• Home
  • »
  • News
  • »
  • state
  • »
  • Mahatma Gandhi: ಸಿಕ್ಸ್​ ಪ್ಯಾಕ್ ಇರುವಂತೆ ವಿರೂಪಗೊಳಿಸಿ​ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ, ಸಾರ್ವಜನಿಕರ ಆಕ್ರೋಶ

Mahatma Gandhi: ಸಿಕ್ಸ್​ ಪ್ಯಾಕ್ ಇರುವಂತೆ ವಿರೂಪಗೊಳಿಸಿ​ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ, ಸಾರ್ವಜನಿಕರ ಆಕ್ರೋಶ

ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ

ಹಾಸನದಲ್ಲಿ ಉದ್ಘಾಟನೆ ಗೆ ಸಿದ್ದಗೊಂಡಿದ್ದ ಗಾಂಧಿ ಭವನದ ಆವರಣದ ಗಾಂಧಿ ಪ್ರತಿಮೆ ಸಿಕ್ಸ್ ಪ್ಯಾಕ್ ಇರುವ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಮಹಾತ್ಮ ಗಾಂಧಿ ಪ್ರತಿಮೆಯಲ್ಲಿ ದೇಹ ಹಾಗೂ ತಲೆ ಭಾಗಗಳಿಗೆ ತಾಳೆ ಇಲ್ಲದಂತೆ ಮೂರ್ತಿ ನಿರ್ಮಾಣ ಮಾಡಲಾಗಿದೆ. ಅನಾನುಭವಿ ಕಲಾವಿದರು ಬೇಕಾಬಿಟ್ಟಿ ಮೂರ್ತಿ ನಿರ್ಮಿಸಿ ಗಾಂಧೀಜಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದೆ ಓದಿ ...
  • Share this:

ಹಾಸನ: ಶಿಲ್ಪಕಲೆಯ ತವರೂರು ಎಂದೇ ಹೆಸರಾಗಿರುವ ಹಾಸನದಲ್ಲಿ (Hassan) ರಾಷ್ಟ್ರಪಿತ ಮಹಾತ್ಮ ಗಾಂಧಿ  (Mahatma Gandhi) ಪ್ರತಿಮೆಗೆ ಅಪಮಾನ ಎಸಗಿರುವ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆ ಬೇಲೂರು, ಹಳೆಬೀಡು ಸೇರಿದಂತೆ ಹಲವು ವಿಶ್ವವಿಖ್ಯಾತ ದೇವಾಲಯಗಳಿಗೆ (World Famous Temple) ಪ್ರಸಿದ್ಧಿಯಾಗಿದೆ. ಇಲ್ಲಿನ ಶಿಲ್ಪಕಲೆ (Sculpture) ನಾಡಿನ ಸಾವಿರಾರು ವರ್ಷಗಳ ಇತಿಹಾಸವನ್ನು ಸಾರುತ್ತಿವೆ. ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ ಇಂತಹ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲೇ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿರೂಪವಾಗಿ ನಿರ್ಮಾಣ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


74ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಾಸನದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಬೇಕೆಂಬ ಸಾರ್ವಜನಿಕರ ಒತ್ತಾಯದ ಮೇಲೆ ಈಗಾಗಲೇ ಭವನ ನಿರ್ಮಾಣ ಕಾರ್ಯ ಸಂಪೂರ್ಣ ಮುಕ್ತಾಯದ ಹಂತಕ್ಕೆ ಬಂದಿದೆ. ಗಾಂಧಿ ಭವನದ ಆವರಣದಲ್ಲಿ ಗಾಂಧಿ ಪ್ರತಿಮೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ.  ಜನವರಿ 26ರಂದು ಉದ್ಘಾಟನೆಯಾಗಬೇಕಿದ್ದ ಈ ಮೂರ್ತಿಯನ್ನು ಕಲಾವಿದರೂ ವಿರೂಪವಾಗಿ ರಚಿಸಿದ್ದಾರೆ.


ಕಳಪೆ ವಿನ್ಯಾಸ


ಗಾಂಧಿ ಭವನದ ಮುಂದೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪತಿ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಕಾರ್ಯ ಕಳೆದ ವರ್ಷ ಆರಂಭವಾಗಿತ್ತು. ಇದೀಗ 74ನೇ ಗಣರಾಜ್ಯೋತ್ಸವದ ದಿನ ಉದ್ಘಾಟನೆಯಾಗಬೇಕಿತ್ತು. ಆದರೆ ಗುತ್ತಿಗೆದಾರ ಹಾಗೂ ಕಲಾವಿದರ ಎಡವಟ್ಟಿನಿಂದ ಗಾಂಧಿ ಪ್ರತಿಮೆ ಮೂಲ ಸ್ವರೂಪವೇ ಬದಲಾವಣೆಯಾಗಿದೆ. ಕಳಪೆ ವಿನ್ಯಾಸ, ಗುಣಮಟ್ಟವಿಲ್ಲದೆ ರಚಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರರು ಅಸಮಧಾನವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  Shivalinge Gowda: JDS​ ಕಾರ್ಯಕರ್ತನಿಗೆ ಧಮ್ಕಿ? ವೈರಲ್​ ಆಡಿಯೋ ಪ್ರಸಂಗವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಶಿವಲಿಂಗೇಗೌಡ


ಸಿಕ್ಸ್​ ಪ್ಯಾಕ್​ ಪ್ರತಿಮೆ


ಹಾಸನದಲ್ಲಿ ಉದ್ಘಾಟನೆ ಗೆ ಸಿದ್ದಗೊಂಡಿದ್ದ ಗಾಂಧಿ ಭವನದ ಆವರಣದ ಗಾಂಧಿ ಪ್ರತಿಮೆ ಸಿಕ್ಸ್ ಪ್ಯಾಕ್ ಇರುವ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ದಂಡಿ ಮಾರ್ಚ್ ಕಲಾಕೃತಿ ಹಾಗೂ ಮಹಾತ್ಮ ಗಾಂಧಿ ಪ್ರತಿಮೆಗಳು ವಿಕೃತವಾಗಿವೆ. ದೇಹ ಹಾಗೂ ತಲೆ ಭಾಗಗಳಿಗೆ ತಾಳೆ ಇಲ್ಲದಂತೆ ಮೂರ್ತಿ ನಿರ್ಮಾಣ ಮಾಡಲಾಗಿದೆ. ಅನಾನುಭವಿ ಕಲಾವಿದರು ಬೇಕಾಬಿಟ್ಟಿ ಮೂರ್ತಿ ನಿರ್ಮಿಸಿ ಗಾಂಧೀಜಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




ಹಾಸನ ಜಿಲ್ಲೆಗೆ ಕಪ್ಪು ಚುಕ್ಕಿ


ಗಾಂಧಿ ಪ್ರತಿಮೆಯನ್ನು ನೋಡಿದರೆ ಮಹಾತ್ಮರ ವ್ಯಕ್ತಿತ್ವ, ಅವರ ಚಳವಳಿ ಹಾಗೂ ಹೋರಾಟಗಳು ನೆನಪಾಗಬೇಕು. ಆದರೆ ಈ ಪ್ರತಿಮೆಯನ್ನು ನೋಡಿದರೆ ಆ ಭಾವನೆ ಬರುತ್ತಿಲ್ಲ. ಪ್ರತಿಮೆಯನ್ನು ಬಹಳ ಕೆಟ್ಟದ್ದಾಗಿ ನಿರ್ಮಾಣ ಮಾಡಲಾಗಿದೆ. ಕಲಾವಿದರು ಮೂಲ ಸ್ವರೂಪವನ್ನು ಬಿಟ್ಟು ನಿರ್ಮಾಣ ಮಾಡಿರುವುದು ತಪ್ಪು. ಶಿಲ್ಪಕಲೆಗೆ ಹೆಸರಾದ ಹಾಸನ ಜಿಲ್ಲೆಗೆ ಈ ಪ್ರತಿಮೆ ಒಂದು ಕಪ್ಪುಚುಕ್ಕೆಯಾಗುತ್ತದೆ ಎಂದು ಕೆಲವು ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.


ಉದ್ಘಾಟನೆ ಮುಂದೂಡಿಕೆ


ಗಾಂಧಿ ಪ್ರತಿಮೆ ವಿರೂಪವಾಗಿರುವುದರಿಂದ ಸಾರ್ವಜನಿಕರು ಗಾಂಧಿಭವನದ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲು ಸಾಮಾಜಿಕ ಹೋರಾಟಗಾರರು, ಸಾರ್ವಜನಿಕರು ಒತ್ತಾಯಿಸಿದ್ದರು. ಗಾಂಧೀಜಿಯ ಪ್ರತಿಮೆ ಹಾಗೂ ಗಾಂಧಿ ಭವನಕ್ಕೆ ಈಗಾಗಲೇ ಮೂರು ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರತಿಮೆ ವಿರೂಪವಾಗಿರುವ ವಿಚಾರ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ, ಆಕ್ರೋಶಕ್ಕೆ ಗುರಿಯಾಗಿದ್ದರಿಂದ ತಾತ್ಕಾಲಿಕವಾಗಿ ಉದ್ಘಾಟನೆಯನ್ನು ಮುಂದೂಡಲಾಗಿದೆ.


Mahatma Gandhi
ಮಹಾತ್ಮ ಗಾಂಧಿ ಪ್ರತಿಮೆ


ಗುರುವಾರ ಉದ್ಘಾಟನೆಯಾಗಬೇಕಿತ್ತು


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಾಸನ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಮುಂದಾಗಿತ್ತು. ಎಲ್ಲಾ ಸರಿಯಿದ್ದಿದ್ದರೆ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನ ಹಾಗೂ ಗಾಂಧಿ ಪ್ರತಿಮೆ ಗುರುವಾರ ಉದ್ಘಾಟನೆಯಾಗಬೇಕಿತ್ತು. ಇದೀಗ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Published by:Rajesha B
First published: