Puneeth Rajkumar RIP: ಪುತ್ತೂರಿನ ಬಾಲಕಿಯ ಡ್ಯಾನ್ಸ್ ಗೆ ಮನಸೋತಿದ್ದ ಪವರ್ ಸ್ಟಾರ್; ಅಪ್ಪು ಅಗಲಿಕೆಗೆ ದೀಕ್ಷಾ ಕಂಬನಿ

ಖಾಸಗಿ ಟಿವಿ ವಾಹಿನಿಯಲ್ಲಿ ನಡೆದ ಡ್ಯಾನ್ಸ್ ಸ್ಫರ್ಧೆ ಕಾರ್ಯಕ್ರಮದಲ್ಲಿ  ದೀಕ್ಷಾ ಪ್ರದರ್ಶಿಸಿದ ಡ್ಯಾನ್ಸ್ ಗೆ ಮಾರುಹೋಗಿದ್ದ ಪುನೀತ್ ನಂತರದ ದಿನಗಳಲ್ಲಿ ದೀಕ್ಷಾಳ ಜೊತೆ ಉತ್ತಮ ಸಂಬಂಧ ಬೆಳೆಸಿದ್ದರು.

ಅಪ್ಪು ಅಭಿಮಾನಿ ದೀಕ್ಷಾ

ಅಪ್ಪು ಅಭಿಮಾನಿ ದೀಕ್ಷಾ

  • Share this:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(power star puneeth rajkumar) ನಿಧನ ಇಡೀ ಚಿತ್ರರಂಗ ಹಾಗೂ ಕನ್ನಡ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ವಯಸ್ಸಿನ  ವ್ಯತ್ಯಾಸ ಕಾಣದೆ ಎಲ್ಲರಲ್ಲೂ ಆತ್ಮೀಯತೆಯಿಂದ ಬೆರೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಗೆ ವಿಶ್ವದೆಲ್ಲೆಡೆ ಅಭಿಮಾನಿಗಳ (puneeth rajkumar fans) ಬಳಗವಿದೆ.  ಹಲವು ಬಾಲ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದ ಈ ಮೇರು  ಪ್ರತಿಭೆ ಬೆನ್ನು ತಟ್ಟಿ ಬೆಳೆಸಿದ ಬಾಲ ಕಲಾವಿದೆಯೊಬ್ಬರು ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅಚ್ಚುಮೆಚ್ಚಾಗಿದ್ದ ಈ ಬಾಲ ಕಲಾವಿದೆಗೆ ಪುನೀತ್ ಇನ್ನಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.

ಬಾಲಕಿಯೊಂದಿಗೆ ಪುನೀತ್​ ಸ್ನೇಹ 

ಪುತ್ತೂರಿನ ಸುಧಾನ ವಸತಿ ಶಾಲೆಯ  10 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ದೀಕ್ಷಾ ರೈ, ಪುನೀತ್ ರಾಜ್ ಕುಮಾರ್ ರನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದಾರೆ‌. ಖಾಸಗಿ ಟಿವಿ ವಾಹಿನಿಯಲ್ಲಿ ನಡೆದ ಡ್ಯಾನ್ಸ್ ಸ್ಫರ್ಧೆ ಕಾರ್ಯಕ್ರಮದಲ್ಲಿ  ದೀಕ್ಷಾ ಪ್ರದರ್ಶಿಸಿದ ಡ್ಯಾನ್ಸ್ ಗೆ ಮಾರುಹೋಗಿದ್ದ ಪುನೀತ್ ನಂತರದ ದಿನಗಳಲ್ಲಿ ದೀಕ್ಷಾಳ ಜೊತೆ ಉತ್ತಮ ಸಂಬಂಧ ಬೆಳೆಸಿದ್ದರು. ಕನ್ನಡದ ಕೋಟ್ಯಾಧಿಪತಿ ಯಲ್ಲಿ ಪುನೀತ್ ರಾಜ್ ಕುಮಾರ್ ರಿಗೆ ಪ್ರಶ್ನೆ ಕೇಳುವ ಅವಕಾಶವೂ ದೀಕ್ಷಾಳಿಗೆ ಲಭಿಸಿತ್ತು. ಕಾರ್ಯಕ್ರಮದಲ್ಲಿ ಪುನೀತ್ ಗೆ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪುನೀತ್ ಎದುರು ತಬ್ಬಿಬ್ಬಾಗಿದ್ದ ದೀಕ್ಷಾಳಿಗೆ ಧೈರ್ಯ ತುಂಬಿ ಕಾರ್ಯಕ್ರವನ್ನು ಮುಂದುವರಿಸಿದ್ದ ಪುನೀತ್ ರಾಜ್ ಕುಮಾರ್ ರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

ಎಲ್ಲಿಯೇ ಸಿಕ್ಕರೂ ಅದೇ ಆತ್ಮಿಯತೆ 

ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ದೀಕ್ಷಾಳ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದ ಪುನಿತ್ ದೀಕ್ಷಾಳ ಡ್ಯಾನ್ಸ್ ನ ಒಂದು ಸ್ಟೆಪ್ ಅನ್ನು ತಾನು ತನ್ನ ಮುಂದಿನ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ದೀಕ್ಷಾಳಲ್ಲಿ ತಿಳಿಸಿದ್ದ ಪುನೀತ್ ಡ್ಯಾನ್ಸ್ ಬಳಸುವ ಮೊದಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ಅಂಜನಿ ಪುತ್ರ ಚಿತ್ರೀಕರಣದ ವೇಳೆಯೂ ದೀಕ್ಷಾ ತನ್ನ ಸಹಪಾಠಿಗಳ ಜೊತೆಗೆ ಪುನೀತ್ ರನ್ನು ಭೇಟಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ತನ್ನ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ದೀಕ್ಷಾ ಹಾಗು ಆಕೆಯ ಸಂಗಡಿಗರಿಗೆ ಸಮಯ ನೀಡಿ ಎಲ್ಲರಲ್ಲೂ ಅತ್ಯಂತ  ಮನಃಪೂರ್ವಕವಾಗಿ ಬೆರೆತಿದ್ದರು. ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದ್ದ ಪುನೀತ್ ರಾಜ್ ಕುಮಾರ್ ರನ್ನು ದೀಕ್ಷಾ ಅಲ್ಲಿಯೂ ಭೇಟಿ ಮಾಡಿದ್ದರು.

ಇದನ್ನೂ ಓದಿ: ಕೊನೆ ಸಿನಿಮಾ ಬಿಡುಗಡೆ ವೇಳೆ ನೊಂದಿದ್ದ APPU.. ಥಿಯೇಟರ್​​ಗಳಲ್ಲಿ 1 ವಾರ ಕೂಡ ಓಡಲು ಬಿಡಲಿಲ್ಲ!

ಅಪ್ಪು ನೆನೆದು ಕಣ್ಣೀರಿಡುತ್ತಿರುವ ದೀಕ್ಷಾ

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಹೆಚ್ಚು ಒಲವಿದ್ದ ಪುನೀತ್ ಪುತ್ತೂರಿನಲ್ಲಿ ನಡೆಯುವ ಕೋಟಿ-ಚೆನ್ನಯ ಜೋಡುಕೆರೆ ಕಂಬಳದಲ್ಲೂ ಭಾಗವಹಿಸಿ ಕಂಬಳದ‌ ಬಗ್ಗೆ ತಮ್ಮ ಮೆಚ್ಚುಗೆಯ ಮಾತನಾಡಿದ್ದರು. ಕೇವಲ ತನ್ನ ವಯಸ್ಸಿನವರ ಜೊತೆ ಮಾತ್ರ ಬೆರೆತುಕೊಳ್ಳದೆ ಎಲ್ಲಾ ವಯೋಮಾನದವರ ಜೊತೆಗೂ ಆತ್ಮೀಯವಾಗಿ ಬೆರೆಯುತ್ತಿದ್ದ ಪುನೀತ್ ದೀಕ್ಷಾಳ ಜೊತೆ ಮಕ್ಕಳಂತೆ ಬೆರೆಯುತ್ತಿದ್ದರು ಎನ್ನುವುದನ್ನು ದೀಕ್ಷಾ ನೆನೆದು ಕಣ್ಣೀರಿಡುತ್ತಾಳೆ. ಮತ್ತೆ ಹುಟ್ಟಿ ಬಾ ಪುನೀತ್ ಎಂದು ಪ್ರಾರ್ಥಿಸುತ್ತಿದ್ದಾಳೆ.

ನಾಳೆ ಪುನೀತ್​ ಅಂತ್ಯಸಂಸ್ಕಾರ 

ಶುಕ್ರವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್​ ಅವರು ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.  ಪುನೀತ್​ ಅವರ ಹಿರಿಯ ಮಗಳು ವಿದೇಶದಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದು, ನಾಳೆ ಅಂದರೆ ಭಾನುವಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕುಟುಂಬಸ್ಥರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ.
Published by:Kavya V
First published: