ಹೊಸೂರಿನಲ್ಲಿ ಪಬ್ಜಿ ಚಟಕ್ಕೆ ವಿದ್ಯಾರ್ಥಿ ಬಲಿ; PUBG ನಿಷೇಧಕ್ಕೆ ಮೃತನ ಕುಟುಂಬ ಒತ್ತಾಯ

PUBG Game | ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಭಾರತಿದಾಸನ್ ನಗರದ ವಾಸಿ ರವಿ ಪಬ್ಜಿ ಚಟಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. 

ಪಬ್​ಜಿ

ಪಬ್​ಜಿ

  • Share this:
ಆನೇಕಲ್ (ಫೆ. 2): ಆನ್​ಲೈನ್ ಗೇಮ್ ಪಬ್ಜಿ ಚಟಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಕ್ಕದ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಭಾರತಿದಾಸನ್ ನಗರದ ವಾಸಿ ರವಿ ಪಬ್ಜಿ ಚಟಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಹೊಸೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ರವಿ ಸಾವನ್ನಪ್ಪಿದ್ದಾನೆ.

ಕೋವಿಡ್- 19 ಹಿನ್ನೆಲೆಯಲ್ಲಿ ಕಾಲೇಜು ಬಂದ್ ಮಾಡಲಾಗಿತ್ತು. ಆದರೆ ಆನ್​ಲೈನ್ ತರಗತಿಗಳನ್ನು ಮಾತ್ರ ನಡೆಸಲಾಗುತ್ತಿತ್ತು. ಹಾಗಾಗಿ ಆತ ತನ್ನ ತಾಯಿಯನ್ನು ಕಾಡಿ ಬೇಡಿ ಮೊಬೈಲ್ ತೆಗೆಸಿಕೊಂಡಿದ್ದ. ಆದರೆ ಆನ್​ಲೈನ್ ತರಗತಿಯ ಜೊತೆ ಆನ್​ಲೈನ್ ಗೇಮ್ ಪಬ್ಜಿಗೆ ಜೋತು ಬಿದ್ದು ಹಗಲು ರಾತ್ರಿ ಪಬ್ಜಿ ಗೇಮ್ ಆಡುತ್ತಿದ್ದ. ಆನೇಕ ಬಾರಿ ಕುಟುಂಬದವರು ಬುದ್ದಿಮಾತು ಹೇಳಿದರೂ ಕೇಳದ ರವಿ ಆಟಕ್ಕಾಗಿ ಊಟ ಬಿಟ್ಟು ಪಬ್ಜಿ ಗೇಮ್​ನಲ್ಲಿ ನಿರತನಾಗಿದ್ದ. ಕೊನೆಗೆ ಪಬ್ಜಿ ಆಟವೇ ಆತನ ಜೀವಕ್ಕೆ ಮುಳುವಾಗಿದೆ.

ಇದನ್ನೂ ಓದಿ: Murder: ಹೆಂಡತಿಯನ್ನು ಕೊಂದು, ಬೆಡ್​ರೂಂನಲ್ಲೇ ಸುಟ್ಟು ಹಾಕಿದ 84 ವರ್ಷದ ವೃದ್ಧ!

ಭಾನುವಾರ ತನ್ನ ತಾಯಿಯ ಸೀರೆಯಿಂದಲೇ ನೇಣು ಬಿಗಿದುಕೊಂಡು ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂದಿನಂತೆ ತಾಯಿ ಜಯಲಕ್ಷ್ಮಿ ಗಾರೆ ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ತಡವಾಗಿ ಮನೆ ಬಳಿ ಬಂದಿದ್ದಾರೆ. ಬಾಗಿಲು ಬಂದ್ ಆಗಿರುವುದನ್ನು ಕಂಡು ಬಾಗಿಲು ತೆರೆಯುವಂತೆ ಮಗನನ್ನು ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಎಷ್ಟೋತ್ತಾದರೂ ಪ್ರತಿಕ್ರಿಯೆ ಬಾರದಿದ್ದಾಗ ಅಕ್ಕಪಕ್ಕದ ಮನೆಯವರ ನೆರವಿನಿಂದ ಬಾಗಿಲು ಒಡೆದು ನೋಡಿದ್ದಾರೆ. ಮಗ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೀಡಾಗಿರುವುದನ್ನು ಕಂಡು ತಾಯಿ ಕುಸಿದು ಬಿದ್ದಿದ್ದಾರೆ.

ಮಗನ ಶವ ಕಂಡು ತಾಯಿ ಮಮ್ಮಲ ಮರುಗಿದ್ದಾರೆ. 1 ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಜಯಲಕ್ಷ್ಮಿ ತನ್ನ ಇಬ್ಬರು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದು, ದೊಡ್ಡ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಚಿಕ್ಕ ಮಗ ಬಾರದ ಲೋಕಕ್ಕೆ ಹೋಗಿದ್ದಾನೆ.

ಪಬ್ಜಿಯಂತಹ ಆನ್​ಲೈನ್ ಗೇಮ್​ಗಳಿಂದ ಅಮಾಯಕ ಯುವಕರು ವಿದ್ಯಾರ್ಥಿಗಳು ತಮ್ಮ‌ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಹಾಗಾಗಿ ಪಬ್ಜಿಯಂತಹ ಗೇಮ್ಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಮೃತನ ಕುಟುಂಬದವರು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

(ವರದಿ : ಆದೂರು ಚಂದ್ರು)
Published by:Sushma Chakre
First published: