಪಕರಣ


ಕಬ್ಬಿಣದ ರಾಡ್ ಗಳನ್ನು ಬಳಸಿ ಈ ಉಪಕರಣವನ್ನು‌ ನಿರ್ಮಿಸಲಾಗಿದ್ದು, ಅಡಿಕೆ ಮರವನ್ನು ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಸಹಾಯದಿಂದ ಈ ಉಪಕರಣವನ್ನು ಉಪಯೋಗಿಸಬಹುದಾಗಿದೆ.


Puttur farmer invented Arecanut Tree Climbing Machine akp mrq
ಅಡಿಕೆ ಮರ ಏರುತ್ತಿರುವ ರೈತ ಮಹಿಳೆ


5 ನೇ ತರಗತಿಯವರೆಗೆ ಓದಿರುವ ಬಾಸ್ಕರ್, ಬಳಿಕ ಹಲವಾರು ಕಾರಣಗಳಿಂದಾಗಿ ಓದನ್ನು ಅರ್ಧಕ್ಕೇ ಬಿಟ್ಟು ಕೃಷಿಯತ್ತ ಮುಖ ಮಾಡಿದವರು. ಅಡಿಕೆ ತೋಟವನ್ನು ಹೊಂದಿರುವ ಬಾಸ್ಕರ್ ಗೆ ಕಾರ್ಮಿಕರ ಸಮಸ್ಯೆಯ‌ ಬಗ್ಗೆ ಅರಿವಿತ್ತು.


ಸಾಮಾನ್ಯವಾಗಿ ಕಾರ್ಮಿಕರು ದೊಡ್ಡ ತೋಟಗಳಲ್ಲಿ ಹೆಚ್ಚು‌ ಆದಾಯ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸಣ್ಣ ಕೃಷಿ ತೋಟಗಳತ್ತ ತಮ್ಮ ಪುರುಸೋತ್ತಿಗೆ  ಬರುವುದರಿಂದಾಗಿ ಸಣ್ಣ ಕೃಷಿಕನ ತೋಟಕ್ಕೆ ಸರಿಯಾದ ಸಮಯದಲ್ಲಿ ಮದ್ದು ಬಿಡದೆ ಅಡಿಕೆ ಬೆಳೆ ನಾಶವಾದ ಉದಾಹರಣೆಗಳೂ ಇವೆ‌.


ಇದನ್ನೂ ಓದಿ:  Kodagu: ಕುಡಿಯುವ ನೀರಿಲ್ಲದೇ ಟಾರ್ಪಲ್ ಟೆಂಟ್​​ನಲ್ಲಿ ವಾಸ; ಯಾವಾಗ ಸಿಗುತ್ತೆ ಸೂರು?


ಮೂರು ವರ್ಷದ ಹಿಂದೆಯೇ ಸಾಧನ ಕಂಡು ಹಿಡಿದ್ರು


ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲ್ ಅನ್ನು ಸಿದ್ಧಪಡಿಸಿದ್ದಾರೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉಪಕರಣವನ್ನು ನಿರ್ಮಿಸಿರುವ ಬಾಸ್ಕರ್ 3 ವರ್ಷದ ಹಿಂದೆ ಈ ಕಾರ್ಯದಲ್ಲಿ ತೊಡಗಿದ್ದಾರೆ.


Puttur farmer invented Arecanut Tree Climbing Machine akp mrq
ಅಡಿಕೆ ಮರ


ಮೂರು ವರ್ಷಗಳ ಕಾಲ ಹಲವು ಮಾರ್ಪಾಡು ಮತ್ತು ಲೋಪದೋಷಗಳನ್ನು ಸರಿಪಡಿಸಿ ಈ ಉಪಕರಣವನ್ನು ಎಲ್ಲಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ಇದೀಗ ಯಶಸ್ವಿಯಾಗಿದ್ದಾರೆ.


ತಮ್ಮ ತೋಟ ಮಾತ್ರವಲ್ಲದೆ‌ ಇತರ ತೋಟಗಳಲ್ಲೂ ಇದೀಗ ಮದ್ದು ಬಿಡುವ ಮತ್ತು ಅಡಿಕೆ ಕೊಯ್ಯುವ ಕೆಲಸಕ್ಕೆ ಬಾಸ್ಕರ್‌ ಇದೇ ಉಪಕರಣವನ್ನು‌ ಬಳಸುತ್ತಿದ್ದಾರೆ. ಅಡಿಕೆ ಮರಕ್ಕೆ ಚೈನ್ ಮೂಲಕ ಲಾಕ್ ಮಾಡಿ , ಕೈ ಹಾಗೂ ಕಾಲಿನ ಮೂಲಕ ಈ ಉಪಕರಣವನ್ನು  ಉಪಯೋಗಿಸಿ ಮರವನ್ನು ಸಲೀಸಾಗಿ ಹತ್ತಲಾಗುತ್ತದೆ.


ತರಬೇತಿ ನೀಡಿದ ಬಳಿಕವೇ ಉಪಕರಣ ಮಾರಾಟ


ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ  ಬಾಸ್ಕರ್ ಉಪಕರಣವನ್ನು ನೀಡಿದ್ದು,  6500 ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಉಪಕರಣ ಪಡೆಯಲು ಬರುವ ಕೃಷಿಕನಿಗೆ ತನ್ನ ಅಡಿಕೆ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಮಾರಾಟ ಮಾಡುತ್ತಾರೆ.


ಇದನ್ನೂ ಓದಿ:  Yadagiri: 5 ನಿಮಿಷದಲ್ಲಿ 1 ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆ; ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನ ಬಳಕೆ


ಮರವೇರುವ ಈ ಉಪಕರಣವನ್ನು ಇದೀಗ ಹಲವೆಡೆ ಬಳಕೆ ಮಾಡಲಾಗುತ್ತಿದೆ. ಸುಲಭವಾಗಿ ಮರ ಏರಬಲ್ಲ ಮತ್ತು ಅಷ್ಟೇ ಸುರಕ್ಷತೆಯನ್ನು ನೀಡಬಲ್ಲ ಕಾರಣ ಸಣ್ಣ ಕೃಷಿಕರು ತಾವೇ ಅಡಿಕೆಗೆ ಮದ್ದು ಬಿಡುವ ಮತ್ತು ಕೊಯ್ಯವ ಕೆಲಸ ಮಾಡಬಹುದಾಗಿದೆ. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಅಡಿಕೆ ಬೆಳೆಗಾರನಿಗೆ ಈ ಉಪಕರಣ ಬಹಳ ಉಪಕಾರಿಯಾಗಲಿದೆ ಎನ್ನುವುದು ಕೃಷಿಕರ ಅಭಿಪ್ರಾಯವೂ ಆಗಿದೆ.


ಸದ್ಯಕ್ಕೆ ಅಡಿಕೆ ಮರವೇರುವ ವ್ಯವಸ್ಥೆಯನ್ನು ಉಪಕರಣದಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತೆಂಗಿನ ಮರ ಏರುವಂತೆಯೂ ಅಭಿವೃದ್ಧಿ ಪಡಿಸಲಾಗುವುದು ಎಂದು ಬಾಸ್ಕರ್ ತಿಳಿಸಿದ್ದಾರೆ.

Published by:Mahmadrafik K
First published: